ಲೈಂಗಿಕ ದೌರ್ಜನ್ಯದ ವಸ್ತುವನ್ನು ಕತೆಯಲ್ಲಿ ಅಳವಡಿಸಿ ಅದರ ಸುತ್ತ ಪಾತ್ರಗಳನ್ನು ಕಟ್ಟುವುದು ಸುಲಭವಲ್ಲ. ಮನರಂಜನೆಯ ಅಂಶವನ್ನು ಬಿಟ್ಟುಕೊಡದೆ ಸಾಮಾಜಿಕ ಪಿಡುಗೊಂದರ ಕುರಿತು ಹೇಳುವ ಸವಾಲನ್ನು ನಿರ್ದೇಶಕ ವಿಜಯ್‌ ಮಿಲ್ಟನ್‌ ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ನಟರಾದ ಶಿವರಾಜಕುಮಾರ್‌, ಧನಂಜಯ ಸಂವೇದನಾಶೀಲ ಕತೆಯಲ್ಲಿ ಪಾತ್ರದ ಅಗತ್ಯತೆಗೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ.

125ನೇ ಸಿನಿಮಾದ ಹೊಸ್ತಿಲಲ್ಲಿರುವ ಹೀರೋ ಶಿವರಾಜಕುಮಾರ್‌ ಅವರಿಗೀಗ ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳನ್ನು ರಂಜಿಸುವುದರ ಜೊತೆಜೊತೆಗೆ ಪಾತ್ರಕ್ಕೊಂದು ತೂಕವೂ ಇರಬೇಕು ಎನ್ನುವುದು ಅವರ ಆಶಯ. ಆಗಾಗ ಅವರು ಈ ಬಗ್ಗೆ ಮಾತನಾಡುವುದಿದೆ. ಸಹಜವಾಗಿಯೇ ಪಾತ್ರ, ಕತೆಯ ಆಯ್ಕೆಯಲ್ಲಿ ಅವರು ಎಚ್ಚರಿಕೆ ವಹಿಸುತ್ತಿದ್ದಾರೆ. ಈ ಯಾದಿಯಲ್ಲಿ ‘ಬೈರಾಗಿ’ ಅವರ ಆಶಯಗಳನ್ನು ಸಾಕಾರಗೊಳಿಸುವಂತಿದೆ. ತೆರೆಯ ಮೇಲೆ ತಮ್ಮನ್ನು ಅಭಿಮಾನಿಗಳು ಹೇಗೆ ನೋಡಲು ಇಷ್ಟಪಡುತ್ತಾರೋ ಅದನ್ನು ಅವರು ಬಿಟ್ಟುಕೊಟ್ಟಿಲ್ಲ. ಇದರ ಜೊತೆಗೇ ಸಾಮಾಜಿಕ ಪಿಡುಗೊಂದು ಕತೆಯಲ್ಲಿ ಬೆರೆತಿದ್ದು, ತಮ್ಮ ಅನುಭವ ಮತ್ತು ಜವಾಬ್ದಾರಿಯನ್ನು ಸಂದೇಶವೊಂದರ ಮೂಲಕ ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಿದ್ದಾರೆ.

ಬಾಲ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಅವರ ಮನಸ್ಸುಗಳನ್ನು ಘಾಸಿಗೊಳಿಸುತ್ತವೆ. ಅವರ ಭವಿಷ್ಯಕ್ಕೆ ಮಾರಕವಾಗುತ್ತವೆ. ‘ಬೈರಾಗಿ’ ಕತೆಯ ಮೂಲ ತಿರುಳೇ ಇದು. ಇಂಥದ್ದೊಂದು ವಸ್ತುವನ್ನು ಕತೆಯಲ್ಲಿ ಅಳವಡಿಸಿ ಅದರ ಸುತ್ತ ಪಾತ್ರಗಳನ್ನು ಕಟ್ಟುವುದು ಸುಲಭವಲ್ಲ. ಮನರಂಜನೆಯ ಅಂಶವನ್ನು ಬಿಟ್ಟುಕೊಡದೆ ಸಾಮಾಜಿಕ ಪಿಡುಗೊಂದರ ಕುರಿತು ಹೇಳುವ ಸವಾಲನ್ನು ನಿರ್ದೇಶಕ ವಿಜಯ್‌ ಮಿಲ್ಟನ್‌ ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿ ಮತ್ತು ಶಾಲೆ ಓದುವ ಬಾಲೆ.. ಈ ಎರಡು ಪಾತ್ರಗಳ ಮೂಲಕ ಅವರು ಸಂತ್ರಸ್ತರ ಅಳಲನ್ನು ಹೇಳುತ್ತಾರೆ. ವಿಜಯ್‌ ಮಿಲ್ಟನ್‌ ಅವರೇ ನಿರ್ದೇಶಿಸಿರುವ ‘ಕಡುಗು’ ತಮಿಳು ಚಿತ್ರದ ಕನ್ನಡ ಅವತರಣಿಕೆಯಿದು ಎನ್ನುವುದು ನಿಮ್ಮ ಗಮನಕ್ಕೆ. ನಿರ್ದೇಶಕ ಮಿಲ್ಟನ್‌ ಇಲ್ಲಿ ಕತೆಯನ್ನು ಕನ್ನಡದ ನೇಟಿವಿಟಿಗೆ ಹೊಂದಿಸಿ ಕೊಂಚ ಮಾರ್ಪಾಟು ಮಾಡಿಕೊಂಡಿದ್ದಾರೆ.

ಸ್ವತಃ ಛಾಯಾಗ್ರಾಹಕರೂ ಆಗಿರುವ ನಿರ್ದೇಶಕ ವಿಜಯ್‌ ಮಿಲ್ಟನ್‌ ಕಲ್ಪನೆಯ ಮೂರ್ನಾಲ್ಕು ಸನ್ನಿವೇಶಗಳು ಮನಸ್ಸಿಗೆ ತಾಕುತ್ತವೆ. ದೌರ್ಜನ್ಯಕ್ಕೆ ಈಡಾಗಿ ಸಾವಾಗುವ ಬಾಲೆಯ ಶವವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ, ಆಕೆಯ ಗೆಳತಿಯರು ಸಮವಸ್ತ್ರ ತೊಟ್ಟು ಶಾಲೆಗೆ ಹೊರಟ ಒಂದು ಸನ್ನಿವೇಶ ಅಂಥದ್ದು. ಶಿವಪ್ಪ ಮತ್ತು ನಾಯಕಿಯ ಮೊದಲ ಭೇಟಿಯ ಸನ್ನಿವೇಶ ನಿರ್ದೇಶಕರ ಸೃಜನಶೀಲತೆಗೆ ಸಾಕ್ಷಿ. ಚಿತ್ರದಲ್ಲಿ ಆಕ್ಷನ್‌ಗೆ ಹೆಚ್ಚು ಸ್ಕೋಪ್‌ ಇದೆ. ಸ್ಟಂಟ್ಸ್‌ ಸಂಯೋಜಿಸಿರುವ ಸಾಹಸ ನಿರ್ದೇಶಕರಿಗೆ, ಅಭಿಮಾನಿಗಳು ತಲೆದೂಗುವಂತೆ ಶಿವರಾಜಕುಮಾರ್‌ ಅವರಿಂದ ಹೆಜ್ಜೆ ಹಾಕಿಸಿರುವ ನೃತ್ಯ ಸಂಯೋಜಕರಿಗೆ ಹಾಗೂ ಈ ದಶ್ಯಗಳನ್ನು ಅಂದಗಾಣಿಸಲು ಶ್ರಮಿಸಿರುವ ಸಂಗೀತ ಸಂಯೋಜಕ ಅನೂಪ್‌ ಸಿಳೀನ್‌ ಅವರಿಗೆ ಅಭಿನಂದನೆ ಸಲ್ಲಬೇಕು.

ಹೀರೋ ಶಿವರಾಜಕುಮಾರ್‌ರಿಗೆ ಸದ್ಯದಲ್ಲೇ ಅರವತ್ತು ತುಂಬಲಿದೆ. ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ ಎನ್ನುವಂತೆ ಅವರದ್ದು ಎಂದಿನ ಲವಲವಿಕೆಯ ಅಭಿನಯ. ಸಂವೇದನಾಶೀಲ ಕತೆಯಲ್ಲಿ ಪಾತ್ರದ ಅಗತ್ಯತೆಗೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ‘ಲವ್ವಿಗಿಲ್ಲ ಹಾಲಿಡೇ!’ ಹಾಡಿನಲ್ಲಿನ ಅವರ ಹುಕ್‌ ಸ್ಟೆಪ್ಸ್‌ ತುಂಬಾ ದಿನಗಳ ಕಾಲ ನಿಲ್ಲುತ್ತದೆ. ಧನಂಜಯ ಅವರ ಪಾತ್ರಕ್ಕೆ ತೂಕವಿದೆ. ಅವರನ್ನಿಲ್ಲಿ ‘ಕರ್ಣ’ನಾಗಿ ನೋಡಿದ ನಂತರ ಮತ್ತಾರನ್ನೂ ಈ ಪಾತ್ರದಲ್ಲಿ ಊಹಿಸಿಕೊಳ್ಳಲಾಗದು. ಈ ಪಾತ್ರಕ್ಕೆ ಹಲವು ಶೇಡ್‌ಗಳಿವೆ. ಕಮರ್ಷಿಯಲ್‌ ಸಿನಿಮಾಗಳ ಮಿತಿಯಲ್ಲಿ ಹೀರೋಗೆ ಸಮಾನಾಂತರವಾಗಿ ಇಂಥದ್ದೊಂದು ಪಾತ್ರ ಕಟ್ಟುವುದು ಕಷ್ಟ. ಧನಂಜಯ ಕೂಡ ಪಾತ್ರದ ಆಳ, ಮಿತಿ ಅರಿತು ಸೊಗಸಾಗಿ ಅಭಿನಯಿಸಿದ್ದಾರೆ. ಖಂಡಿತವಾಗಿ ಇದು ಏರುತ್ತಿರುವ ಅವರ ಗೆಲುವಿನ ಗ್ರಾಫ್‌ಗೆ ಮತ್ತೊಂದು ಮೆಟ್ಟಿಲು. ಯುವನಟ ಪೃಥ್ವಿ ಅಂಬರ್‌ ಪಾತ್ರ ಮಧ್ಯಮವರ್ಗದ ಯುವಕರ ಪ್ರತಿನಿಧಿ. ಪ್ರೀತಿ, ಅಸಹಾಯಕತೆ, ಹಾಸ್ಯ ಸನ್ನಿವೇಶಗಳಲ್ಲಿ ಅವರ ಪಾತ್ರ ಗಮನಸೆಳೆಯುತ್ತದೆ.

LEAVE A REPLY

Connect with

Please enter your comment!
Please enter your name here