ನಟ, ನಿರ್ದೇಶಕ ಸಂದೀಪ್ ಮಲಾನಿ ಅವರ ‘ಹೀಗೇಕೆ ನೀ ದೂರ ಹೋಗುವೆ’ ಸಿನಿಮಾ ಪೂರ್ಣಗೊಂಡಿದೆ. ಇದು ತಮ್ಮ ನಟನೆಯ ನೂರನೇ ಸಿನಿಮಾ ಎನ್ನುವ ಖುಷಿ ಅವರದು. ಈ ಚಿತ್ರವನ್ನು OTTಯಲ್ಲಿ ಬಿಡುಗಡೆ ಮಾಡುವ ಯೋಜನೆ ಅವರದು.
ಸಂದೀಪ್ ಮಲಾನಿ ನಟಿಸಿ, ನಿರ್ದೇಶಿಸಿರುವ ‘ಹೀಗೇಕೆ ನೀ ದೂರ ಹೋಗುವೆ’ ಸಿನಿಮಾ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಜನಪ್ರಿಯ ಹಾಡೊಂದರ ಪಲ್ಲವಿಯನ್ನೇ ಅವರು ಚಿತ್ರದ ಶೀರ್ಷಿಕೆಯನ್ನಾಗಿಸಿದ್ದಾರೆ. ಚಿತ್ರದ ಕತೆ ಮತ್ತು ಶೀರ್ಷಿಕೆಗೂ ಸಂಬಂಧವಿದೆ ಎನ್ನುತ್ತಾರವರು. “ನಾನು ಈವರೆಗೆ ತುಳು, ತಮಿಳು, ಕೊಂಕಣಿ, ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು, ಇದು ನನ್ನ ನೂರನೇ ಸಿನಿಮಾ. ಈ ಚಿತ್ರದ ನಿರ್ದೇಶಕನೂ ನಾನೇ. ಮಗ ಸಿಲ್ವರ್ ಮಲಾನಿ ಹಾಗೂ ತಮ್ಮ ಸಂತೋಷ್ ಇಬ್ಬರು ನಿರ್ದೇಶನದಲ್ಲಿ ಸಹಕರಿಸಿದ್ದಾರೆ. ರಾಜೇಶ್ ಚೌಧರಿ ನಿರ್ಮಾಣದ ಚಿತ್ರವನ್ನು ಬಹುಪಾಲು ಬೆಂಗಳೂರಿನಲ್ಲೇ ಚಿತ್ರಿಸಿದ್ದೇವೆ” ಎನ್ನುತ್ತಾರೆ ಸಂದೀಪ್ ಮಲಾನಿ.
ಇದು ತಂದೆ – ಮಗನ ಅವಿನಾಭಾವ ಸಂಬಂಧದ ಕತೆಯಂತೆ. ಕನ್ನಡದಲ್ಲಷ್ಟೇ ಅಲ್ಲದೇ ಹಿಂದಿಯಲ್ಲಿ ‘ದಿ ವಿಸಿಟರ್ಸ್’ ಶೀರ್ಷಿಕೆಯಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಕೊಂಕಣಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಿಗೂ ಡಬ್ ಆಗಲಿದೆ. ಸಂದೀಪ್ ಮಲಾನಿ ಅವರೊಂದಿಗೆ ಎಸ್ತರ್ ನರೋನ್ಹಾ, ಗಾಯಕಿ ನಿಹಾಲ್ ತಾವ್ರೋ, ಅಶ್ವಿನ್ ಡಿ ಕೋಸ್ಟಾ, ರಾಜೀವ್ ಪಿಳ್ಳೈ, ಸೀಮಾ ಬುತೆಲ್ಲೋ, ಉದಯ ಸೂರ್ಯ, ನಿರ್ಮಾಪಕರ ಪುತ್ರಿಯರಾದ ಅಶ್ಮಿತಾ ಚೌಧರಿ, ಅಮೀಶಾ ಚೌಧರಿ ಇತರರು ಅಭಿನಯಿಸಿದ್ದಾರೆ. “ನಾನು ಮೂಲತಃ ಉದ್ಯಮಿ. ಸಂದೀಪ್ ಮಲಾನಿ ಕಥೆ ಹೇಳಿದರು. ನಾನು, ನನ್ನ ಮಗಳು ಇಬ್ಬರೂ ಕಥೆ ಕೇಳಿದೆವುಮ, ಇಷ್ಟವಾಯಿತು. ಕುಟುಂಬದ ಎಲ್ಲರೂ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ನನಗೂ ಇತ್ತು. ಈ ಚಿತ್ರದ ನಂತರ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ಮಿಸುವ ಆಲೋಚನೆಯಿದೆ” ಎನ್ನುತ್ತಾರೆ ನಿರ್ಮಾಪಕ ರಾಜೇಶ್ ಚೌಧರಿ.