ಆನಂದ್‌ ಎಲ್‌.ರಾಯ್‌ ನಿರ್ದೇಶನದ ‘ಅತ್ರಂಗಿ ರೇ ‘ ಅಪರೂಪದ ಕತೆಯ ಮ್ಯೂಸಿಕಲ್‌ ಲವ್‌ಸ್ಟೋರಿ. ಅತಿಯಾದ ನಿರೀಕ್ಷೆ ಇಲ್ಲದೆ ವೀಕ್ಷಿಸುವವರಿಗೆ ಇಷ್ಟವಾಗುವ ಪ್ರಯೋಗ. ಈ ಹಿಂದಿ ಸಿನಿಮಾ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕಲ್ಪನೆಯೊಳಗೊಂದು ಪರಿಕಲ್ಪನೆ. ನಾವು ನೋಡಿರದ, ಅನುಭವಿಸಿರದ ಆಸಕ್ತಿಕರ ವಿಷಯಗಳ ಬಗ್ಗೆ ನಮ್ಮೊಳಗೊರಗೆ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವ ಅಥವಾ ಊಹಿಸಿಕೊಳ್ಳುವ ಸಾಮರ್ಥ್ಯವಾದ ‘ಕಲ್ಪನೆ’ ಕಾರಣವಿಲ್ಲದೆ ಖಾಯಿಲೆಯಾಗದು! ಕಲ್ಪನೆಗೆ ಕೊನೆಯಿಲ್ಲ ಅಂತಾರೆ. ಅಂತಹ ಕಾಲ್ಪನಿಕ ಕಥೆಯಾದ ಸಿನಿಮಾ ಕಥೆಯೊಳಗೊಂದು ಕಲ್ಪನೆಯ ಕಥೆಯಿದೆ. ಆ ಕಥೆಯ ಮೂಲರೂಪ ಚಿತ್ರದ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ಮೊದಲನೆಯ ಅರ್ದಭಾಗದ ಸುಮಾರು ನಲವತ್ತು ನಿಮಿಷಗಳ ಕಾಲ ಅತಿರಂಜಿತ ಓವರ್‌ಡ್ರಾಮಾ ಎನಿಸಿಕೊಳ್ಳುವ ಸಿನಿಮಾ, ನಂತರದಲ್ಲಿ ಪ್ರೇಕ್ಷನ ಹಿಡಿತಕ್ಕೆ ಸಿಗುತ್ತಾ ಅಥವಾ ಪ್ರೇಕ್ಷಕನನ್ನು ಒಳಗೊಳ್ಳುತ್ತಾ ಸಾಗುತ್ತದೆ.

ಓಡಿಹೋಗುತ್ತಿರುವ ಹುಡುಗಿಯನ್ನು ಕೆಲವು ದಾಂಡಿಗರು ಬೆನ್ನಟ್ಟಿರುವ ದೃಶ್ಯದಿಂದ ಸಿನಿಮಾ ಆರಂಭವಾಗುತ್ತದೆ. ತಂದೆ – ತಾಯಿ ಇಲ್ಲದ, ಅಜ್ಜಿಯ ಒಡೆತನದಲ್ಲಿರುವ ದೊಡ್ಡ ಮನೆಯೊಂದರ ಹುಡುಗಿ ‘ರಿಂಕು ಸೂರ್ಯವಂಶಿ’ ತಾನು ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗುವ ಪ್ರಯತ್ನದಲ್ಲಿ ಹಲವು ಬಾರಿ ವಿಫಲಳಾಗಿರುತ್ತಾಳೆ. ಆ ಹುಡುಗ ಯಾರು ಎನ್ನುವ ಸಣ್ಣ ಸುಳಿವನ್ನೂ ಬಿಟ್ಟುಕೊಡದ ಹುಡುಗಿ. ಇಂದಲ್ಲ ನಾಳೆ ಆತನೊಂದಿಗೆ ಓಡಿಹೋಗುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾಳೆ. ಇದೇ ಹಠದೊಂದಿಗೆ ಎಲ್ಲರಿಗೂ ಸವಾಲು ಹಾಕುವಂಥ ಮೊಂಡು ಧೈರ್ಯದ ಹುಡುಗಿ.

ಇವಳ ಹುಚ್ಚಾಟದಿಂದ ರೋಸಿ ಹೋಗಿರುವ ಸರ್ವಾಧಿಕಾರಿ ಘಾಟಿ ಅಜ್ಜಿ, ಯಾವುದಾದರೂ ಹುಡುಗನನ್ನು ಆಕೆಗೆ ಕಟ್ಟಿ ಕೈತೊಳೆದುಕೊಳ್ಳಲು ನಿರ್ಧರಿಸುತ್ತಾಳೆ! ತಮ್ಮ ನಾಡು ಬಿಹಾರಿನಿಂದ ದೂರದ ಊರಾಗಬೇಕು, ಬಿಹಾರಿಯಾಗಿರಬಾರದು ಎನ್ನುವುದು ಅಜ್ಜಿಯ ಕಂಡೀಷನ್‌. ಅಜ್ಜಿಯ ಕೈಯಾಳುಗಳು ಹುಡುಕಾಟ ನಡೆಸುತ್ತಾರೆ. ಮೆಡಿಕಲ್‌ ಕ್ಯಾಂಪಿಗಾಗಿ ಆ ಊರಿಗೆ ಬಂದಿದ್ದ ಮೆಡಿಕಲ್‌ ವಿದ್ಯಾರ್ಥಿ ‘ವೆಂಕಟೇಶ್ ವಿಶ್ವನಾಥ್ ಅಯ್ಯರ್’, ವಿಶುನನ್ನು ಆಳುಗಳು ಹೊತ್ತು ತರುತ್ತಾರೆ. ಅಲ್ಲಿಯೂ ಒಂದು ಕನ್ಫೂಷನ್‌ ಆಗಿರುತ್ತದೆ. ಸ್ಥಳೀಯ ಯುವಕನೆಂದು ವಿಶುನನ್ನು ಕಿಡ್ನಾಪ್‌ ಮಾಡಿರುತ್ತಾರೆ. ನಗುವಿನ ಮತ್ತೇರುವ ಆಕ್ಸಿಜನ್ ಕೊಟ್ಟು ಒತ್ತಾಯ ಪೂರ್ವಕ ಮದುವೆ ಮಾಡಿ ಮುಗಿಸಿ ರೈಲು ಹತ್ತಿಸಿ ಕಳಿಸಿ ಬಿಡುತ್ತಾರೆ!

ಆದರೆ ಇಬ್ಬರಿಗೂ ಈ ಮದುವೆ ಇಷ್ಟವಿಲ್ಲ. ಇಬ್ಬರವೂ ಬೇರೆಬೇರೆ ಪ್ರೇಮಕಥೆಗಳಿವೆ ಎನ್ನುವಂತೆ ತೆರೆದು ಕೊಳ್ಳುವ ಸಿನಿಮಾ ನಂತರದಲ್ಲಿ ತ್ರಿಕೋನ ಪ್ರೇಮಕಥೆಯೆಂಬಂತೆ ಬಿಂಬಿತವಾಗುತ್ತ ಸಾಗುತ್ತದೆ. ಎರಡೆರಡು ಕಾಲಘಟ್ಟದ ಪ್ರೇಮಕಥೆಗೆ ಎದುರಾಗುವ ಸವಾಲುಗಳು, ಮಾನಸಿಕ ಆರೋಗ್ಯದ ಸಮಸ್ಯೆ ಕುರಿತಾದ ಎಳೆಗಳೂ ಇರುವ ಸಿನಿಮಾ, ಕಾದಂಬರಿ ಓದಿದಂತಹ ಅನುಭವ ನೀಡುತ್ತದೆ. ಕೆಲವು ದೃಶ್ಯಗಳು ಭಾವುಕಗೊಳಿಸುತ್ತವೆ.

ಧನುಷ್‌ ಮತ್ತು ಸಾರಾ ಅಲಿ ಖಾನ್ ತಮಗೆ ದಕ್ಕಿರುವ ಪಾತ್ರಗಳಲ್ಲಿ ಮಿಂದೆದ್ದಿದ್ದಾರೆ. ಎರಡೂ ಪಾತ್ರಗಳು ಕೆಲವು ಭಾವನಾತ್ಮಕ ದೃಶ್ಯಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುವಂತಿವೆ. ಜಾದೂಗಾರ ಸಜ್ಜದ್ ಆಗಿರುವ ಅಕ್ಷಯ್ ಕುಮಾರ್ ಪಾತ್ರ ಸಿನಿಮಾದ ಅವಿಭಾಜ್ಯ ಅಂಗ. ವಿಶುನ ಸ್ನೇಹಿತ ಮಧುಸೂಧನ್ ಆಗಿ ಆಶಿಶ್ ವರ್ಮಾ ಹಾಸ್ಯ ಪಾತ್ರದಲ್ಲಿ ಮಿಂಚಿದ್ಧಾರೆ. ಬಿಹಾರದಲ್ಲಿ ಪ್ರಾರಂಭವಾಗುವ ಕಥೆ ದೆಹಲಿ, ಚೆನ್ನೈಗೂ ಬಂದು ಹೋಗುತ್ತದೆ. ಛಾಯಾಗ್ರಾಹಕ ಪಂಕಜ್‌ ಕುಮಾರ್‌ ಕತೆ ನಡೆಯುವ ವಿವಿಧ ನಗರಗಳನ್ನು ಆಕರ್ಷಕವಾಗಿ ಸೆರೆಹಿಡಿದಿದ್ದಾರೆ. ರೆಹಮಾನ್ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಭಾವನಾತ್ಮಕ ದೃಶ್ಯಗಳಲ್ಲಿ ಅವರ ಓಕಲ್ ವಾಯ್ಸ್ ಎದೆಗೆ ನಾಟುವಂತಿದೆ. ಇರ್ಷಾದ್‌ ಸಾಹಿತ್ಯದಲ್ಲಿ ಅರಿಜಿತ್‌ ಸಿಂಗ್‌ ಹಾಡಿರುವ ‘ತೇರಿ ಆಂಖೋ ಮೆ ಝಕ್ನೇ ವಾಲಾ’ ಭಾವಪೂರ್ಣ ಗೀತೆ ಅದ್ಭುತವಾಗಿ ಮೂಡಿಬಂದಿದೆ. ಲಿರಿಕ್ಸ್ ಅರ್ಥವಾಗದವರೂ ಮತ್ತೆ ಮತ್ತೆ ಆಲಿಸುವಂತಿದೆ ಈ ಹಾಡು.

ಒಟ್ಟಾರೆ ‘ಅತ್ರಂಗಿ ರೇ’ ಭರಪೂರ ಮನರಂಜನೆ ನೀಡುವಂತಹ ಸಿನಿಮಾ ಎನಿಸಿಕೊಳ್ಳದಿದ್ದರೂ ಅಲ್ಲಲ್ಲಿ ನಗಿಸಿ, ಕೆಲವೆಡೆ ಭಾವುಕತೆಯ ಸನ್ನಿವೇಶಗಳೊಂದಿಗೆ, ನಿರೀಕ್ಷಿತ – ಅನಿರೀಕ್ಷಿತ ತಿರುವುಗಳುಳ್ಳ ಹೊಸತನದ ಕಥೆ ಎನ್ನಿಸಿಕೊಳ್ಳುತ್ತದೆ. ವಿಶಿಷ್ಟ ಕಥೆಯ ಮ್ಯೂಸಿಕಲ್ ಲವ್ ಸ್ಟೋರಿ ನೋಡಲು ಅಪೇಕ್ಷಿಸುವವರು ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ವೀಕ್ಷಿಸಬಹುದು. ಅತಿಯಾದ ನಿರೀಕ್ಷೆ ಇಲ್ಲದೆ ವೀಕ್ಷಿಸುವವರಿಗೆ ಸಿನಿಮಾ ಖಂಡಿತ ಇಷ್ಟವಾಗುತ್ತದೆ.

LEAVE A REPLY

Connect with

Please enter your comment!
Please enter your name here