ಕಾಮಾಟಿಪುರದ ಕತೆಯಾದರೂ ಎಳ್ಳಷ್ಟೂ ಅಸಹ್ಯ ಎನಿಸದಂತೆ ಚಿತ್ರಿಸಿರುವ ನಿರ್ದೇಶಕರ ಪರಿಕಲ್ಪನೆ ಮತ್ತು ನಿರೂಪಣಾ ಶೈಲಿಗೆ ಪ್ರೇಕ್ಷಕ ಶರಣಾಗುತ್ತಾನೆ. ‘ಗಂಗೂಬಾಯಿ’ ಪಾತ್ರದಲ್ಲಿ ಆಲಿಯಾ ಪರಕಾಯ ಪ್ರವೇಶ ಮಾಡಿದ್ದಾರೆ – ‘ಗಂಗೂಬಾಯಿ ಕಥೈವಾಡಿ’ ಹಿಂದಿ ಸಿನಿಮಾ ವಿಮರ್ಶೆ
ಕಡಲ ತೀರದಲ್ಲಿ ಗಾಳಿಯೊಂದಿಗೆ ರಮ್ಯವಾಗಿ ತೇಲುತ್ತಾ ಬಂದು ಆಕರ್ಷಿಸುವ ಅಲೆಗಳ ಸೌಂದರ್ಯ ರೂಪುಗೊಳ್ಳುವುದರ ಹಿಂದೆ ಇರಬಹುದಾದ ಆಂತರಿಕ ಆಳ ಮತ್ತು ಘರ್ಷಣೆಯನ್ನು ಹೇಗೆ ವರ್ಣಿಸಲು ಸಾಧ್ಯವಿಲ್ಲವೋ ಹಾಗೆ ಗಂಗಾ, ಗಂಗೂ ಆಗಿ, ಗಂಗೂಬಾಯಿ ಆದ ಹೆಣ್ಣಿನ ಆಂತರ್ಯ ಮತ್ತು ಆಕೆಯ ಬದುಕಿನ ಕತೆಯನ್ನು ನಿರ್ದೇಶಕ ಬನ್ಸಾಲಿ ತಮ್ಮ ರಮ್ಯ ಶೈಲಿಯ ಕಥಾನಕವಾಗಿ ತೆರೆ ಮೇಲೆ ತಿದ್ದಿರುವ ಈ ಕಲಾಕೃತಿಯನ್ನು ವರ್ಣಿಸುವುದು ಅಷ್ಟೇ ಅಸಾಧ್ಯ.
ನಟಿಯಾಗುವ ಹೆಬ್ಬಯಕೆಯೊಂದಿಗೆ ತನ್ನ ಪ್ರೇಮಿಯ ಜೊತೆಗೂಡಿ ಮನೆ ಬಿಟ್ಟು ಮುಂಬಯಿಗೆ ಬರುವ ಮುಗ್ಧೆಯೊಬ್ಬಳು ಮಾಯನಗರಿಯ ವೇಶ್ಯಾವಾಟಿಕೆ ದಂಧೆಯ ಬಲೆಗೆ ಸಿಲುಕುವ, ನೂಕಲ್ಪಡುವ ಕತೆ. ಸಾವಿರಕ್ಕೆ ಬಿಕರಿಯಾಗಿ ಆ ಕರಾಳ ಲೋಕದಲ್ಲಿ ಪಾಡು ಪಟ್ಟ ಗಂಗಾ, ಗಂಗೂ ಆಗಿ, ಗಂಗೂಬಾಯಿ ಆಗುವ ರಾಜಕೀಯ ಎಳೆಯೊಂದಿಗೆ ಗಂಗೂವಿನ ಹೊಳೆಯುವ ಕಣ್ಣಿನ ಒಳಗಣ್ಣೀರು, ನಗುವ ಕೆಂಗುಲಾಬಿಯಂತಹ ತುಟಿಯಿಂದ ಕೇಳಿದವರು ನಲುಗುವಂತೆ ಹೊರ ಹೊಮ್ಮುವ ಮಾತುಗಳೊಂದಿಗೆ, ಅಮವಾಸ್ಯೆ ಕತ್ತಲೆಯಂಥ ಬದುಕಲ್ಲಿ ಹುಣ್ಣಿಮೆ ಚಂದಿರನಂತೆ ಹೊಳೆವ ಹೆಣ್ಣೊಬ್ಬಳು ಕಂಡಂಥ ಪ್ರೀತಿ, ಕ್ರೌರ್ಯ, ಹೋರಾಟ, ಎಲ್ಲವನ್ನೂ ತೆರೆದಿಡುವ ಕಥನ. ಗಂಗೂಬಾಯಿ, ಅಂದಿನ ಪ್ರಧಾನಿ ನೆಹರೂ ಅವರನ್ನು ಬೇಟಿಯಾಗಿ ಮಾತನಾಡುವ ದೃಶ್ಯ ಮತ್ತು ಕಾಮಾಟಿಪುರದ ಕ್ರೌರ್ಯ ಮತ್ತು ಹೋರಾಟದ ದೃಶ್ಯಗಳು ಕಡಿಮೆ ಇದ್ದರೂ ಅವುಗಳ ತೀವ್ರತೆ ಕಾಡುತ್ತದೆ.
ಚಿತ್ರದ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕನ ಮುಂದೆ ಹೊಸದೊಂದು ಲೋಕ ತೆರೆದುಕೊಂಡಂಥ ಅನುಭವವಾಗುತ್ತದೆ. ಬನ್ಸಾಲಿಯವರ ಹಿಂದಿನ ಚಿತ್ರಗಳಂತೆಯೇ, ಈ ಚಿತ್ರದಲ್ಲಿಯೂ ದೃಶ್ಯಗಳ ಪ್ರತಿಯೊಂದು ಚೌಕಟ್ಟು ಚಿತ್ರಕಲೆಯಂತೆ ಕಂಗೊಳಿಸುತ್ತವೆ. ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ತಕ್ಕಂತೆ ಪ್ರೇಕ್ಷಕ ಭಾವಲೋಕದಲಿ ತೇಲುವಂತೆ ಮಾಡುತ್ತದೆ. ಗಂಗಾ, ಗಂಗೂವಾಗಿ, ಗಂಗೂಬಾಯಿಯಾಗಿ ಪರಿವರ್ತನೆಯಾಗುವ ಪಾತ್ರ ನಿರ್ವಹಣೆ ಮತ್ತು ನಿರೂಪಣೆ ವಾವ್ ಎನ್ನುವಂತಿದೆ. ಆಲಿಯಾ ಭಟ್ ಅಭಿನಯ ಕೌಶಲ್ಯ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಚಾಕಚಕ್ಯತೆಯ ಪ್ರಯೋಗಗಳು ಅದ್ಭುತವಾಗಿ ಹೊಂದಿಕೆಯಾಗಿದೆ. ಸಹಪಾಟಿಯೊಬ್ಬಳು ತಂದೆಗೊಂದು ಪತ್ರ ಬರೆದುಕೊಡು ಎನ್ನುವಾಗ ಸುತ್ತಲಿರುವ ಪಾತ್ರಗಳೆಲ್ಲವೂ ಒಂದೊಂದು ಮಾತು ಮುಂದುವರಿಸುವ ದೃಶ್ಯ ನಮ್ಮೆಲ್ಲರ ಕಥೆಗಳು ಮತ್ತು ಪರಿಸ್ಥಿತಿ ಒಂದೇ ಎನ್ನುವುದನ್ನು ವ್ಯಕ್ತಪಡಿಸುವ ರೀತಿಯ ಪರಿಕಲ್ಪನೆ ಇಷ್ಟ ಆಗಬಹುದು. ಕಾಮಾಟಿಪುರದಲ್ಲೂ ಹುಟ್ಟುವ ನಿಷ್ಕಲ್ಮಶ ಪ್ರೀತಿಯ ಎಳೆ, ಅದನ್ನು ಗಂಗೂಬಾಯಿ ಪ್ರಾಯೋಗಿಕವಾಗಿ ಚಿಂತಿಸಿ ನಿರ್ವಹಿಸಿರುವ ರೀತಿ ಸೊಗಸಾಗಿದೆ.
ಕಲಾ ನಿರ್ದೇಶನ ಸೇರಿದಂತೆ ತಂತ್ರಜ್ಞರ ತಂಡದವರು ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸುದೀಪ್ ಚಟರ್ಜಿಯವರ ಸಿನಿಮಾಟೊಗ್ರಫಿ ಮೊದಲೇ ಹೇಳಿದಂತೆ ಒಂದೊಂದ್ ಫ್ರೇಮ್ ಪೇಯಿಂಟೆಡ್ ಎನ್ನಬಹುದು. ಚಲಿಸುವ ರೈಲಿನ ರಭಸಕ್ಕೆ ಗಾಳಿಯಲ್ಲೇಳುವ ದೂಳಿನ ಕಣಗಳು ಸಿನಿಮಾ ನೋಡುವ ಪ್ರೇಕ್ಷಕರಿಗೆ ರಾಚುವಂತೆ ಕಾಣಿಸುವುದು ಅವರ ಸಮರ್ಥವಾದ ಕ್ಯಾಮೆರಾ ಕೆಲಸಕ್ಕೆ ಸಾಕ್ಷಿ. ಐವತ್ತರ ದಶಕದ ಕಾಮಾಟಿಪುರ ಏರಿಯಾ ಸೃಷ್ಟಿಸಿರುವ ಅವರ ಪರಿಕಲ್ಪನೆ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಳ್ಳುತ್ತದೆ. ಮೇಕ್ ಓವರ್ ಕುರಿತು ಹೇಳುವುದಾದರೆ ಕೆಲ ದೃಶ್ಯಗಳಂತೂ ಪ್ರೇಕ್ಷಕರ ಮೈ ಝುಮ್ ಎನಿಸುವಂತಿವೆ. ರೌಡಿಯೊಬ್ಬನು ಗಂಗುವಿನ ದೇಹದ ಮೇಲೆ ಕ್ರೌರ್ಯ ಮೆರೆದು ಹಾನಿಮಾಡುವ ದೃಶ್ಯ, ಕ್ಷಣದಿಂದೆ ಕಂಡ ಸೌಂದರ್ಯವತಿಯನ್ನು ಕುರೂಪಿಯಂತೆ ಕಾಣುವ ರೂಪರೇಷೆ ಮತ್ತು ಯಾತನೆ ವ್ಯಕ್ತಪಡಿಸುವ ರೀತಿಯನ್ನು ಕಂಡು ಪ್ರೇಕ್ಷಕ ಕಂಪಿಸುವುದಂತೂ ನಿಜ.
ಅಭಿನಯದ ಕುರಿತು ಮಾತನಾಡುವುದಾದರೆ ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಭಟ್ ಪರಕಾಯ ಪ್ರವೇಶ ಮಾಡಿದ್ದಾರೆ. ಸಿನಿಮಾದುದ್ದಕ್ಕೂ ಶ್ವೇತ ವರ್ಣದಲ್ಲಿ ಹೊಳೆಯುವ ಸೌಂದರ್ಯದಿಂದಷ್ಟೇ ಅಲ್ಲದೆ, ಲಾಂಗ್ ಡೂರೇಷನ್ ಶಾಟ್ಸ್‌ಗಳಲ್ಲಿ ನೃತ್ಯ ಮಾಡುವುದಷ್ಟೇ ಅಲ್ಲದೆ ಭಾವ ಬಂಗಿಯನ್ನು ಹಿಡಿದಿಟ್ಟು ತಮ್ಮ ಅಭಿನಯ ಕೌಶಲ್ಯದಿಂದ ರುಜು ಹಾಕಿದ್ದಾರೆ. ಕಾಮಾಟಿಪುರದ ಸಹಪಾಟಿಗಳಾಗಿ ಅಭಿನಯಸಿರುವ ಇಂದಿರಾ ತಿವಾರಿ ಮತ್ತು ರಝಿಯಾ ಪಾತ್ರದಲ್ಲಿ ವಿಜಯ್ ರಾಜ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ತಮ್ಮ ಪಾತ್ರಗಳಲ್ಲಿ ಮಿಂದೆದ್ದಿದ್ದಾರೆ. ಪತ್ರಕರ್ತನ ಪಾತ್ರದಲ್ಲಿ ಜಿಮ್ ಸರ್ಭ್ ಅಭಿನಯ ಪಕ್ವತೆಯಿಂದ ಕೂಡಿದೆ. ಕುಡಿ ಮೀಸೆ ಹುಡುಗ ಶಾಂತನು ಮಹೇಶ್ವರಿ ಅಭಿನಯವೂ ಆಕರ್ಷಕ. ಅಜಯ್ ದೇವಗನ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿದರೂ ತಮ್ಮ ಕಣ್ಣೋಟ, ಹಾವ, ಭಾವ, ಸಂಭಾಷಣೆಗಳಿಂದ ಶಿಳ್ಳೆ ಗಿಟ್ಟಿಸುತ್ತಾರೆ.
ಬ್ಯಾರಿಸ್ಟರ್ ಮಗಳಾಗಿದ್ದ ಗಂಗಾ ವೇಶ್ಯಾವಾಟಿಕೆ ದಂಧೆಯ ಬಲೆಗೆ ಸಿಲುಕಿ ಅನಿವಾರ್ಯವಾಗಿ ಉಳಿಯುತ್ತಾ, ಎದುರಾಳಿಗಳಿಗೆ ಹಾಸ್ಯಮಯವಾಗಿ ಕೌಂಟರ್ ಕೊಡುತ್ತಾ, ಮಿತಿ ಮೀರಿದವರ ಮುಂದೆ ಘರ್ಜಿಸುತ್ತಾ ಕಾಮಾಟಿಪುರದ ಮಹಿಳೆಯರ ಪ್ರೀತಿ ಗೌರವ ಗಳಿಸಿ, ಲೈಂಗಿಕ ಕಾರ್ಯಕರ್ತೆಯರ ಭದ್ರತೆ ಮತ್ತು ಅವರ ಮಕ್ಕಳ ಶಿಕ್ಷಣ ಹಾಗೂ ಬದುಕುವ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿ ಬದುಕಿನ ಕತೆ ಸ್ಫೂರ್ತಿದಾಯಕ.
ಕಾಮಾಟಿಪುರದ ಕತೆಯಾದರೂ ಎಳ್ಳಷ್ಟೂ ಅಸಹ್ಯ ಎನಿಸದಂತೆ ಚಿತ್ರಿಸಿರುವ ನಿರ್ದೇಶಕರ ಪರಿಕಲ್ಪನೆ ಮತ್ತು ನಿರೂಪಣಾ ಶೈಲಿಗೆ ಪ್ರೇಕ್ಷಕ ಶರಣಾದರೆ, ದೃಶ್ಯದಿಂದ ದೃಶ್ಯಕ್ಕೆ ಪ್ರೇಕ್ಷಕನ ಮನಗೆಲ್ಲುವ ಆಲಿಯಾ, ಗಂಗೂ ಆದಾಗ ಗೊಂಬೆಯಂತೆ ನಿಲ್ಲುವ ಭಂಗಿ, ಯುವಕನೊಬ್ಬನ ಕಂಡೊಡನೆ ಮನಸೋತಂತೆ ಭಾವತೀವ್ರತೆಯ ತಳಮಳ, ಸಭೆಯಲ್ಲಿ ಮಾತನಾಡುವಾಗ ನೋವು ನುಂಗುತ್ತಾ ಗದ್ಗದಿಸುತ್ತಲೇ ಕಣ್ಣೀರಿಗೆ ಕಟ್ಟೆ ಹಾಕಿಕೊಳ್ಳುವುದು, ಪ್ರೇಮಿಯ ಆವೇಶ ತಣ್ಣಗಾಗಿಸಿ ತಬ್ಬಿಕೊಳ್ಳುತ್ತಾ ಭಾವೊದ್ವೇಗವನ್ನು ಹೊರ ಹಾಕುವಾಗ ಬರೆದುಕೊಟ್ಟ ಭಾಷಣ ಹರಿದೆಸೆದು.. ”ರಾಜಾ, ಕುರ್ಸೀ ಲೇಕೆ ಆನಾ ರಾಜಾ” ಎಂದು ಮುಂದುವರಿಸುವ ಭಾಷಣದ ಸಂಭಾಷಣೆ ಮತ್ತು ಅಭಿನಯ ಶೈಲಿಯೊಂದಿಗೆ ಕಾಡುವ ಆಲಿಯಾ, ನಿರ್ದೇಶಕ ಬನ್ಸಾಲಿ ಮತ್ತು ಅಂತಹ ಬದುಕು ಸವೆಸಿದ ಗಂಗೂಬಾಯಿ ಮೂವರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.