ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರನಡೆದಿದ್ದಾರೆ. ಮನೆಯೊಳಗಿನ ಚಟುವಟಿಕೆಗಳಲ್ಲಿ ಹೆಚ್ಚು Active ಆಗಿರಲಿಲ್ಲ ಎನ್ನುವುದು ಇದಕ್ಕೆ ಕಾರಣ. ಆರೋಗ್ಯ ಸಮಸ್ಯೆ ಕಾಡಿದ್ದರಿಂದ ತಮಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ ಸ್ನೇಕ್ ಶ್ಯಾಮ್.
ನಿನ್ನೆ ಮತ್ತು ಮೊನ್ನೆ Bigg Boss ವೀಕೆಂಡ್ ಎಪಿಸೋಡ್‌ನಲ್ಲಿ ನಿರೂಪಕ ಸುದೀಪ್ ಅವರ ‘ಕಿಚ್ಚನ ಪಂಚಾಯಿತಿ’ ನಡೆಯಿತು. ನಿನ್ನೆಯ ‘ಸೂಪರ್ ಸಂಡೆ ಸುದೀಪ್ ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆಗೆ ಸುದೀಪ್ ಮಾತನಾಡಿದರು. ತಮಾಷೆಯಾಗಿ ಮಾತಾಡುತ್ತ, ನಗುನಗಿಸುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದರು. ನಿನ್ನೆಯ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು, ಡ್ರೋಣ್ ಪ್ರತಾಪ್ ಇದ್ದರು. ಇವರಲ್ಲಿ ಮೊದಲು ಸೇಫ್ ಆಗಿದ್ದು ನೀತು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್ ಶ್ಯಾಮ್ ಅವರು. ಅವರಲ್ಲಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್‌ನ ಮೊದಲ ಎವಿಕ್ಟೆಡ್ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.
ಐವತ್ತು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಸ್ನೇಕ್ ಶ್ಯಾಮ್ ಅವರದ್ದು. Bigg Boss ಸ್ಪರ್ಧೆಯಲ್ಲಿ ವೀಕ್ಷಕರು ಅವರನ್ನು ಹೋಲ್ಡ್‌ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. ‘ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ’ ಎಂದೂ ಆ ಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ. ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ Bigg Boss ಮನೆಯಿಂದ ಹೊರಗೆ ಬಿದ್ದಿದ್ದಾರೆ.
‘ನನಗೆ ಇಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಹೆಲ್ತ್ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಸ್ನೇಕ್ ಶ್ಯಾಮ್ ಅಭಿಪ್ರಾಯ ಹಂಚಿಕೊಂಡರು. ಶ್ಯಾಮ್ ಅವರನ್ನು ಬೀಳ್ಕೊಟ್ಟ ಉಳಿದ ಸ್ಪರ್ಧಿಗಳು ಒಂದು ವಾರದ ಮಟ್ಟಿಗೆ ಸೇಫ್ ಆಗಿದ್ದಾರೆ. ಮುಂದಿನ ವಾರ ಯಾರು ಮನೆಯಿಂದ ಹೊರಹೋಗಬಹುದು ಎನ್ನುವ ಆತಂಕವಂತೂ ಎಲ್ಲರಲ್ಲೂ ಇದ್ದೇ ಇದೆ.