‘ಸ್ಕ್ಯಾಮ್ 2003’ ಭಾಗ 1 ಒಟ್ಟಾರೆಯಾಗಿ ಉತ್ತಮ ಪ್ರಯತ್ನ. ಉತ್ತಮ ಅಭಿನಯ ಮತ್ತು ಬಹಳ ಹೈ ರಿಸ್ಕ್ ಎನಿಸುವಂತಹ ವಿಷಯವನ್ನಿಟ್ಟುಕೊಂಡು ಮಾಡಿರುವಂಥ ಕಥೆ. ಎರಡನೇ ಭಾಗದಲ್ಲಿ ಏನೇನಿರಬಹುದು ಎಂಬ ಕುತೂಹಲವನ್ನು ಉಳಿಸಿ ಮುಗಿಯುತ್ತದೆ. ಸರಣಿ SonyLiv ನಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಸ್ಕ್ಯಾಮ್ 1992’ ಭರ್ಜರಿಯಾಗಿ ಯಶಸ್ವಿಯಾಗಿದ್ದು ಹಸಿರಾಗಿರುವಾಗಲೇ ಅದೇ ತಂಡ ‘ಸ್ಕ್ಯಾಮ್ 2003’ ಸರಣಿಯನ್ನು ಪ್ರಸ್ತುತಪಡಿಸಿದ್ದಾರೆ. ಅಬ್ದುಲ್ ಕರೀಂ ತೆಲಗಿ ಹಗರಣದ ಸುತ್ತ ನೇಯ್ದಿರುವ ಕಥೆ ಇದಾಗಿದೆ. ಅಬ್ದುಲ್ ಕರೀಂ ತೆಲಗಿ ಪಾತ್ರದಲ್ಲಿ ಗಗನ್ ದೇವ್ ಅಭಿನಯಿಸಿದ್ದಾರೆ. ಅಬ್ದುಲ್ ಕರೀಂ ತೆಲಗಿ ಸಣ್ಣ ಮಟ್ಟದಲ್ಲಿ ವ್ಯಾಪಾರ ಮಾಡುವ ಹಣ್ಣಿನ ವ್ಯಾಪಾರಿ. ಶೌಕತ್ ಇವನಿಗೆ ಒಂದು ಹೋಟೆಲಲ್ಲಿ ರಿಸೆಪ್ಷನಿಸ್ಟ್ ಕೆಲಸ ಕೊಡಿಸುತ್ತಾನೆ. ಅಬ್ದುಲ್ ತೆಲಗಿ, ನಫೀಸಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರದ ದಿನಗಳಲ್ಲಿ ಗಲ್ಫ್ ರಾಷ್ಟ್ರಕ್ಕೆ ತೆರಳಿ ಕೆಲವು ವರ್ಷಗಳ ಬಳಿಕ ಭಾರತಕ್ಕೆ ಮರಳಿ ಬರುತ್ತಾನೆ. ಬಡವರಿಗೆ ಗಲ್ಫ್ ರಾಷ್ಟ್ರಕ್ಕೆ ಹೋಗುವ ಆಸೆ ತೋರಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವ ದಂಧೆ ಶುರು ಮಾಡುತ್ತಾನೆ. ಅಬ್ದುಲ್‌ನ ಮೋಸ ಬಯಲಾಗಿ ಪೊಲೀಸ್ ಅವನನ್ನು ಬಂಧಿಸುತ್ತಾರೆ. ಜೈಲಿನಲ್ಲಿ ಕೌಶಲ್ ಜಾವೇರಿಯ ಭೇಟಿ ಆಗುತ್ತದೆ.
ಬಿಡುಗಡೆಯ ನಂತರ ಇಬ್ಬರೂ ಸೇರಿ ಕಾನೂನುಬಾಹಿರ ವಹಿವಾಟುಗಳನ್ನು ಶುರು ಮಾಡುತ್ತಾರೆ. ಛಾಪಾ ಕಾಗದದ ವ್ಯವಹಾರ ಎಲ್ಲಕ್ಕಿಂತ ಉತ್ತಮ ಎಂದು ತೆಲಗಿ ಅರ್ಥ ಮಾಡಿಕೊಳ್ಳುತ್ತಾನೆ. ಕೌಶಲ್ ಅನ್ನು ನಕಲಿ ಛಾಪಾ ಕಾಗದದ ವ್ಯವಹಾರಕ್ಕೆ ಒಪ್ಪಿಸುತ್ತಾನೆ ಮತ್ತು ಒಂದು ಉಪಾಯವನ್ನೂ ಮಾಡುತ್ತಾನೆ. ಎಲ್ಲವೂ ಅವನ ನಡೆಯ ಪ್ರಕಾರವೇ ಹೋಗುತ್ತಿದೆ ಎಂದಾಗಲೇ ತೆಲಗಿ ಒಂದು ಸಂಕಷ್ಟಕ್ಕೆ ಸಿಲುಕುತ್ತಾನೆ. ಅವನ ಮುಂದಿನ ನಡೆ ಏನು? ಅಷ್ಟು ದೊಡ್ಡ ಹಗರಣ ಮಾಡಲು ಅವನಿಂದ ಹೇಗೆ ಸಾಧ್ಯವಾಯಿತು ಎನ್ನುವುದೇ ಈ ಸರಣಿಯ ತಿರುಳು. ಭಾರತದಲ್ಲಿ ನಡೆದ ಹಗರಣಗಳಲ್ಲೇ ಬಹುಶಃ ಅತ್ಯಂತ ದೊಡ್ಡ ಮಟ್ಟದ ಹಗರಣ ಎಂದೇ ಹೇಳಬಹುದಾದ ಈ ನಕಲಿ ಛಾಪಾ ಕಾಗದದ ಹಗರಣವನ್ನು ಇಟ್ಟುಕೊಂಡು ಕಥೆ ಮಾಡಲು ಹೊರಟಿರುವ ಪ್ರಯತ್ನ ಅಭಿನಂದನಾರ್ಹ. ಇಷ್ಟು ದೊಡ್ಡ ಮಟ್ಟದ ಹಣಕಾಸಿನ ಅವ್ಯವಹಾರದ ಒಳಹೊರಗುಗಳನ್ನು ಸವಿವರವಾಗಿ ತೆರೆಯ ಮೇಲೆ ತೋರಿಸುವುದು ಅಷ್ಟು ಸುಲಭವಲ್ಲ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ಹೇಳುವುದು ಮತ್ತೂ ಕಷ್ಟ. ಈ ವಿಭಾಗದಲ್ಲಿ ನಿರ್ದೇಶಕರು ಉತ್ತಮ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.
ತೆಲಗಿ ಪಾತ್ರದಲ್ಲಿ ಗಗನ್ ದೇವ್ ಅಭಿನಯ ಬಹಳ ಉತ್ತಮವಾಗಿದ್ದು ಅಬ್ದುಲ್ ತೆಲಗಿ ಪಾತ್ರಕ್ಕೆ ಬಹಳ ಹೊಂದುತ್ತದೆ. ಅವರ ಅಭಿನಯದಲ್ಲಿನ ನೈಜತೆ ಎದ್ದು ಕಾಣುತ್ತದೆ. ಅವರು ಸಂಭಾಷಣೆ ಹೇಳುವ ಶೈಲಿ, ಆಂಗಿಕ ಅಭಿನಯ ಎಲ್ಲವೂ ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹೇಮಾಂಗ್ ವ್ಯಾಸ್ ಅವರ ಅಭಿನಯವೂ ಪೂರಕವಾಗಿದೆ. ದುರಾಸೆಯ ಕುರಿತಾದ ಒಂದು ಮಹತ್ವದ ಪಾಠವನ್ನು ಈ ಸರಣಿ ಸಾರುತ್ತದೆ. ಹೇಮಾಂಗ್ ಅವರ ಪಾತ್ರ ಇದಕ್ಕೆ ಉದಾಹರಣೆ. ನಿರ್ಮಾಣ ತಂಡ ಈ ಹಗರಣದ ಕುರಿತಾಗಿ ಬಹಳ ಚೆನ್ನಾಗಿ ವಿವರಗಳನ್ನು ಕಲೆಹಾಕಿದ್ದಾರೆ. ತೆಲಗಿಯ ಬಂಧನದ ನಂತರದ ಸನ್ನಿವೇಶಗಳಂತೂ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿವೆ.
ಆದರೂ ಸರಣಿಯ ಆರಂಭದ ಸಂಚಿಕೆಗಳು ಬಹಳ ನಿಧಾನಗತಿಯಲ್ಲಿ ಸಾಗುತ್ತದೆ. ಕೊಂಚ ವೇಗವಾಗಿ ಇರಬಹುದಿತ್ತು. ಆರಿಸಿಕೊಂಡಿರುವ ವಿಷಯ ಚೆನ್ನಾಗಿದ್ದರೂ ಚಿತ್ರಕಥೆ ಇನ್ನೂ ಗಟ್ಟಿಯಾಗಿ ಇರಬಹುದಿತ್ತು.ಇತ್ತೀಚಿಗೆ ಬಿಡುಗಡೆಯಾದ ‘ಫಾರ್ಜಿ’ ಸರಣಿಯ ಛಾಯೆ ಅಲ್ಲಲ್ಲಿ ಬಹಳವಾಗಿ ಕಾಣಿಸುತ್ತದೆ. ಭಾವುಕತೆಯ ವಿಷಯದಲ್ಲೂ ನಿರ್ದೇಶಕರು ಇನ್ನೂ ಉತ್ತಮ ಯತ್ನ ಮಾಡಬಹುದಿತ್ತು. ತೆಲಗಿ ಅವನ ಕುಟುಂಬದೊಂದಿಗೆ ಹೊಂದಿದ್ದ ಸಂಬಂಧವನ್ನು ಪರಿಣಾಮಕಾರಿಯಾಗಿ ತೋರಿಸಲಾಗಿಲ್ಲ. ಈ ವಿಚಾರದಲ್ಲಿ ‘ಸ್ಕ್ಯಾಮ್ 1992’ ಸರಣಿ ಇದಕ್ಕಿಂತ ಉತ್ತಮವಾಗಿತ್ತು ಎನ್ನಬಹುದು.
ಇಶಾನ್ ಚಬ್ರ ಅವರ ಸಂಗೀತ ಪರಿಣಾಮಕಾರಿಯಾಗಿದೆ. ಸ್ಟ್ಯಾನ್ಲಿ ಮುದ್ದ ಅವರ ಛಾಯಾಗ್ರಹಣ ಕೂಡ ಬಹಳ ಉತ್ತಮವಾಗಿದೆ. ಎಲ್ಲಕ್ಕಿಂತ ಎದ್ದು ಕಾಣುವುದು ಕಲಾನಿರ್ದೇಶನ ತಂಡದ ಶ್ರಮ. ಸಂಕಲನ ಇನ್ನಷ್ಟು ಚುರುಕಾಗಿರಬೇಕಿತ್ತು. ಸಂಭಾಷಣೆ ಇನ್ನೂ ಚೆನ್ನಾಗಿ ಇರಬಹುದಿತ್ತು. ತುಷಾರ್ ಹೀರಾನಂದಾನಿ ನಿರ್ದೇಶನ ಅಭಿನಂದನಾರ್ಹ. ‘ವಾವ್’ ಎನಿಸುವ ಹಾಗಿಲ್ಲದಿದ್ದರೂ ಕೆಲವು ಸಂಚಿಕೆಗಳು ಮತ್ತು ದೃಶ್ಯಗಳು ಬಹಳ ಉತ್ತಮವಾಗಿ ಮೂಡಿಬಂದಿವೆ. ಈ ಕಥೆಯನ್ನು ಎರಡು ಭಾಗಗಳಲ್ಲಿ ಹೇಳಲು ಹೊರಟ ಪ್ರಯತ್ನ ಇಷ್ಟವಾಗುತ್ತದೆ. ‘ಸ್ಕ್ಯಾಮ್ 2003’ ಭಾಗ 1 ಒಟ್ಟಾರೆಯಾಗಿ ಉತ್ತಮ ಪ್ರಯತ್ನ. ಉತ್ತಮ ಅಭಿನಯ ಮತ್ತು ಬಹಳ ಹೈ ರಿಸ್ಕ್ ಎನಿಸುವಂತಹ ವಿಷಯವನ್ನಿಟ್ಟುಕೊಂಡು ಮಾಡಿರುವಂಥ ಕಥೆ. ಎರಡನೇ ಭಾಗದಲ್ಲಿ ಏನೇನಿರಬಹುದು ಎಂಬ ಕುತೂಹಲವನ್ನು ಉಳಿಸಿ ಮುಗಿಯುತ್ತದೆ.