ಸಾಮಾನ್ಯನ ಜೀವನದಲ್ಲಾಗುವ ಏರಿಳಿತಗಳೇ ‘ಹೆಲ್ಪ್’ ಕಿರುಚಿತ್ರದ ಕಥಾವಸ್ತು. ಜೆರಿನ್ ಚಂದನ್ ನಿರ್ದೇಶನದ ಮೂವತ್ತು ನಿಮಿಷಗಳ ಈ ಕಿರುಚಿತ್ರ ಏಪ್ರಿಲ್‌ 27ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಯುವ ಪ್ರತಿಭಾವಂತರಿಗೆ ಓಟಿಟಿ ಉತ್ತಮ ವೇದಿಕೆ ಕಲ್ಪಿಸಿದೆ. ಜೆರಿನ್‌ ಚಂದನ್‌ ಅವರು ಓಟಿಟಿಗೆಂದೇ ಮೂವತ್ತು ನಿಮಿಷಗಳ ‘ಹೆಲ್ಪ್‌’ ಕಿರುಚಿತ್ರ ನಿರ್ದೇಶಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಅವರು ಸುದ್ದಿಗೋಷ್ಠಿ ಆಯೋಜಿಸಿದ್ದರು. ಅವರ ಆತ್ಮೀಯ ಗೆಳೆಯ, ಚಿತ್ರನಿರ್ದೇಶಕ ಸಿಂಪಲ್‌ ಸುನಿ ಮುಖ್ಯ ಅತಿಥಿಯಾಗಿದ್ದರು. ಜೆರಿನ್‌ ಚಂದನ್‌ ತಮ್ಮ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿ, “ಕ್ಲಾಸ್ ರೂಮ್ ಕಥೆಗಳು ಅರ್ಥಗರ್ಭಿತವಾಗಿದ್ದವು. ಕತೆ, ಸಂದೇಶಗಳನ್ನು ತಲುಪಿಸಲು ಇದು ಸೂಕ್ತ ವೇದಿಕೆ ಎನಿಸಿತು. ಹೀಗಾಗಿ, ಈ ಮಾಧ್ಯಮವನ್ನು ಬಳಸಿಕೊಂಡು ಜೀವನದ ಏರಿಳಿತಗಳನ್ನು ತೋರಿಸಲು ಈ ಕಿರುಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ” ಎಂದರು. ಈ ಕಿರುಚಿತ್ರ ಏಪ್ರಿಲ್‌ 27ರಂದು ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಆದರೆ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಕುರಿತು ಅವರಿನ್ನೂ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಸಿನಿಮಾವೊಂದನ್ನು ನಿರ್ದೇಶಿಸುವ ಆಶಯ ಹೊಂದಿದ್ದಾರೆ ಜೆರಿನ್‌.

ಆದಿತ್ಯ ಈ ಕಿರುಚಿತ್ರದ ನಿರ್ಮಾಪಕರು. “ಉತ್ತಮ ಸಂದೇಶವಿರುವ ಚಿತ್ರವನ್ನು ಮಾಡಿದ್ದೇವೆ. ಇದು ಕಿರುಚಿತ್ರ ಅನಿಸುವುದಿಲ್ಲ. ಸಿನಿಮಾ ರೀತಿಯಲ್ಲೇ ಮಾಡಿದ್ದೇವೆ. ಮೂವತ್ತು ನಿಮಿಷ ಕಳೆಯುವುದೇ ಗೊತ್ತಾಗದ ಹಾಗೆ ನಿರ್ದೇಶಕರು ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ” ಎಂದರು ಆದಿತ್ಯ. ಕಿರುಚಿತ್ರದಲ್ಲಿ ಅವರೂ ಒಂದು ಪಾತ್ರ ನಿರ್ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿರ್ದೇಶಕ ಸಿಂಪಲ್‌ ಸುನಿ ಅವರು ಜೆರಿನ್‌ ಚಂದನ್‌ ಅವರ ಆತ್ಮೀಯ ಸ್ನೇಹಿತ. ಸಿಂಪಲ್‌ ಸುನಿ ಮಾತನಾಡಿ, “ನನ್ನ ಮೊದಲ ಚಿತ್ರ ‘ಸಿಂಪಲ್ಲಾಗೊಂದ್‌ ಲವ್ ಸ್ಟೋರಿ’ ಚಿತ್ರದಲ್ಲಿ ಜೆರಿನ್ ಎಂಬ ಪಾತ್ರ‌ ಬರುತ್ತದೆ. ಆ ಹೆಸರಿಡಲು ನನಗೆ ಈ ಗೆಳೆಯನೇ ಸ್ಫೂರ್ತಿ. ಈಗ ‘ಹೆಲ್ಪ್’ ಕಿರುಚಿತ್ರ ಮಾಡಿದ್ದಾನೆ. ಜೆರಿನ್ ಅವರಿಂದ ಇನ್ನೂ ಉತ್ತಮ ಚಿತ್ರಗಳು ಮೂಡಿಬರಲಿ” ಎಂದು ಗೆಳೆಯನಿಗೆ ಹಾರೈಸಿದರು. ವಿನಯ್ ನಾಗೇಶ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಭಿಜಿತ್, ಬಿ.ಸುರೇಶ್, ವೀಣಾ ಸುಂದರ್ , ಡಿ.ಎನ್. ಆದಿತ್ಯ, ನಿಶಾ ಇತರೆ ಪಾತ್ರಗಳಲ್ಲಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದು ರಾಜಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here