2006ರಲ್ಲಿ ‘ಕಲಕ್ಕಾ ಪೋವದು ಯಾರು?’ ಎಂಬ ರಿಯಾಲಿಟಿ ಶೋ ಗೆದ್ದ ಶಿವಕಾರ್ತಿಕೇಯನ್, ಕಾರ್ಯಕ್ರಮ ನಿರೂಪಕರಾಗಿ ಕಿರುತೆರೆಗೆ ಬಂದಿದ್ದರು. ಆನಂತರ ಸಿನಿಮಾರಂಗ ಪ್ರವೇಶಿಸಿದ ಅವರು ಕಾಮಿಡಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಅಮರನ್’ ಸಿನಿಮಾದಲ್ಲಿ ಮೇಜರ್ ಮುಕಂದ್ ವರದರಾಜನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಕಾರ್ತಿಕೇಯನ್ ಇಲ್ಲಿವರೆಗೆ 25 ಸಿನಿಮಾಗಳಲ್ಲಿ ನಟಿಸಿದ್ದು ಏಳು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಕತೆ ಆಧರಿಸಿದ ‘ಅಮರನ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನಾಗಾಲೋಟ ಮುಂದುವರಿಸುತ್ತಿದ್ದಂತೆ ನಟ ಶಿವಕಾರ್ತಿಕೇಯನ್ ಅವರ ಯಶಸ್ಸಿನ ಗ್ರಾಫ್ ಮೇಲೇರತೊಡಗಿದೆ. ರಿಯಾಲಿಟಿ ಶೋ ಗೆದ್ದು, ಕಾರ್ಯಕ್ರಮ ನಿರೂಪಕರಾಗಿ ಕಿರುತೆರೆಯಲ್ಲಿ ಹೆಸರು ಗಳಿಸಿದ್ದ ಶಿವಕಾರ್ತಿಕೇಯನ್ ಸಿನಿಮಾ ರಂಗದಲ್ಲಿ ನಿಧಾನವಾಗಿಯೇ ಸ್ಟಾರ್ ಪಟ್ಟಕ್ಕೆ ಏರಿದವರು. ಶಿವಕಾರ್ತಿಕೇಯನ್ ಅವರ ವೃತ್ತಿ ಬದುಕಿನ ಅತ್ಯಂತ ಯಶಸ್ವಿ ಸಿನಿಮಾ ‘ಅಮರನ್’. ಕಿರುತೆರೆಯಿಂದಲೇ ಮನೆ ಮಾತಾಗಿದ್ದ ಶಿವಕಾರ್ತಿಕೇಯನ್ ಮಿಮಿಕ್ರಿ, ಕಾಮಿಡಿ ಮಾಡುತ್ತಾ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿ ನಾಯಕ ನಟರಾದವರು.
ಅಂದಹಾಗೆ ಇವರು ಸಿನಿಮಾರಂಗಕ್ಕೆ ಬಂದಿದ್ದು ಆಕಸ್ಮಿಕ. ಅಪ್ಪ ಪೊಲೀಸ್ ಆಫೀಸರ್ ಆಗಿದ್ದವರು. ಅಪ್ಪನಂತೆಯೇ ಪೊಲೀಸ್ ಆಫೀಸರ್ ಆಗುವ ಬಯಕೆ ಶಿವಕಾರ್ತಿಕೇಯನ್ಗೆ ಇತ್ತು. ಆದರೆ ಅಪ್ಪ ತೀರಿದ ನಂತರ ಕುಟುಂಬದ ಜವಾಬ್ದಾರಿ ಇವರ ಹೆಗಲಿಗೆ ಬಂದಿತು. ತಿರುಚ್ಚಿಯಲ್ಲಿ ಇಂಜಿನಿಯರಿಂಗ್ ಓದಿದ್ದ ಇವರು ಕಾಲೇಜು ದಿನಗಳಲ್ಲಿ ಮಿಮಿಕ್ರಿ, ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಶಿವ, ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಗಳಿಸಿದ್ದಾರೆ.
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ | ವರ್ಷಗಳ ಹಿಂದೆ ಟೀವಿಯಲ್ಲಿ ಕಾಮಿಡಿ ಶೋ ನಿರೂಪಣೆ ಮಾಡುತ್ತಿದ್ದ ಶಿವಕಾರ್ತಿಕೇಯನ್, ಈಗ ತಮಿಳು ಚಿತ್ರರಂಗದ ಯಶಸ್ವೀ ನಟ. ಅವರು ಈ ಹಂತಕ್ಕೆ ಬೆಳೆದಿದ್ದು ಸುಲಭವೇನೂ ಆಗಿರಲಿಲ್ಲ. 2006ರಲ್ಲಿ ‘ಕಲಕ್ಕಾ ಪೋವದು ಯಾರು?’ ಎಂಬ ರಿಯಾಲಿಟಿ ಶೋ ಗೆದ್ದ ಶಿವಕಾರ್ತಿಕೇಯನ್, 2009ರಲ್ಲಿ ಕಾರ್ಯಕ್ರಮ ನಿರೂಪಕರಾಗಿ ಕಿರುತೆರೆ ಪ್ರವೇಶಿಸಿದರು. 2012ರಲ್ಲಿ ಪಾಂಡಿರಾಜ್ ನಿರ್ದೇಶನದ ‘ಮರೀನಾ’ ಸಿನಿಮಾದಲ್ಲಿ ನಟಿಸಿದ ಶಿವ, ಮೊದಲ ಚಿತ್ರದಲ್ಲೇ ತಮಿಳುನಾಡು ರಾಜ್ಯ ಫಿಲ್ಮ್ ಅವಾರ್ಡ್ ಗೆದ್ದಿದ್ದರು. ಆನಂತರ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇವರು ನಟಿಸಿದ ‘ಕೇಡಿ ಬಿಲ್ಲಾ ಕಿಲಾಡಿ ರಂಗ’, ‘ವರುತ್ತಪಡಾತ್ತ ವಾಲಿಬರ್ ಸಂಘಂ’, ‘ಮಾನ್ ಕರಾಟೆ’, ‘ರಜಿನಿ ಮುರುಗನ್’ ಕಾಮಿಡಿ ಚಿತ್ರಗಳಾಗಿದ್ದವು. ಮನೆಮಂದಿಯೆಲ್ಲ ಜತೆಯಾಗಿ ಕುಳಿತು ನೋಡುವಂಥ, ಮಕ್ಕಳು ಇಷ್ಟಪಡುವಂಥ ಚಿತ್ರಗಳನ್ನೇ ಆಯ್ಕೆ ಮಾಡುತ್ತಿದ್ದ ಕಾರಣ ಶಿವಕಾರ್ತಿಕೇಯನ್ ಬೇಗನೆ ಜನರ ಮನಸ್ಸು ಗೆದ್ದುಬಿಟ್ಟರು. ಇವರು ಕನ್ನಡದಲ್ಲಿ ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2018ರಲ್ಲಿ ಎಸ್ ಕೆ ಪ್ರೊಡೆಕ್ಷನ್ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದ ಶಿವಕಾರ್ತಿಕೇಯನ್ ಇಲ್ಲಿಯವರೆಗೆ ಏಳು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಅವರೇ ನಾಯಕನಾಗಿದ್ದ ‘ಡಾಕ್ಟರ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ‘ಕೊಟ್ಟುಕ್ಕಾಲಿ’ ಎಂಬ ಸಿನಿಮಾ ಭಾರೀ ಪ್ರಶಂಸೆಗೊಳಗಾಗಿತ್ತು. ನಟನೆ ಜತೆ ಡಬ್ಬಿಂಗ್, ಸಿನಿಮಾ ಸಾಹಿತ್ಯ, ಹಿನ್ನೆಲೆ ಗಾಯನದಲ್ಲೂ ಸೈ ಎನಿಸಿದ ಶಿವ ಕಾರ್ತಿಕೇಯನ್ ಇಲ್ಲಿವರೆಗೆ 25 ಸಿನಿಮಾಗಳಲ್ಲಿ ನಟಿಸಿದ್ದಾರೆ.