ಶೌರ್ಯುವ್‌ ನಿರ್ದೇಶನದ ‘Hi Nanna’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ತಂದೆ ಮತ್ತು ಮಗಳ ಬಾಂಧವ್ಯದ ಕತೆಯಿದು. ನಾನಿ, ಕಿಯಾರಾ ಖನ್ನಾ, ಮೃಣಾಲ್‌ ಠಾಕೂರ್‌ ಪ್ರಮುಖ ಪಾತ್ರಗಳಲ್ಲಿರುವ ಸಿನಿಮಾ ಡಿಸೆಂಬರ್‌ 7ರಂದು ತೆರೆಕಾಣಲಿದೆ.

ನಾನಿ ಮತ್ತು ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹಾಯ್‌ ನಾನಾ’ (Hi Nanna) ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಶೌರ್ಯುವ್‌ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಖನ್ನಾ (ಬೇಬಿ ಕಿಯಾರಾ) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಿ ನಟಿಸುತ್ತಿರುವ 30ನೇ ಚಿತ್ರವಿದು. ತಂದೆ ಮತ್ತು ಮಗಳ ಬಾಂಧವ್ಯದ ಜೊತೆಗೆ ಪ್ರೇಮಕತೆಯನ್ನು ಒಳಗೊಂಡಿದೆ. ಟ್ರೇಲರ್‌ನಲ್ಲಿ ತಾಯಿ ಇಲ್ಲದ ಮಗಳಿಗೆ ಅಪ್ಪನೇ ಎಲ್ಲವೂ ಆಗಿರುತ್ತಾನೆ. ಅಪ್ಪನಿಗೆ ಮಗಳೇ ಜೀವ. ಈ ಪುಟ್ಟ ಕುಟುಂಬಕ್ಕೆ ಸ್ನೇಹಿತೆಯಾಗಿ ಪರಿಚಯವಾಗುವ ಮೃಣಾಲ್‌ ಕಿಯಾರಾಳಿಗೆ ಹೆಚ್ಚು ಹತ್ತಿರವಾಗುತ್ತಾಳೆ. ನಂತರ ನಾನಿ ಪರಿಚಯವಾದಾಗ ಇವರಿಬ್ಬರೂ ಈಗಾಗಲೇ ಪರಿಚಯಸ್ಥರಂತೆ ಕಾಣುತ್ತದೆ. ನಾನಿಯನ್ನು ಪ್ರೀತಿಸುತ್ತಿದ್ದ ಮೃಣಾಲ್ ಈಗಾಗಲೇ ಬೇರೆ ಹುಡುಗನೊಂದಿಗೆ ಹಸೆಮಣೆ ಏರಬೇಕಾದ‌ ಸಮಯದಲ್ಲಿ ಮದುವೆ ಮಂಟಪದಿಂದ ಹೊರಬರುತ್ತಾಳೆ. ನಾನಿ ನಂತರ ಅವಳನ್ನು ಪ್ರೀತಿಸಲು ಶುರುಮಾಡುತ್ತಾನೆ.

ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಿಯದರ್ಶಿ ಮತ್ತು ಅಂಗದ್ ಬೇಡಿ ಕಾಣಿಸಿಕೊಂಡಿದ್ದಾರೆ. ಟೀಸರ್‌ ನೋಡಿದರೆ, ಇದೊಂದು ಕೌಟುಂಬಿಕ ಎಂಟರ್‌ಟೇನರ್‌ ಆಗಲಿದೆ ಎನ್ನುವ ನಿರೀಕ್ಷೆ ಮೂಡುತ್ತದೆ. ಈ ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಜನಪ್ರಿಯತೆ ಗಳಿಸಿದೆ. Vyra Entertainment ಬ್ಯಾನರ್‌ ಅಡಿಯಲ್ಲಿ ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ ವಿಜೇಂದ್ರ ರೆಡ್ಡಿ ಸಿನಿಮಾ ನಿರ್ಮಿಸಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ, ಮಲಯಾಳಂನ ‘ಹೃದಯಂ’ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಿದ್ದ ಹೇಶಮ್ ಅಬ್ದುಲ್ ವಹಾಬ್ ಅವರು ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಡಿಸೆಂಬರ್ 7ಕ್ಕೆ ಮೂಲ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here