ನಾಗ್‌ ವೆಂಕಟ್‌ ನಿರ್ದೇಶನದ ‘ಕೈಲಾಸ ಕಾಸಿದ್ರೆ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ತಾರಕಾಸುರ’ ಸಿನಿಮಾ ಖ್ಯಾತಿಯ ವೈಭವ್ ನಾಯಕನಾಗಿ ನಟಿಸಿರುವ ಇದು ಡ್ರಗ್ಸ್‌ ಮಾಫಿಯಾ ಸುತ್ತ ಹೆಣೆದ ಕಥಾನಕ. ಪ್ರೇಮಕತೆಯೂ ಇದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.

“ನಮ್ಮ ಸಮಾಜದಲ್ಲಿ ಯುವಜನತೆ ಡ್ರಗ್ ಮಾಫಿಯಾ ಸೇರಿದಂತೆ ಅನೇಕ ದುಷ್ಟ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಪ್ರೇಮ ಕಾವ್ಯವೂ ಹೌದು. ನಗುವಿಗೂ ನಮ್ಮ ಸಿನಿಮಾದಲ್ಲಿ ಭರವಿಲ್ಲ.‌ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಪ್ರಮಾಣಪತ್ರ ನೀಡದೆ, RCಗೆ ಕಳುಹಿಸಿದೆ. ಕಾರಣ ಗೊತ್ತಿಲ್ಲ. RCಯಲ್ಲಿ ನಮ್ಮ ಚಿತ್ರಕ್ಕೆ ಪ್ರಮಾಣ ಪತ್ರ ದೊರಕಿದ ಕೂಡಲೆ ಚಿತ್ರವನ್ನು ತೆರೆಗೆ ತರುತ್ತೇವೆ” ಎಂದರು ‘ಕೈಲಾಸ ಕಾಸಿದ್ರೆ’ ನಿರ್ದೇಶಕ ನಾಗ್‌ ವೆಂಕಟ್‌. ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಾರಕಾಸುರ’ ಚಿತ್ರದಲ್ಲಿ ಗಮನ ಸೆಳೆದಿದ್ದ ನಟ ವೈಭವ್‌ ಎರಡು ವರ್ಷಗಳ ನಂತರ ‘ಕೈಲಾಸ ಕಾಸಿದ್ರೆ’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಚಿತ್ರದ ಬಗ್ಗೆ ವೈಭವ್‌ ಮಾತನಾಡಿ, “ಇದು ದಕ್ಷಿಣ ಭಾರತದಲ್ಲೇ ಹೊಸ ಕಾನ್ಸೆಪ್ಟ್‌ ಇಟ್ಟುಕೊಂಡು ಮಾಡಿರುವ ಚಿತ್ರ ಎಂದು ಹೇಳಬಹುದು. ಎರಡು ವರ್ಷಗಳ ಹಿಂದೆ ಈ ಚಿತ್ರ ಶುರುವಾಯಿತು. ಸ್ವಲ್ಪ ದಿನಗಳ ನಂತರ ನಾಯಕಿ ಚಿತ್ರತಂಡದಿಂದ ಹೊರನಡೆದರು. ಈ ವಿಷಯದಲ್ಲಿ ನಿರ್ಮಾಪಕರ ಧೈರ್ಯ ಮೆಚ್ಚಬೇಕು. ದುಡ್ಡಿನ ಕಡೆ ನೋಡದೆ, ಹೊಸ ನಾಯಕಿ ಸುಕನ್ಯಾ ಅವರು ಬಂದ ಕೂಡಲೇ ಮತ್ತೆ ಚಿತ್ರೀಕರಣ ಆರಂಭಿಸಿದರು. ಆನಂತರ ಲಾಕ್ ಡೌನ್ ಸಮಸ್ಯೆ. ಹೀಗೆ ಅನೇಕ ಸಮಸ್ಯೆಗಳನ್ನು ದಾಟಿ ನಮ್ಮ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ” ಎಂದರು. ‘ಶಿವಾಜಿ ಸುರಕ್ಕಲ್’ ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಚಿತ್ರದ ನಾಯಕಿ. ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here