ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಸೇನಾಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ಕತೆ ಹೇಳುವ ಸಿನಿಮಾ ‘ಅಮರನ್’. ಮುಕುಂದ್ ಅವರ ಲವ್ ಸ್ಟೋರಿ ಮತ್ತು ಶೌರ್ಯದ ಕತೆ ಹೇಳುವ ಎಮೋಷನಲ್, ಆಕ್ಷನ್ ಚಿತ್ರದಲ್ಲಿ ಶಿವಕಾರ್ತಿಕೇಯನ್ ಮತ್ತು ಸಾಯಿಪಲ್ಲವಿ ನಟಿಸಿದ್ದು, ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಹುತಾತ್ಮ ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ಕತೆ ಆಧರಿಸಿದ ತಮಿಳು ಸಿನಿಮಾ ‘ಅಮರನ್’. ತಮಿಳುನಾಡಿನ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಮುಕುಂದ್‌ಗೆ ಸೇನಾಪಡೆ ಸೇರಬೇಕೆಂಬ ಆಸೆ ಬಾಲ್ಯದಿಂದಲೇ ಇತ್ತು. ಇಬ್ಬರು ಸಹೋದರಿಯರು ಅಪ್ಪ ಅಮ್ಮನೊಂದಿಗೆ ಇರುವ ಮುಕುಂದ್‌ಗೆ ಕಾಲೇಜಿನಲ್ಲಿ ಇಂದೂ ರೆಬೆಕಾ ವರ್ಗೀಸ್ ಎಂಬ ಮಲಯಾಳಿ ಹುಡುಗಿಯ ಪರಿಚಯವಾಗುತ್ತದೆ. ಇವರ ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಕಾಲೇಜಿನಲ್ಲಿ ತಾನು ಪ್ರೀತಿಸುತ್ತಿರುವ ಹುಡುಗಿ ಇಂದೂವನ್ನು ತನ್ನ ಮನೆಯವರಿಗೆ ಪರಿಚಯಿಸುತ್ತಾನೆ ಮುಕುಂದ್. ಮಗ ಭಾರತೀಯ ಸೇನಾಪಡೆಗೆ ಸೇರುವ ನಿರ್ಧಾರವನ್ನು ಸದಾ ವಿರೋಧಿಸುತ್ತಿರುವ ಅಮ್ಮ,ಇಂದೂವಿನ ಮನೆಯವರ ಬಗ್ಗೆ ಎಲ್ಲ ವಿಚಾರಿಸಿದ ಮೇಲೆ, ನೋಡು ನನ್ನ ಮಗ ಸೇನೆ ಸೇರುತ್ತೇನೆ ಅಂತಿದ್ದಾನೆ. ಅವನು ಮದುವೆಯಾಗಿ ಹೋದ ಮೇಲೆ ನೀನು ಒಬ್ಬಳೇ ಇರಬೇಕಲ್ಲಾ, ಯೋಚಿಸು ಎಂದು ಹೇಳುತ್ತಾರೆ. ಮುಕುಂದ್ ಮನೆಯವರು ಇಂದೂವನ್ನು ತುಂಬಾ ಪ್ರೀತಿಯಿಂದಲೇ ತಮ್ಮ ಕುಟುಂಬಕ್ಕೆ ಬರ ಮಾಡಿಕೊಳ್ಳುತ್ತಾರೆ.
ಇತ್ತ ಇಂದೂ ತಿರುವನಂತಪುರಂನಲ್ಲಿರುವ ತನ್ನ ಮನೆಯಲ್ಲಿ ತಾನು ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದಾಗಿಯೂ, ಆತ ಸೇನೆ ಸೇರಲಿದ್ದಾನೆ ಎಂಬುದನ್ನು ಅಪ್ಪನಲ್ಲಿ ಹೇಳುತ್ತಾಳೆ. ಇದು ಕೇಳಿದೊಡನೇ ಸಿಡಿಮಿಡಿಗೊಂಡ ಆಕೆಯ ದೊಡ್ಡಣ್ಣ, ಇನ್ನು ಮುಂದೆ ನೀನು ಚೆನ್ನೈನಲ್ಲಿ ಕಾಲೇಜಿಗೆ ಹೋಗಬೇಡ ಅಂತಾನೆ. ಅವಳು ಪ್ರೀತಿಸಿದ್ದಾಳೆ ಅಂದ ಮಾತ್ರಕ್ಕೆ ಶಿಕ್ಷಣ ಯಾಕೆ ಮೊಟಕುಗೊಳಿಸಬೇಕು? ಎಂದು ಕೇಳುವ ಅಪ್ಪ, ಅವ ತಮಿಳನೋ, ಹಿಂದುವೋ ಆಗಿದ್ದಕ್ಕೆ ನಾನು ಇದನ್ನು ವಿರೋಧಿಸುತ್ತಿಲ್ಲ. ಅವ ಸೇನೆಗೆ ಸೇರುತ್ತಾನೆ ಅಂದಿದ್ದೀಯಲ್ಲಾ, ಅದಕ್ಕೆ ಬೇಡ ಅಂದಿದ್ದು. ನನ್ನ ಮಗಳನ್ನು ಸೇನಾಪಡೆಯಲ್ಲಿರುವವನಿಗೆ ಮದುವೆ ಮಾಡಿಕೊಡಲು ಇಷ್ಟ ಇಲ್ಲ ಅಂತಾರೆ.
ಮನೆಯವರ ವಿರೋಧದ ನಡುವೆಯೂ ಅವರ ಪ್ರೀತಿ ಮುಂದುವರಿಯುತ್ತದೆ. ಕಾಲೇಜು ಮುಗಿಸಿದ ಮುಕುಂದ್ ಸೇನಾ ಅರ್ಹತಾ ಪರೀಕ್ಷೆಯೂ ಪಾಸಾಗಿ ತರಬೇತಿಗಾಗಿ ಹೊರಟು ನಿಲ್ಲುತ್ತಾನೆ. ಯಾಕೆ ಹೋಗುತ್ತೀ? ನಾನು ಇಷ್ಟೊಂದು ಕಷ್ಟಪಟ್ಟು ಬೆಳೆಸಿದ್ದು ನೀನು ಆರ್ಮಿ ಸೇರುವುದಕ್ಕಾ? ಎಂದು ಅಮ್ಮ ಕಣ್ಣೀರಾಗುತ್ತಾರೆ. ತರಬೇತಿ ಮುಗಿದ ಮೇಲೆ ಕಾಶ್ಮೀರದಲ್ಲಿ ಪೋಸ್ಟಿಂಗ್. ಅವ ಕಾಶ್ಮೀರಕ್ಕೆ ಹೊರಟ ನಂತರ ಅವನಿಚ್ಛೆಯಂತೆ ಇಂದೂ, ಮುಕುಂದ್ ಮನೆಯಲ್ಲೇ ಇರಲು ಒಪ್ಪುತ್ತಾಳೆ. ಒಂದು ದಿನ ಆಕೆಯ ಅಪ್ಪ ಮತ್ತು ಅಣ್ಣ ಮುಕುಂದ್ ಮನೆಗೆ ಬಂದು ನಿಮ್ಮ ಮಗನಲ್ಲಿ ಹೇಳಿ ನಮ್ಮ ಮಗಳಿಂದ ದೂರವಿರುವುದಕ್ಕೆ ಹೇಳಿ. ಈ ಸಂಬಂಧಕ್ಕೆ ನಾವು ಒಪ್ಪಲ್ಲ. ಅವರಿಬ್ಬರನ್ನೂ ಭೇಟಿಯಾಗಲು ಬಿಡಬೇಡಿ ಎಂದು ಹೇಳಿದ ಹೊತ್ತಲ್ಲೇ ತನ್ನ ರೂಮಿನಿಂದ ಹೊರಗೆ ಬಂದ ಮಗಳನ್ನು ನೋಡಿ ಇಲ್ಲೇನು ಮಾಡುತ್ತೀ? ಎಂದು ಬೈದು ಊರಿಗೆ ಕರೆದುಕೊಂಡು ಬರುತ್ತಾರೆ.
ಯಾರೇ ವಿರೋಧಿಸಿದರೂ ನಾನು ಅವನನ್ನೇ ಮದುವೆಯಾಗುವುದು ಎಂದು ಇಂದೂ ಪಟ್ಟು ಹಿಡಿದಿರುತ್ತಾಳೆ. ನಿಮ್ಮ ಅಪ್ಪ ಒಪ್ಪದೇ ಮದುವೆಯಾಗಲಾರೆ. ಸಾಕು ಈ ಸಂಬಂಧ, ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಮುಕುಂದ್ ಹೇಳಿದರೂ ತಾನು ಹೇಗಾದರೂ ಮಾಡಿ ಮನೆಯವರನ್ನು ಒಪ್ಪಿಸುತ್ತೇನೆ ಅಂತಾಳೆ ಇಂದೂ.
ಒಂದು ಕ್ರಿಸ್ಮಸ್ ದಿನ ಮುಕುಂದ್, ಇಂದೂ ಮನೆಗೆ ಬಂದು ತಾನು ಆಕೆಯನ್ನು ತುಂಬಾ ಪ್ರೀತಿಸುತ್ತಿರುವುದಾಗಿ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಇಂದೂವಿನ ಅಪ್ಪ, ನಾನು ಕೆಲವು ಕಾಲ ಸೇನಾ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದೆ. ಅಲ್ಲಿ ನಾನು ನೋಡಿದ್ದು ಸಾವು -ನೋವುಗಳನ್ನೇ. ನನ್ನ ಮಗಳು ಖುಷಿ ಖುಷಿಯಾಗಿರುವ ಹುಡುಗಿ. ಹಾಗಾಗಿ ಮದುವೆಗೆ ಒಪ್ಪಲ್ಲ ಅಂದಿದ್ದು. ಆದರೆ ನಿನ್ನ ಮಾತು ನನ್ನ ಅಭಿಪ್ರಾಯಗಳನ್ನು ಬದಲಿಸಿದೆ ಎಂದು ಮದುವೆಗೆ ಒಪ್ಪುತ್ತಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮಕುಂದ್- ಇಂದೂ ಮದುವೆ ನೆರವೇರುತ್ತದೆ.
ಮುಕುಂದ್ ಹಂತ ಹಂತವಾಗಿ ಮೇಲ್ದರ್ಜೆಗೆ ಏರುತ್ತಾ ಹೋಗುತ್ತಾನೆ. ಅವರಿಗೆ ಮಗಳೂ ಹುಟ್ಟುತ್ತಾಳೆ. ಆತ ಸೇನೆಯಲ್ಲಿ ಕರ್ತವ್ಯ ನಿರತನಾಗಿದ್ದರೆ ಊರಲ್ಲಿ ಇಂದೂ ಒಬ್ಬಳೇ ಎಲ್ಲವನ್ನೂ ಸಂಭಾಳಿಸಿ ಜೀವನ ಸಾಗಿಸುತ್ತಾಳೆ. ರಜೆಯಿದ್ದಾಗ ಮಾತ್ರ ಪತಿ-ಪತ್ನಿಯರ ಭೇಟಿ.
ದೇಶದ ಗಡಿಭಾಗದಲ್ಲಿ ಮುಕುಂದ್ ಉಗ್ರರನ್ನು ಸದೆಬಡಿಯುತ್ತಾ, ಪ್ರಮುಖ ಕಾರ್ಯಾಚರಣೆಗಳ ಮುಂದಾಳತ್ವವನ್ನೂ ವಹಿಸಿರುತ್ತಾನೆ. ಈತನ ನಾಯಕತ್ವದಲ್ಲಿ ಹಲವು ಆಪರೇಷನ್‌ಗಳು ಯಶಸ್ವಿಯಾಗಿರುತ್ತವೆ. ಇದರ ನಡುವೆ ತನ್ನ ತಂಡದ ಸದಸ್ಯರಿಗೆ ತರಬೇತಿ ನೀಡುವ ವೇಳೆ ಯೋಧನೊಬ್ಬನ ಅಚಾತುರ್ಯದಿಂದ ಗುಂಡೊಂದು ಮುಕುಂದ್ ಬೆನ್ನಿಗೆ ತಗಲುತ್ತದೆ. ಅದರ ಸರ್ಜರಿ ಸೇನಾ ಆಸ್ಪತ್ರೆಯಲ್ಲಿ ಬೇಡ ತನ್ನನ್ನು ಕೇರಳಕ್ಕೆ ಶಿಫ್ಟ್ ಮಾಡಿ ಅಂತಾನೆ. ಅಲ್ಲಿ ಆತನ ಮಾವನೇ ಸರ್ಜರಿ ನಡೆಸಿರುತ್ತಾರೆ. ಗುಣಮುಖನಾದ ನಂತರ ಇಂದೂ ಮತ್ತು ಮಗಳು ಆರ್ಶಿಯನ್ನು ಭೇಟಿ ಮಾಡಿದ ಮುಕುಂದ್, ಯಾವುದೇ ಸಂದರ್ಭ ಬಂದರೂ ನೀನು ಅಳಬಾರದು. ಧೈರ್ಯದಿಂದರಬೇಕು ಎಂದು ಇಂದೂಗೆ ಹೇಳಿ ಕರ್ತವ್ಯಕ್ಕೆ ಮರಳುತ್ತಾನೆ.
ಸೇನಾಪಡೆಯ ಮೇಲೆ ಆಗಾಗ ಉಗ್ರರ ದಾಳಿ, ಉಗ್ರರನ್ನು ಸದೆಬಡಿಯುವ ಸೇನಾ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಅದೊಂದು ದೊಡ್ಡ ಕಾರ್ಯಾಚರಣೆ, ಅದು ಅಪಾಯದಿಂದ ಕೂಡಿದ್ದು ಎಂದು ಹಿರಿಯ ಅಧಿಕಾರಿ ಮೊದಲೇ ಹೇಳಿದ್ದರು. ಆದರೆ ಮುಕುಂದ್, ಯಾವುದೇ ಬೆಲೆ ತೆತ್ತು ಮೋಸ್ಟ್ ವಾಂಟೆಂಡ್ ಉಗ್ರನನ್ನು ಮಟ್ಟ ಹಾಕುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದ.
ಆ ಕಾರ್ಯಾಚರಣೆಯಲ್ಲಿ ಉಗ್ರನನ್ನು ಸದೆ ಬಡಿದ ಮುಕುಂದ್, ಹುತಾತ್ಮನಾಗುತ್ತಾನೆ. ಮುಕುಂದ್ ಇನ್ನಿಲ್ಲ ಎಂದು ಅಣ್ಣ ಬಂದು ಹೇಳಿದಾಗ ಕಣ್ಣೀರಾಗುವ ಇಂದೂ, ಅಂತ್ಯ ಸಂಸ್ಕಾರದ ಹೊತ್ತಲ್ಲೂ ಅಳದೇ ನಿಂತಿರುತ್ತಾಳೆ. ನೀನು ಅಳಬಾರದು ಎಂದು ಗಂಡ ಹೇಳಿದ್ದ ಮಾತನ್ನು ಇಂದೂ ಅಕ್ಷರಶಃ ಪಾಲಿಸಿರುತ್ತಾಳೆ. ಆತ ಜತೆಗಿಲ್ಲದೇ ಇದ್ದರೂ ಆತನ ನೆನಪಿನೊಂದಿಗೆ ಆಕೆ ಬದುಕುತ್ತಾಳೆ ಎಂಬಲ್ಲಿ ಸಿನಿಮಾ ಕೊನೆಯಾಗುತ್ತದೆ.
ಮುಕುಂದ್ ವರದರಾಜನ್ ಆಗಿ ಶಿವಕಾರ್ತಿಕೇಯನ್ ನಟನೆ ಅದ್ಭುತ. ಕಾಲೇಜು ಹುಡುಗನಿಂದ ಆರ್ಮಿ ಆಫೀಸರ್ ಆಗುವವರೆಗೆ ಅವರ ರೂಪಾಂತರ ಮೆಚ್ಚುವಂಥದ್ದು. ಇಂದೂ ಆಗಿ ಸಾಯಿ ಪಲ್ಲವಿ ಚಂದ ನಟಿಸಿದ್ದಾರೆ. ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ. ಅದೇ ರೀತಿ ಮುಕುಂದ್ ಅವರ ಅಮ್ಮನ ಪಾತ್ರದಲ್ಲಿ ಗೀತಾ ಕೈಲಾಸಂ ನಟನೆ ಮೆಚ್ಚುವಂಥದ್ದು. ಇನ್ನುಳಿದಂತೆ ಕರ್ನಲ್ ಅಮಿತ್ ಸಿಂಗ್ ದಬಾಸ್ ಪಾತ್ರದಲ್ಲಿ ರಾಹುಲ್ ಬೋಸ್, ಸಿಪಾಯಿ ವಿಕ್ರಮ್ ಸಿಂಗ್ ಪಾತ್ರದಲ್ಲಿ ಭುವನ್ ಆರೋರಾ ಗಮನ ಸೆಳೆಯುತ್ತಾರೆ.
ರಾಜ್ ಕುಮಾರ್ ಪೆರಿಯಸ್ವಾಮಿ ನಿರ್ದೇಶನ, ಕಮಲ್ ಹಾಸನ್, ಆರ್.ಮಹೇಂದ್ರನ್, ವಿವೇಕ್ ಕೃಷ್ಣಾನಿ ನಿರ್ಮಾಣದ ‘ಅಮರನ್’ ಸಿನಿಮಾದ ಮೊದಲಾರ್ಧ ಪ್ರೀತಿ -ಪ್ರೇಮಕ್ಕೆ ಮೀಸಲಾದರೆ ದ್ವಿತೀಯಾರ್ಧದಲ್ಲಿ ಸೇನಾಪಡೆಯ ಸಾಹಸಮಯ ಕಾರ್ಯಾಚರಣೆಗಳನ್ನು ಕಾಣಬಹುದು. ಕಾಶ್ಮೀರದಲ್ಲಿ ಉಗ್ರರ ದಾಳಿ- ಸೇನಾ ಪ್ರತಿದಾಳಿಯ ಚಿತ್ರೀಕರಣ, ಸಾಹಸಮಯ ದೃಶ್ಯಗಳು ಸಹಜವೆಂಬಂತೆ ಮೂಡಿ ಬಂದಿದೆ. ಇಂದೂ ವಿಮಾನ ಪ್ರಯಾಣ ವೇಳೆ ಮುಕುಂದ್‌ನ ಶೌರ್ಯದ ಕತೆಯನ್ನುಹೇಳುತ್ತಾ ಫ್ಲಾಶ್ ಬ್ಯಾಕ್‌ಗೆ ಕರೆದೊಯ್ಯುವ ನಿರೂಪಣೆ ಚಿತ್ರದ ಪ್ಲಸ್ ಪಾಯಿಂಟ್. ಥಿಯೇಟರ್‌ಗಳಲ್ಲಿ ಹೆಚ್ಚು ಗಳಿಕೆ ಗಳಿಸಿದ್ದ ಅಮರನ್ ಈಗ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.