ಅಕಾಲಿಕವಾಗಿ ಅಗಲಿದ ರಾಜು ಅನಂತಸ್ವಾಮಿ ಕನ್ನಡ ನಾಡು ಕಂಡ ಪ್ರತಿಭಾವಂತ ಗಾಯಕ. ಏಪ್ರಿಲ್‌ 19 ಅವರ ಜನ್ಮದಿನ. ಅವರ ನೆನಪಿನೊಂದಿಗೆ ‘ರಾಜು ದಿ ಲೆಜೆಂಡ್’ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಕಂಠಸಿರಿಯಿಂದಲೇ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ ಏರ್ಪಡಿಸಲಾಗಿದೆ. ‘ರಾಜು ದಿ ಲೆಜೆಂಡ್’ ಎಂಬ ಹೆಸರಿನಲ್ಲಿ ಏಪ್ರಿಲ್ 19ರಂದು ಕೋಣನ ಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ಈ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಸಂಗೀತ ಸಂಜೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದ ಗಾಯಕಿ ಅನನ್ಯ ಭಟ್‌, ‘ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ಏಪ್ರಿಲ್ 19 ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ ‘ರಾಜು ದಿ ಲೆಜೆಂಡ್’ ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ. ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನ ಸುಪ್ರಸಿದ್ದ ಗಾಯಕ-ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಶ್ಯುಯಲ್ಸ್ ಪ್ರದರ್ಶನವಾಗುತ್ತದೆ. ಈ ಕಾರ್ಯಕ್ರಮದ ಟಿಕೆಟ್‌ ಬೆಲೆ 299 ರೂಪಾಯಿಗೆ ನಿಗದಿ ಮಾಡಲಾಗಿದ್ದು, ಬುಕ್ ಮೈ ಶೋ‌ನಲ್ಲಿ ಬುಕ್‌ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.

ಮಂಜುನಾಥ್ ಸತ್ಯಶೀಲ್ ಮಾತನಾಡಿ, ‘ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಹೀಗಾಗಿ ಈ ಕಾರ್ಯಕ್ರಮ ಮಾಡಲು ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದೆವು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ ‘ರಾಜು ದಿ ಲೆಜೆಂಡ್’ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು ಹಾಗೂ ವಾದ್ಯಗಾರರು ಉಪಸ್ಥಿತರಿರುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ‌. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ’ ಎಂದು ಮಾಹಿತಿ ಹಂಚಿಕೊಂಡರು.

ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ‘ರಾಜು ದಿ ಲೆಜೆಂಡ್’ ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಸಹ ಸಮಾರಂಭದ ಕುರಿತು ಮಾತನಾಡಿದರು.

LEAVE A REPLY

Connect with

Please enter your comment!
Please enter your name here