ಸಂಜಯ್ ಎಚ್ ನಿರ್ದೇಶನದ ‘ಸ್ಕೂಲ್ ಡೇಸ್’ ಸಿನಿಮಾದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ಇದು ಹೈಸ್ಕೂಲ್ ಹುಡುಗರ ಕತೆ. ಸಂಪೂರ್ಣ ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆಸಲಾಗಿದ್ದು, ಆ ಭಾಗದ ಭಾಷೆಯನ್ನೇ ಬಳಕೆ ಮಾಡಿದ್ದಾರೆ. ಸಿನಿಮಾ ಇದೇ ನವೆಂಬರ್ 24ರಂದು ತೆರೆಕಾಣಲಿದೆ.
‘ಸ್ಕೂಲ್ ಡೇಸ್ – ಚಿತ್ರದ ಶೀರ್ಷಿಕೆಯೇ ಹೇಳುವಂತೆ ಶಾಲೆಯ ದಿನಗಳ ಕುರಿತಾದ ಚಿತ್ರ. ಅದರಲ್ಲೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕತೆ. ಸಂಪೂರ್ಣವಾಗಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬಂದಿದೆ. ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆದಿದೆ. ಚಿತ್ರ ನೋಡಿದಾಗ ನಮ್ಮ ‘ಸ್ಕೂಲ್ ಡೇಸ್’ ನೆನಪಾಗುವುದು ಖಚಿತ. ಹೆಚ್ಚಾಗಿ ಹೊಸ ಪ್ರತಿಭೆಗಳಿಗೆ ಚಿತ್ರದಲ್ಲಿ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ ‘ಸ್ಕೂಲ್ ಡೇಸ್’ ಚಿತ್ರದ ನಿರ್ದೇಶಕ ಸಂಜಯ್. ಉದ್ಯಮಿ ಉಮೇಶ್ ಹಿರೇಮಠ್ ಅವರು ಆಸ್ಥೆಯಿಂದ ನಿರ್ಮಿಸಿರುವ ಚಿತ್ರವಿದು. ಉತ್ತರ ಕರ್ನಾಟಕದ ಪ್ರತಿಭೆಗಳ ಸಿನಿಮಾ ಚೆನ್ನಾಗಿ ಮೂಡಿಬರಬೇಕೆನ್ನುವುದು ಅವರ ಉಮೇದು. ಹಾಗಾಗಿ ಅವರು ಯಾವುದೇ ಸಂದರ್ಭದಲ್ಲೂ ಕಾಂಪ್ರಮೈಸ್ ಆಗದೆ ಸಿನಿಮಾಗೆ ಹಣ ಹಾಕಿದ್ದಾರೆ.
ಮೊನ್ನೆ ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ನಡೆದಿದೆ. ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಉಮೇಶ್ ಹಿರೇಮಠ, ‘ಆರಂಭದಲ್ಲಿ ಒಂದು ನಿರ್ದಿಷ್ಟ ಬಜೆಟ್ ಎಂದು ಸಿನಿಮಾ ಆರಂಭಿಸಿದೆವು. ನಿರ್ದೇಶಕರು ಮತ್ತು ಕಲಾವಿದರ ಪರಿಶ್ರಮ – ಶ್ರದ್ಧೆ ಮನಸ್ಸಿಗೆ ಹಿಡಿಸಿತು. ಚಿತ್ರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ಎಲ್ಲಿಯೂ ಕಾಂಪ್ರಮೈಸ್ ಆಗದೆ ಹಣ ಹಾಕಿದ್ದೇವೆ’ ಎಂದಿದ್ದಾರೆ. ಅನುಭವಿ ಸಂಗೀತ ಸಂಯೋಜಕ ಕೆ ಎಂ ಇಂದ್ರ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆಗಳಾದ ಅರ್ಜುನ್ ಬಳ್ಳಾರ, ಸಂಗಮ್ ಮಠದ್, ನೇಹಾ, ವಿವೇಕ್ ಜಂಬಗಿ, ದರ್ಶನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ನವೆಂಬರ್ 24ರಂದು ಸಿನಿಮಾ ತೆರೆಕಾಣಲಿದೆ.