(ಬರಹ: ಸಂತೋಷ್‌ಕುಮಾರ್ ಎಲ್.ಎಂ.)
ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಜೈ ಭೀಮ್’ ತಮಿಳು ಸಿನಿಮಾ ಸಾಕಷ್ಟು ಚರ್ಚೆಗೊಳಪಡುತ್ತಿದೆ. ಚಿತ್ರದಲ್ಲಿ ಪ್ರಸ್ತಾಪವಾಗಿರುವ ನಿರ್ಲಕ್ಷ್ಯಿತ ಸಮುದಾಯದ ಜಾಗೃತಿಗೆ ಕಾರಣವಾದ ಹೆಗ್ಗಳಿಕೆ ಈ ಚಿತ್ರದ್ದು. ‘ಜೈ ಭೀಮ್’ ಕುರಿತ ಸಿನಿಮಾ ವಿಶ್ಲೇಷಕ ಸಂತೋಷ್‌ಕುಮಾರ್ ಎಲ್.ಎಂ. ಅವರ ಬರಹ ಇಲ್ಲಿದೆ.
ತಾನು ಹಿಡಿದ ಹಾವೊಂದನ್ನು ಮತ್ತೆ ಕಾಡಿಗೆ ಬಿಡುವ ಮುಖ್ಯ ಪಾತ್ರ ರಾಜಾಕಣ್ಣು…”ಹೋಗಿ ಬದುಕ್ಕೋ. ಈ ಜನರ ಕೈಗೆ ಮಾತ್ರ ಸಿಗಬೇಡ” ಅನ್ನುತ್ತಾನೆ. ಸಿನಿಮಾ ಹೇಳುವ ಕಥೆಯೂ ಈ “ವಿಷಪೂರಿತ” ಜನರ ಬಗ್ಗೆಯೇ! ಸಿನಿಮಾದ ಹೆಸರು, ಟ್ರೈಲರ್ ನೋಡಿಯೇ ಸಿನಿಮಾದ ಕಥೆಯಲ್ಲಿ ಏನೆಲ್ಲ ಇರಬಹುದು ಅಂತ ಊಹಿಸಬಹುದಿತ್ತು ಅಲ್ಲವೇ? ಅಷ್ಟಿದ್ದರೂ ಎರಡೂ ಮುಕ್ಕಾಲು ಗಂಟೆ ಸಿನಿಮಾ ಸ್ವಲ್ಪವೂ ಬೇಸರವಿಲ್ಲದೆ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕೆ ಕಾರಣ ಸಿನಿಮಾ ಕಥೆಯನ್ನು ಕುತೂಹಲದಿಂದ ಹೇಳಿರುವ ರೀತಿ. ಬರೀ ಸಿನಿಮಾ ಆಗಿಯೂ ‘ಜೈ ಭೀಮ್’ ಅದು ಹೇಳಿರುವ ರೀತಿಯಿಂದ ಮನಸ್ಸಿಗೆ ಇಷ್ಟವಾಗುತ್ತದೆ.
ಮುಖ್ಯವಾಗಿ ಪ್ರತೀ ದೃಶ್ಯದಲ್ಲೂ ನಿರ್ದೇಶಕ ಹೇಳುವ ಪುಟ್ಟ ಪುಟ್ಟ ಸೂಕ್ಷ್ಮಗಳಿಂದ ಸಿನಿಮಾ ಇಷ್ಟವಾಗಿಬಿಡುತ್ತದೆ. ಹಾವು ಹಿಡಿಯಲು ಬರುವ ರಾಜಾಕಣ್ಣು ಅಲ್ಲಿಟ್ಟಿರುವ ಆಭರಣಗಳ ಕಡೆ ಕಣ್ಣೆತ್ತಿಯೂ ನೋಡದೆ ಹಾವು ಹುಡುಕುತ್ತಾನೆ. ಅಲ್ಲಿ ಸಿಗುವ ಚಿನ್ನದ ಓಲೆಯನ್ನು ಮನೆಯಾಕೆಗೆ ಕೊಡುತ್ತಾನೆ. ಅಲ್ಲಿ ಆತನಿಗೆ ಬಡತನವಿದ್ದರೂ ಅನ್ಯರ ಹಣದ ಬಗ್ಗೆ ಆಸೆಯಿಲ್ಲ ಅನ್ನುವುದು ವ್ಯಕ್ತವಾಗುತ್ತದೆ. ಹಾವು ಹಿಡಿದು ಹೊರಡುವಾಗ ಆ ಮಾಲಿಕ ಹಣ ಕೊಡಲು ಬಂದಾಗಲೂ ಆತ ಅದನ್ನು ನಿರಾಕರಿಸುತ್ತಾನೆ. ಆ ಮಾಲಿಕನು ಏನೂ ಆಗಿಯೇ ಇಲ್ಲ ಅನ್ನುವಂತೆ ಹೊರಟು ಹೋಗುತ್ತಾನೆ. ಅವನ ಸದ್ಗುಣ ಅವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅವರು ಕಣ್ಣಿದ್ದೂ ಕುರುಡರು! ಹಣವಿದ್ದೂ ಬಡವರು!
ವೀರಪ್ಪನ್ ಬದುಕಿದ್ದ ಕಾಲದಲ್ಲಿ ಕೊಳ್ಳೇಗಾಲ, ಚಾಮರಾಜನಗರದ ಕಾಡುಗಳಲ್ಲಿ ವಾಸವಿರುತ್ತಿದ್ದ ಸೋಲಿಗ ಜನಾಂಗ ಪೊಲೀಸರ ದೌರ್ಜನ್ಯಕ್ಕೆ ಅದೆಷ್ಟು ಹಿಂಸೆ ಅನುಭವಿಸಿದರೆಂದು ಅವರಿಗಷ್ಟೇ ಗೊತ್ತು. ವೀರಪ್ಪನ್’ಗೆ ಸಹಾಯ ಮಾಡುತ್ತಿದ್ದಾರೆಂದು ಅನುಮಾನಿಸಿ ಅದೆಷ್ಟು ಜನರ ಮೇಲೆ ದೌರ್ಜನ್ಯ ಮಾಡಲಾಗಿತ್ತು. ವೀರಪ್ಪನ್’ಗೆ ಈ ವಿಷಯದಿಂದಾಗಿಯೂ ಪೊಲೀಸ್ ಇಲಾಖೆ ಮೇಲೆ ಸಿಕ್ಕಾಪಟ್ಟೆ ಕೋಪವಿತ್ತು ಅಂತ ಹೇಳಲಾಗುತ್ತಿತ್ತು. “ನಿಮ್ಮ ಕೋಪವನ್ನು ನನ್ನ ಮೇಲಷ್ಟೇ ತೋರಿಸಿ, ಯಾರ್ಯಾರೋ ಜನರಿಗೆ ತೊಂದರೆ ಕೊಡಬೇಡಿ” ಅಂತ ಆತ ರೋಷದಿಂದ ಹೇಳಿಕೊಂಡಿದ್ದ ಕೂಡ.
ಇಂದಿಗೂ ಕೆಲ ಸೋಲಿಗರು ಊರಿಗೆ ಬಂದರೆ ಅವರ ಕೆಲಸಗಳಿಗೆ ಹಣ ತೆಗೆದುಕೊಳ್ಳುವುದಿಲ್ಲ. ಅವರಿಗೆ ಅದರಿಂದ ಉಪಯೋಗವೂ ಇಲ್ಲ. ತಮ್ಮ ಕೆಲಸಕ್ಕೆ ಬದಲಾಗಿ ಅಕ್ಕಿಯನ್ನೋ ಬೇಳೆಯನ್ನೋ ಕೇಳಿ ತೆಗೆದುಕೊಳ್ಳುತ್ತಾರೆ. ಬಿದಿರು ಕಳಲೆ ಸಿಗುವ ಸಂದರ್ಭಗಳಲ್ಲಿ ಊರಿಗೆ ತಂದು ಮಾರುವ ಅವರು ಬದಲಿಗೆ ಅಕ್ಕಿ, ಬೇಳೆ, ರಾಗಿಯನ್ನು ತೆಗೆದುಕೊಳ್ಳುತ್ತಿದ್ದುದು ನನಗಿನ್ನೂ ನೆನಪಿದೆ. ಮತ್ತೆ ಈ ಸಿನಿಮಾಗೆ ಬರುವುದಾದರೆ ಮುಖ್ಯ ಕಥೆಗಿಂತ ಅಲ್ಲಿ ಪುಟ್ಟಪುಟ್ಟದಾಗಿ ಆ ಜನರ ಬದುಕನ್ನು ಹೇಳಲು ಬಳಸಿಕೊಂಡಿರುವ ತುಣುಕುಗಳು ನನಗೆ ಸಿಕ್ಕಾಪಟ್ಟೆ ಹಿಡಿಸಿದವು. ಉದಾಹರಣೆಗೆ: ಬಲವಂತವಾಗಿ ಆಕೆಯನ್ನೂ, ಮಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಪೊಲೀಸರು ಒತ್ತಡದಿಂದಾಗಿ ಮತ್ತೆ ಅವರಿಬ್ಬರನ್ನೂ ವಾಪಸ್ಸು ಕಳಿಸುವಾಗ ತಮ್ಮ ಜೀಪಿನಲ್ಲಿ ಬಿಟ್ಟು ಬರುತ್ತೇವೆಂದು ಬಂದರೂ ಆಕೆ ತನ್ನ ಸ್ವಾಭಿಮಾನದಿಂದಾಗಿ ಅವರು ಗೋಗರೆದರೂ ಬಸ್ಸಿನಲ್ಲೇ ಹತ್ತಿ ಬರುತ್ತಾಳೆ. ನೋಡುವಾಗ ‘ವ್ಹಾ’ ಅನ್ನಿಸಿತು.
ಸೂರ್ಯ ಮಾತೊಂದರಲ್ಲಿ “ಹುಟ್ಟುವಾಗಲೇ ನಾ ವಕೀಲನಾಗಿ ಹುಟ್ಟಲಿಲ್ಲ. ಮನುಷ್ಯನಾಗಿ ಹುಟ್ಟಿದೆ” ಅನ್ನುವ ಮಾತು…. ಇತರೆ ಮನುಷ್ಯರನ್ನು ತನ್ನಂತೆ ಮನುಷ್ಯರನ್ನಾಗಿಯೇ ನೋಡುತ್ತೇನೆ ಅನ್ನುವ ಹಾಗೆ ಗೋಚರಿಸಿತು. ವಕೀಲನಿಗೆ ಹಣ ಕೊಡಲು ತನ್ನ ಬಳಿ ಏನಿಲ್ಲ ಅಂತ ಪರದಾಡುವ ದೃಶ್ಯ ನನ್ನ ಪಾಲಿಗೆ ಬೆಸ್ಟ್. ಆಕೆ ತನ್ನ ಅಳಲನ್ನು ವಕೀಲನಲ್ಲಿ ತೋಡಿಕೊಂಡಾಗ ಆತ ಹೇಳುತ್ತಾನಲ್ಲ. “ಹಾವು ಕಡಿಸಿಕೊಂಡವ ನಿನ್ನ ಹತ್ತಿರ ಬಂದರೆ ಮೊದಲು ಮದ್ದು ಕೊಡುತ್ತೀಯ? ಅಥವ ದುಡ್ಡು ನೋಡುತ್ತೀಯ?” ಅಂತ. ಅದಕ್ಕೆ ಆಕೆ: “ಥೂ ಏನು ಮಾತು ಹೇಳ್ತೀರಾ? ಹಣವೂ, ಜೀವವೂ ಒಂದೇನಾ? ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವ ಪೊಲೀಸರಿಗೆ ಅಪ್ಪಿತಪ್ಪಿ ಹಾವು ಕಚ್ಚಿ ನನ್ನ ಬಳಿ ಬಂದರೂ ಅವರಿಗೆ ಮದ್ದು ಕೊಡುತ್ತೇನೆ” ಅನ್ನುವಾಗ ಅ ಮುಗ್ಧ ಜನರ ಹೃದಯ ವೈಶಾಲ್ಯತೆ ನಮ್ಮ ಮನಸ್ಸಿಗೆ ನಾಟದೆ ಇರದು.
ನಾವೆಲ್ಲ ಏನೆಲ್ಲ ಕಲಿತಿದ್ದೇವೆ. ಆದರೆ ಅದೆಲ್ಲ, ಯಾವುದಕ್ಕಾಗಿ, ಎಷ್ಟು ಉಪಯೋಗವಾಗುತ್ತಿದೆ? ಆಗಲೆ ಆತ ಹೇಳುತ್ತಾನೆ. “ಒಬ್ಬ ವ್ಯಕ್ತಿಗೆ ಸಿಗುವ ಗೌರವ ಆತ ತಾನು ಕಲಿತ ವಿದ್ಯೆಯನ್ನು ಯಾವುದಕ್ಕಾಗಿ ಬಳಸುತ್ತಿದ್ದಾನೆ ಅನ್ನುವುದರ ಮೇಲೆ ನಿರ್ಧಾರವಾಗುತ್ತೆ” ಅಂತ. ಇಡೀ ಸಿನಿಮಾದಲ್ಲಿ ಗಮನಿಸಿ. ಕೆಲವೇ ಕೆಲವು ಪಾತ್ರಗಳಷ್ಟೇ ತಾವು ಕಲಿತ ವಿದ್ಯೆಯನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುತ್ತವೆ. ಉಳಿದವುಗಳಿಗೆ ತಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆಂಬ ಭಯ, ಕೆಲವಕ್ಕೆ ತನ್ನ ಅಸ್ಥಿತ್ವಕ್ಕೆ ಧಕ್ಕೆ ಬರುತ್ತದೆಂಬ ಭಯ.
ಇವತ್ತಿಗೂ ಹಳ್ಳಿಗಳಲ್ಲಿ ದಲಿತ ಸಮುದಾಯ ಉಳಿದವರ ಎದುರಿಗೆ ಮಾತನಾಡುವಾಗ ಎದ್ದು ನಿಂತು ಕೈಕಟ್ಟಿ ತಲೆ ತಗ್ಗಿಸಿ ಮಾತನಾಡುತ್ತದೆ. ಪ್ರಕಾಶ್ ರಾಜ್, ಸೂರ್ಯ ಆ ಜನರ ಕಷ್ಟ ಕೇಳಲೆಂದು ಒಂದೆಡೆ ಕೂತಿರುವಾಗ ಮಾತನಾಡುವವರೆಲ್ಲ ಎದ್ದು ಕೈಕಟ್ಟಿ ತಮ್ಮ ಕಥೆ ಹೇಳತೊಡಗುತ್ತಾರೆ. ಸೂರ್ಯನ ಪಾತ್ರ “ಕುಳಿತಲ್ಲಿಯೇ ಮಾತನಾಡಿ” ಅಂತ ಹೇಳಿದ ಮೇಲಷ್ಟೇ” ಕುಳಿತು ಮಾತನಾಡತೊಡಗುತ್ತಾರೆ. ಚಂದ್ರು ಪಾತ್ರದಂತೆಯೇ ನಾಯಕನೊಬ್ಬ ಹುಟ್ಟಿ ತಮಗೆ ಹೇಳಿಕೊಡಬೇಕು ಅಂತ ಯಾರೂ ಅಂದುಕೊಳ್ಳಬೇಕಿಲ್ಲ. ಇತರರೆದುರಿಗೆ ತಾವೂ ಸ್ವಾಭಿಮಾನದಿಂದ ತಲೆಯೆತ್ತಿ ನಿಂತು ಮಾತನಾಡುವುದು ತಪ್ಪಿಲ್ಲ ಅನ್ನುವ ಸಂದೇಶ ಇಲ್ಲಿ ಅರ್ಥವಾದರೆ ಸಾಕು.
ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ದೌರ್ಜನ್ಯಕ್ಕೊಳಗಾದವರ ಪರವಾಗಿ ನಿಂತು ನ್ಯಾಯ ಕೊಡಿಸುವ ಚಂದ್ರು (ನಿಜ ಜೀವನದಲ್ಲೂ ಕೆ.ಚಂದ್ರು ಅಂತ ಹೀಗೆ ಹೋರಾಡಿದ ವ್ಯಕ್ತಿಯೊಬ್ಬರಿದ್ದಾರೆ. ಅವರಿಂದಲೇ ಪ್ರಭಾವಿತವಾದ ಪಾತ್ರವಿದು) ಇರುವ ಸಿನಿಮಾಗೆ ‘ಜೈ ಭೀಮ್’ ಅಂತ ಟೈಟಲ್ ಇಟ್ಟಿರುವುದು ಸೂಕ್ತವಾಗಿದೆ. ಆ ಪಾತ್ರ ಹೇಳುವ “ನಿನ್ನಂಥ ಶೋಷಣೆಗೊಳಗಾದವರಿಗೆ ನ್ಯಾಯ ಸಿಕ್ಕ ದಿನ ನಾನು ನೆಮ್ಮದಿಯಿಂದ ಮಲಗುತ್ತೇನೆ” ಅನ್ನುವುದೇ ಸಿನಿಮಾದ ಟೈಟಲ್’ಗೆ ಹೊಂದುವ ಬೆಸ್ಟ್ ಡೈಲಾಗ್!
ಪೊಲೀಸ್ ಠಾಣೆಯಲ್ಲಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ಟು ಅವರು ಮಾಡದ ಅಪರಾಧಗಳನ್ನು ಒಪ್ಪಿಕೊಳ್ಳಿ ಅಂತ ಒತ್ತಡ ಹೇರುವ ದೃಶ್ಯಗಳು ವೆಟ್ರಿಮಾರನ್ ಅವರ ‘ವಿಸಾರಣೈ’ ಅನ್ನು ನೆನಪಿಸುತ್ತದಾದರೂ ಮಧ್ಯೆ ಮಧ್ಯೆ ಕೋರ್ಟಿನ ದೃಶ್ಯಗಳು ಆ ‘ಹಿಂಸೆ’ಯಿಂದ ಕೊಂಚ ನಿರಾಳವನ್ನಾಗಿಸುತ್ತವೆ. ಪ್ರತೀ ಕೋರ್ಟಿನ ದೃಶ್ಯದಲ್ಲಿ ನೊಂದವರ ಪರವಾಗಿ ಜಯ ಸಿಕ್ಕುವಾಗ ‘ನ್ಯಾಯಾಂಗ’ದ ಪ್ರಾಮುಖ್ಯತೆ ಎಷ್ಟು ಮುಖ್ಯ ಅನ್ನಿಸದೇ ಇರದು. ಒಟ್ಟಾರೆ ಸಿನಿಮಾ ಇಷ್ಟವಾಯಿತು ಅಂದ ಮೇಲೆ ಕಥೆ, ಚಿತ್ರಕಥೆ, ಒಬ್ಬೊಬ್ಬರ ಅಭಿನಯ ಹೇಗಿತ್ತು, ಹಾಡು ಎಲ್ಲದರ ಬಗ್ಗೆ ಒಂದೊಂದಾಗಿ ಮಾತನಾಡುವ ಅವಶ್ಯಕತೆ ಇಲ್ಲ.
ದೃಶ್ಯವೊಂದರಲ್ಲಿ ಪುಟ್ಟ ಹುಡುಗಿ ತಾನು ಕಾಲ ಮೇಲೆ ಕಾಲು ಹಾಕಿ ಪತ್ರಿಕೆ ಓದಬೇಕೆನ್ನುವ ಇಂಗಿತ ತೋರುವುದು…. ವಕೀಲನತ್ತ ನೋಡುವುದು.. ಆತ ‘ಪರವಾಗಿಲ್ಲ’ ಅನ್ನುವಂತೆ ಸನ್ನೆ ಮಾಡಿದಾಗ ಆಕೆ ಹಾಗೆ ಕೂತಾಗ…. ಆ ಒಟ್ಟಾರೆ ದೃಶ್ಯ ಅನೇಕ ವಿಷಯಗಳನ್ನು ಒಮ್ಮೆಲೇ ಹೇಳಿತು…. ಸಿನಿಮಾ ಕಲಾತ್ಮಕವಾಗಿ ಸಿಕ್ಕಾಪಟ್ಟೆ ಏನೂ ಹೇಳದೇ, ಕಮರ್ಶಿಯಲ್ ಸಬ್ಜೆಕ್ಟ್ ಹೇಳಿದ ರೀತಿಯಲ್ಲೇ ಹೇಳಿರುವುದು ಹೆಚ್ಚು ಜನರನ್ನು ತಲುಪಲು ಸಹಾಯವಾಗಬಹುದೇ? ಹಾಗಾದರೆ ಈ ಸಿನಿಮಾ ಗೆದ್ದಂತೆಯೇ!
ಚೆನ್ನೈನ ಕೋರ್ಟೊಂದರಲ್ಲಿ ನ್ಯಾಯಾಧೀಶರಾಗಿದ್ದ ಕೆ.ಚಂದ್ರು ಅವರ ನಿಜ ಜೀವನದ ಕಥೆಯಿಂದಲೇ ಪ್ರಭಾವಿತರಾಗಿ ಕಥಾನಾಯಕ ಚಂದ್ರು (ಸೂರ್ಯ)ನ ಪಾತ್ರವನ್ನು ಹೆಣೆಯಲಾಗಿದೆ. ಆದಿವಾಸಿಗಳ ಮೂಲಕವೇ ಕಥೆ ಶುರುವಾಗುವುದರಿಂದ ಚಂದ್ರು ಕಥೆ ಮುಖ್ಯವಾಗುವುದಿಲ್ಲ. ನಿಜ ಜೀವನದ ಚಂದ್ರು ಅವರ ಬಗ್ಗೆ ಓದುವಾಗ ಅವರ ಜೀವನವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಸಿನಿಮಾವೊಂದು ಬರಲಿ ಅನ್ನಿಸಿತು. ಈ ಸಿನಿಮಾ ಆ ಆದಿವಾಸಿಗಳಿಗಾಗಲಿ, ಅಥವ ಇನ್ನೂ ಮೂಲಭೂತ ಸೌಕರ್ಯಗಳನ್ನು ಕಾಣದೆ ಅದಕ್ಕಾಗಿ ಹಂಬಲಿಸುತ್ತಿರುವವರಿಗಾಗಲಿ ತಲುಪುವುದು ಅನುಮಾನ. ಆದರೆ ಈ ಸಿನಿಮಾವನ್ನು ನಿಜವಾಗಿ ನೋಡಬೇಕಾದವರು, ಅದರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕಾದವರು ‘ನಾವೇ’.