ಸುಕುಮಾರ್ ನಿರ್ದೇಶನದ ‘ಪುಷ್ಪ 2’ ತೆಲುಗು ಸಿನಿಮಾ ದಾಖಲೆಯ ವಹಿವಾಟು ನಡೆಸಿದೆ. ಚಿತ್ರದ ಜಾಗತಿಕ ವಹಿವಾಟು ಎರಡನೇ ದಿನಕ್ಕೆ 417 ಕೋಟಿ ರೂಪಾಯಿ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ. ಡಬ್ಬಿಂಗ್ ಗುಣಮಟ್ಟ ಚೆನ್ನಾಗಿದ್ದು, ಸಿನಿಪ್ರಿಯರು ತಮ್ಮ ಭಾಷೆಗಳಲ್ಲೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದು ಸಿನಿಮಾದ ಗಳಿಕೆಗೆ ವರವಾಗಿದೆ.
ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2 ದಿ ರೂಲ್’ ಬಾಕ್ಸ್ ಆಫೀಸ್ನಲ್ಲಿ ನಾಗಾಲೋಟ ಮುಂದುವರಿಸುತ್ತಿದೆ. ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಮೊದಲ ದಿನವೇ ಭಾರತದಾದ್ಯಂತ 175 ಕೋಟಿ ಬಾಚಿಕೊಂಡಿದೆ. ಒಟ್ಟಾರೆ ಜಾಗತಿಕ ವಹಿವಾಟು 280 ಕೋಟಿ ರೂಪಾಯಿ. ಸಿನಿಮಾಗಳ ಗಳಿಕೆಯ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ ಎರಡನೇ ದಿನ ‘ಪುಷ್ಪ2’ ಸಿನಿಮಾ 90.1 ಕೋಟಿ ಗಳಿಸಿದ್ದು, ಇಲ್ಲಿವರೆಗೆ 265 ಕೋಟಿ ಗಳಿಸಿ (ಭಾರತದಲ್ಲಿ) ದಾಖಲೆ ಬರೆದಿದೆ.
ಎರಡನೇ ದಿನ ತೆಲುಗು ಭಾಷೆಯಲ್ಲಿ ಪುಷ್ಪ 27.1 ಕೋಟಿ ಗಳಿಸಿದರೆ ಹಿಂದಿಯಲ್ಲಿ 55 ಕೋಟಿ, ತಮಿಳಿನಲ್ಲಿ 5.5 ಕೋಟಿ, ಮಲಯಾಳಂನಲ್ಲಿ 2.9 ಕೋಟಿ ಮತ್ತು ಕನ್ನಡದಲ್ಲಿ 60 ಲಕ್ಷ ಗಳಿಸಿದೆ. ಒಟ್ಟಾರೆ ಗಳಿಕೆಯಲ್ಲಿ ತೆಲುಗು ಭಾಷೆಗಿಂತ ಹಿಂದಿಯಲ್ಲೇ ‘ಪುಷ್ಪ 2’ ಹೆಚ್ಚು ಹಣ ಬಾಚಿಕೊಂಡಿದೆ. ಹಿಂದಿ ಆವೃತ್ತಿಯ ಪುಷ್ಪ 125.3 ಕೋಟಿ ಗಳಿಸಿದ್ದು ತೆಲುಗಿನಲ್ಲಿ 118.05 ಕೋಟಿ ಗಳಿಸಿದೆ. ಸಿನಿಮಾ ಉದ್ಯಮ ವಿಶ್ಲೇಷಕರಾದ ಮನೋಬಾಲ ವಿಜಯಬಾಲನ್ ಅವರ ಪ್ರಕಾರ ಜಾಗತಿಕ ಮಟ್ಟದಲ್ಲಿ ‘ಪುಷ್ಪ2’ ಸಿನಿಮಾ 417.5 ಕೋಟಿ ಗಳಿಸಿದೆ.ಅಂಕಿ ಅಂಶಗಳ ಪ್ರಕಾರ ‘ಪುಷ್ಪ2’ ಮೊದಲನೇ ದಿನ 282.9 ಗಳಿಸಿದ್ದು, ಎರಡನೇ ದಿನ 134.6 ಕೋಟಿ ಗಳಿಸಿದೆ. ಅಂದ ಹಾಗೆ ಎರಡು ದಿನಗಳಲ್ಲಿ ಭರ್ಜರಿ ಗಳಿಕೆ ಗಳಿಸಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರದ್ದು.
ಎರಡನೇ ದಿನ ಸಿನಿಮಾ ನೋಡಿದವರ ಸಂಖ್ಯೆ ಜಾಸ್ತಿ ಇದೆ. ಪ್ರೇಕ್ಷಕರ ಸಂಖ್ಯೆ ಶೇ. 53 ಇದ್ದು, ರಾತ್ರಿ ಶೋಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೈದರಾಬಾದ್ ನಲ್ಲಿ 1009 ಶೋಗಳಿದ್ದು ಪ್ರೇಕ್ಷಕರ ಸಂಖ್ಯೆ ಶೇ. 65 ಆಗಿದೆ. ಬೆಂಗಳೂರಿನಲ್ಲಿ 842 ಶೋಗಳಲ್ಲಿ ಪ್ರೇಕ್ಷಕರ ಸಂಖ್ಯೆ ಶೇ 48.75 ಇದೆ. ಹಿಂದಿ ಆವೃತ್ತಿ ವೀಕ್ಷಕರ ಸಂಖ್ಯೆ ಶುಕ್ರವಾರ ಶೇ 51.65 ಆಗಿತ್ತು. ಮುಂಬೈನಲ್ಲಿ 1523 ಶೋಗಳಿದ್ದು ಪ್ರೇಕ್ಷಕರ ಸಂಖ್ಯೆ ಶೇ 59.50 ಆಗಿದೆ. ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.