ಕೋವಿಡ್‌ನಿಂದ ಕಳೆಗುಂದಿದ್ದ ಜಾಗತಿಕ ಸಿನಿಮಾರಂಗದಲ್ಲಿ ಬಾಂಡ್‌ ಸಿನಿಮಾ ಸಂಚಲನ ಸೃಷ್ಟಿಸಿದೆ. ಡೇನಿಯಲ್ ಕ್ರೆಗ್‌ ನಟನೆಯ ‘ನೋ ಟೈಮ್ ಟು ಡೈ’ ಚಿತ್ರವನ್ನು ಭಾರತೀಯರೂ ಮೆಚ್ಚಿಕೊಂಡಿದ್ದಾರೆ.

ಕೋವಿಡ್‌ನಿಂದಾಗಿ ಬಸವಳಿದಿದ್ದ ಜಾಗತಿಕ ಚಿತ್ರೋದ್ಯಮದಲ್ಲಿ ಬಾಂಡ್ ಸಿನಿಮಾ ಸಂಚಲನ ಸೃಷ್ಠಿಸಿದೆ. ಲೇಟೆಸ್ಟ್ ಬಾಂಡ್ ಸಿನಿಮಾ ‘ನೋ ಟೈಮ್ ಟು ಡೈ’ ಆರಂಭದ ವಾರಾಂತ್ಯದ ಕಲೆಕ್ಷನ್ ಭರ್ಜರಿಯಾಗಿದೆ. ಉತ್ತಮ ಓಪನಿಂಗ್‌ನೊಂದಿಗೆ ಜಾಗತಿಕ ಗಲ್ಲಾಪೆಟ್ಟಿಗೆ ತುಂಬಿಸುತ್ತಿದೆ. ಮೂಲಗಳ ಪ್ರಕಾರ ಈ ಚಲನಚಿತ್ರವು ಉತ್ತರ ಅಮೆರಿಕಾದ ಹೊರಗೆ 113 ಮಿಲಿಯನ್ ಡಾಲರ್ ಗಳಿಸುವ ನಿರೀಕ್ಷೆಯಿದೆ. ಪ್ರಸ್ತುತ ವಾತಾವರಣದಲ್ಲಿ ಕೋವಿಡ್ ಸಾಂಕ್ರಾಮಿಕವು ಸಿನಿ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ. ಇಂಥ ಸಮಯದಲ್ಲಿ ಈ ಚಲನಚಿತ್ರ ಯುಕೆ, ಭಾರತ ಮತ್ತು ಇತರ ಪ್ರದೇಶಗಳಲ್ಲಿ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉತ್ತರ ಅಮೆರಿಕಾದಲ್ಲಿ ಇದು ಅಕ್ಟೋಬರ್ 8ರಂದು ಬಿಡುಗಡೆಯಾಗಲಿದೆ. ಚಲನಚಿತ್ರ ನಿರ್ಮಾಣ ಮತ್ತು ಬಿಡುಗಡೆಗೆ ಇದ್ದ ಅನೇಕ ಅಡೆತಡೆಗಳನ್ನು ನಿವಾರಿಸಿಕೊಂಡು ಬಿಡುಗಡೆಯಾಗಿದೆ ಬಾಂಡ್ ಸಿನಿಮಾ.

ಪಿಯರ್ಸ್ ಬ್ರಾಸ್ನನ್ ನಂತರ ಬೇರೆ ಯಾರನ್ನೂ ಜೇಮ್ಸ್ ಬಾಂಡ್ ರೂಪದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂದು ಕೆಲವು ಹಳೆಯ ಸಿನಿಪ್ರೇಮಿಗಳು ಹೇಳುತ್ತಿದ್ದರೂ ಈ ಲೇಟೆಸ್ಟ್ ಬಾಂಡ್ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಕೇವಲ ಹಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಸುದ್ದಿಯಾಗಿದೆ. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾ ನೋಡುತ್ತಿದ್ದಾರೆ. ಯುವನಟ, ಆಕ್ಷನ್ ಹೀರೋ ಟೈಗರ್ ಶ್ರಾಫ್ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ. ಇನ್ನು ನಿರ್ಮಾಪಕ ಸಜಿದ್ ನಾಡಿಯಾದ್ ವಾಲಾ ಇಡೀ ಒಂದು ಚಿತ್ರಮಂದಿರದ ಟಿಕೇಟುಗಳನ್ನೇ ಬುಕ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಬಾಲಿವುಡ್‌ನಲ್ಲೂ ಹವಾ ಸೃಷ್ಠಿಸಿದೆ ಚಿತ್ರ. ಈ ಚಿತ್ರಕ್ಕೂ ಮುನ್ನ ನಟ ಡೇನಿಯಲ್ ಕ್ರೆಗ್, “ಮತ್ತೆ ಅದೇ ರೀತಿಯ ಸ್ಪೈ ಪಾತ್ರ ಮಾಡುವುದಕ್ಕಿಂತ ನನ್ನ ಮಣಿಕಟ್ಟನ್ನು ಕೊಯ್ದುಕೊಂಡು ಸತ್ತು ಹೋಗುತ್ತೇನೆ” ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಈಗ ಸಿನಿಮಾ ನೋಡಿದವರು ಕೊಡ್ತಾ ಇರೋ ಪ್ರತಿಕ್ರಿಯೆ ನೋಡಿ ಅವರೂ ಬಹುಶಃ ತಮ್ಮ ಮಾತನ್ನು ವಾಪಸ್ ಪಡೆಯಬಹುದು. ಬಹಳ ದಿನಗಳ ನಂತರ ಬಂದಿರುವ ಬಾಂಡ್ ಚಿತ್ರವನ್ನು ನೀವೂ ನೋಡಿ ಆನಂದಿಸಿ. ನೋ ಟೈಮ್ ಟು ವಾಚ್ ಎನ್ನಬೇಡಿ.

Previous articleಸ್ಯಾಂಡಲ್ ವುಡ್ ‘ಬಿಸಿಎಲ್’ ಸೀಸನ್ 2; ಹುಡುಗ -ಹುಡುಗಿಯರ ಕ್ರಿಕೆಟ್
Next articleವೆಲ್ ಪ್ರೆಸೆಂಟೆಡ್ ‘ಬ್ಯಾಡ್ ಮ್ಯಾನರ್ಸ್’; ಅಬಿಷೇಕ್‌ಗೆ ಸೂರಿ ಗಿಫ್ಟ್

LEAVE A REPLY

Connect with

Please enter your comment!
Please enter your name here