ಮಹಿಳಾ ನಿರ್ದೇಶಕಿಯ ಚೊಚ್ಚಲ ಸಿನಿಮಾ ‘ಹೇ ಸಿನಮಿಕಾ’ ಭಿನ್ನ ನೆಲೆಯ ಪ್ರೇಮಕತೆ. ಕಾಮಿಡಿ ಅಂಶಗಳಲ್ಲಿ ಕೆಲವೆಡೆ ಬಾಲಿಶ ಅನಿಸಿದರೂ ಸ್ತ್ರೀ ಪಾತ್ರಗಳ ಮನದಾಳದ ಭಾವಗಳನ್ನು ತೆರೆಗೆ‌ ತರುವಲ್ಲಿ ಚಿತ್ರ ಯಶಸ್ವಿಯಾಗಿದೆ. ಚಿತ್ರ ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾದಲ್ಲಿ‌ ಸ್ಟ್ರೀಂ ಆಗುತ್ತಿದೆ.

ಭಾರತದ ಚಿತ್ರೋದ್ಯಮದಲ್ಲಿ ಮಹಿಳಾ ಪ್ರಧಾನ ಕಮರ್ಶಿಯಲ್ ಚಿತ್ರಗಳು ಬಂದಿರುವುದು‌ ಕಡಿಮೆ. ತಮಿಳು ಚಿತ್ರರಂಗದಲ್ಲಿ ಭದ್ರವಾಗಿ ಬೇರೂರಿರುವ ನೃತ್ಯ ನಿರ್ದೇಶಕಿ ಬೃಂದಾ ಮೊದಲ ಬಾರಿ ನಿರ್ದೇಶನಕ್ಕಿಳಿಯುವಾಗ ಮಹಿಳಾ ಕೇಂದ್ರಿತ ಕತೆ ಆಯ್ಕೆ‌ ಮಾಡಿಕೊಂಡಿದ್ದಾರೆ. ಕೋಪಿಷ್ಠೆ ಎಂಬ ಅರ್ಥ ಬರುವ ‘ಹೇ ಸಿನಮಿಕಾ’ವನ್ನು ಮಹಿಳಾ ಪ್ರಧಾನ ಭಾವ ಕೇಂದ್ರಿತ ಸಿನಿಮಾ ಅನ್ನಬಹುದು. ದುಲ್ಕರ್ ಸಲ್ಮಾನ್, ಅದಿತಿ‌ ರಾವ್ ಹೈದರಿ ಹಾಗೂ ಕಾಜಲ್ ಅಗರ್‌ವಾಲ್‌ ಪ್ರಧಾನ ಭೂಮಿಕೆಯ ಈ ಸಿನಿಮಾದಲ್ಲಿರುವುದು ಅನುಬಂಧಗಳ ಜಟಿಲತೆಯ ಕತೆ.

‘ಹೇ‌ ಸಿನಮಿಕಾ’ಕ್ಕೆ ಆರಂಭದಲ್ಲಿ ಮಾರುತದ ವೇಗವಿದೆ. ನಾಯಕಿ ಮೌನಾ ವೃತ್ತಿಯಲ್ಲಿ‌ ಸಿವಿಲ್ ಎಂಜಿನಿಯರ್ ಆಗಿದ್ದು ಮಾರುತಗಳ ಅಧ್ಯಯನ ಆಕೆಯ ಆಸಕ್ತಿಯ ವಿಚಾರ. ಹಾಗಾಗಿ ಸಿನಿಮಾದ ಮೊದಲ ಹತ್ತು ನಿಮಿಷದಲ್ಲೇ ನಾಯಕ-ನಾಯಕಿ ಬೀಸುವ ಗಾಳಿಯ ವೇಗದಲ್ಲಿ ಪರಸ್ಪರ ನೋಡಿ, ಪ್ರೀತಿಗೆ ಬಿದ್ದು, ಮದುವೆಯೂ ಆಗಿಬಿಡುತ್ತಾರೆ. ಆ ಪರಿಯ ವೇಗದಲ್ಲಿ ಅವರಿಬ್ಬರಿಗೆ ಪ್ರೇಮಾಂಕುರ ಮಾಡಿಸುವ ಅಗತ್ಯ ಚಿತ್ರಕಥೆಗಾರ ಮದನ್ ಕಾರ್ಕಿಗೆ ಇಲ್ಲಿ ಅನಿವಾರ್ಯ. ಏಕೆಂದರೆ ಮುಂದಿನ ಎರಡೂ ಕಾಲು ಗಂಟೆಗಳಲ್ಲಿ ಸಂಬಂಧದ ಏರಿಳಿತಗಳನ್ನು ತೆರೆಯ ಮೇಲೆ ಹಿಡಿದಿಡುವ ಅನಿವಾರ್ಯ ಚಿತ್ರಕಥೆಗಿದೆ.

ದುಲ್ಕರ್ ನಿಭಾಯಿಸಿದ ಯಾಳನ್ ಪಾತ್ರ ಇಲ್ಲಿ ನಿರಂತರ ಮಾತುಗಾರ. ಜಗತ್ತಿನ ಯಾವುದೇ ವಿಷಯದ ಮೇಲೂ ಆತನ ಜ್ಞಾನ ಅಗಾಧ ಮತ್ತು ಆಳ. ಅತ್ಯುತ್ತಮವಾಗಿ ಅಡುಗೆ ಮಾಡುವ ಆತ ಪ್ರೀತಿಯ ಗಂಡ. ದುಡಿಯುವ ಹೆಂಡತಿ ಜತೆಗೆ ಮನೆವಾರ್ತೆಯ ಸಂಪೂರ್ಣ ಜವಾಬ್ದಾರಿ ತಾನು ಹೊತ್ತು ಹೃದಯದಲ್ಲಿ ಅಕ್ಷಯದ ಪ್ರೀತಿ ಹೊತ್ತ ಜೀವನ ಸಾಥಿ. ಆದರೆ‌ ಮೌನಾಳಿಗೆ ಈತನ ಮಾತೇ ಶತ್ರು. ಹೂವ ಹಾಸಿಗೆ ಚಂದ್ರಚಂದನ ಎನ್ನುತ್ತ‌ ಆತ ಇವಳೆಡೆಗೆ ತೋರಿಸುವ ಉತ್ಕಟ ಪ್ರೀತಿಯೇ ಈಕೆಗೆ ತಡೆಯಲಾರದ ಸಂಕಟ. ಮದುವೆಯಾದ ಎರಡು ವರ್ಷಗಳಲ್ಲಿ ಅವನ ನಿರಂತರ ಮಾತು ಮತ್ತು ಕೊನೆಯಿಲ್ಲದ ಪ್ರೀತಿಯ ಬೇಗೆಯಿಂದ ಬೇಸತ್ತು ಅವನಿಂದ ಮುಕ್ತಿ ಪಡೆಯಲು ಹರ ಸಾಹಸ ಪಡುತ್ತಾಳೆ. ಕೊನೆಗೆ ಉದ್ಯೋಗ ನಿಮಿತ್ತ ದೂರದ ಪಾಂಡಿಚೆರಿಗೆ ವರ್ಗ ಮಾಡಿಸಿಕೊಳ್ಳುತ್ತಾಳೆ. ಅಲ್ಲಿ ಒಂದು ವರ್ಷದ ಕಾಲ ಸ್ವತಂತ್ರವಾಗಿ ಹಾಯಾಗಿರಬಹುದು ಅಂದುಕೊಂಡಿದ್ದ ಅವಳ‌ ನಿರೀಕ್ಷೆ‌ ಸುಳ್ಳಾಗುವುದು ಗಂಡನೂ ಅಲ್ಲಿಗೇ‌ ಹುಡುಕಿ ಬಂದಾಗ. ಅವನಿಗೆ ವಿಚ್ಛೇದನ ಕೊಟ್ಟುಬಿಡೋಣವೆಂದರೆ ಆತ ಅಂಥ ಕೆಡುಕನೇನೂ ಅಲ್ಲ.

ಈ ಹಂತದಲ್ಲಿ ಅವಳು ನೆರವಿಗಾಗಿ ಬಾಗಿಲು ಬಡಿಯುವುದು ಮಲಾರ್ (ಕಾಜಲ್ ಅಗರ್ವಾಲ್) ಎಂಬ ಮನಃಶಾಸ್ತ್ರಜ್ಞೆಯನ್ನು. ಸತ್ಪುರುಷ ಎಂಬ ಗಂಡು ಈ ಭೂಮಿಯ ಮೇಲೆಯೇ ಇಲ್ಲ ಎನ್ನುವುದು ಆಕೆಯ ಅಚಲ ನಂಬಿಕೆ. ಹಾಗಾಗಿ ಗಂಡಸರ ಮುಖವಾಡ ಕಳಚಿ ಹೆಂಡತಿಯರಿಗೆ ಸತ್ಯ ದರ್ಶನ ಮಾಡಿಸುವಲ್ಲಿ ಆಕೆ ಪ್ರವೀಣೆ. ‘ನನ್ನ ಗಂಡನನ್ನು‌ ನೀನೇ ಸೆಳೆದರೂ ಸರಿಯೇ, ಡೈವೋರ್ಸಿಗೊಂದು ಕಾರಣ ಸಿಗುವಂತೆ ಮಾಡಿಕೊಡು’ ಎಂದು ಅವಳನ್ನು ಕಾಡಿ ಬೇಡಿ ಒಪ್ಪಿಸುತ್ತಾಳೆ.

ಈ ಹಂತದವರೆಗೆ ಲಘು ಹಾಸ್ಯದ ಲೇಪನದ ಜತೆ ಸಾಗುವ ಸಿನಿಮಾ ಇಲ್ಲಿಂದ ಮುಂದಕ್ಕೆ ತನ್ನ ವೇಗದಲ್ಲಿ ಮಾತ್ರವಲ್ಲದೆ ಸ್ವರೂಪದಲ್ಲೂ ಬದಲಾವಣೆ ಮಾಡಿಕೊಳ್ಳುತ್ತದೆ. ಹಾಸ್ಯ ಸನ್ನಿವೇಶಗಳು ಮೂಲದಲ್ಲಿ‌ ಅಂಥ ಬಲ ಪಡೆದುಕೊಂಡಿಲ್ಲ. ಆದರೆ ದುಲ್ಕರ್ ಅಭಿನಯ ಅದನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಹಾಗಾಗಿ ದುಲ್ಕರ್ ಇಲ್ಲದ ಸನ್ನಿವೇಶಗಳು ಕೊಂಚ ಬಾಲಿಶ ಅನಿಸುತ್ತವೆ. ಸಿನಿಮಾ ತನ್ನ ವೇಗ ಬದಲಿಸಿಕೊಂಡ ಮೇಲೆ ಪಾತ್ರಗಳ ಸನ್ನಿವೇಶದಲ್ಲೂ ಬದಲಾವಣೆಯಾಗುವ ಕಾರಣ ‘ಹೇ ಸಿನಮಿಕಾ’ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ನೋಡಿದ ಅನುಭವ ಕೊಡುತ್ತದೆ. ಇದು ಈ‌ ಸಿನಿಮಾದ ಮಿತಿಯೋ ಅಥವಾ ಗೆಲುವೋ ಎಂದು ಸ್ಪಷ್ಟವಾಗಿ ವಿಂಗಡಿಸಲಾಗದ ಒಂದು ಅಂಶ.

ಯಾಳನ್ ರೇಡಿಯೋ ಜಾಕಿಯಾಗುವಲ್ಲಿಂದ ಚಿತ್ರದಲ್ಲಿ ಭಾವನಾತ್ಮಕ ಅಂಶ‌ಗಳು ಜಾಗೃತವಾಗುತ್ತವೆ. ಅದು ಚಿತ್ರಕತೆಯ ರೂಪದಲ್ಲಿ, ದೃಶ್ಯ ಸಂಯೋಜನೆಯಲ್ಲಿ‌ ಮಾತ್ರವಲ್ಲದೆ ಸಂಭಾಷಣೆಯಲ್ಲಿ ಮತ್ತಷ್ಟು ಸ್ಪಷ್ಟ. ಎಫ್‌ಎಂ ರೇಡಿಯೋ ಚಾನಲ್‌ಗಳಿಗೆ ಮುನ್ನಾಭಾಯ್ ಕಾಲದಲ್ಲಿದ್ದಷ್ಟು ಹೊಳಪು ಈಗ ಇಲ್ಲ. ಆ್ಯಪ್ ರೂಪ ಪಡೆದಿರುವ ರೇಡಿಯೋ ಚಾನಲ್‌ಗಳಲ್ಲಿ ಈಗ ಆರ್‌ಜೆಗಳ ಪಾತ್ರ ಕಿರಿದಾಗಿದ್ದರೂ ದುಲ್ಕರ್‌ರನ್ನು ರೇಡಿಯೋ‌ ಜಾಕಿ ಮಾಡಬೇಕಾದ್ದು ಕತೆಯ ಪಾಲಿನ ಅನಿವಾರ್ಯ. ಹೀಗೆ ಅನಿವಾರ್ಯ‌ತೆ ನಡುವೆ ಸಿಲುಕಿದ್ದರೂ ಅದರ ನಿಭಾಯಿಸುವಿಕೆ ಸೂಕ್ತ ರೀತಿಯಲ್ಲಿ ಆದ ಕಾರಣ ಅತಾರ್ಕಿಕ ಅನಿಸುವುದಿಲ್ಲ.

ಮೌನಾಳ ವಿಚ್ಛೇದನಕ್ಕೆ ಅನುಕೂಲವಾಗಲು ಪ್ರೀತಿಯ ನಾಟಕವಾಡುವ ಮಲಾರ್‌‌ಗೆ ವಾಸ್ತವದಲ್ಲಿ ಪ್ರೀತಿಯ ಸೆಲೆ ಕಾಣುವುದು ಕತೆಯ ಮುಖ್ಯಾಂಶ. ಮೂಲತಃ ಪುರುಷ ದ್ವೇಷಿಯಾದ ಮಲಾರ್ ಪಾತ್ರದ ಆ ಧೋರಣೆಗೆ ಕಾರಣ ಪ್ರೇಕ್ಷಕನಿಗೆ ಕೊನೆಯ ಹಂತದಲ್ಲಷ್ಟೇ ತಿಳಿಯುವುದು ಚಿತ್ರಕತೆಯ ಪಾಲಿನ ಸೋಲು. ನಿರ್ದೇಶಕಿ ತನ್ನ ಶಕ್ತಿಯಾದ ಭಾವನಾತ್ಮಕತೆಯ ಬದಲು ತಿಳಿ ಹಾಸ್ಯವನ್ನು ವರ್ಕೌಟ್ ಮಾಡಲು ಹೊರಡದಿದ್ದರೆ ಸಿನಿಮಾ ಇನ್ನಷ್ಟು ಬಿಗಿಯಾಗುತ್ತಿತ್ತು. ಹಾಗೆಂದು ಆಭಾಸವಾಗಿಲ್ಲ, ಬದಲಾಗಿ ಒಂದು ಹಂತದಲ್ಲಿ ತುಸು ಉದ್ದ ಎಳೆದಂತೆ ಅನಸುತ್ತದೆ‌. ಕತೆ ಯಾವಾಗ ಹೃದಯಕ್ಕೇ ಕೈ ಹಾಕುತ್ತದೋ ಅಷ್ಟರ ಹೊತ್ತಿಗೆ ಪ್ರೇಕ್ಷಕನ ಸಂಪೂರ್ಣ ಏಕಾಗ್ರತೆ ಸೆಳೆದುಕೊಳ್ಳುತ್ತದೆ.

ಇಂತಿರುವ ಕತೆಯಲ್ಲಿ ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ಎರಡು ಸ್ತ್ರೀ ಪಾತ್ರಗಳ ಮನದಾಳ. ತಡೆಯಲಾರದ ಒಳ್ಳೆಯ ಸ್ವಭಾವದ ಗಂಡನಿಂದ ದೂರವಾಗಲು ನಿರ್ಧರಿಸುವ ಮೌನಾ ಅಂತರಂಗ ತೆರೆದುಕೊಳ್ಳುವಾಗ, ಒಲುಮೆಯ ಸುಳಿಗೆ ಮಲಾರ್ ಸಿಲುಕಿಕೊಳ್ಳುವಾಗ ಹೆಣ್ಣಿನ ಮನದಾಳದ ದ್ವಂದ್ವ, ಹಠಮಾರಿತನ, ಭಾವನೆಗಳ ಘರ್ಷಣೆ ಒಂದಕ್ಕೊಂದು ಕೈ ಹಿಡಿದು ಸಾಗುವುದು ಕಣ್ಣಿಗೆ ಕಟ್ಟುತ್ತದೆ. ತ್ರಿಕೋನ ಪ್ರೇಮಕತೆ ಆಗುತ್ತಿದ್ದ ಕತೆಯನ್ನು ತ್ರಿಭಾವಗಳ ಸಂಗಮ ಆಗಿಸಿರುವ ಕಾರಣದಿಂದ ಇಲ್ಲಿನ ಪ್ರೇಮಕತೆ ಹೊಸ‌ ಅನುಭವ ನೀಡುವುದು ಸುಳ್ಳಲ್ಲ. ಪುರುಷ ಪಾತ್ರಗಳೇ ಪ್ರಾಬಲ್ಯ‌ ಮೆರೆಯುವ‌ ಕಮರ್ಶಿಯಲ್ ಚಿತ್ರಜಗತ್ತಿನಲ್ಲಿ ಪ್ರಬಲವಾದ ಮಹಿಳಾ ಪಾತ್ರಗಳನ್ನು ಕಮರ್ಶಿಯಲ್ ಸೂತ್ರದಡಿಯಲ್ಲೇ ಕಟ್ಟಿಕೊಟ್ಟದ್ದು ‘ಹೇ‌ ಸಿನಮಿಕಾ’ ಹೆಚ್ಚುಗಾರಿಕೆ.

ಇದೆಲ್ಲಕ್ಕೂ ಪೂರಕವಾಗಿ ನಿಂತಿರುವುದು ಮತ್ತೋರ್ವ ಮಹಿಳೆ ಪ್ರೀತಾ ಜಯರಾಮನ್ ಪಾತ್ರ. ತೆರೆಯ ಮುಂದಿನ ಪಾತ್ರದಿಂದಲ್ಲ, ಕ್ಯಾಮರಾ ಹಿಂದಿನ ಕಣ್ಣುಗಳಾಗಿ. ಅಷ್ಟೂ ದೃಶ್ಯಗಳಲ್ಲಿ ಬೆಳಕಿನ ಸಂಯೋಜನೆ ಅಗತ್ಯ ಭಾವವನ್ನು ದೃಶ್ಯಕ್ಕೆ ಪರಿಣಾಮಕಾರಿಯಾಗಿ ತುಂಬಿದೆ. ಜತೆಗೆ ಪಾತ್ರಗಳ ಮೂಡಿಗೆ ತಕ್ಕಂತೆ ಬದಲಾಗುವ ಕ್ಯಾಮರಾ ಚಲನೆ ದೃಶ್ಯವನ್ನು ಆಪ್ತವಾಗಿಸುತ್ತದೆ. ಸಿನಿಮಾ ಕೆಲವೆಡೆಗಳಲ್ಲಿ ಬೋರು ಹೊಡೆಸಿದರೂ ನನ್ನ ಪಾಲಿಗೆ ನೋಡಿಸಿಕೊಂಡು ಸಾಗಿದ್ದಂತೂ ಕ್ಯಾಮರಾ ಕೈಚಳಕ. ಸುಪ್ತವಾಗಿರುವ ಕ್ಯಾಮೆರಾ ಕುಸುರಿ ಕಡೆಗೆ ಮನಸು ಒಮ್ಮೆ ಹೊಕ್ಕರೆ ಅದನ್ನು ಬದಿಗಿರಿಸಿ ಸಿನಿಮಾ ನೋಡುವುದು ಕಷ್ಟ, ಕ್ಯಾಮೆರಾದ ತಪ್ಪುಗಳೂ ಸುಲಭವಾಗಿ ಕಾಣುತ್ತವೆ. ಆದರೆ ಪ್ರೀತಿ ಜಯರಾಮನ್ ಕೈಯಲ್ಲಿ‌ನ ಕ್ಯಾಮರಾ ತಪ್ಪು ಮಾಡಿರುವುದು ವಿರಳ.

Previous article‘ಬಾಂಡ್‌ ರವಿ’ ಪ್ರಮೋದ್‌; ಪ್ರಜ್ವಲ್‌ ನಿರ್ದೇಶನದ ಥ್ರಿಲ್ಲರ್‌ ಸಿನಿಮಾ
Next article‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ನಟ – ನಿರ್ದೇಶಕ ಮಹೇಶ್‌ಗೆ ಜೋಡಿಯಾಗಿ ವೈಷ್ಣವಿ

LEAVE A REPLY

Connect with

Please enter your comment!
Please enter your name here