ಒರಿಜಿನಲ್ ರಿಲೀಸ್‌ಗಳೂ ಸೇರಿದಂತೆ ಸರ್ದಾರ್ ಉಧಾಮ್ ಸಿಂಗ್‌, ದಿ ಗಿಲ್ಟಿ, ಆರ್ಮಿ ಆಫ್ ಥೀವ್ಸ್‌, ಆಫ್ಟರ್ ವಿ ಫೆಲ್‌, ರಶ್ಮಿ ರಾಕೆಟ್‌ ಮತ್ತು ಕೆಲವು ಸಿನಿಮಾಗಳು, ವೆಬ್‌ ಸರಣಿಗಳು ಅಕ್ಟೋಬರ್‌ನಲ್ಲಿ ಸ್ಟ್ರೀಮ್ ಆಗಲಿವೆ.

ಕೋವಿಡ್‌ ಸಾಂಕ್ರಾಮಿಕ ತಿಳಿಯಾಗುತ್ತಿದ್ದಂತೆ ಥಿಯೇಟರ್‌ಗಳು ಓಪನ್ ಆಗುತ್ತಿದ್ದು, ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದರೊಂದಿಗೆ ವಿವಿಧ ಓಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲೂ ಒರಿಜಿನಲ್ ಕಂಟೆಂಟ್‌ ಸೇರಿದಂತೆ ಸಿನಿಮಾಗಳು ಹಾಗೂ ವೆಬ್‌ ಸರಣಿಗಳು ಸ್ಟ್ರೀಮ್ ಆಗಲಿವೆ. ಭಾರತದಲ್ಲಿ ದಸರಾ ಹಬ್ಬದ ಸಡಗರದಲ್ಲಿರುವ ಜನರಿಗೆ ಅಕ್ಟೋಬರ್‌ನಲ್ಲಿ ಭರಪೂರ ಮನರಂಜನೆ ಸಿಗಲಿದೆ. ಈ ತಿಂಗಳಲ್ಲಿ ಸ್ಟ್ರೀಮ್ ಆಗಲಿರುವ ಕೆಲವು ಪ್ರಮುಖ ಸಿನಿಮಾ, ವೆಬ್‌ ಸರಣಿಗಳ ಬಗ್ಗೆ ನೋಡೋಣ.

ಸರ್ದಾರ್ ಉಧಾಮ್ ಸಿಂಗ್ : ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಉಧಾಮ್ ಸಿಂಗ್‌ ಕುರಿತ ಈ ಬಯೋಪಿಕ್‌ನ ಶೀರ್ಷಿಕೆ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಶೂಜಿತ್ ಸರ್ಕಾರ್ ನಿರ್ದೇಶನದ ಈ ಹಿಂದಿ ಸಿನಿಮಾ ಅಕ್ಟೋಬರ್‌ 16ರಿಂದ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ. ಎಲ್ಲವೂ ಸರಿಯಾಗಿದ್ದರೆ 2020ರ ಅಕ್ಟೋಬರ್‌ 2ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಬಿಡುಗಡೆ ದಿನಾಂಕ 2021ರ ಜನವರಿಗೆ ಹೋಯ್ತು. ಆದಾಗ್ಯೂ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕರು ನೇರವಾಗಿ ಪ್ರೈಂನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ದಿ ಗಿಲ್ಟಿ : ಡ್ಯಾನಿಷ್‌ ಡ್ರಾಮಾ ‘ಡೆನ್‌ ಸ್ಕಿಲ್ಡೀಜ್‌’ ರೀಮೇಕ್‌ ‘ದಿ ಗಿಲ್ಟಿ’. ನೆಟ್‌ಫ್ಲಿಕ್ಸ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಮೊನ್ನೆ ಅಕ್ಟೋಬರ್‌ 1ರಿಂದ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ. ಜೇಕ್ ಗಿಲೆನ್‌ಹಾಲ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾದ ನಿರ್ದೇಶಕರು ಆಂಟೋನಿ ಫುಗುವಾ.

ಲಿಟ್ಲ್ ಥಿಂಗ್ಸ್ ಸೀಸನ್‌ 4 : ಅಕ್ಟೋಬರ್‌ 15ರಿಂದ ‘ಲಿಟ್ಲ್ ಥಿಂಗ್ಸ್ ಸೀಸನ್‌ 4’ ಸ್ಟ್ರೀಮ್ ಆಗಲಿದೆ. ರುಚಿರ್ ಅರುಣ್‌ ಮತ್ತು ಪ್ರಂಜಾಲ್ ದುವಾ ನಿರ್ದೇಶನದ ಸರಣಿಯ ನಾಲ್ಕನೇ ಸೀಸನ್‌ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಧ್ರುವ ಮತ್ತು ಕಾವ್ಯಾರ ರಿಲೇಷನ್‌ಶಿಪ್‌ ಕುರಿತ ಕಥಾನಕ. ಅಭಿನಂದನ್ ಶ್ರೀಧರ್‌, ನೂಪೂರ್ ಪೈ, ಗರಿಮಾ ಪುರ ಪಟಿಯಾಲ್ವಿ ಮತ್ತು ಗೌರವ್ ಪಟ್ಕಿ ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ರಶ್ಮಿ ರಾಕೆಟ್‌ : ತಾಪಸಿ ಪನ್ನು ನಟಿಸಿರುವ ‘ರಶ್ಮಿ ರಾಕೆಟ್‌’ ಸಿನಿಮಾ ಝೀ5 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಇದೇ ಅಕ್ಟೋಬರ್‌ 15ರಿಂದ ಸ್ಟ್ರೀಮ್‌ ಆಗಲಿದೆ. ಆಕರ್ಷ್‌ ಖುರಾನಾ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಿಯಾನ್ಶು ಪೈನುಲಿ, ಅಭಿಷೇಕ್ ಬ್ಯಾನರ್ಜಿ, ಶ್ವೇತಾ ತ್ರಿಪಾಠಿ, ಸುಪ್ರಿಯಾ ಪಾಠಕ್‌ ನಟಿಸಿದ್ದಾರೆ.

ಆರ್ಮಿ ಆಫ್ ಥೀವ್ಸ್‌ : ‘ಆರ್ಮಿ ಆಫ್‌ ಥೀವ್ಸ್‌’ ಅಕ್ಟೋಬರ್‌ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ನೆಟ್‌ಫ್ಲಿಕ್ಸ್‌ನ ಝೋಂಬಿ ಡ್ರಾಮಾ ‘ಆರ್ಮಿ ಆಫ್‌ ಡೆಡ್‌’ನ ಪ್ರೀಕ್ವೇನ್‌ ಇದು. ಶೇ ಹ್ಯಾಟನ್‌ ಚಿತ್ರಕಥೆ ರಚಿಸಿದ್ದು ಮ್ಯಾಥಿಯಾಸ್‌ ಸ್ಕ್ವೂಗೋ ನಿರ್ದೇಶಿಸಿದ್ದಾರೆ.

ಶಿದ್ದತ್‌ : ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಮೊನ್ನೆ ಅಕ್ಟೋಬರ್‌ 1ರಿಂದ ‘ಶಿದ್ದತ್‌’ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಸನ್ನಿ ಕುಶಾಲ್‌, ಮೋಹಿತ್ ರೈನಾ, ರಾಧಿಕಾ ಮದನ್‌, ಡಯಾನಾ ಪಿಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕುನಾಲ್ ದೇಶ್‌ಮುಖ್‌ ನಿರ್ದೇಶಿಸಿದ್ದಾರೆ.

ಚೆಹ್ರೆ: ರೂಮಿ ಜಾಫ್ರಿ ನಿರ್ದೇಶನದ ಮಿಸ್ಟರಿ ಥ್ರಿಲ್ಲರ್‌ ‘ಚೆಹ್ರೆ’ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ 2021ರ ಆಗಸ್ಟ್‌ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಪ್ರೈಂನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕುರಿತು ಚಿತ್ರದ ನಿರ್ದೇಶಕ ಆನಂದ್ ಪಂಡಿತ್‌, “ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖಾಮುಖಿಯಾಗಿದ್ದಾರೆ. ಥಿಯೇಟರ್‌ನಲ್ಲಿ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಇನ್ನೂ ದೊಡ್ಡ ಸಂಖ್ಯೆಯ ವೀಕ್ಷಕರನ್ನು ತಲುಪಲಿದ್ದೇವೆ” ಎಂದಿದ್ದಾರೆ.

ಫ್ರೀ ಗಾಯ್‌ : ರೆಯಾನ್ ರೆನಾಲ್ಡ್ಸ್‌ ಅಭಿನಯದ ‘ಫ್ರೀ ಗಾಯ್‌’ ಅಕ್ಟೋಬರ್ 15ರಿಂದ ಡಿಸ್ನೀ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಅಡ್ವೆಂಚರ್ ಕಾಮಿಡಿ ಸಿನಿಮಾ ಇಂಗ್ಲಿಷ್‌ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ವೀಕ್ಷಕರಿಗೆ ಸಿಗುತ್ತಿರುವುದು ವಿಶೇಷ. ಓಪನ್ ವರ್ಲ್ಡ್‌ ವೀಡಿಯೋ ಗೇಮ್ ಕಾನ್ಸೆಪ್ಟ್‌ನ ಈ ಸಿನಿಮಾಗೆ ವಿಶ್ಲೇಷಕರ ಮೆಚ್ಚುಗೆ ವ್ಯಕ್ತವಾಗಿತ್ತು. ಶಾನ್ ಲೆವಿ ನಿರ್ದೇಶನದ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಜೋಡಿ ಕೊಮರ್‌, ಲಿಲ್ ರೆಲ್ ಹವ್ರೀ, ಜೋ ಕೀರ್‌ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here