ಆರಂಭದಿಂದ ಕೊನೆಯವರೆಗೂ ನಟ ಸಂಚಾರಿ ವಿಜಯ್ ತಮ್ಮ ಪಾತ್ರವನ್ನು ಘನತೆಯಿಂದ ನಿಭಾಯಿಸಿದ್ದಾರೆ. ಯಾವುದೇ ಅತಿರೇಕಗಳಿಲ್ಲದೆ ಪರಿಸರದೆಡೆಗಿನ ಈ ಪಾತ್ರದ ಮುಗ್ಧ ಪ್ರೀತಿ, ಆರಾಧನೆ, ಸಂಕಟ, ವೇದನೆಗಳು ಹೊರಹೊಮ್ಮುತ್ತವೆ. ಪರಿಸರ ಕಾಳಜಿಯ ಕತೆ, ಮುಖ್ಯಪಾತ್ರಗಳ ಶ್ರೇಷ್ಠ ಅಭಿನಯದಿಂದ ‘ತಲೆದಂಡ’ ಕನ್ನಡದ ಉತ್ತಮ ಸಿನಿಮಾಗಳ ಶೆಲ್ಫನಲ್ಲಿ ಬಹುಕಾಲ ಉಳಿಯುತ್ತದೆ.
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಸಂಚಾರಿ ವಿಜಯ್ ಕನ್ನಡಿಗರಿಗೆ ಪರಿಚಯವಾಗಿದ್ದು ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ. ಬಿ.ಎಸ್.ಲಿಂಗದೇವರು ನಿರ್ದೇಶನದ ಸಿನಿಮಾದಲ್ಲಿ ಮಂಗಳಮುಖಿ ಪಾತ್ರದಲ್ಲಿ ವಿಜಯ್ ಅವರದ್ದು ಮನೋಜ್ಞ ಅಭಿನಯ. ಈ ಪಾತ್ರದ ಮೂಲಕ ಅವರು ಬಹಳ ವರ್ಷಗಳ ನಂತರ ಕನ್ನಡಕ್ಕೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ತಂದುಕೊಟ್ಟರು. ಮುಂದೆ ಹತ್ತಾರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ವಿಜಯ್ ಸದಾ ಸವಾಲಿನ ಪಾತ್ರಗಳನ್ನು ಹುಡುಕುತ್ತಿದ್ದ ಕಲಾವಿದ. ಅವರೆಂದೂ ಜನಪ್ರಿಯತೆಗೆ ಹಾತೊರೆದವರಲ್ಲ. ಅವರು ಬಹುವಾಗಿ ಪ್ರೀತಿಸಿದ್ದ ‘ತಲೆದಂಡ’ ಸಿನಿಮಾ ತೆರೆಕಂಡಿದೆ. ಈ ಸಿನಿಮಾದಲ್ಲಿನ ಅವರ ಪಾತ್ರ ನೋಡಿದರೆ, ಎಂತಹ ಅದ್ಬುತ ಕಲಾವಿದನನ್ನು ನಾವು ಕಳೆದುಕೊಂಡೆವಲ್ಲಾ ಎಂದು ವೇದನೆಯಾಗುತ್ತದೆ. ‘ಕುನ್ನ’ನಾಗಿ ಅಕ್ಷರಶಃ ಅವರು ಪಾತ್ರವನ್ನು ಜೀವಿಸಿದ್ದಾರೆ.
ಸಿನಿಮಾ ಮೂಲಕ ಸಾಮಾಜಿಕ ಸಂದೇಶ ಹೇಳಬಹುದೇ? ಇಂದಿನ ದಿನಮಾನಗಳಲ್ಲಿ ಈ ಪ್ರಶ್ನೆ ಅಪ್ರಸ್ತುತವಾಗಿರುವುದೇ ಹೆಚ್ಚು. ಸ್ಟಾರ್ಗಿರಿ, ಪ್ಯಾನ್ ಇಂಡಿಯಾ ಭರಾಟೆಯಲ್ಲಿ ಸಿನಿಮಾ ಎನ್ನುವುದು ಮನರಂಜನೆ, ವ್ಯಾಪಾರದ ಸರಕಾಗಿದೆಯಷ್ಟೆ. ಈ ಮಧ್ಯೆ ದಕ್ಷಿಣದ ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಮನರಂಜನೆ ಜೊತೆ ಆಳದಲ್ಲಿ ಸಂದೇಶವನ್ನು ದಾಟಿಸುವಂತಹ ಸಿನಿಮಾಗಳೂ ತಯಾರಾಗುತ್ತಿವೆ. ಹೊಸ ತಲೆಮಾರಿನ ನಿರ್ದೇಶಕರು, ಕತೆಗಾರರು ಇಂಥದ್ದೊಂದು ತಂತ್ರ ಕಂಡುಕೊಂಡು ಯಶಸ್ವಿಯೂ ಆಗುತ್ತಿದ್ದಾರೆ. ನಿರ್ದೇಶಕ ಪ್ರವೀಣ್ ಕೃಪಾಕರ್ ‘ತಲೆದಂಡ’ ಸಿನಿಮಾದ ಮೂಲಕ ಈ ಹಾದಿ ತುಳಿಯಲೆತ್ನಿಸಿದ್ದಾರೆ.
ಪ್ರಮುಖವಾಗಿ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರ ಪರಿಸರ ಮತ್ತು ಸಿನಿಮಾ ಪ್ರೀತಿಯನ್ನು ಅಭಿನಂದಿಸಬೇಕು. ಈಗಾಗಲೇ ಘೋಷಣೆ, ಸಾಕ್ಷ್ಯಚಿತ್ರಗಳು, ಮಾಧ್ಯಮದ ಮೂಲಕ ಪರಿಸರ ಕಾಳಜಿ ಕುರಿತ ವಿಷಯಗಳು ಜನರಿಗೆ ಕ್ಲೀಷೆ ಎನಿಸಿವೆ. ಇಂತಹ ಸಂದರ್ಭದಲ್ಲಿ ದೊಡ್ಡ ಪರದೆ ಮೇಲೆ ಇಂಥದ್ದೊಂದು ತೀರಾ ಅತ್ಯವಶ್ಯವಾದ ಸಂದೇಶವನ್ನು ಹೇಳುವ ಪ್ರವೀಣ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ಸಿಗಬೇಕು. ನಿರ್ದೇಶನದ ಜೊತೆ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡು ಈ ಚಿತ್ರವನ್ನು ತೆರೆಗೆ ತಂದಿದ್ದಾರೆ. ಸೋಲಿಗ ಸಮುದಾಯದ ಪ್ರಕೃತಿ ಪ್ರೀತಿ, ಅವರ ಸಂಪ್ರದಾಯ, ಆಚರಣೆಗಳನ್ನು ಹೇಳುತ್ತಲೇ ಪರಿಸರ ಕಾಳಜಿ ಮತ್ತು ರಕ್ಷಣೆ ಬಗ್ಗೆ ಸಿನಿಮಾ ಮಾತನಾಡುತ್ತದೆ.
ಈ ಚಿತ್ರದ ಜೀವಾಳ ನಟ ಸಂಚಾರಿ ವಿಜಯ್ ಮತ್ತು ಮಂಗಳಾ ರಘು. ‘ಕುನ್ನ’ನಾಗಿ ಸಂಚಾರಿ ವಿಜಯ್ ಮತ್ತು ‘ಕೇತಮ್ಮ’ ಪಾತ್ರದಲ್ಲಿ ಮಂಗಳಾ ರಘು ಅವರದ್ದು ಅತ್ಯಂತ ಶ್ರೇಷ್ಠ ನಟನೆ. ತಾಯಿ – ಮಗನ ಪಾತ್ರಗಳು. ಸಿನಿಮಾದಲ್ಲಿನ ಇವರ ಪಾತ್ರಗಳ ಬಗ್ಗೆ ಮಾತನಾಡುವ ಮುನ್ನ ಇವರಿಬ್ಬರ ರಂಗಭೂಮಿ ನಂಟಿನ ಬಗ್ಗೆ ಹೇಳಬೇಕು. ನಟ ವಿಜಯ್ ಅವರಲ್ಲಿನ ಕಲಾವಿದನನ್ನು ಗುರುತಿಸಿ ಪೋಷಿಸಿದ್ದು ರಂಗನಟಿ, ನಿರ್ದೇಶಕಿ ಮಂಗಳಾ. ತಮ್ಮ ‘ಸಂಚಾರಿ’ ರಂಗತಂಡದ ನಾಟಕಗಳಲ್ಲಿ ಅವರು ವಿಜಯ್ರಿಗೆ ವಿಶಿಷ್ಟ ಪಾತ್ರಗಳನ್ನು ಕೊಟ್ಟರು. ಈ ಪಾತ್ರಗಳ ಮೂಲಕ ವಿಜಯ್ ಎತ್ತರಕ್ಕೆ ಬೆಳೆದರು. ನಾಟಕಗಳಲ್ಲಿ ಜೊತೆಯಾಗಿ ನಟಿಸಿದ್ದ ಮಂಗಳಾ ಮತ್ತು ವಿಜಯ್ ಸಿನಿಮಾವೊಂದರಲ್ಲಿ ಹೀಗೆ ತಾಯಿ – ಮಗನಾಗಿ ನಟಿಸಿದ್ದು ಇದೇ ಮೊದಲು. ಇಬ್ಬರ ಹೊಂದಾಣಿಕೆಯ ನಟನೆ ಚಿತ್ರದ ಚೌಕಟ್ಟನ್ನು ಅಂದವಾಗಿಸಿದೆ.
ಉಬ್ಬು ಹಲ್ಲಿನ, ಬುದ್ಧಿಮಾಂದ್ಯ ಯುವಕನಾಗಿ ಸಂಚಾರಿ ವಿಜಯ್ ಅವರು ಪಾತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಉಬ್ಬು ಹಲ್ಲಿನ ಮೇಕ್ಓವರ್, ಕಾಲೆಳೆಯುತ್ತಾ ನಡೆಯುವ ಶೈಲಿಗಾಗಿ ಅವರು ಸಾಕಷ್ಟು ದೈಹಿಕ ವೇದನೆಯನ್ನು ಅನುಭವಿಸಿರಬಹುದು. ಈ ಪಾತ್ರವನ್ನು ನಿರ್ವಹಿಸುವುದು ನಿಜಕ್ಕೂ ಸವಾಲು. ಆರಂಭದಿಂದ ಕೊನೆಯವರೆಗೂ ಪಾತ್ರವನ್ನು ಘನತೆಯಿಂದ ನಿಭಾಯಿಸಿದ್ದಾರೆ. ಯಾವುದೇ ಅತಿರೇಕಗಳಿಲ್ಲದೆ ಪರಿಸರದೆಡೆಗಿನ ಈ ಪಾತ್ರದ ಮುಗ್ಧ ಪ್ರೀತಿ, ಆರಾಧನೆ, ಸಂಕಟ, ವೇದನೆಗಳು ಹೊರಹೊಮ್ಮುತ್ತವೆ. ಇನ್ನು ಮರಗಳ ಮಾರಣಹೋಮವನ್ನು ತನ್ನಿಂದ ತಪ್ಪಿಸಲಾಗದು ಎನ್ನುವ ವಾಸ್ತವ ಗೊತ್ತಾಗುತ್ತಿದ್ದಂತೆ ಮೌನಕ್ಕೆ ಜಾರುವ, ಈ ಸಂಕಟವನ್ನು ತಾಯಿಯಲ್ಲಿ ಹೇಳಿಕೊಳ್ಳಲು ಬಾರದ ಮುಗ್ಧ ‘ಕುನ್ನ’ನಾಗಿ ಅವರದ್ದು ಸಂಯಮದ ಅಭಿನಯ. ದಶಕಗಳ ಕಾಲ ನಟನೆಯಲ್ಲಿ ಪಳಗಿದ ಕಲಾವಿದರು ದಕ್ಕಿಸಿಕೊಳ್ಳುವ ಅನುಭವ ಪ್ರತಿಭೆಯನ್ನು ಅಲ್ಲಿ ಕಾಣಬಹುದು. ಪಾತ್ರಕ್ಕೆ ಡಬ್ಬಿಂಗ್ ಮಾಡುವ ಬಹುದೊಡ್ಡ ಸವಾಲನ್ನು ವಿಜಯ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ನಟಿ ಮಂಗಳಾ ರಘು ಅವರು ‘ಕೇತಮ್ಮ’ನ ಪಾತ್ರವನ್ನು ಪ್ರೇಕ್ಷಕರು ಬಹುಕಾಲ ನೆನಪಿನಲ್ಲಿಡುವಂತೆ ನಟಿಸಿದ್ದಾರೆ. ರಂಗನಟಿ, ನಿರ್ದೇಶಕಿಯಾದ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿಯೂ ಹೆಚ್ಚು ನಟಿಸಲಿ, ನಿರ್ದೇಶಕರಿಂದ ಅವರಿಗೆಂದೇ ವಿಶಿಷ್ಟ ಪಾತ್ರಗಳು ಸೃಷ್ಟಿಯಾಗಲಿ ಎನ್ನುವುದು ಆಶಯ. ರಂಗಭೂಮಿಯವರೇ ಆದ ರಮೇಶ್ ಪಂಡಿತ್, ಮಂಡ್ಯ ರಮೇಶ್ ಮತ್ತು ಬಿ.ಸುರೇಶ್ ಪಾತ್ರಗಳು ಗಮನಸೆಳೆಯುತ್ತವೆ. ಚಿತ್ರದ ಮೊದಲಾರ್ಧದಲ್ಲಿ ಬರುವ ನಾಯಕನಟಿ ಚೈತ್ರಾ ಆಚಾರ್ಯ ಇದ್ದಷ್ಟೂ ಹೊತ್ತು ತಮ್ಮ ಚೆಂದದ ನಗುವಿನೊಂದಿಗೆ ಇಷ್ಟವಾಗುತ್ತಾರೆ.
ಚಿತ್ರದಲ್ಲಿ ಸೋಲಿಗ ಸಮುದಾಯದ ಆಚರಣೆ, ಭಾಷೆ, ಸಂಪ್ರದಾಯಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ ನಿರ್ದೇಶಕ ಪ್ರವೀಣ್ ಕೃಪಾಕರ್. ಈ ಸಮುದಾಯದ ಜನರಂತೆ ತೋರಿಸುವ ಪಾತ್ರಗಳು ಕೂಡ ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಸೋಲಿಗರೇ ಪದಕಟ್ಟಿ ಹಾಡುವ ಗೀತೆಗಳು, ಅವರ ಸಾಂಪ್ರದಾಯಿಕ ಸಂಗೀತದ ಬಳಕೆ ಚಿತ್ರವನ್ನು ಚೆಂದಗಾಣಿಸಿದೆ. ಪರಿಸರದ ಕತೆಯಲ್ಲಿನ ಕಾಡು, ಮರ-ಗಿಡ, ನೀರು, ನೆರಳನ್ನು ಛಾಯಾಗ್ರಾಹಕ ಅಶೋಕ್ ಕಶ್ಯಪ್ ಕಣ್ಣಿಗೆ ರುಚಿಸುವಂತೆ ಸೆರೆಹಿಡಿದಿದ್ದಾರೆ. ಚಿತ್ರದ ಕತೆಗೆ ತೀರಾ ಅನಿವಾರ್ಯವಲ್ಲದ ಒಂದೆರೆಡು ಸನ್ನಿವೇಶಗಳನ್ನು ನಿರ್ದೇಶಕರು ಸುದೀರ್ಘ ಅವಧಿಗೆ ಚಿತ್ರಿಸದೆ ಮೊಟಕುಗೊಳಿಸಬಹುದಿತ್ತು. ಪರಿಸರ ಕಾಳಜಿಯ ಕತೆ, ಮುಖ್ಯಪಾತ್ರಗಳ ಶ್ರೇಷ್ಠ ಅಭಿನಯದಿಂದ ‘ತಲೆದಂಡ’ ಕನ್ನಡದ ಉತ್ತಮ ಸಿನಿಮಾಗಳ ಶೆಲ್ಫನಲ್ಲಿ ಬಹುಕಾಲ ಉಳಿಯುತ್ತದೆ.