ಎಂಥ ದೊಡ್ಡ ಹಗರಣಕಾರ ಆದರೂ ತೆಲಗಿ ಥರದ ವಂಚಕರು ಹೇಗೆ ರಾಜಕೀಯ ಮತ್ತು ಅಧಿಕಾರದಲ್ಲಿರುವವರ ಬಲಿಪಶುಗಳಾಗುತ್ತಾರೆ ಎನ್ನುವುದು ಈ ಸರಣಿಯ ಮುಖ್ಯ ಅಂಶ. ಹಗರಣ ಯಾವ ಮಟ್ಟಕ್ಕೆ ಬೆಳೆದಿತ್ತು ಎನ್ನುವುದರ ಅಂದಾಜು ಕೂಡ ಒಂದು ಮಟ್ಟಿಗೆ ಸಿಗುತ್ತದೆ. ಸ್ಕ್ಯಾಮ್ 2003 ಭಾಗ 2, ಭಾಗ 1ಕ್ಕೆ ನ್ಯಾಯ ಒದಗಿಸಿದೆ. ‘Scam 2003’ SonyLivನಲ್ಲಿ ಸ್ಟ್ರೀಮ್ ಆಗುತ್ತಿದೆ.
ದುರಾಸೆ ಮತ್ತು ಭ್ರಷ್ಟಾಚಾರದ ಸುತ್ತ ನಡೆದ ದೇಶ ಕಂಡ ಅತಿ ದೊಡ್ಡ ತೆಲಗಿ ಹಗರಣದ ‘scam 2003’ ಭಾಗ 1ರ ಯಶಸ್ಸಿನ ನಂತರ ವೀಕ್ಷಕರು ಕಾತುರದಿಂದ ಕಾಯುತ್ತಿದ್ದ ಭಾಗ 2 ಬಿಡುಗಡೆಯಾಗಿದೆ. ಈ ಸರಣಿಯಲ್ಲೂ ಅಬ್ದುಲ್ ಕರೀಂ ತೆಲಗಿ ಪಾತ್ರದಲ್ಲಿ ಗಗನ್ ದೇವ್ ವಿಜೃಂಭಿಸಿದ್ದಾರೆ. ನಕಲಿ ಛಾಪಾ ಕಾಗದದ ದೇಶ ಕಂಡ ಅತಿ ದೊಡ್ಡ ಹಗರಣದ ಸೂತ್ರಧಾರ ತೆಲಗಿ ಅವನತಿಯನ್ನು ಈ ಸರಣಿಯಲ್ಲಿ ಕಾಣಬಹುದು. ತುಷಾರ್ ಹೀರಾನಂದಾನಿ ನಿರ್ದೇಶನದ ಈ ಸರಣಿ ನೈಜ ಘಟನೆಗಳ ಮೇಲೆ ಆಧಾರಿತವಾಗಿದೆ.
ಈ ಸರಣಿಯಲ್ಲಿ ಐದು ಸಂಚಿಕೆಗಳಿವೆ. ಈ ಕಥೆಯ ಕೇಂದ್ರಬಿಂದುವಾದ ತೆಲಗಿಯ ಕಥೆಗೆ ಈ ಭಾಗದಲ್ಲಿ ಅಂತ್ಯ ಹಾಡಲಾಗಿದೆ. ಈ ಹಿಂದೆ ಬಿಡುಗಡೆಯಾದ ಮೊದಲನೇ ಭಾಗದಲ್ಲಿ ಅಬ್ದುಲ್ ಕರೀಂ ತೆಲಗಿಯ ಹಗರಣದ ಆರಂಭ ಮತ್ತು ಹೇಗೆ ವಂಚಕ ತನ್ನ ಸಂಚನ್ನು ಕಾರ್ಯಗತ ಮಾಡಿದ ಎನ್ನುವುದರ ಬಗ್ಗೆ ವಿವರಣೆ ಇದ್ದರೆ ಈ ಭಾಗದಲ್ಲಿ ಹೇಗೆ ಅವನ ಅವನತಿ ಪ್ರಾರಂಭವಾಯಿತು ಎನ್ನುವುದರ ನಿರೂಪಣೆ ಇದೆ. ಹನ್ಸಲ್ ಮೆಹ್ತಾ ನಿರ್ದೇಶನದ ಸ್ಕ್ಯಾಮ್ 1992ರ ಯಶಸ್ಸಿನ ನಂತರ ಅದೇ ಮಾದರಿಯ ಸರಣಿ ಈ ಸ್ಕ್ಯಾಮ್ 2003.
ಆತನ ಆಸ್ತಿಪಾಸ್ತಿಯನ್ನು ಸಾರ್ವಜನಿಕವಾಗಿ ತೆರೆದು ತೋರಿಸುವ ಮೂಲಕ ಅತಿ ದೊಡ್ಡ ತಪ್ಪು ಮಾಡಿದ ನಂತರ ತೆಲಗಿಗೆ ಆತನ ಜಾಲದಲ್ಲಿ ಇರುವವರ ಜೊತೆ ಕೆಲವೊಂದು ರಾಜಿ ಸಂಧಾನಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಇದು ಆತನ ವಹಿವಾಟನ್ನು ಉಳಿಸಿಕೊಳ್ಳಲು ಅತ್ಯಗತ್ಯ ಕೂಡ. ಆದರೆ ಆತ ಹೆಜ್ಜೆಗಳನ್ನು ಇಟ್ಟಷ್ಟೂ ತಾನೇ ತೋಡಿಕೊಂಡ ಗುಂಡಿಯೊಳಗೆ ಆಳಕ್ಕೆ ಇಳಿಯುತ್ತಾ ಪೊಲೀಸ್ ಮತ್ತು ರಾಜಕಾರಣಿಗಳ ನಡುವೆ ಸಿಲುಕಿ ಅವರಾಡುವ ಪಗಡೆಯಾಟದ ಬಲಿಪಶುವಾಗುವ ಸಮಯ ಹತ್ತಿರ ಬರುತ್ತದೆ.
ಮೊದಲನೇ ಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿಸಿರುವ ಗಗನ್ ಇಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ಕಳೆದ ಭಾಗದ ಕೊನೆಯಲ್ಲಿ ಬರುವ ತೆಲಗಿಯ ಅಸಲಿ ಫೂಟೇಜ್ ನೋಡಿದರೆ ಗಗನ್ ಆ ಪಾತ್ರದ ಪರಿಪೂರ್ಣತೆಗೆ ಹಾಕಿರುವ ಶ್ರಮದ ಅಂದಾಜು ಸಿಗುತ್ತದೆ. ಒಬ್ಬ ಖೈದಿಯನ್ನು ಜೈಲಿನಲ್ಲಿ ಮೂಲೆಗುಂಪು ಮಾಡಿ ಹಾಕಿದರೆ ಯಾವ ರೀತಿಯ ಕೋಪ ಮತ್ತು ಹತಾಶೆ ಕಾಣುತ್ತದೋ ಅವೆಲ್ಲವನ್ನೂ ಗಗನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತನ್ನ ಮೇಲೆ ತಾನು ನಿಯಂತ್ರಣ ಕಳೆದುಕೊಂಡ ಸಂದರ್ಭಗಳನ್ನು ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಅವರ ಹೋಂವರ್ಕ್ ಅಭಿನಯದಲ್ಲಿ ಎದ್ದು ಕಾಣುತ್ತದೆ. ಪ್ರಾಮಾಣಿಕ ಅಧಿಕಾರಿಗಳ ಪಾತ್ರದಲ್ಲಿ ಮುಕೇಶ್ ತಿವಾರಿ ಮತ್ತು ದಿನೇಶ್ ಲಾಲ್ ಯಾದವ್ ತೆಲಗಿಯ ದುಡ್ಡಿಗೆ ಮಾರುಹೋಗದ ಖಡಕ್ ಅಧಿಕಾರಿಗಳ ಪಾತ್ರದಲ್ಲಿ ಮಿಂಚಿದ್ದಾರೆ.
ಸಂಜಯ್ ಸಿಂಗ್ ಬರೆದಿರುವ ಹಿಂದಿ ಪುಸ್ತಕ ‘ತೆಲಗಿ ಸ್ಕ್ಯಾಮ್ : ಏಕ್ ರಿಪೋರ್ಟರ್ ಕಿ ಡೈರಿ’ ಆಧರಿಸಿ ಈ ಸರಣಿ ಮಾಡಲಾಗಿದ್ದರೂ ಮೊದಲನೇ ಸ್ಕ್ಯಾಮ್ 1992 ಸರಣಿಯಿಂದಲೂ ಕೂಡ ನಿರ್ದೇಶಕರು ಸ್ಫೂರ್ತಿ ಪಡೆದಿರುವುದು ತಿಳಿಯುತ್ತದೆ. ಮೊದಲನೇ ಭಾಗದಲ್ಲಿದ್ದ ಡ್ರಾಮಾವನ್ನು ವಿಸ್ತರಿಸಿ ಅಧಿಕಾರದ ವಜ್ರಮುಷ್ಟಿಯಲ್ಲಿ ನಡೆಯುವ ಎಲ್ಲ ಅನಾಚಾರಗಳನ್ನೂ ಪ್ರತಿಬಿಂಬಿಸುವಲ್ಲಿ ನಿರ್ದೇಶಕ ತುಷಾರ್ ಹೀರಾನಂದಾನಿ ಮತ್ತು ಬರಹಗಾರರಾದ ಕರಣ್ ವ್ಯಾಸ್ ಮತ್ತು ಕಿರಣ್ ಅವರ ಕೈಚಳಕ ಎದ್ದು ಕಾಣುತ್ತದೆ. ಸುಮಾರು 30,000 ಕೋಟಿಗಳ ಹಗರಣದ ಸುತ್ತ ಕಥೆ ಮಾಡುವುದಕ್ಕೆ ನೈಪುಣ್ಯ ಮತ್ತು ನಿಷ್ಠುರತೆ ಎರಡೂ ಬೇಕು. ಆ ವಿಭಾಗದಲ್ಲಿ ಎಲ್ಲೂ ಮೋಸವಾಗಿಲ್ಲ. ನಿರೂಪಣೆಯಲ್ಲಿ ಬಿಗಿ ಇದೆ. ಸಂಕಲನ ಇನ್ನಷ್ಟು ಚುರುಕಾಗಿದ್ದಿದ್ದರೆ ಇನ್ನೂ ಪರಿಣಾಮಕಾರಿಯಾಗಿ ಇರುತ್ತಿತ್ತು. ಸಂಭಾಷಣೆ ಅಂತೂ ಬಹಳ ಪರಿಣಾಮಕಾರಿಯಾಗಿದೆ.
ಈ ಸರಣಿಯಲ್ಲಿ ತೆಲಗಿ ತನ್ನ ತಪ್ಪಿನ ಅರಿವಾದಂತೆ, ದುಃಖದಲ್ಲಿ ಮುಳುಗುವುದಕ್ಕೆ ಅವಕಾಶ ಕೊಟ್ಟರೂ ಎಲ್ಲೂ ಅದನ್ನು ದೌರ್ಬಲ್ಯವಾಗಿ ಬೆಳೆಯಲು ಬಿಟ್ಟಿಲ್ಲ ಅಥವಾ ಆತನ ಮೇಲೆ ಅನುಕಂಪದ ಅಲೆ ಸೃಷ್ಟಿಯಾಗುವಂತೆ ಮಾಡಿಲ್ಲ. ಆದರೆ ಇಷ್ಟೆಲ್ಲ ಇದ್ದರೂ ಕಥಾನಿರೂಪಣೆಯ ಕಾಲಘಟ್ಟದ ವಿಷಯದಲ್ಲಿ ಸ್ಪಷ್ಟತೆ ಸಿಗುವುದಿಲ್ಲ.ಘಟನೆ ನಡೆಯುವ ಸ್ಥಳಗಳ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಎಲ್ಲವೂ ಯಾವುದೋ ಒಂದು ವೇಗದಲ್ಲಿ ನಡೆದ ಹಾಗೆ ಭಾಸವಾಗುತ್ತದೆ.
ಎಂಥ ದೊಡ್ಡ ಹಗರಣಕಾರ ಆದರೂ ತೆಲಗಿ ಥರದ ವಂಚಕರು ಹೇಗೆ ರಾಜಕೀಯ ಮತ್ತು ಅಧಿಕಾರದಲ್ಲಿರುವವರ ಬಲಿಪಶುಗಳಾಗುತ್ತಾರೆ ಎನ್ನುವುದು ಈ ಸರಣಿಯ ಮುಖ್ಯ ಅಂಶ. ಹಗರಣ ಯಾವ ಮಟ್ಟಕ್ಕೆ ಬೆಳೆದಿತ್ತು ಎನ್ನುವುದರ ಅಂದಾಜು ಕೂಡ ಒಂದು ಮಟ್ಟಿಗೆ ಸಿಗುತ್ತದೆ. ಸಿಕ್ಕಿರುವ ಅವಕಾಶದಲ್ಲಿ ಗಗನ್ ಸಂಪೂರ್ಣವಾಗಿ ಮಿಂಚಿದ್ದಾರೆ. ಒಟ್ಟಾರೆಯಾಗಿ ಸ್ಕ್ಯಾಮ್ 2003 ಭಾಗ 2, ಭಾಗ 1ಕ್ಕೆ ನ್ಯಾಯ ಒದಗಿಸಿದೆ. ನಿರಾಸೆ ಮಾಡುವುದಿಲ್ಲ.
ಒಂದು ವಿಭಿನ್ನ ದೃಶ್ಯಾನುಭವವನ್ನು ಕಟ್ಟಿಕೊಡುವಲ್ಲಿ ಸರಣಿ ಯಶಸ್ವಿಯಾಗಿದೆ.