ತಮಿಳಿನ ಯಶಸ್ವೀ ಯುವ ಚಿತ್ರನಿರ್ದೇಶಕ ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ನಯನತಾರಾ ಮತ್ತು ಸಾನ್ಯಾ ಮಲ್ಹೋತ್ರಾ ನಾಯಕಿಯರು.
ವಿಜಯ್ ಅಭಿನಯದ ‘ಬಿಗಿಲ್’ ತಮಿಳು ಚಿತ್ರದ ದೊಡ್ಡ ಯಶಸ್ಸು ನಿರ್ದೇಶಕ ಅಟ್ಲೀ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಯಶಸ್ಸು ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಚಿತ್ರ ನಿರ್ದೇಶಿಸುವ ಅವಕಾಶ ತಂದುಕೊಟ್ಟಿದ್ದು ಸರಿಯಷ್ಟೆ. ಇದೀಗ ಅಟ್ಲೀ ಶಾರುಖ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸುವ ಹಾದಿಯಲ್ಲಿದ್ದಾರೆ. ಆಕ್ಷನ್ ಪೋರ್ಷನ್ ಮುಗಿಸಿದ್ದು, ದಕ್ಷಿಣ ಮುಂಬಯಿಯಲ್ಲಿ ಹತ್ತು ದಿನಗಳ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಚಿತ್ರಕ್ಕೆ ತಿರುವು ನೀಡುವ ಪ್ರಮುಖ ಸನ್ನಿವೇಶಗಳು ಈಗ ಚಿತ್ರೀಕರಣಗೊಳ್ಳಲಿವೆ ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ.
ಶೀರ್ಷಿಕೆಯಿನ್ನೂ ನಿಗಧಿಯಾಗದ ಈ ಚಿತ್ರದಲ್ಲಿ ಶಾರುಖ್ ಖಾನ್ ತಂದೆ – ಮಗನಾಗಿ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ. ದಕ್ಷಿಣದ ತಾರೆ ನಯನತಾರಾ ಮತ್ತು ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಚಿತ್ರದ ಇಬ್ಬರು ನಾಯಕಿಯರು. ಸುನೀಲ್ ಗ್ರೋವರ್ ಅವರಿಗೆ ಪ್ರಮುಖ ಪಾತ್ರವಿದೆ. ಅಟ್ಲೀ ಚಿತ್ರದ ಮೊದಲ ಹಂತದ ಚಿತ್ರೀಕರಣದ ನಂತರ ಶಾರುಖ್ ‘ಪಠಾಣ್’ ಸಿನಿಮಾ ಶೂಟಿಂಗ್ ನಿಮಿತ್ತ ಮೂರು ವಾರ ಸ್ಪೇನ್‌ಗೆ ತೆರಳಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.