ಬಾಲಿವುಡ್ ಹೀರೋ ಶಾಹೀದ್ ಕಪೂರ್ ಸುದ್ದಿಯಲ್ಲಿದ್ದಾರೆ. ಏಪ್ರಿಲ್ 14ರಂದು ಅವರ ‘ಜೆರ್ಸಿ’ ಹಿಂದಿ ಸಿನಿಮಾ ತೆರೆಕಾಣಲಿದೆ. ಈ ಮಧ್ಯೆ ಅವರು ತಮ್ಮ ಓಟಿಟಿ ಕ್ರೈಂ ಡ್ರಾಮಾ ಸರಣಿಗೂ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ.
ಯಶಸ್ವೀ ಓಟಿಟಿ ಸರಣಿ ‘ಫ್ಯಾಮಿಲಿ ಮ್ಯಾನ್’ ನಿರ್ದೇಶಿಸಿದ್ದ ರಾಜ್ ನಿಡಿಮೋರು ಮತ್ತು ಕೃಷ್ಣ ಡಿ.ಕೆ. ಅವರು ಶಾಹೀದ್ ಕಪೂರ್ ಅವರಿಗಾಗಿ ಕ್ರೈಂ – ಡ್ರಾಮಾ ಸರಣಿ ರೂಪಿಸಿದ್ದಾರೆ. ಇದು ಶಾಹೀದ್ ಕಪೂರ್‌ಗೆ ಮೊದಲ ಓಟಿಟಿ ಸರಣಿ. ಸೀತಾ ಆರ್ ಮೆನನ್, ಸುಮನ್ ಕುಮಾರ್ ಮತ್ತು ಹುಸೇನ್ ದಲಾಲ್ ಚಿತ್ರಕಥೆ ರಚಿಸಿರುವ ಸರಣಿ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ. ಸದ್ಯ ಈ ಸರಣಿಗೆ ಡಬ್ಬಿಂಗ್ ಪೂರ್ಣಗೊಳಿಸಿರುವ ಶಾಹೀದ್ ಕಪೂರ್, “ಕಳೆದ 20 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸಿ ಏಕತಾನತೆ ಕಾಡುತ್ತಿದೆ. ಹೊಸದೇನನ್ನೋ ಮಾಡಬೇಕು, ಪ್ರಯೋಗಗಳಿಗೆ ತೆರೆದುಕೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಓಟಿಟಿ ಸರಣಿಯಲ್ಲಿ ನಟಿಸಿದೆ” ಎನ್ನುತ್ತಾರೆ.
41ರ ಹರೆಯದ ಶಾಹೀದ್ ಕಪೂರ್ ನಟನಾಗಿ ಭಿನ್ನ ಪಾತ್ರ, ಕತೆಗಳ ಹುಡುಕಾಟದಲ್ಲಿದ್ದಾರೆ. ಓಟಿಟಿ ವೇದಿಕೆಯಲ್ಲಿ ಇಂತಹ ಕಂಟೆಂಟ್‌ಗೆ ಸಾಕಷ್ಟು ಅವಕಾಶಗಳಿವೆ ಎನ್ನುವುದು ಅವರ ನಿಲುವು. “ಈಗ ಜನರಿಗೆ ತುಂಬಾ ಛಾಯ್ಸ್‌ಗಳಿವೆ. ಸ್ಟ್ರೀಮಿಂಗ್ ಸರ್ವೀಸಸ್‌ಗಳಲ್ಲಿ ಯತೇಚ್ಛ ಕಂಟೆಂಟ್ ಸಿಗುತ್ತಿದೆ. ರಿಫ್ರೆಶಿಂಗ್ ಅನಿಸುವಂತಹ ಕಂಟೆಂಟ್ ಕೊಡಲು ನಾವು ಪ್ರಯತ್ನಿಸಬೇಕು” ಎನ್ನುವ ಅವರಿಗೆ ಹೊಸ ಪ್ರಯೋಗದ ಬಗ್ಗೆ ಆತಂಕವೂ ಇದೆ. “ಭಿನ್ನವಾದದ್ದೇನೋ ಪ್ರಯತ್ನ ಮಾಡಬೇಕೆಂದಾಗ ಕೊಂಚ ಹಿಂಜರಿಕೆಯೂ ಆಗುತ್ತದೆ. ಜನರು ಸ್ವೀಕರಿಸಲೂಬಹುದು ಇಲ್ಲವೇ ತಿರಸ್ಕರಿಸುವ ಸಂಭವವೂ ಇರುತ್ತದೆ. ಎಲ್ಲದನ್ನೂ ನಾವು ಪ್ರಾಮಾಣಿಕವಾಗಿ ಸ್ವೀಕರಿಸಬೇಕು” ಎನ್ನುತ್ತಾರವರು. ಅವರ ಓಟಿಟಿ ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.
ದಿಲ್ಲಿ ಮೂಲದ ಶಾಹೀದ್ ಕಪೂರ್ ಜಬ್ ವಿ ಮೆಟ್, ಉಡ್ತಾ ಪಂಜಾಬ್, ಹೈದರ್, ಪದ್ಮಾವತ್ ಚಿತ್ರಗಳ ಮೂಲಕ ಜನರಿಗೆ ಹತ್ತಿರವಾದವರು. ಏಪ್ರಿಲ್ 14ರಂದು ಅವರ ‘ಜೆರ್ಸೀ’ ಹಿಂದಿ ಸಿನಿಮಾ ತೆರೆಕಾಣುತ್ತಿದೆ. ನಾನಿ ನಟಿಸಿದ್ದ ಇದೇ ಶೀರ್ಷಿಕೆಯ ಯಶಸ್ವೀ ತೆಲುಗು ಸಿನಿಮಾದ ರೀಮೇಕಿದು. 2021ರ ಡಿಸೆಂಬರ್‌ನಲ್ಲೇ ಈ ಚಿತ್ರ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟ ಸಿನಿಮಾ ಏಪ್ರಿಲ್ 14ರಂದು ತೆರೆಕಾಣುತ್ತಿದೆ. ಇದೇ ದಿನ ‘KGF2’, ತಮಿಳಿನ ‘Beast’ ಸಿನಿಮಾಗಳು ತೆರೆಕಾಣುತ್ತಿದ್ದು, ‘ಜರ್ಸೀ’ ಸಿನಿಮಾ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆಗಳಿವೆ.