ಯುದ್ಧದಿಂದ ತತ್ತರಿಸಿದ ಯುಕ್ರೇನ್‌ನ ರಾಜಕೀಯ ವ್ಯವಸ್ಥೆ ಪರಿಚಯಿಸುವ ಸರಣಿ ‘ಸರ್ವೆಂಟ್ ಆಫ್ ದ ಪೀಪಲ್’. ವ್ಯಂಗ್ಯವೇ ಮೂಲವಸ್ತುವಾದ ಇದರಲ್ಲಿ ರಾಜಕಾರಣಿಗಳ ಭ್ರಷ್ಟಾಚಾರ, ಹುಚ್ಚಾಟಗಳು ಬಿಂಬಿತವಾಗಿರುವ ಕಾರಣ ಭಾರತೀಯರಾದ ನಮಗೆ ಭಾಷೆ ಅರ್ಥವಾಗದಿದ್ದರೂ ವಿಷಯ ಅರ್ಥಪಡಿಸುತ್ತದೆ. ಯುಕ್ರೇನ್‌ನ ಹಾಲಿ ಅದ್ಯಕ್ಷ ವೊಲೋದಿಮಿರ್ ಝೆಲೆನ್ಸ್ಕಿ ಆ ಹುದ್ದೆಗೇರುವ ಮುನ್ನ ನಟಿಸಿದ ಸರಣಿ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇಂಥದ್ದೊಂದು ಕತೆ ಹೊಸತೇನಲ್ಲ. ಜನಸಾಮಾನ್ಯನೊಬ್ಬ ಅಕಸ್ಮಾತ್ ಆಗಿ ಮುಖ್ಯಮಂತ್ರಿಯೋ, ಪ್ರಧಾನಿಯೋ, ರಾಷ್ಟ್ರಾಧ್ಯಕ್ಷನೋ ಆಗಿಬಿಡುವುದು ನಮ್ಮಲ್ಲೂ ಆಗಿದೆ. ಹಾಗೆ ಬಂದು ಜನಸಾಮಾನ್ಯರ ನಿಜ ಪ್ರತಿನಿಧಿಯಾಗುವ ಆತನಿಂದ ಅದೆಂಥಾ ಕ್ರಾಂತಿ ಸಾಧ್ಯ ಎಂದು ಉಪೇಂದ್ರ ‘ಸೂಪರ್’ ಸಿನಿಮಾ ಮಾಡಿದ್ದಾರೆ. ‘ಹಂಬಲ್ ಪೊಲಿಟಿಶನ್ ನಾಗರಾಜ್’ ಹೆಸರಲ್ಲಿ ಡ್ಯಾನಿಶ್ ಸೇಠ್ ಸಿನಿಮಾವಷ್ಟೇ ಅಲ್ಲ, ವೆಬ್ ಸೀರೀಸೂ ಮಾಡಿದ್ದಾರೆ. ಡೆಮಾಕ್ರಸಿಯನ್ನು ವಿಡಂಬನಾ ದೃಷ್ಟಿಯಲ್ಲಿ ಕಂಡ ಅಮೆರಿಕನ್ನರು ‘ಈಡಿಯೋಕ್ರೆಸಿ’ ಮಾಡಿದ್ದಾರೆ, ಬ್ರಿಟನ್ನಿನವರು ‘ಯೆಸ್ ಪ್ರೈಮ್ ಮಿನಿಷ್ಟರ್’ ಕೊಟ್ಟಿದ್ದಾರೆ. ಅವೆಲ್ಲಾ ಜನರಿಗೆ ಒಂದಷ್ಟು ನಗುವನ್ನು ಕೊಟ್ಟಿದೆ. ಆದರೆ ಇಲ್ಲೀಗ ಪ್ರಸ್ತಾಪಿಸುತ್ತಿರುವ ‘ಸರ್ವೆಂಟ್ ಆಫ್ ದ ಪೀಪಲ್’ ಬರೇ ಹಾಸ್ಯ ಸನ್ನಿವೇಶಗಳನ್ನಲ್ಲ, ದೇಶಕ್ಕೆ ಒಬ್ಬ ಅಧ್ಯಕ್ಷನನ್ನೇ ಕೊಟ್ಟುಬಿಟ್ಟಿದೆ. ಯುಕ್ರೇನ್‌ನ ಹಾಲಿ ಅದ್ಯಕ್ಷ ವೊಲೋದಿಮಿರ್ ಝೆಲೆನ್ಸ್ಕಿ ಆ ಹುದ್ದೆಗೇರುವ ಮುನ್ನ ನಟಿಸಿದ ಸರಣಿಯಿದು.
‘ಸರ್ವೆಂಟ್ ಆಫ್ ದ ಪೀಪಲ್’ ನೋಡಿ ಸವಿಯಬೇಕಿದ್ದರೆ ರಷ್ಯಾ-ಯುಕ್ರೇನ್ ಯುದ್ಧದ ಆಚೆಗೆ ಯುಕ್ರೇನ್‌ನ ಆಂತರಿಕ ರಾಜಕೀಯ ವ್ಯವಸ್ಥೆ ಮತ್ತು ಅದರ ಸ್ಥಿತಿಗತಿಯ ಬಗ್ಗೆ ಸಣ್ಣದಾಗಿ ಅರಿತುಕೊಂಡಿರಬೇಕು. ರಷ್ಯಾಕ್ಕೆ ಹೋಲಿಸಿದರೆ ಯುಕ್ರೇನ್ ಸಣ್ಣ ದೇಶ. ಆದರೂ ಹಳೆಯ ಸೋವಿಯತ್ ಒಕ್ಕೂಟದ ಇತರೆ ದೇಶಗಳಾದ ಎಸ್ಟೋನಿಯ, ಲಾಟ್ವಿಯ, ಬೆಲರೂಸ್, ಮಾಲ್ಡೋವಾ ಪೈಕಿ ಅತಿದೊಡ್ಡ ದೇಶ. ನಮ್ಮ ಮಧ್ಯಪ್ರದೇಶ ರಾಜ್ಯದ ಎರಡರಷ್ಟು ವಿಶಾಲವಾಗಿರುವ ಯುಕ್ರೇನ್‌ನ ಜನಸಂಖ್ಯೆ ಕರ್ನಾಟಕಕ್ಕಿಂತಲೂ ಕಡಿಮೆ, ನಾಲ್ಕೂವರೆ ಕೋಟಿ. ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಚಕ್ರಾಧಿಪತ್ಯ ವ್ಯವಸ್ಥೆಯಿಂದ ಬೇರ್ಪಟ್ಟು 1991ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವ ಸ್ಥಾಪಿಸಿಕೊಂಡ ಯುಕ್ರೇನ್‌ನದ್ದು ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ.
‘ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು’ ಎಂದು ಹೊರಟ ದೇಶ ಭ್ರಷ್ಟ ರಾಜಕಾರಣಿಗಳು ಮತ್ತು ಆಡಳಿತ ಯಂತ್ರದ ವೈಫಲ್ಯಕ್ಕೆ ಬಲಿಯಾದ ಕಾರಣ ನೆತ್ತರುಕ್ಕುಕ್ಕಿ ಆರಿ ಹೋಯಿತೇ ವಿನಃ ಸ್ವತಂತ್ರವಾಗಿ 35 ವರ್ಷ ಕಳೆದರೂ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಎರಡು ಮೂರು ದೊಡ್ಡ ನಗರಗಳ ಹೊರತಾಗಿ ಹಳ್ಳಿಗಳು ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳಿಗಿಂತ ಹಿಂದಿವೆ. ಕೃಷಿಯ ಹೊರತು ಇನ್ಯಾವುದೇ ರಂಗ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವಷ್ಟು ಬೆಳೆಯಲಿಲ್ಲ. ಜನರಿಂದ ಜನರಿಗಾಗಿ ಆಯ್ಕೆಯಾದ ರಾಜಕಾರಣಿಗಳು ಸ್ವಂತಕ್ಕಾಗಿ ಮತ್ತು ಕುಟುಂಬಕ್ಕಾಗಿ ದುಡಿದರು. ಹಾಗಾಗಿ ನಮಗೆ ಯುಕ್ರೇನಿನ ಭಾಷೆ ಅರ್ಥವಾಗದಿದ್ದರೂ ಅಲ್ಲಿನ ರಾಜಕಾರಣ ಮತ್ತು ಭ್ರಷ್ಟಾಚಾರ ಸುಲಭವಾಗಿ ಅರ್ಥವಾಗಿಬಿಡುತ್ತದೆ.
ಈಗ ಮತ್ತೆ ‘ಸರ್ವೆಂಟ್ ಆಫ್ ದ ಪೀಪಲ್’ಗೆ ಬರೋಣ. ವಾಸಿಲ್ ಪೆಟ್ರೋವಿಚ್ ಗೊಲೊಬೊರೋಡ್ಕೊ ಇತಿಹಾಸ ಪಾಠ ಮಾಡುವ ಒಬ್ಬ ಸಾಮಾನ್ಯ ಹೈಸ್ಕೂಲ್ ಮೇಷ್ಟ್ರು. ಕೊಂಡ ಮೈಕ್ರೋವೇವ್ ಓವನ್‌ನ ಕಂತನ್ನು ಕಳೆದ ಎರಡು ವರ್ಷಗಳಿಂದ ಕಟ್ಟುತ್ತಿದ್ದಾನೆ. ಹಣಕಾಸು ವಿಚಾರದಲ್ಲಿ ಆತ ಅಷ್ಟೇನೂ ಸಾಧಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ಹೆಂಡತಿ ಬಿಟ್ಟು ಹೋಗಿದ್ದಾಳೆ. ಹಾಗೆಂದು ಆತ ಹಣಕಾಸು ವಿಚಾರದಲ್ಲಿ ಹಿಂದೆಯೇ ಹೊರತು ತಿಳಿವಳಿಕೆ ವಿಚಾರದಲ್ಲಲ್ಲ. ಪೆಟ್ರೋವಿಚ್ ಗುಣವಂತ, ವಿನಯವಂತ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನೀತಿವಂತ. ಒಳ್ಳೆಯ ಅಂಕ ಪಡೆದರೂ ಬಹುಬೇಡಿಕೆಯ ಕೋರ್ಸಿಗೆ ಕಾಲೇಜಲ್ಲೂ ಲಂಚ ಕೊಡಬೇಕು ಎಂಬ ಕಾರಣಕ್ಕೆ ಸೀಟು ಧಿಕ್ಕರಿಸಿ, ಬಿಟ್ಟಿ ಸಿಕ್ಕ ಇತಿಹಾಸ ವಿಷಯ ಆಯ್ಕೆ ಮಾಡಿಕೊಂಡವ. ಇತಿಹಾಸವನ್ನೂ ಮನಸ್ಸಿಟ್ಟು ಓದಿ ಭಾರಿ ತಿಳಿದುಕೊಂಡವ. ಎಷ್ಟರ ಮಟ್ಟಿಗೆ ಎಂದರೆ ರಿಟೈರಾಗಿ ಹೋಗುವ ಮನಸ್ಸಿಲ್ಲದೆ ಹಠ ಹಿಡಿದು ಕೂತಿದ್ದ ಹಿರಿಯ ಮೇಷ್ಟ್ರನ್ನು ಪೆಟ್ರೋವಿಚ್ ಕೇವಲ ತನ್ನ ಜ್ಞಾನಮಾತ್ರದಿಂದ ಮನವೊಲಿಸುತ್ತಾನೆ. ಪ್ರಾಚೀನ ಚೀನಾ, ಗ್ರೀಕ್ ಇತಿಹಾಸದ ಬಗ್ಗೆ ಪೆಟ್ರೋವಿಚ್ ಆಡುವ ಮಾತಿನಿಂದ ಸಂತುಷ್ಟಗೊಂಡ ಹಿರಿಯ ಮೇಷ್ಟ್ರು ಸಂತೋಷದಿಂದ ಇತಿಹಾಸ ವಿಭಾಗವನ್ನು ಇವನ ಮಡಿಲಿಗಿಟ್ಟು ನಿವೃತ್ತಿ ಪಡೆಯುತ್ತಾರೆ.
ಇಂಥ ಸುಜ್ಞಾನಿ ಪೆಟ್ರೋವಿಚ್‌ಗೆ ತನ್ನ ವಿದ್ಯಾರ್ಥಿಗಳೆಂದರೆ ಅಚ್ಚುಮೆಚ್ಚು. ಇತಿಹಾಸವನ್ನು ಅರ್ಥವಾಗುವಂತೆ ಪಾಠ ಮಾಡುವುದೆಂದರೆ ಪಂಚ ಪ್ರಾಣ. ಹೀಗಿರುವಾಗ ಚುನಾವಣೆ ಘೋಷಣೆಯಾಗುತ್ತದೆ. ಚುನಾವಣೆ ಬಂದರೆ ನಮ್ಮಲ್ಲಿರುವಂತೆ ಅಲ್ಲಿಯೂ ಬಡ ಮೇಷ್ಟ್ರುಗಳಿಗೆ ಹೊಣೆಗಾರಿಕೆ. ಹಾಗಾಗಿ ಸಿದ್ಧತೆಗೆ ಮೇಷ್ಟ್ರುಗಳೆಲ್ಲ ಮೀಟಿಂಗ್ ಮಾಡಲು ಒಂದು ಕೊಠಡಿ ಬೇಕಿರುತ್ತದೆ. ಆದರೆ ಹತ್ತನೇ ಎ ಕ್ಲಾಸಿನಲ್ಲಿ ಗಣಿತದ ಪಾಠವಾಗುತ್ತಿರುವ ಕಾರಣ ಹತ್ತನೇ ಬಿ ಕ್ಲಾಸಿನ ಇತಿಹಾಸ ಪಾಠಕ್ಕೆ ಪೆಟ್ಟು ಬೀಳುತ್ತದೆ. ಪೆಟ್ರೋವಿಚ್ ಪಾಠ ಮಾಡುತ್ತಿರುವಾಗಲೇ ಇನ್ನೊಬ್ಬ ಮೇಷ್ಟ್ರು ಬಂದು ತರಗತಿಯನ್ನು ಖಾಲಿ ಮಾಡಿಸುತ್ತಾನೆ. ಪಾಪ, ಬಂತು ನೋಡಿ ಪೆಟ್ರೋವಿಚ್‌ಗೆ ಎಲ್ಲಿಲ್ಲದ ಕೋಪ.
ಕೋಪ ನೆತ್ತಿಗೇರಿದಾಗ ಪೆಟ್ರೋವಿಚ್ ಚುನಾವಣೆ, ರಾಜಕೀಯ ಅವ್ಯವಸ್ಥೆ, ರಾಜಕಾರಣದ ಅರಾಜಕತೆ, ದೇಶದ ಹೀನ ಪರಿಸ್ಥಿತಿ ಬಗ್ಗೆ ಇನ್ನೊಬ್ಬ ಮೇಷ್ಟ್ರ ಎದುರು ವಾಚಾಮಗೋಚರ ಬೈಯುತ್ತಾನೆ. ಕೆಟ್ಟ ಪದಪುಂಜಗಳು ಪೆಟ್ರೋವಿಚ್ ಮಾತಿನಲ್ಲಿ ಬಂದುಬಿಡುತ್ತವೆ. ‘ನಾನೇನಾದರೂ ಬರೇ ಒಂದೇ ವಾರಕ್ಕೆ ಅಧ್ಯಕ್ಷನಾದರೂ ಈ ವ್ಯವಸ್ಥೆಗೆ ಮದ್ದು ಅರೆಯುತ್ತೇನೆ, ಈ ಮಂತ್ರಿಗಳನ್ನ ನಡು ಬಗ್ಗಿಸಿ ಕೆಲಸ ಮಾಡಿಸುತ್ತೇನೆ’ ಎಂದು ಕೋಪದ ಭರದಲ್ಲಿ ಆತ ಆಡುವ ಮಾತನ್ನು ಕೆಲಸವಿಲ್ಲದ ವಿದ್ಯಾರ್ಥಿಯೊಬ್ಬ ದೂರದಿಂದಲೇ ಮೊಬೈಲ್‌ನಲ್ಲಿ ಸೆರೆ ಹಿಡಿದುಬಿಡುತ್ತಾನೆ. ಅದನ್ನು ಸದ್ದಿಲ್ಲದೆ ಯೂಟ್ಯೂಬಲ್ಲೂ ಹರಿಬಿಡುತ್ತಾನೆ. ಅದು ಊರಿಡೀ ಹಬ್ಬಿ ಸುದ್ದಿ ಮಾಡಿಬಿಡುತ್ತದೆ.
ಹಾಗೆ ವೈರಲ್ ಆಗಲು ಕಾರಣವಿಷ್ಟೆ. ಭ್ರಷ್ಟ ರಾಜಕಾರಣಿಗಳು ಹಾಗೂ ಹದಗೆಟ್ಟ ರಾಜಕೀಯ ವ್ಯವಸ್ಥೆಗೆ ಬೈದು ಪೆಟ್ರೋವಿಚ್ ಆಡಿದ ಮಾತು ಯುಕ್ರೇನಿನ ಪ್ರತಿಯೊಬ್ಬ ಜನಸಾಮಾನ್ಯನ ಅಂತರಾಳ. ಹಾಗಾಗಿ ವಿಡಿಯೋ ನೋಡಿದ ಪ್ರತಿಯೊಬ್ಬರೂ ಆಡುವ ಹೃದಯದ ಮಾತು ಒಂದೇ. ‘ಅಕಸ್ಮಾತ್ ಈ ಮೇಷ್ಟೇನಾದರೂ ಅಧ್ಯಕ್ಷ ಚುನಾವಣೆಗೆ ನಿಂತರೆ ನನ್ನ ವೋಟಂತೂ ಇವನಿಗೇ’ ಎಂದು. ಹೀಗೆ ಮನೆಯಲ್ಲಿ ಅಪ್ಪ ಅಮ್ಮ ಆಡುವ ಮಾತು ಆ ಕ್ಲಾಸಿನ ವಿದ್ಯಾರ್ಥಿಗಳಿಗೂ ಹೌದೆನಿಸಿ ‘ನೀವೇ ನಿಂತುಬಿಡಿ ಸಾರ್’ ಎಂದು ಇಡೀ ಕ್ಲಾಸೇ ಕೂಗುತ್ತದೆ. ಆದರೆ ಚುನಾವಣೆಗೆ ಸ್ಪರ್ಧಿಸಲು ಕಾಸು ಬೇಕಲ್ಲ! ಪ್ರಚಾರಕ್ಕೆ ಇಳಿಯದಿದ್ದರೂ ಠೇವಣಿ ಇಡಲು 20 ಲಕ್ಷ ಹರೀವ್ನ್ಯ (ಯುಕ್ರೇನಿ ಕರೆನ್ಸಿ) ಬೇಕಲ್ಲ? ‘ಟೆನ್ಷನ್ ಮಾಡ್ಕೋಬೇಡಿ ಸಾರ್, ನಾವು ಕ್ರೌಡ್ ಫಂಡಿಂಗ್ ಮಾಡೋಣ’ ಎನ್ನುತ್ತಾನೆ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿ. ಕ್ಲಾಸು ಪೂರ್ತಿ ಅಹುದಹುದೆನ್ನುತ್ತದೆ. ಎರಡೇ ದಿನಗಳಲ್ಲಿ ಆ ದುಡ್ಡೂ ಸಂಗ್ರಹ!
‘ನಾವು ದುಡ್ಡು ಎತ್ತೋದು ಎತ್ತಿದ್ದೇವೆ. ಬೇಕಾದ್ರೆ ಚುನಾವಣೆಗೆ ಠೇವಣಿಯಾದ್ರೂ ಇಟ್ಕೊಳಿ, ಬ್ಯಾಂಕಲ್ಲಾದ್ರೂ ಹಾಕ್ಕೊಳಿ, ಬ್ಯಾಡ ಅಂದ್ರೆ ಬೆಂಕಿ ಹಾಕಿ ಸುಟ್ಕೊಳಿ, ನಮ್ಗಂತೂ ಗೊತ್ತಿಲ್ಲ’ ಎಂದು ಹೇಳಿ ಇವನ ಹೈಸ್ಕೂಲು ಮಕ್ಕಳು ಇವನ ಕೈಗೆ ಕಾಸಿಟ್ಟು ಕೈ ತೊಳೆದುಕೊಳ್ಳುತ್ತಾರೆ. ತಾನು ಹೀಗೆ ಬಂದ ದುಡ್ಡನ್ನು ಚುನಾವಣೆಗೇ ಠೇವಣಿ ಇಟ್ಟು ನಾಮಪತ್ರ ಸಲ್ಲಿಸಿದ್ದೆ ಎಂದು ಪೆಟ್ರೋವಿಚ್‌ಗೆ ಮತ್ತೆ ನೆನಪಾಗುವ ಹೊತ್ತಿಗೆ ಈತ ಎಲೆಕ್ಷನ್ ಗೆದ್ದೇ ಬಿಟ್ಟಿದ್ದಾನೆ, ಅಧ್ಯಕ್ಷನಾಗಿಬಿಟ್ಟಿದ್ದಾನೆ!
ಅಲ್ಲಿಂದ ಮುಂದಕ್ಕೆ ಯುಕ್ರೇನಿನ ರಾಜಕಾರಣದ ಭರಪೂರ ವಿಡಂಬನೆ. ಸ್ವತಃ ವೊಲೋದಿಮಿರ್ ಝೆಲೆನ್ಸ್ಕಿ ಅವರೇ ಚಿತ್ರಕಥೆ ಬರೆದಿರುವ ‘ಸರ್ವೆಂಟ್ ಆಫ್ ದ ಪೀಪಲ್’ನಲ್ಲಿ ಆತನೊಬ್ಬ ಆಮ್ ಆದ್ಮಿ. ನಮ್ಮ ಕೇಜ್ರೀವಾಲ್‌ನಂತೆಯೇ ಆತ ಅಧಿಕೃತ ಕಾರು ಬದಿಗೊತ್ತಿ ಸಿಟಿ ಬಸ್ಸೇರುವವ. ಪ್ರಚಾರಕ್ಕಾಗಿ ಅಲ್ಲ, ತೆರಿಗೆ ಹಣದ ಖರ್ಚನ್ನು ಕಡಿಮೆ ಮಾಡುವ ನಿಜಮನಸ್ಸಿನಿಂದ. ಕ್ಯಾಬಿನೆಟ್ ಮೀಟಿಂಗಿಗೆ ಅಧ್ಯಕ್ಷ ಬಸ್ ಸ್ಟಾಂಡಲ್ಲಿ ಕಾಯುತ್ತಿದರೆ ಮಂತ್ರಿಗಳು ಅವನೆದರೇ ಝೀರೋ ಟ್ರಾಫಿಕಲ್ಲಿ ರೊಯ್ ರೊಯ್ಯನೆ ಹೋಗುವುದು ಪ್ರಾಮಾಣಿಕ ಜನಸೇವಕ ಎದುರಿಸುವ ವಾಸ್ತವ. ತಮ್ತಮ್ಮ ಮನೆ ನವೀಕರಣಕ್ಕೆ ಮಂತ್ರಿಗಳು ಖರ್ಚು ಮಾಡುವ ತೆರಿಗೆ ಹಣ, ಅದೇ ಹಣದಲ್ಲಿ ಸಂಬಳ ಪಡೆಯುವ ಒಬ್ಬೊಬ್ಬ ಮಂತ್ರಿಗೂ ಸಾಲು ಸಾಲು ಸಲಹೆಗಾರರು, ಆ ಸಲಹೆಗಾರಿಗೆ ಸಲಹೆ ನೀಡಲು ಮತ್ತೊಂದಷ್ಟು ಉಪ ಸಲಹೆಗಾರರು, ಅವರಿಗೆ ಮತ್ತೊಂದಷ್ಟು ಸೇವಕರು, ಅಧ್ಯಕ್ಷನಿಗೆ ಒಂದಿಡೀ ದಿನ ಪರಿಚಯಿಸದೂ ಮುಗಿಯದಷ್ಟು ಅಸಿಸ್ಟೆಂಟುಗಳು, ಹೇರ್ ಕಟ್ ಮಾಡಲು ಒಬ್ಬ ಸ್ಟೈಲಿಸ್ಟ್, ಕಾಲು ಮಸಾಜು ಮಾಡಲು ಮತ್ತೊಬ್ಬ ಸರ್ಕಾರಿ ನೌಕರ, ಬೆರಳುಜ್ಜಲು ಇನ್ನೊಬ್ಬ – ಈ ತೆರನಾಗಿ ಪರಿಚಯವಾಗುವ ಅಲ್ಲಿನ ರಾಜಕಾರಣಿಗಳ ಅವ್ಯವಸ್ಥೆ ನಾವು ಎಪ್ಪತ್ತೈದು ವರ್ಷಗಳಿಂದ ನೋಡುತ್ತಿರುವಂಥದ್ದು. ಗೆದ್ದ ಮೇಲೆ ಅಧ್ಯಕ್ಷನ ಫೊಟೋ ತೆಗೆದು ಕಂಪ್ಯೂಟರ್‌ನಲ್ಲೇ ಹಿಂದೆ ಒಂದರಲ್ಲಿ ಆಸ್ಪತ್ರೆ, ಮತ್ತೊಂದರಲ್ಲಿ ನೌಕರರು, ಇನ್ನೊಂದರಲ್ಲಿ ಕಾರ್ಮಿಕರು, ಮಗಗೊಂದರಲ್ಲಿ ಮಕ್ಕಳನ್ನಿರಿಸಿ ಮಾಡುವ ಪೋಸ್ಟರುಗಳು ನಮಗೂ ಹತ್ತಿರವಾಗುವ ದೃಶ್ಯಗಳು.
ನಿರ್ಮಾಣ ವಿಚಾರದಲ್ಲಿ ಹಾಲಿವುಡ್‌ನಂತೆ ಬಿಡಿ, ನಮ್ಮ ಬಾಲಿವುಡ್ಡಿನವರು ಖರ್ಚು ಹಾಕುವಷ್ಟೂ ಹಾಕಿ ನಿರ್ಮಿಸಿದ ಸರಣಿ ಇದಲ್ಲ. ಆದರೂ ಒಟ್ಟಾರೆ ನಿರ್ಮಾಣ ಅಚ್ಚುಕಟ್ಟಾಗಿದೆ. ಸುಮ್ಮಸುಮ್ಮನೇ ಹಹ್ಹಹ್ಹ ಎಂದು ಹಿಂದಿನಿಂದ ನಗುವ ‘ಫ್ರೆಂಡ್ಸ್’ ಸರಣಿಗಿಂತ ಮೇಕಿಂಗ್ ಒಳ್ಳೆಯದಿದೆ. ಎಲ್ಲಕ್ಕಿಂತ ಮಿಗಿಲಾಗಿ ಚಿತ್ರಕಥೆ ಪರಿಣಾಮಕಾರಿಯಾಗಿದೆ. ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದರೆ ನಟಿಸಿದ ವೊಲೋದಿಮಿರ್ ಝೆಲೆನ್ಸ್ಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಸರಣಿಯೇ ವೇದಿಕೆಯಾಗುತ್ತದೆ. ಆತನ ಗೆಲುವಿನಲ್ಲಿ ‘ಸರ್ವೆಂಟ್ ಆಫ್ ದ ಪೀಪಲ್’ ಪ್ರಭಾವವೂ ಸಾಕಷ್ಟಿದೆ ಎಂಬುದು ಅಲ್ಲಿನ ಚುನಾವಣಾ ವಿಶ್ಲೇಷಕರ ಅಭಿಪ್ರಾಯ. ಶೇ. 70ಕ್ಕಿಂತಲೂ ಹೆಚ್ಚು ಮತ ಪಡೆದು ಗೆದ್ದ ವೊಲೋದಿಮಿರ್ ಝೆಲೆನ್ಸ್ಕಿಯ ಜನಪ್ರಿಯತೆ ಯುದ್ಧಪೂರ್ವದ ಸಮೀಕ್ಷೆಗಳಲ್ಲಿ ಶೇ. 30ಕ್ಕೆ ಇಳಿದಿತ್ತು ಎಂಬುದು ಮತ್ತೆ ವ್ಯವಸ್ಥೆಯ ವ್ಯಂಗ್ಯ. ಹಾಗಾಗಿ ವ್ಯಂಗ್ಯ-ವಿಡಂಬನೆ ಇಷ್ಟವಾಗುವವರಿಗೆ, ಅಲ್ಲಿನ ರಾಜಕೀಯದ ಪಕ್ಷಿನೋಟ ಕಾಣಬೇಕಿರುವವರಿಗೆ ‘ಸರ್ವೆಂಟ್ ಆಫ್ ದ ಪೀಪಲ್’ ಉತ್ತಮ ಮನರಂಜನೆ.
ನೆಟ್‌ಫ್ಲಿಕ್ಸ್‌ನಲ್ಲಿ ಈ ಸರಣಿ ಪ್ರಸಾರವಾಗುತ್ತಿದೆ. ಝೆಲೆನ್ಸ್ಕಿ ಅಧ್ಯಕ್ಷನಾದ ಮೇಲೆ ಅಧಿಕೃತವಾಗಿ ಯೂಟ್ಯೂಬ್‌ಗೂ ಅಪ್ಲೋಡ್ ಮಾಡಲಾಗಿದೆ.