ನಟ ಜಗ್ಗೇಶ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ, ‘ಯಾರನ್ನೂ ಕೊಲ್ಲುವ ಹಕ್ಕು ನಮಗಿಲ್ಲ. ಕರ್ಮ, ಜೀವನವನ್ನು ಹಿಂಬಾಲಿಸುತ್ತದೆ. ಕಲಿಯುಗದಲ್ಲಿ ಕರ್ಮಕ್ಕೆ ತತ್ತಕ್ಷಣವೇ ಶಿಕ್ಷೆ ಸಿಗುತ್ತದೆ. ರಾಮನಾಗು, ರಾವಣನಾಗಬೇಡ, ಅಂತ್ಯ ಖಂಡಿತ ಎಂದು ಸನಾತನ ಸಂಸ್ಕೃತಿ ಹೇಳುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಟ ದರ್ಶನ್‌ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ. ಕನ್ನಡ ಚಿತ್ರರಂಗದ ಯಾರೊಬ್ಬರೂ ಈ ಬಗ್ಗೆ ಈವರೆಗೆ ನೇರವಾಗಿ ಹೇಳಿಕೆ ಕೊಡುತ್ತಿಲ್ಲ. ಪರ, ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರು ಹಿಂಜರಿಯುತ್ತಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಟ ಜಗ್ಗೇಶ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ, ‘ಯಾರನ್ನೂ ಕೊಲ್ಲುವ ಹಕ್ಕು ನಮಗಿಲ್ಲ. ಕರ್ಮ, ಜೀವನವನ್ನು ಹಿಂಬಾಲಿಸುತ್ತದೆ. ಕಲಿಯುಗದಲ್ಲಿ ಕರ್ಮಕ್ಕೆ ತತ್ತಕ್ಷಣವೇ ಶಿಕ್ಷೆ ಸಿಗುತ್ತದೆ. ರಾಮನಾಗು, ರಾವಣನಾಗಬೇಡ, ಅಂತ್ಯ ಖಂಡಿತ ಎಂದು ಸನಾತನ ಸಂಸ್ಕೃತಿ ಹೇಳುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಹಿಂದೆ ಜಗ್ಗೇಶ್‌ ಅವರ ಮೇಲೆ ದರ್ಶನ್‌ ಅಭಿಮಾನಿಗಳು ಕಿಡಿಕಾರಿದ್ದರು. ಇದು ಹಲ್ಲೆ ನಡೆಸುವ ಹಂತಕ್ಕೂ ಹೋಗಿತ್ತು. ಆಗ ಜಗ್ಗೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ಮೂಲಕ ತಮಗಾದ ಅಪಮಾನದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನಟ ದರ್ಶನ್‌, ತಾವು ತಮ್ಮ ಅಭಿಮಾನಿಗಳ ಪರ ಎಂದಿದ್ದರು. ಈ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ಜಗ್ಗೇಶ್‌ ಅವರ ಟ್ವೀಟ್‌ ಗಮನ ಸೆಳೆದಿದೆ.

ಇನ್ನು ನಟಿ ರಕ್ಷಿತಾ ಪ್ರೇಮ್‌ ಅವರು ನಟ ದರ್ಶನ್‌ರನ್ನು ಪೊಲೀಸರು ಬಂಧಿಸಿದ ದಿನದಂದೇ ಒಂದು ಪುಟ್ಟ ಪೋಸ್ಟ್‌ ಹಾಕಿದ್ದರು. ತಮ್ಮ Instagram ಖಾತೆಯಲ್ಲಿ ಒಡೆದ ಹೃದಯದ ಪೋಸ್ಟ್ ಹಾಕಿದ್ದ ರಕ್ಷಿತಾ, ‘ನಾನು ತುಂಬಾ ಹೇಳಲು ಬಯಸುತ್ತೇನೆ. ಆದರೆ ಏನನ್ನೂ ಹೇಳಲು ಆಗುತ್ತಿಲ್ಲ’ ಎಂದು ಪೋಸ್ಟ್ ಮಾಡಿದ್ದರು. ನಟ ದರ್ಶನ್‌ ಅವರೊಂದಿಗೆ ರಕ್ಷಿತಾ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳು ದೊಡ್ಡ ಯಶಸ್ಸನ್ನೂ ಕಂಡಿವೆ. ಇನ್ನು, ರಕ್ಷಿತಾರ ಪತಿ, ನಿರ್ದೇಶಕ ಪ್ರೇಮ್‌ ಅವರು ದರ್ಶನ್‌ ಅವರಿಗೆ ಸಿನಿಮಾ ನಿರ್ದೇಶಿಸಬೇಕಿತ್ತು. ಈ ಬಗ್ಗೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ಕೂಡ ಶುರುವಾಗಿದ್ದವು. ರಕ್ಷಿತಾರ ಸ್ಟೇಟಸ್‌ಗೆ ದರ್ಶನ್‌ ಅಭಿಮಾನಿಗಳು ಕೂಡ ಬೇಸರದ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ದರ್ಶನ್ ಜೊತೆ ನಟಿಸಿರುವ ನಟಿ ರಮ್ಯಾ ತಮ್ಮ ಎಕ್ಸ್​ನಲ್ಲಿ ದರ್ಶನ್​ ಬಂಧನಕ್ಕೆ ಸಂಬಂಧಿಸಿದಂತೆ ಪೋಸ್ಟ್‌ವೊಂದನ್ನು ರೀಪೋಸ್ಟ್ ಮಾಡಿ ಗಮನ ಸೆಳೆದಿದ್ದರು. ರಮ್ಯಾ ಮಾಡಿರುವ ರೀಪೋಸ್ಟ್​ನಲ್ಲಿ ಕೊಲೆ ಕೇಸ್‌ನಲ್ಲಿ ಅಪರಾಧಿಯಾದವರಿಗೆ ಬೇಲ್ ಸಿಗುತ್ತಾ ಎನ್ನುವ ಮಾಹಿತಿಯಿತ್ತು. ಭಾರತೀಯ ದಂಡ ಸಂಹಿತೆ ಪ್ರಕಾರ ಇದು ಜಾಮೀನು ರಹಿತ ಅಪರಾಧವಾಗಿದೆ. ಈ ಅಪರಾಧಕ್ಕೆ ಶಿಕ್ಷೆ ಏನಾಗಬಹುದು? ಐಪಿಸಿ ಸೆಕ್ಷನ್ 302ರ ಪ್ರಕಾರ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ. ಜೀವಾವಧಿ ಶಿಕ್ಷೆ ಅಂದ್ರೆ 7 ವರ್ಷದಿಂದ 14 ವರ್ಷ ಶಿಕ್ಷೆ ಪ್ರಮಾಣ ಇರಲಿದೆ ಎಂದು ಬರೆದಿರುವ ಪೋಸ್ಟ್ ಅನ್ನು ರಮ್ಯಾ ರೀಪೋಸ್ಟ್​ ಮಾಡಿದ್ದರು. ಸಂಸದೆಯೂ ಆಗಿದ್ದ ರಮ್ಯ ಅವರ ಈ ಪೋಸ್ಟ್‌, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎನ್ನುವ ಸಂದೇಶ ಸಾರಿತ್ತು. ನಟಿ ಸಂಜನಾ ಗಲ್ರಾನಿ, ‘ಈ ಸುದ್ದಿ ನೋಡಿ ಶಾಕ್ ಆಗಿದೆ. ಚಿಂತೆ ಕಾಡ್ತಿದೆ. ಅವರು ಬಿಡುಗಡೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ವೀಡಿಯೋ ಮಾಡಿದ್ದರು.

ಸುದ್ದಿಗೋಷ್ಠಿಯೊಂದರಲ್ಲಿ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ಚಿತ್ರನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಮಾತನಾಡಲು ಇಚ್ಛಿಸಲಿಲ್ಲ. ‘ತನಿಖೆ ಪ್ರಗತಿಯಲ್ಲಿದೆ, ಹಾಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ಭಗವಂತ ಶಕ್ತಿ ನೀಡಲಿ. ಸಾಮಾಜಿಕ ಜಾಲತಾಣಗಳು ದುರುಪಯೋಗ ಆಗದಿರಲಿ. ಜಾಲತಾಣಗಳ ದುರುಪಯೋಗದಿಂದಾಗಿಯೇ ಇಂಥದ್ದೊಂದು ಅನಾಹುತ ನಡೆದಿದೆ’ ಎಂದರು. ದರ್ಶನ್‌ ಅವರ ಆಪ್ತ ಸ್ನೇಹಿತರೂ ಆದ ನಟ ಧರ್ಮ ಅವರು ಈ ಬಗ್ಗೆ ಗಟ್ಟಿಯಾಗಿ ಪ್ರತಿಕ್ರಿಯಿಸಿದ್ದಾರೆ. ‘ದರ್ಶನ್‌ ಅವರ ಸ್ನೇಹಿತನಾಗಿ ಇದನ್ನು ಡೈಜೆಸ್ಟ್‌ ಮಾಡಿಕೊಳ್ಳೋಕೆ ಆಗ್ತಿಲ್ಲ. ಸಣ್ಣ ವಿಚಾರದಲ್ಲಿ ದುಡುಕಿದರೆ ಎಂತಹ ಪರಿಸ್ಥಿತಿ ಬರುತ್ತೆ ಅನ್ನೋದಕ್ಕೆ ಈ ಪ್ರಕರಣ ಉದಾಹರಣೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದು ಪಾಠ ಆಗಬೇಕು. ದರ್ಶನ್‌ ಅವರು ದುಡುಕಬಾರದಿತ್ತು. ಅವರನ್ನು ಬ್ಯಾನ್‌ ಮಾಡಬೇಕು ಅನ್ನೋದು ಸೂಕ್ಷ್ಮವಾದ ವಿಚಾರ. ಏಕೆಂದರೆ ಅವರನ್ನು ನಂಬಿ ಹಲವು ನಿರ್ಮಾಪಕ ಕೋಟ್ಯಾಂತರ ರೂಪಾಯಿ ಹೂಡಿರುತ್ತಾರೆ. ಅವರ ಬಗ್ಗೆಯೂ ಆಲೋಚಿಸಬೇಕಾಗುತ್ತದೆ’ ಎನ್ನುತ್ತಾರೆ ಧರ್ಮ. ಇನ್ನು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ‘ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಯುವನಟ ನಿಖಿಲ್‌, ತನಿಖೆ ನಡೆದಿದ್ದು, ವರದಿ ಬಂದ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here