ಯೋಗರಾಜ್‌ ಭಟ್‌ ನಿರ್ದೇಶನದ ‘ಕರಟಗ ದಮನಕ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಶಿವರಾಜಕುಮಾರ್‌ ಮತ್ತು ಪ್ರಭುದೇವ ಜೋಡಿಯ ಚಿತ್ರದ ಬಗ್ಗೆ ಸಹಜವಾಗಿಯೇ ನಿರೀಕ್ಷೆಯಿದೆ. ಪ್ರಿಯಾ ಆನಂದ್‌ ಮತ್ತು ನಿಶ್ವಿಕಾ ನಾಯ್ಡು ಚಿತ್ರದ ಇಬ್ಬರು ನಾಯಕಿಯರು.

‘ಇಂದಿಗೆ ಚಿತ್ರ ಪ್ರಾರಂಭವಾಗಿ ಒಂದು ವರ್ಷ. ಕರಟಕ, ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ ಕರಟಕ, ದಮನಕ ಎನ್ನುವುದುಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ಮಾಡಿದ್ದಾರೆ’ ಎಂದು ತಮ್ಮ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿರುವ ಕುರಿತು ನಿರ್ದೇಶಕ ಯೋಗರಾಜ ಭಟ್ಟರು ಮಾಹಿತಿ ನೀಡಿದರು. ಮಾತಿನ ಭಾಗದ ಶೂಟಿಂಗ್‌ ಮುಗಿದಿದ್ದು, ಹಾಡು ಚಿತ್ರಿಸುವುದು ಬಾಕಿ ಇದೆ. ರಾಕ್‌ಲೈನ್‌ ವೆಂಕಟೇಶ್‌ ಬಹುವರ್ಷಗಳ ನಂತರ ಶಿವರಾಜಕುಮಾರ್‌ ಅವರಿಗೆ ನಿರ್ಮಿಸುತ್ತಿರುವ ಚಿತ್ರವಿದು. ಭಟ್ಟರ ನೆಚ್ಚಿನ ತಂತ್ರಜ್ಞರಾದ ವಿ ಹರಿಕೃಷ್ಣ (ಸಂಗೀತ) ಮತ್ತು ಸಂತೋಷ್‌ ರೈ ಪಾತಾಜೆ (ಛಾಯಾಗ್ರಹಣ) ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್ ಚಿತ್ರದ ಇಬ್ಬರು ನಾಯಕಿಯರು. ಖ್ಯಾತ ತೆಲುಗು ನಟ ಮತ್ತು ಬರಹಗಾರ ತನಿಕೆಲ್ಲ ಭರಣಿ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪ್ರಭುದೇವ ಅವರಿಗೆ ಸಿನಿಮಾ ಮಾಡಬೇಕೆನ್ನುವ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಕನಸು ಈ ಚಿತ್ರದ ಮೂಲಕ ಈಡೇರಿದೆ. ಅದರಲ್ಲೂ ಶಿವರಾಜಕುಮಾರ್‌ ಮತ್ತು ಪ್ರಭುದೇವ ಕಾಂಬಿನೇಷನ್‌ ಸಿನಿಮಾ ಮಾಡಲು ಸಾಧ್ಯವಾಗಿರುವುದು ತಮಗೆ ಡಬಲ್‌ ಸಂತಸ ತಂದಿದೆ ಎನ್ನುತ್ತಾರವರು. ತಮ್ಮ ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್ಟರ ಬಗ್ಗೆ ಮಾತನಾಡಿದ ಶಿವರಾಜಕುಮಾರ್‌, ‘ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ಅಪ್ಪು ನಟಿಸಿದ ಪರಮಾತ್ಮ ನನ್ನ ಫೇವರೆಟ್‌ ಚಿತ್ರಗಳಲ್ಲೊಂದು. ಗೆಳೆಯ ಪ್ರಭುದೇವ ಹಾಗೂ ನಾನು ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಚಿತ್ರದಲ್ಲೂ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ’ ಎನ್ನುತ್ತಾರೆ ಶಿವರಾಜಕುಮಾರ್.

LEAVE A REPLY

Connect with

Please enter your comment!
Please enter your name here