ಅಕಾಲಿಕವಾಗಿ ಅಗಲಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಸಿನಿಮಾ ಏಪ್ರಿಲ್ 1ರಂದು ತೆರೆಕಾಣುತ್ತಿದೆ. ಪ್ರವೀಣ್ ಕೃಪಾಕರ್ ನಿರ್ದೇಶನದ ಚಿತ್ರದ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಮಂಗಳ ಇದ್ದಾರೆ.
ಸಂಚಾರಿ ವಿಜಯ್ ಅಪರೂಪದ ಪಾತ್ರಗಳಲ್ಲಿ ನಟಿಸಿರುವ ‘ತಲೆದಂಡ’ ಸಿನಿಮಾ ಮುಂದಿನ ವಾರ ಏಪ್ರಿಲ್ 1ರಂದು ತೆರೆಕಾಣುತ್ತಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪತ್ನಿ ಹೇಮಮಾಲಿನಿ ಅವರ ಒತ್ತಾಸೆಯಿಂದಾಗಿ ಪ್ರವೀಣ್ ಕೃಪಾಕರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಪ್ರವೀಣ್ ಅವರ ಗೆಳೆಯ ಅರುಣ್ ಕುಮಾರ್ ಚಿತ್ರದ ಸಹನಿರ್ಮಾಪಕರು. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರವೀಣ್, “ಚಿತ್ರದಲ್ಲಿ ಅರೆ ಬುದ್ದಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಉಬ್ಬು ಹಲ್ಲಿನ ಹುಡುಗನಾಗಿ ಗಮನ ಸೆಳೆಯುತ್ತಾರೆ. ಸಾಯುವ ಮುನ್ನ ನಮ್ಮ ಚಿತ್ರದ ಡಬ್ಬಿಂಗ್ ಸಹ ವಿಜಯ್ ಮುಗಿಸಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ ಎಂದು ನೆನೆದರೆ ಮಾತು ಹೊರಡುವುದಿಲ್ಲ” ಎಂದು ಅವರು ಭಾವುಕರಾದರು.
ಸಾಮಾಜಿಕ ಕಳಕಳಿಯ ಚಿತ್ರ ‘ತಲೆದಂಡ’. ಕೊರೊನಾ ಅಡ್ಡಿ, ಆತಂಕಗಳ ಮಧ್ಯೆ ಸಿನಿಮಾ ಪೂರ್ಣಗೊಂಡು ತೆರೆಗೆ ಸಿದ್ಧವಾಗಿದೆ. ನಾಯಕಿ ‘ಸಾಕಿ’ ಪಾತ್ರದಲ್ಲಿ ಚೈತ್ರಾ ಆಚಾರ್, ವಿಜಯ್ ತಾಯಿಯಾಗಿ ರಂಗಭೂಮಿ ನಟಿ ಮಂಗಳ (ರಂಗಾಯಣ ರಘು ಮಡದಿ), ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ.ಸುರೇಶ್ ಇದ್ದಾರೆ. “ಅಧುನಿಕತೆಯ ಸುಳಿಗೆ ಸಿಲುಕಿ ನಾವು ಪ್ರಕೃತಿ ಹಾಳು ಮಾಡುತ್ತಿದ್ದೇವೆ. ಪ್ರಕೃತಿ ನಾಶದಿಂದಾಗುವ ಪರಿಣಾಮಗಳ ಸುತ್ತ ಕತೆ ಸಾಗುತ್ತದೆ. ಈವರೆಗೂ ಐದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನಗೊಂಡಿದೆ. ಚಿತ್ರೋತ್ಸವಗಳಲ್ಲಿ ಭಾಷೆ ಬರದವರು ಕೂಡ ಸಂಚಾರಿ ವಿಜಯ್ ಅಭಿನಯ ಕಂಡು ಬೆರಗಾಗಿದ್ದಾರೆ” ಎಂದು ನಟ ವಿಜಯ್ ಅವರನ್ನು ನೆನಪು ಮಾಡಿಕೊಂಡರು ನಿರ್ದೇಶಕ ಪ್ರವೀಣ್ ಕೃಪಾಕರ್. ನಿರ್ಮಾಪಕಿ ಹೇಮಮಾಲಿನಿ ಕೃಪಾಕರ್, ಸಂಗೀತ ನಿರ್ದೇಶಕ ಹರಿಕಾವ್ಯ ಹಾಗೂ ಸಂಕಲನಕಾರ ಬಿ.ಎಸ್.ಕೆಂಪರಾಜ್ ‘ತಲೆದಂಡ’ ಚಿತ್ರದ ಬಗ್ಗೆ ಮಾತನಾಡಿದರು. ಅಶೋಕ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.