ಕನ್ನಡ ನಾಡಿನ ಹಿರಿಯ ಗಾಯಕಿ ಕಸ್ತೂರಿ ಶಂಕರ್‌ ಅವರಿಗೆ ರಾಜ್ಯ ಸರ್ಕಾರ ಕೊಡಮಾಡುವ ಸಂತ ಶಿಶುನಾಳ ಷರೀಫ ಪ್ರಶಸ್ತಿ ಲಭಿಸಿದೆ. ಸುಗಮ ಸಂಗೀತ, ಚಲನಚಿತ್ರ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಕಸ್ತೂರಿ ಅವರದ್ದು ನಾಲ್ಕು ದಶಕಗಳ ಒಡನಾಟ. ವೃತ್ತಿಜೀವನದಲ್ಲಿ ಕಸ್ತೂರಿ ಅವರು ಟಿ ಜಿ ಲಿಂಗಪ್ಪ, ಎಂ ರಂಗರಾವ್, ವಿಜಯ ಭಾಸ್ಕರ್, ರಾಜನ್-ನಾಗೇಂದ್ರ, ಗುಣಸಿಂಗ್, ಜಿ ಕೆ ವೆಂಕಟೇಶ್ ಸೇರಿದಂತೆ ಮೇರು ಸಂಗೀತ ನಿರ್ದೇಶಕರ ಸಂಯೋಜನೆಗಳಿಗೆ ಹಾಡಿದ್ದಾರೆ.

ಖ್ಯಾತ ಸುಗಮ ಸಂಗೀತ, ಚಲನಚಿತ್ರ ಹಿನ್ನೆಲೆ ಗಾಯಕಿ, ಕಸ್ತೂರಿ ಶಂಕರ್ ಅವರಿಗೆ ರಾಜ್ಯ ಸರ್ಕಾರ ಕೊಡಮಾಡುವ ಸಂತ ಶಿಶುನಾಳ ಷರೀಫ ಪ್ರಶಸ್ತಿ ಲಭಿಸಿದೆ. ಕನ್ನಡದ ಹೆಮ್ಮೆಯ ಸಂತ ಕವಿ ಶಿಶುನಾಳ ಷರೀಫರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಕಲಾವಿದರಿಗೆ ಸರ್ಕಾರ ನೀಡುತ್ತಿದೆ. ಪ್ರಶಸ್ತಿಯು ಫಲಕ ಹಾಗೂ 5 ಲಕ್ಷ ರೂ ನಗದನ್ನು ಒಳಗೊಂಡಿರುತ್ತದೆ. ಕನ್ನಡದ ಜನಪ್ರಿಯ ಗಾಯಕಿ ಕಸ್ತೂರಿ ಶಂಕರ್ ಅವರು 1950 ನವೆಂಬರ್ 1 ರಂದು ಮೈಸೂರಿನ ಜಿ ಸಿ ಶಂಕರಪ್ಪ, ಗಿರಿಜ ದಂಪತಿಗಳಿಗೆ ಜನಿಸಿದರು. ಇವರ ತಂದೆ, ಸ್ವಾತಂತ್ರ್ಯ ಹೋರಾಟಗಾರರೂ, ಉತ್ತಮ ಬರಹಗಾರರೂ, ಅಪ್ಪಟ ಗಾಂಧಿವಾದಿಯೂ ಆಗಿದ್ದರು. ಅವರು ಚಲನಚಿತ್ರ ಗೀತೆ, ಭಕ್ತಿ ಗೀತೆ, ಭಾವಗೀತೆ, ಶಾಸ್ತ್ರೀಯ ಮತ್ತು ಜಾನಪದ ಗೀತೆಗಳಂತಹ ವಿಭಿನ್ನ ಶೈಲಿಯ ಹಾಡುಗಳನ್ನು ಹಾಡಿದ್ದಾರೆ. ತಮ್ಮ ನಾಲ್ಕು ದಶಕಗಳ ಗಾಯನ ವೃತ್ತಿಜೀವನದಲ್ಲಿ, ಕಸ್ತೂರಿ ಅವರು ಟಿ ಜಿ ಲಿಂಗಪ್ಪ, ಎಂ ರಂಗರಾವ್, ವಿಜಯ ಭಾಸ್ಕರ್, ರಾಜನ್-ನಾಗೇಂದ್ರ, ಗುಣಸಿಂಗ್, ಜಿ ಕೆ ವೆಂಕಟೇಶ್ ಸೇರಿದಂತೆ ಮೇರು ಸಂಗೀತ ನಿರ್ದೇಶಕರ ಸಂಯೋಜನೆಗಳಿಗೆ ಹಾಡಿದ್ದಾರೆ.

ಕಸ್ತೂರಿ ಶಂಕರ್‌ ಅವರು ವರನಟ ಡಾ ರಾಜಕುಮಾರ್, ವಾಣಿ ಜೈರಾಮ್, ಡಾ ಪಿ ಬಿ ಶ್ರೀನಿವಾಸ್, ಟಿ ಎಂ ಸೌಂದರ ರಾಜನ್, ವಿಷ್ಣುವರ್ಧನ್, ಕೆ ಜೆ ವೈ ಮತ್ತು ಎಸ್ ಪಿ ಬಿ ಅವರೊಂದಿಗೆ ಅನೇಕ ಯುಗಳ ಗೀತೆಗಳನ್ನು ಹಾಡಿದ್ದಾರೆ. ಇವರ ಕೆಲವು ಜನಪ್ರಿಯ ಗೀತೆಗಳಲ್ಲಿ ‘ಗುಡಿ ಸೇರದ ಮುಡಿಯೇರದ’ (ಭಾಗ್ಯಜ್ಯೋತಿ), ‘ಸೂರ್ಯನ ಕಾಂತಿಗೆ’ (ತಾಯಿಗೆ ತಕ್ಕ ಮಗ), ‘ರಂಗೇನ ಹಳ್ಳಿಯಾಗೆ’ (ಬಿಳಿ ಹೆಂಡ್ತಿ), ‘ರಾಮನು ಬರಲಿಲ್ಲ’ (ಮಿಥಿಲೆಯ ಸೀತೆಯರು), ‘ಶ್ರೀರಾಮ ಬಂದವ್ನೆ’ (ಪಡುವಾರಳ್ಳಿ ಪಾಂಡವರು), ‘ಶ್ರೀ ತುಳಸಿ ದಯೆ ತೋರಮ್ಮ’ (ತುಳಸಿ) ಸೇರಿವೆ. ಇವರಿಗೆ ‘ಕನ್ನಡದ ಕೋಗಿಲೆ’ ಮತ್ತು ‘ನಾದಮಯ ಕಸ್ತೂರಿ’ ಬಿರುದುಗಳಿವೆ. ಕಸ್ತೂರಿ ಶಂಕರ್ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, BBMPಯಿಂದ ಕೆಂಪೇಗೌಡ ಪ್ರಶಸ್ತಿ, ಬಸವ ಸಾಹಿತ್ಯ ವೇದಿಕೆಯಿಂದ ವಚನ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪಡೆದಿದ್ದು, ಇದೀಗ ಇನ್ನೊಂದು ಗರಿ ಅವರ ಮುಡಿಗೇರಿದೆ. ಕಸ್ತೂರಿ ಶಂಕರ್‌ ಅವರು ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ತರಬೇತಿ ಮಾಡಿದ್ದರು. ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಇವರ ಪ್ರತಿಭೆಯನ್ನು ಗುರುತಿಸಿ, ತಮ್ಮ ‘ಬೆಟ್ಟದ ಗೌರಿ’ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದರು. ನಂತರ ಅವರು ಪುಟ್ಟಣ್ಣ ಕಣಗಾಲ್, ಕೆಎಸ್ಎಲ್ ಸ್ವಾಮಿ, ಬಿ ಎಸ್ ರಂಗ ಸೇರಿದಂತೆ ಪ್ರಮುಖ ಚಿತ್ರನಿರ್ದೇಶಕರ ಚಲನಚಿತ್ರಗಳಿಗೆ ಹಾಡಿದರು. ಕಸ್ತೂರಿ ಅವರ ಪತಿ ಶಂಕರ್‌ ಇತ್ತೀಚೆಗಷ್ಟೇ ಅಗಲಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಸ್ತುತ ಕಸ್ತೂರಿ ಶಂಕರ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

LEAVE A REPLY

Connect with

Please enter your comment!
Please enter your name here