ಕತೆಯ ಆಯ್ಕೆ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಹೊಸ ಅಲೆಯ ಸಿನಿಮಾಗಳಿಗೆ ಬೇರೆಯದ್ದೇ ಆಯಾಮ ನೀಡಿದ ನಿರ್ದೇಶಕ ಶ್ಯಾಮ್ ಬೆನಗಲ್. ಮುಖ್ಯವಾಹಿನಿಯಿಂದ ಭಿನ್ನವಾಗಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ಪ್ರತಿರೋಧ, ರಾಜಕೀಯ ವಿಡಂಬನೆ ಮತ್ತು ಮಾನವೀಯ ಸಂಬಂಧಗಳಿಗೆ ಒತ್ತುಕೊಟ್ಟು ಸಿನಿಮಾಗಳನ್ನು ಕಟ್ಟಿದರು. ಅವರ ಪ್ರಮುಖ ಸಿನಿಮಾಗಳು, ಕಿರುತೆರೆ ಸರಣಿಗಳ ಬಗೆಗಿನ ಒಂದು ಕಿರುನೋಟ ಇಲ್ಲಿದೆ.
1970 ಮತ್ತು 1980ರ ದಶಕಗಳಲ್ಲಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ಅಲೆಯ ಸಿನಿಮಾಗಳು ಕಾಣಿಸತೊಡಗಿದ್ದವು. ಈ ಹೊತ್ತಲ್ಲಿ ಹೊಸತನದ ಜೊತೆ ಮನುಷ್ಯ ಸಂಬಂಧಗಳು, ಸೂಕ್ಷ್ಮ ಸಂವೇದನೆಗಳನ್ನು ಪರದೆ ಮೇಲೆ ತಂದ ನಿರ್ದೇಶಕ ಶ್ಯಾಮ್ ಬೆನಗಲ್. ಮುಖ್ಯವಾಹಿನಿ ಸಿನಿಮಾಗಳಿಂದ ಭಿನ್ನವಾಗಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ಪ್ರತಿರೋಧ, ರಾಜಕೀಯ ವಿಡಂಬನೆ ಮತ್ತು ಮಾನವೀಯ ಸಂಬಂಧಗಳಿಗೆ ಒತ್ತುಕೊಟ್ಟ ನಿರ್ದೇಶಕರಿವರು. ನಿನ್ನೆ ಸಂಜೆ (ಡಿಸೆಂಬರ್ 23) ನಮ್ಮನ್ನಗಲಿದ ಶ್ಯಾಮ್ ಬೆನಗಲ್ ಎಂಬ ಅಪ್ರತಿಮ ನಿರ್ದೇಶಕನ ಪ್ರಮುಖ ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳ ಬಗೆಗಿನ ಒಂದು ನೋಟ ಇಲ್ಲಿದೆ.
ಅಂಕುರ್ (1974) | ಶ್ಯಾಮ್ ಬೆನಗಲ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಅಂಕುರ್. ಗ್ರಾಮೀಣ ಭಾರತದಲ್ಲಿನ ಜಾತಿ, ವರ್ಗ ಮತ್ತು ಲೈಂಗಿಕ ಶೋಷಣೆಯ ಎಳೆಯನ್ನಿಟ್ಟುಕೊಂಡು ಅವರು ನಿರ್ದೇಶಿಸಿದ ಈ ಸಿನಿಮಾ ಆ ಕಾಲದಲ್ಲಿ ಸಂಚಲನವನ್ನುಂಟು ಮಾಡಿತ್ತು. ಊರ ಜಮೀನ್ದಾರನ ಮಗ ಸೂರ್ಯ (ಅನಂತ್ ನಾಗ್) ಅಪ್ಪನ ಅಣತಿಯಂತೆ ಇನ್ನೂ ವಯಸ್ಸಿಗೆ ಬರದ ಹುಡುಗಿಯೊಂದಿಗೆ ಮದುವೆಯಾಗಿರುತ್ತಾನೆ. ಆ ಹುಡುಗಿ ಋತುಮತಿಯಾಗುವವರೆಗೆ ಆಕೆಯೊಂದಿಗೆ ದಾಂಪತ್ಯ ಸಾಧ್ಯವಿಲ್ಲ. ಇಂತಿರುವಾಗ ಸೂರ್ಯ, ಅಲ್ಲಿನ ಕೆಲಸಕ್ಕೆ ಬರುವ ದಲಿತ ಯುವತಿ ಲಕ್ಷ್ಮಿ ಜತೆ ಸಂಬಂಧ ಬೆಳೆಸುತ್ತಾನೆ. ಲಕ್ಷ್ಮಿಯ ಗಂಡ ಕಿಶ್ತಯ್ಯ ಕಿವುಡ ಮತ್ತು ಮೂಗ. ಮದ್ಯಪಾನ ವ್ಯಸನಿ. ಇಂತಿರುವಾಗ ಸೂರ್ಯನ ಹೆಂಡತಿ ವಾಪಸ್ ಗಂಡನ ಮನೆಗೆ ಬಂದಾದ ಮೇಲೆ ಲಕ್ಷ್ಮಿಯನ್ನು ಮನೆ ಕೆಲಸದಿಂದ ಬಿಡಿಸುತ್ತಾಳೆ. ಇತ್ತ ಲಕ್ಷ್ಮಿ ಬಸುರಿಯಾಗುತ್ತಾಳೆ. ಅದೊಂದು ದಿನ ಕಿಶ್ತಯ್ಯ ಸೂರ್ಯನ ಮನೆಯತ್ತ ಒಂದು ಬೆತ್ತ ಹಿಡಿದುಕೊಂಡು ಬರುವಾಗ, ಆತ ತನ್ನ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾನೆ ಎಂದು ಊಹಿಸಿ ಸೂರ್ಯ, ಕಿಶ್ತಯ್ಯನಿಗೆ ಚಾಟಿಯಿಂದ ಬಾರಿಸುತ್ತಾನೆ. ತನ್ನ ತಪ್ಪುಗಳನ್ನು ಮರೆಮಾಚಲು ಧಣಿಯೊಬ್ಬ ಬಡವನ ಮೇಲೆ ಮಾಡುವ ದೌರ್ಜನ್ಯವಿದು. ಗಂಡ ಏಟು ತಿನ್ನುತ್ತಿರುವುದನ್ನು ನೋಡಿ ಅಲ್ಲಿಗೆ ಓಡಿ ಬರುವ ಲಕ್ಷ್ಮಿ, ಸೂರ್ಯನಿಗೆ ಹಿಡಿಶಾಪ ಹಾಕುತ್ತಾಳೆ. ಅಲ್ಲಿನ ಕೆಲಸದವರ ಸಹಾಯದಿಂದ ಗಂಡನನ್ನು ಎಬ್ಬಿಸಿ ಆಕೆ ಕರೆದುಕೊಂಡು ಮನೆಯ ಹಾದಿ ಹಿಡಿಯುವಾಗ ಬಾಲಕನೊಬ್ಬ ಸೂರ್ಯನ ಮನೆಯ ಗಾಜಿನ ಕಿಟಕಿಗೆ ಕಲ್ಲೆಸೆದು ಓಡುತ್ತಾನೆ. ಗಾಜು ಒಡೆಯುವ ಸದ್ದು ಬಡವರ ಮೇಲೆ ಧನಿಕರು ಎಸೆಯುವ ದೌರ್ಜನ್ಯದ ವಿರುದ್ಧದ ದನಿ ಎಂಬಂತೆ ಚಿತ್ರಿಸಲಾಗಿದೆ.
ಮಂಥನ್ (1976) | ಈ ಚಿತ್ರವು ಗ್ರಾಮೀಣ ಭಾರತದಲ್ಲಿ ಸಹಕಾರಿ ಚಳುವಳಿಯ ಸ್ಪೂರ್ತಿದಾಯಕ ಕಥೆಯಾಗಿದ್ದು, ಹೈನುಗಾರಿಕೆ ಮಾಡುವ ರೈತರ ಸಬಲೀಕರಣದ ಬಗ್ಗೆ ಬೆಳಕು ಚೆಲ್ಲುತ್ತದೆ. ವರ್ಗೀಸ್ ಕುರಿಯನ್ ಅವರ ಕ್ಷೀರ ಕ್ರಾಂತಿಯೇ ಈ ಸಿನಿಮಾಕ್ಕೆ ಸೂರ್ತಿ. 5 ಲಕ್ಷ ರೈತರು ತಲಾ 2 ರೂಪಾಯಿ ನೀಡುವ ಮೂಲಕ ಸಿನಿಮಾಗೆ ಧನ ಸಹಾಯ ಮಾಡಿದ್ದರು. ಭಾರತದ ಮೊದಲ ಕ್ರೌಡ್ ಫಂಡೆಂಡ್ ಸಿನಿಮಾ ಇದು! 1977ರಲ್ಲಿ ಹಿಂದಿ ಭಾಷೆಯ ಅತ್ಯುತ್ತಮ ಚಲನಚಿತ್ರಕ್ಕಾಗಿರುವ ರಾಷ್ಟ್ರೀಯ ಪ್ರಶಸ್ತಿ, ಉತ್ತಮ ಚಿತ್ರಕತೆಗೆ ಇರುವ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಿನಿಮಾ ಗೆದ್ದುಕೊಂಡಿತ್ತು.
ಭೂಮಿಕಾ (1977) | ಮರಾಠಿ ನಟಿ ಹಂಸಾ ವಾಡ್ಕರ್ ಅವರ ಆತ್ಮಕತೆ ಆಧಾರಿತ ಭೂಮಿಕಾ, ಸಾಮಾಜಿಕ ನಿರೀಕ್ಷೆಗಳು ಮತ್ತು ವೈಯಕ್ತಿಕ ಪ್ರಕ್ಷುಬ್ಧತೆಯ ನಡುವೆ ಮಹಿಳೆಯ ಸ್ವಾತಂತ್ರ್ಯದ ಅನ್ವೇಷಣೆಯ ಕಥಾ ಹಂದರ ಹೊಂದಿದೆ. ಕಲಾವಿದೆ, ಹೆಂಡತಿ ಮತ್ತು ತಾಯಿಯ ಪಾತ್ರಗಳ ನಡುವೆ ಸಿಲುಕಿರುವ ಹೆಣ್ಣಿನ ಪಾತ್ರಕ್ಕೆ ಸ್ಮಿತಾ ಪಾಟೀಲ್ ಜೀವ ತುಂಬಿದ್ದರು.
ಕಲಿಯುಗ್ (1981) | ಮಹಾಭಾರತದ ಕತೆಯನ್ನು ಹೊಸರೂಪದಲ್ಲಿ ಹೇಳಿದ ಸಿನಿಮಾ ಕಲಿಯುಗ್. ಕಾರ್ಪೊರೇಟ್ ಜಗತ್ತಿನಲ್ಲಿನ ದುರಾಸೆ, ದ್ರೋಹ ಮತ್ತು ಕುಟುಂಬ ಸಂಘರ್ಷದ ಜತೆಗೆ ಈ ಚಿತ್ರವು ಎರಡು ಕೈಗಾರಿಕೋದ್ಯಮಿ ಕುಟುಂಬಗಳ ನೈತಿಕ ಸಂದಿಗ್ಧತೆಗಳು ಮತ್ತು ಅಧಿಕಾರ ಹೋರಾಟಗಳನ್ನು ತೋರಿಸುತ್ತದೆ.
ಮಂಡಿ (1983) | ವೇಶ್ಯಾಗೃಹವೊಂದರಲ್ಲಿನ ರಾಜಕೀಯ, ಅಧಿಕಾರ ಮತ್ತು ನೈತಿಕತೆಯ ವಿಡಂಬನಾತ್ಮಕ ಚಿತ್ರ ಮಂಡಿ. ನಗರೀಕರಣ ಮತ್ತು ಮಹಿಳಾ ಸಂಸ್ಥೆಯಂತಹ ಸಮಸ್ಯೆಗಳನ್ನು ಪರಿಹರಿಸುವಾಗ ಈ ಚಿತ್ರವು ಸಮಾಜದ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ಶಬಾನಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ಅವರ ಬೋಲ್ಡ್ ನಟನೆ ಭಾರೀ ಮೆಚ್ಚುಗೆ ಪಡೆದಿತ್ತು.
ಭಾರತ್ ಏಕ್ ಖೋಜ್ (1988) | ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’ (1946) ಆಧಾರಿತ 53 ಕಂತುಗಳ ಸರಣಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಪ್ರಾಚೀನ ಕಾಲದಿಂದ ಸ್ವಾತಂತ್ರ್ಯದವರೆಗಿನ ಭಾರತದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ತಾತ್ವಿಕ ಪರಂಪರೆಯನ್ನು ತೋರಿಸಿದ ಸಾಕ್ಷ್ಯ ಚಿತ್ರವಾಗಿತ್ತು ಇದು.
ಸೂರಜ್ ಕಾ ಸಾತ್ವಾ ಘೋಡಾ (1992) | ಧರ್ಮವೀರ್ ಭಾರತಿಯವರ ‘ದಿ ಸನ್ಸ್ ಸೆವೆಂತ್ ಹಾರ್ಸ್’ ಕಾದಂಬರಿ ಆಧರಿಸಿದ ಈ ಚಿತ್ರದಲ್ಲಿ ಕಥೆಗಾರನು ತನ್ನ ಹಿಂದಿನ ಕಾಲದ ಮೂರು ಪರಸ್ಪರ ಸಂಬಂಧ ಹೊಂದಿರುವ ಪ್ರೇಮಕಥೆಗಳನ್ನು ಬಿಚ್ಚಿಡುತ್ತಾ ಹೋಗುತ್ತಾನೆ. ಈ ಸಿನಿಮಾ ಮೂಲಕ ಶ್ಯಾಮ್ ಬೆನಗಲ್, ಮಾನವ ಸಂಬಂಧಗಳು ಮತ್ತು ಸಾಮಾಜಿಕ ಶ್ರೇಣಿಗಳ ಸಂಕೀರ್ಣತೆಗಳನ್ನು ತೋರಿಸಿದ್ದರು.
ಸರ್ದಾರಿ ಬೇಗಂ (1996) | ಸಾಮಾಜಿಕ ನಿರ್ಬಂಧಕ್ಕೊಳಾಗಿರುವ, ಮತ್ತೊಂದೆಡೆ ವೈಯಕ್ತಿಕ ಆಕಾಂಕ್ಷೆಗಳನ್ನು ಪೂರೈಸಲು ಹೊರಟಿರುವ ಶಾಸ್ತ್ರೀಯ ಸಂಗೀತ ಗಾಯಕಿಯ ಜೀವನ ಮತ್ತು ಹೋರಾಟಗಳ ಕತೆ ಸರ್ದಾರಿ ಬೇಗಂ. ಈ ಚಿತ್ರವು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕಲೆ, ವ್ಯಕ್ತಿತ್ವ ಮತ್ತು ಲಿಂಗ ಸಮಾನತೆಯ ಗಟ್ಟಿದನಿಯಾಗಿದೆ.
ಝುಬೈದಾ (2001) | ಸಾಮಾಜಿಕ ರೂಢಿಗಳು ಮತ್ತು ವೈಯಕ್ತಿಕ ಕನಸುಗಳ ನಡುವೆ ಹೆಣಗಾಡುವ ಸ್ವತಂತ್ರ ಮನೋಭಾವದ ಮಹಿಳೆಯ ದುರಂತದ ಕಥೆಯನ್ನು ಹೇಳುತ್ತದೆ ಸಿನಿಮಾ. ಪ್ರೀತಿ, ತ್ಯಾಗ ಮತ್ತು ಮಹಿಳೆಯ ಮಹಾತ್ವಾಕಾಂಕ್ಷೆಯನ್ನು ಹೇಳಲಾಗಿತ್ತು. ಚಿತ್ರದ ನಟಿ ಕರಿಷ್ಮಾ ಕಪೂರ್‌ರಿಗೆ ಉತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.
ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2005) | ಹೆಸರೇ ಹೇಳುವಂತೆ ಈ ಸಿನಿಮಾ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವನ್ನು ತೋರಿಸುತ್ತದೆ. ಶ್ಯಾಮ್ ಬೆನಗಲ್ ಅವರು ಬೋಸ್ ಅವರ ದೃಷ್ಟಿಕೋನ, ತ್ಯಾಗ ಮತ್ತು ವಿವಾದಗಳನ್ನು ಐತಿಹಾಸಿಕ ನಿಖರತೆಯೊಂದಿಗೆ ತೋರಿಸಿದ್ದರು.
ಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್ (2023) | ಬಾಂಗ್ಲಾದೇಶದ ಸ್ಥಾಪಕ ಪಿತಾಮಹ ಶೇಖ್ ಮುಜೀಬುರ್ ರೆಹಮಾನ್ ಜೀವನಾಧಾರಿತ ಕತೆಯ ಈ ಸಿನಿಮಾ ವಿಮೋಚನಾ ಹೋರಾಟದ ಸಮಯದಲ್ಲಿ ಅವರ ಜೀವನ, ನಾಯಕತ್ವ ಮತ್ತು ಸ್ವತಂತ್ರ ಬಾಂಗ್ಲಾದೇಶಕ್ಕಾಗಿ ಅವರ ದೃಷ್ಟಿಕೋನವನ್ನು ನಿರೂಪಿಸುತ್ತದೆ. 2024ರಲ್ಲಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ, ರೆಹಮಾನ್ ಅವರ ಪುತ್ರಿ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು.