ಈ ವಾರ ರಿಲೀಸ್‌ ಆಗಿರುವ ರಾಗಿಣಿ ದ್ವಿವೇದಿ ನಟನೆಯ ‘ಶೀಲಾ’, ಕೋಮಲ್‌ ಅವರ ‘ನಮೋ ಭೂತಾತ್ಮ2’ ಪ್ರಮುಖವಾಗಿ ಗಮನ ಸೆಳೆದ ಕನ್ನಡ ಚಿತ್ರಗಳು. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ತೆಲುಗು ಚಿತ್ರದ ಮೂಲಕ ನಟಿ ಅನುಷ್ಕಾ ಶರ್ಮ ತೆರೆಗೆ ಮರಳುತ್ತಿದ್ದಾರೆ.

ನಮೋ ಭೂತಾತ್ಮ 2 | ಕನ್ನಡ | ಇದೊಂದು ಹಾರರ್ ಕಾಮಿಡಿ ಸಿನಿಮಾ. ಕೋಮಲ್‌ ಅಭಿನಯದ 2014ರ ‘ನಮೋ ಭೂತಾತ್ಮ’ ಸಿನಿಮಾದ ಮುಂದುವರೆದ ಭಾಗ. ಈ ಚಿತ್ರ ತಮಿಳಿನ ‘ಯಾಮಿರುಕ್ಕ ಭಯಮೇ’ ಚಿತ್ರದ ರಿಮೇಕ್‌. ಈಗ ಈ ಚಿತ್ರದ ಸಿಕ್ವೆಲ್ ಬಿಡುಗಡೆಗೆ ಸಿದ್ದವಾಗಿದೆ. ಕೊರಿಯೋಗ್ರಾಫರ್‌ ಮುರಳಿ ಮಾಸ್ಟರ್‌ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕೋಮಲ್‌ಗೆ ನಾಯಕಿಯಾಗಿ ಲೇಖಚಂದ್ರ ನಟಿಸಿದ್ದಾರೆ. ಮಿಮಿಕ್ರಿ ಗೋಪಿ, ಮಹಾಂತೇಶ್‌, ಗೋವಿಂದೇ ಗೌಡ, ರುದ್ರೇಶ್‌ ಮೋನಿಕಾ ಪ್ರಮುಖ ಪಾತ್ರಧಾರಿಗಳು.

ಶೀಲಾ | ಕನ್ನಡ | ನಟಿ ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕ್ರೈಮ್‌ ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾ. ಈಗಾಗಲೇ ಚಿತ್ರದ ಮಲಯಾಳಂ ಅವತರಣಿಕೆ ತೆರೆಕಂಡಿದ್ದು, ಇಂದು ಕನ್ನಡ ಅವತರಣಿಕೆ ಬಿಡುಗಡೆಯಾಗಿದೆ. ಮಹಿಳಾ ಪ್ರಧಾನ ಚಿತ್ರ. ಹೆಣ್ಣುಮಕ್ಕಳು ದಿನನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಇಲ್ಲಿ ಪ್ರಸ್ತಾಪವಾಗುತ್ತವೆ. ಬಾಲು ನಾರಾಯಣ್‌ ನಿರ್ದೇಶಿಸಿದ್ದು, ಡಿ ಎಂ ಪಿಳೈ ಚಿತ್ರ ನಿರ್ಮಿಸಿದ್ದಾರೆ. ಅವಿನಾಶ್‌, ಶೋಭರಾಜ್‌, ಚಿತ್ರಾ ಶೆಣೈ, ಮಹೇಶ್‌ ನಾಯರ್‌, ಶ್ರೀಪತಿ, ರಿಯಾಜ್‌ ಖಾನ್‌, ಅಬೆ ಡೇವಿಡ್‌, ಆರತಿ ಗೋಪಾಲ್‌ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲವ್ ನೇಷನ್ | ಹಿಂದಿ | ‘ಅಹಿಂಸಾ ಪರಮೋ ಧರ್ಮ’ದ ಮಾರ್ಗವನ್ನು ಅನುಸರಿಸಿ ಯುದ್ಧವನ್ನು ತಡೆದು ಅಣುಬಾಂಬ್ ನಿಷ್ಕ್ರಿಯಗೊಳಿಸಲು ಪ್ರಸ್ತಾಪಿಸುವಾಗ ತನ್ನ ಜೀವವನ್ನು ಕಳೆದುಕೊಳ್ಳುವ ಮಾನವತಾವಾದಿ ವಿಜ್ಞಾನಿಯ ಕತೆ. ಬಸಿತ್ ಅಹ್ಮದ್ ಖಾನ್ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಈ ವೈಜ್ಞಾನಿಕ ಡ್ರಾಮಾದಲ್ಲಿ ಧಮೇಂದ್ರ, ಅದೀಬ್‌, ಮಾವಿಯಾ, ಗೋವಿಂದ್‌ ನಾಮ್‌ ಡಿಯೋ, ಮಿಲಿಂದ್‌ ಗುನಾಜಿ, ಆಶಿಶ್‌ ವಿದ್ಯಾರ್ಥಿ, ಹರ್ಷಿತ ಪನ್ವಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ | ತೆಲುಗು | ಅನುಷ್ಕಾ ಶೆಟ್ಟಿ ನಟನೆಯ ಕಾಮಿಡಿ – ಡ್ರಾಮಾ. ಚಿತ್ರದಲ್ಲಿ ಅನುಷ್ಕಾ ಪಾಕಶಾಸ್ತ್ರ ಪ್ರವೀಣೆಯಾಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪೋಲಿಶೆಟ್ಟಿ ಚಿತ್ರದ ನಾಯಕನಟ. ಯುವಿ ಕ್ರಿಯೇಷನ್ಸ್‌ ನಿರ್ಮಾಣದ ಚಿತ್ರವನ್ನು ಮಹೇಶ್ ಬಾಬು ಪಿ ನಿರ್ದೇಶಿಸಿದ್ದಾರೆ.

ಕೃಷ್ಣ ಗಾಡು ಅಂತೇ ಒಕ ರೇಂಜ್ | ತೆಲುಗು | ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಜೀವನದ ಹಾದಿಯನ್ನು ಕಂಡುಕೊಳ್ಳಲು ಹರಸಾಹಸ ಪಡುವ ಕೃಷ್ಣ ಎಂಬ ಯುವಕನ ಕತೆ. ಶಿಕ್ಷಣ, ಉದ್ಯೋಗವಿಲ್ಲದೇ ತನ್ನ ಹಳ್ಳಿಯಲ್ಲಿಯೇ ಕಾಲ ಕಳೆಯುತ್ತಿರುವಾಗ ವಿಸ್ಮಯಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಊರಿನ ಜನರಿಂದ ಇವನ ಪ್ರೀತಿಗೆ ಬೆಂಬಲ ಸಿಗದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಾನೆ. ನಟ, ಲೇಖಕ ರಿಶ್ವಿ ಬಿ ತಿಮ್ಮರಾಜು ಮತ್ತು ವಿಸ್ಮಯ ಮುಖ್ಯ ಭೂಮಿಕೆಯಲ್ಲಿರುವ ಚಿತ್ರವನ್ನು ರಾಜೇಶ್‌ ದೊಂಡಪತಿ ನಿರ್ದೇಶಿಸಿದ್ದಾರೆ. ತೇಜಸ್ ಪ್ರೊಡಕ್ಷನ್ಸ್ ಬ್ಯಾನರ್‌ನ ಅಡಿ ಪೆಟ್ಲ ಕೃಷ್ಣ ಮೂರ್ತಿ, ಪೆಟ್ಲ ವೆಂಕಟ ಸುಬ್ಬಮ್ಮ, ಪಿ ಎನ್‌ ಕೆ ಶ್ರೀಲತಾ ಚಿತ್ರ ನಿರ್ಮಿಸಿದ್ದಾರೆ.

ರಾಜುಗಾರು ಕೋಡಿಪುಲಾವ್ | ತೆಲುಗು | ಚಿಕನ್‌ ಬಿರಿಯಾನಿ ಖಾದ್ಯದ ಸುತ್ತ ಹೆಣೆದ ಕತೆ. ಅಡ್ವೆಂಚರ್ ರೋಡ್‌ ಟ್ರಿಪ್‌ಗೆ ಹೋಗುವ ಸ್ನೇಹಿತರ ಗುಂಪೊಂದು ಕಾಡಿನಲ್ಲಿ ತಮ್ಮ ವಾಹನದ ಅಡಚಣೆ ಉಂಟಾದಾಗ ಕಾಡಿನ ಯಾವುದೋ ಒಂದು ಜನಾಂಗದಿಂದ ನಿಗೂಡವಾಗಿ ಒಬ್ಬೊಬ್ಬರೇ ಕೊಲೆಯಾಗುತ್ತಾರೆ. ಅನಿಲ್ ಮೋದುಗ ಫಿಲಂಸ್ ಮತ್ತು ಕೋನಾ ಸಿನಿಮಾ ಚಿತ್ರ ನಿರ್ಮಿಸಿದ್ದು, ಶಿವ ಕೋನ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ETV ಪ್ರಭಾಕರ್, ಶಿವ ಕೋನಾ, ನೇಹಾ ದೇಶಪಾಂಡೆ, ಕುನಾಲ್ ಕೌಶಿಕ್, ಪ್ರಾಚಿ ಥಾಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಓಳಂ | ಮಲಯಾಳಂ | ಹಾರರ್‌ – ಫ್ಯಾಂಟಸಿ ಸಿನಿಮಾ. ದಟ್ಟ ಕಾಡಿನೊಳಗೆ ಪ್ರವಾಸಕ್ಕೆಂದು ಹೋಗುವ ನಾಯಕ ಮತ್ತು ನಾಯಕಿ ಡ್ರಗ್‌ ಸೇವಿಸಿ ಯಾವ ರೀತಿ ತೊಂದರೆಗೆ ಒಳಗಾಗುತ್ತಾರೆ ಮತ್ತು ಭಯದ ವಾತಾವರಣದಲ್ಲಿ ಹೇಗೆ ಕಾಡಿನಲ್ಲಿ ಪೇಚಾಡುತ್ತಾರೆ ಎಂಬುದು ಕಥಾವಸ್ತು. ಅರ್ಜುನ್ ಅಶೋಕನ್‌ ಮತ್ತು ನಟಿ ಲೆನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ವಿ ಎಸ್ ಅಭಿಲಾಷ್ ನಿರ್ದೇಶನದ ಜೊತೆಗೆ ಲೆನಾರೊಟ್ಟಿಗೆ ಚಿತ್ರಕಥೆ ಬರೆದಿದ್ದಾರೆ. ಪೂಣಥಿಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನೌಫಲ್ ಪೂಣಥಿಲ್ ಸಿನಿಮಾ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here