ಧರ್ಮ, ಕರ್ಮ ಮತ್ತು ಶಿಕ್ಷೆಯ ಸುತ್ತ ಹೆಣೆದ ಕೋರ್ಟ್‌ರೂಂ ಕೇಸಿನ ರೋಚಕ ಘಟನೆಗಳ ವಾದ, ಪ್ರತಿವಾದಗಳ ಗಂಭೀರ ಚಿತ್ರ – ‘ಸಿರ್ಫ್ ಏಕ್ ಬಂದಾ ಕಾಫಿ ಹೈ’. ಮನೋಜ್‌ ಬಾಜಪೇಯಿ ವಕೀಲನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ.

ಚಿತ್ರದಲ್ಲಿ ಮಹಾಭಾರತದ ಉಲ್ಲೇಖವಿದೆ, ಒಂದು ಸಂಧರ್ಭದಲ್ಲಿ ‘ಕೃಷ್ಣ ಧರ್ಮಕ್ಕಾಗಿ ಒಬ್ಬನೇ ಲಕ್ಷಾಂತರ ಜನರಿದ್ದ ಕೌರವ ಸೇನೆಯನ್ನು ಎದುರಿಸಿದ, ಧರ್ಮಯುದ್ಧದಲ್ಲಿ ಹಿಂಜರಿಯುವ ಮಾತೇ ಇಲ್ಲ. ಸೋಲೇ ಇಲ್ಲ, ಧೈರ್ಯದ ಮಂತ್ರ ಜಪಿಸುವವನಿಗೆ’ ಎಂಬಂತೆ ಅವನಿಗೆ ಬುದ್ಧಿವಾದ ಮಾಡುತ್ತಾಳೆ ನಾಯಕನ ವೃದ್ಧ ತಾಯಿ. ಕೊನೆಯಲ್ಲೊಮ್ಮೆ ಮಾನಭಂಗ ಆಪಾದಿತ ಸ್ವಾಮಿಜಿಯನ್ನು ತೋರಿಸಿ ವಕೀಲ ನಾಯಕನೇ ‘ಇವನು ಸನ್ಯಾಸಿ ವೇಷದ ರಾವಣ, ಇಂಥವರನ್ನು ಶಿವನೂ ಕ್ಷಮಿಸಿದೇ ರಾಮಾಯಣ ಕಾಲದಲ್ಲೇ ಮೇಲ್ಪಂಕ್ತಿ ಹಾಕಿದ ಉದಾಹರಣೆಯಿದೆ’ ಎಂದು ಉಲ್ಲೇಖಿಸುತ್ತಾನೆ.

ಹೀಗೆ ಧರ್ಮ, ಕರ್ಮ ಮತ್ತು ಶಿಕ್ಷೆಯ ಸುತ್ತ ಹೆಣೆದ ಒಂದು ಪ್ರಸ್ತುತವೂ ಆದ ಕೋರ್ಟ್‌ರೂಂ ಕೇಸಿನ ರೋಚಕ ಘಟನೆಗಳ ವಾದ, ಪ್ರತಿವಾದಗಳ ಗಂಭೀರ ಚಿತ್ರ – ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ( ಕೇವಲ ಒಬ್ಬ ಇದ್ದರೂ ಸಾಕು) ಎಂಬ ಗೂಡಾರ್ಥ ಹೊಂದಿದ ಶೀರ್ಷಿಕೆ. ತಮ್ಮ ಮುಖ್ಯ ಪಾತ್ರವನ್ನು ಜೋಧಪುರದ ಪ್ರತಿವಾದಿ ವಕೀಲ ಪಿ ಸಿ ಸೋಲಂಕಿ ಆಗಿ ಮನೋಜ್‌ ಬಾಜಪೇಯಿ ಸ್ವಲ್ಪವೂ ಅತಿರೇಕವಿಲ್ಲದ ಅಭಿನಯ ನೀಡಿ ಸಮರ್ಥವಾಗಿ ನಿರ್ವಹಿಸಿ ಚಿತ್ರದ ತುಂಬ ಮತ್ತು ವೀಕ್ಷಕರ ಮನಸ್ಸಿನ ತುಂಬಾ ಆವರಿಸುತ್ತಾರೆ. ಮೈನರ್ ಯುವತಿಯೊಬ್ಬಳು ಹೈ ಪ್ರೊಫೈಲ್ ಸ್ವಾಮಿಯ ಕೋಣೆಯಲ್ಲಿ ಮಾನಭಂಗ ಯತ್ನಕ್ಕೆ ಒಳಗಾಗುತ್ತಾಳೆ. ಆ ಬಡ ಕುಟುಂಬದವರ ತಲ್ಲಣ ಹೆಚ್ಚುವುದು ಅವರು ಆ ಸ್ವಾಮಿಯ ಆಪ್ತ ಭಕ್ತರೇ ಆಗಿದ್ದರಿಂದ… ಆದಾಗ್ಯೂ ಮಗಳಿಗೆ ಆದ ಅನ್ಯಾಯವನ್ನು ಪೋಕ್ಸೋ ಕಾಯಿದೆಯಡಿ ಕೋರ್ಟ್‌ನಲ್ಲಿ ಸವಾಲು ಹಾಕುವ ಧೈರ್ಯ ತೋರಿ ಅಂತಹ ಸಂತ್ರಸ್ತರಿಗೆ ಒಂದು ಮಾದರಿಯಾಗುತ್ತಾರೆ.

ಅಲ್ಲಿಂದ ನಡೆಯುವುದೇ ಆ ಬಲಿಷ್ಠ ಸ್ವಾಮಿಯ ಕಡೆಯವರಿಂದ ರಾಜಕೀಯ ಕೈ ತಿರುಚಾಟ, ಗೂಂಡಾಗಿರಿ ಮತ್ತು ಸಾಕ್ಷಿಗಳ ಕಗ್ಗೊಲೆಗಳು ಎಂಥವರನ್ನೂ ಆ ಒತ್ತಡಕ್ಕೆ ಶರಣಾಗಿ ತರುಣಿಯ ಕಡೆಯವರು ಕೇಸ್ ಹಿಂತೆಗೆದುಕೊಳ್ಳುವ ಒತ್ತಡ ಏರ್ಪಡುತ್ತದೆ. ಆದರೆ ಛಲ ಬಿಡದ ವಕೀಲ, ಹಠ ಬಿಡದ ಸಂತ್ರಸ್ತ ಕುಟುಂಬ ನಾನಾ ಭಾವನಾತ್ಮಕ ಸಂಘರ್ಷ ಮಾಡಿ, ಜೀವ ಒತ್ತೆಯಿಟ್ಟು ಕೇಸ್ ಮುಂದುವರೆಸುತ್ತಾರೆ. ಅಲ್ಲಿ ಬರುವ ಆಪಾದಿತನ ಕಡೆಯವರ ವಕೀಲರನ್ನೂ ನ್ಯಾಯವಾಗಿ, ನೈಜವಾಗಿ ತೋರಿಸಿದ್ದಾರೆ ಎಂಬುದು ಶ್ಲಾಘನೀಯ. ಒಬ್ಬರನ್ನು ಎತ್ತಿ ಕಟ್ಟಲು ಇನ್ನೊಬ್ಬರನ್ನು ತುಳಿದಿಲ್ಲ. ಅಂತ್ಯದ ಸೀನುಗಳು ಮನದಲ್ಲಿ ನಿಲ್ಲುವಂತದ್ದು. ಇಂತಹ ಚಿತ್ರದಲ್ಲಿ ನಾಯಕಿ ಅವಶ್ಯಕವಿಲ್ಲ, ಹಾಗಾಗಿ ಯಾರೂ ಇಲ್ಲ. ಅಭಿನಯ, ನಿರ್ದೇಶನ ಚಿತ್ರೀಕರಣ ಎಲ್ಲವೂ ಸೊಗಸು. ಎಲ್ಲಿಯೂ ಬಿಗು ಕಳೆದುಕೊಳ್ಳದೇ ಮೂಡಿಬಂದಿದೆ ಸಿನಿಮಾ. ನಟ ಮನೋಜ್‌ ಬಾಜಪೇಯಿ ಬಗ್ಗೆ ನಾವಿಟ್ಟ ಭರವಸೆ ಸುಳ್ಳಾಗಲಿಲ್ಲ. ಸಿನಿಮಾಸಕ್ತರು ನೋಡಬೇಕಾದ ಚಿತ್ರವಿದು. ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleಸನ್ನಿ ಡಿಯೋಲ್‌ ‘ಗದ್ದಾರ್‌ 2’ ಟೀಸರ್‌ | ಅನಿಲ್‌ ಶರ್ಮಾ ನಿರ್ದೇಶನದ ಸಿನಿಮಾ ಆಗಸ್ಟ್‌ 11ಕ್ಕೆ
Next article‘ಟೋಬಿ’ ಮೋಷನ್‌ ಪೋಷ್ಟರ್‌ | ರಾಜ್‌ ಬಿ ಶೆಟ್ಟಿ ನಟನೆಯ ನೂತನ ಸಿನಿಮಾ

LEAVE A REPLY

Connect with

Please enter your comment!
Please enter your name here