PRK ಪ್ರೊಡಕ್ಷನ್ಸ್‌ನ ‘ಆಚಾರ್ & ಕೋ’ ಸಿನಿಮಾ, ಶಶಾಂಕ್ ನಿರ್ದೇಶನದ ‘ಕೌಸಲ್ಯ ಸುಪ್ರಜಾ ರಾಮ’ ಸೇರಿದಂತೆ ಭಿನ್ನ ಜಾನರ್‌ನ ಕನ್ನಡ ಸಿನಿಮಾಗಳು ಈ ವಾರ ತೆರೆಕಂಡಿವೆ. ಬಹುನಿರೀಕ್ಷಿತ ಪವನ್ ಕಲ್ಯಾಣ್‌ರ ‘Bro’ ತೆಲುಗು ಸಿನಿಮಾ, ಕ್ರಿಕೆಟರ್ ಧೋನಿ ನಿರ್ಮಾಣದ ‘LGM’ ತಮಿಳು ಸಿನಿಮಾಗಳೂ ಥಿಯೇಟರ್‌ಗೆ ಬಂದಿದ್ದು, ಈ ಚಿತ್ರಗಳಿಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕೌಸಲ್ಯ ಸುಪ್ರಜಾ ರಾಮಾ | ಕನ್ನಡ | ತಾಯಿ – ಮಗನ ಸೆಂಟಿಮೆಂಟ್‌ನ ಹಲವಾರು ಸಿನಿಮಾಗಳು ತೆರೆ ಮೇಲೆ ಮೂಡಿವೆ. ಆದರೆ ಈ ಚಲನಚಿತ್ರ ಕೊಂಚ ಭಿನ್ನ ಕಥಾಹಂದರ ಹೊಂದಿದೆ. ಪುರುಷ ಪ್ರಧಾನ ಕುಟುಂಬದಲ್ಲಿ ಬೆಳೆದ ಹುಡುಗನೊಬ್ಬನ ಲೈಫ್‌ಸ್ಟೈಲ್ ಹೇಗಿರುತ್ತದೆ ಎನ್ನುವುದು ಚಿತ್ರದ ಸಾರ. ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ. ಬಿ ಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ಚಿತ್ರ ನಿರ್ಮಿಸಿವೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಆಚಾರ್ & ಕೋ | ಕನ್ನಡ | ರೆಟ್ರೋ ಕತೆಯ ಸಿನಿಮಾ. 1960 – 70ರ ಕಾಲಘಟ್ಟದ ಕತೆ. ಒಂದು ಅವಿಭಕ್ತ ಕುಟುಂಬ. ಮನೆ ತುಂಬಾ ಮಕ್ಕಳು. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ ವಹಿಸಿಕೊಂಡ ತಂದೆ ಏಕಾಏಕಿ ನಿಧನರಾದಾಗ ಮನೆಯ ಪರಿಸ್ಥಿತಿ ಬದಲಾಗುತ್ತದೆ. ಮಕ್ಕಳ ಹೆಗಲಿಗೆ ಜವಾಬ್ದಾರಿ ಬೀಳುತ್ತದೆ. ಆಗ ಕುಟುಂಬದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ತೆಳುಹಾಸ್ಯದ ನಿರೂಪಣೆಯಲ್ಲಿ ಪ್ರೇಕ್ಷಕರ ಎದುರು ತೆರೆದಿಟ್ಟಿರುವ ಕಥಾಹಂದರ. ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ಚೊಚ್ಚಲ ಸಿನಿಮಾ. ಈ ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು ಇನ್ನೂ ಚಿತ್ರದ ಹಲವು ವಿಭಾಗಗಳನ್ನು ಮಹಿಳೆಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. PRK ಪ್ರೊಡಕ್ಷನ್ಸ್ ಬ್ಯಾನರ್‌ನ ಅಡಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರ ನಿರ್ಮಿಸಿದ್ದಾರೆ. ಬಿಂಧು ಮಾಲಿನಿ ಸಂಗಿತ ಚಿತ್ರಕ್ಕಿದೆ.
ನವ ಇತಿಹಾಸ | ಕನ್ನಡ | ಆಕ್ಷನ್ ಎಂಟರ್‌ಟೇನರ್ ಸಿನಿಮಾ. ಸ್ಥಳೀಯ ಹುಡುಗರ ಮಧ್ಯೆ ನಡೆಯುವ ಗಲಾಟೆ – ಮನಸ್ತಾಪ, ಇದರ ಮಧ್ಯೆ ಸಣ್ಣದೊಂದು ಲವ್ ಸ್ಟೋರಿ. ವಿಕ್ರಮ್ ಮತ್ತು ಅಮೃತ ವಿ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ. ಕಥೆ – ಸ್ಕ್ರೀನ್ ಪ್ಲೇ – ಸಂಭಾಷಣೆ – ನಿರ್ದೇಶನ ಶ್ರೀ ರಜನಿ ಮತ್ತು ಸಮರ್ಥ್ ಎಂ ನಿರ್ವಹಿಸಿದ್ದಾರೆ. ಅಥರ್ವ ಕ್ರಿಯೇಷನ್ಸ್ ಬ್ಯಾನರ್‌ನಡಿ ಅಮೃತ ವಿ ರಾಜ್ ನಿರ್ಮಿಸಿರುವ ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ.
ಡೈಮಂಡ್ ಕ್ರಾಸ್ | ಕನ್ನಡ | ಸೈಬರ್ ಕ್ರೈಮ್ ಮೂಲಕ ಯಾವ ರೀತಿ ಯುವಕರನ್ನು Trap ಮಾಡಲಾಗುತ್ತದೆ ಎಂಬುದನ್ನು ಸಿನಿಮಾ ತೋರಿಸಿದೆ. ಕೇವಲ ಎರಡು ತಿಂಗಳಲ್ಲಿ 25ರಿಂದ 155 ಸೈಬರ್ ಕ್ರೈಮ್ ಕೇಸ್‌ಗಳು ದಾಖಲಾಗಿ ಏಕಾಏಕಿ ಹೆಚ್ಚಾಗುವುದನ್ನು ಗಮನಿಸಿದ ಸರ್ಕಾರ ಇದರ ಕುರಿತು ತನಿಖೆ ಮಾಡಿ ಅಪರಾಧಿಗಳನ್ನು ಸೆರೆಹಿಡಿಯುವ ಕಥಾಹಂದರ. ಆಕ್ಷನ್ – ಥ್ರಿಲ್ಲರ್ ಸಿನಿಮಾ. ರಾಮ್‌ದೀಪ್ ಆರ್ ನಿರ್ದೇಶನದ ಚಿತ್ರದಲ್ಲಿ ರೋಜರ್ ನಾರಾಯಣ್, ರಜತ್ ಅಣ್ಣಪ್ಪ, ಮನು ಕೆಎಂ ಮತ್ತು ರೂಪಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಚಿತ್ರ ನಿರ್ಮಿಸಿದೆ.
ಆರ | ಕನ್ನಡ | ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಒಬ್ಬ ದೈವಾಂಶ ಸಂಭೂತ ಹುಡುಗನ ಜೀವನದಲ್ಲಿ ನಡೆಯುವ ಘಟನೆಗಳು, ಧಾರ್ಮಿಕ ಆಚರಣೆಗಳು, ಮಲೆನಾಡ ಸೊಗಡು ಮತ್ತು ಅಲ್ಲಿನ ಆಚಾರ – ವಿಚಾರಗಳ ಸ್ಪರ್ಶ ಇದೆ. ಹಾಗೆ ಜೊತೆಗೊಂದು ಪ್ರೇಮಕಥೆಯೂ ಇದೆ. ಎ ಆರ್ ರೋಹಿತ್ ಮತ್ತು ದೀಪಿಕಾ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದು, ಎ ಆರ್ ರೋಹಿತ್ ಚಿತ್ರಕಥೆ ಬರೆದಿದ್ದಾರೆ. ಚಂದ್ರಶೇಖರ್ ಸಿ ಜಂಬಿಗಿ, ಸುಜಾತಾ ಚಡಗ ನಿರ್ಮಾಣದ ಚಿತ್ರಕ್ಕೆ ಗಿರೀಶ್ ಹೊತ್ತೂರ್ ಸಂಗೀತವಿದೆ.
LGM (Let’s Get Married) | ತಮಿಳು | ಪರಸ್ಪರ ಪ್ರೀತಿಯಲ್ಲಿರುವ ಹರೀಶ್ ಮತ್ತು ಇವಾನಾ ಅವರ ಸುತ್ತ ಕಥೆ ಸುತ್ತುತ್ತದೆ. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇವರಿಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ. ಇವಾನಾ ಮದುವೆಗೂ ಮೊದಲು ವರನ ತಾಯಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾಳೆ. ಇವಾನಾ, ಹರೀಶ್ ಕುಟುಂಬ ಸಮೇತರಾಗಿ ಕೊಡಗಿಗೆ ಪ್ರವಾಸ ಹೋಗುವಂತೆ ಸೂಚಿಸುತ್ತಾಳೆ. ಆ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಬಯಸುತ್ತಾರೆ ಇದರ ಮಧ್ಯೆ ಇವಾನಾ ಮತ್ತು ಅವಳ ಅತ್ತೆ ಕಾಡಿನಲ್ಲಿ ಕಳ್ಳರಿಂದ ಅಪಹರಣಕ್ಕೆ ಒಳಗಾಗುತ್ತಾರೆ. ಸತತ ಹುಡುಕಾಟದ ನಂತರ ಅವರಿಬ್ಬರು ಹೇಗೆ ಸಿಗುತ್ತಾರೆ ಮತ್ತು ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದ ಭಿನ್ನಾಭಿಪ್ರಾಯಗಳನ್ನು ಕೈ ಬಿಡುತ್ತಾರೆಯೇ ಎನ್ನುವುದು ಚಿತ್ರದ ಕತೆ. M S ಧೋನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ರೊಮ್ಯಾಂಟಿಕ್ ಕಾಮಿಡಿ ತಮಿಳು ಚಿತ್ರದಲ್ಲಿ ಇವಾನಾ ಮತ್ತು ಹರೀಶ್ ಕಲ್ಯಾಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಕ್ಷಿ ಧೋನಿ ಮತ್ತು ವಿಕಾಸ್ ಹಸಿಜಾ ಚಿತ್ರ ನಿರ್ಮಿಸಿದ್ದಾರೆ. ರಮೇಶ್ ತಮಿಳ್ಮಣಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಹಾಸ್ಯ ನಟ ಯೋಗಿ ಬಾಬು ಮತ್ತು ಆರ್ ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
DD ರಿಟರ್ನ್ಸ್ | ತಮಿಳು | ಚಿತ್ರವು ಸಂಪೂರ್ಣ ಹಾಸ್ಯದೊಟ್ಟಿಗೆ ಹಾರರ್ ಕಥೆಯನ್ನು ಒಳಗೊಂಡಿದೆ. ಈ ಕಾಮಿಡಿ – ಹಾರರ್ ಚಿತ್ರದೊಂದಿಗೆ ಸಂತಾನಂ ತೆರೆಗೆ ಮರಳಿದ್ದಾರೆ. ಎಸ್ ಪ್ರೇಮ್ ಆನಂದ್ ನಿರ್ದೇಶನದ ಚಿತ್ರದ ನಾಯಕಿ ಸುರಭಿ. ಮೊಟ್ಟ ರಾಜೇಂದ್ರನ್, ರೆಡಿನ್ ಕಿಂಗ್‌ಸ್ಲೀ, ಮಾರನ್, ಪ್ರದೀಪ್ ರಾವತ್ ಮತ್ತು ಮಾಸೂಮ್ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘DD ರಿಟರ್ನ್ಸ್’ ಫ್ರ್ಯಾಂಚೈಸಿಯ ಮೂರನೇ ಭಾಗವಾಗಿದೆ. ಇದಕ್ಕೂ ಮೊದಲು 2016ರಲ್ಲಿ ‘ದಿಲುಕು ದುಡ್ಡು- 1’ ಮತ್ತು 2019 ರ ‘ದಿಲುಕು ದುಡ್ಡು-2’ ಬಿಡುಗಡೆಯಾಗಿದ್ದವು.
ಬ್ರೋ (BRO) | ತೆಲುಗು | ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಬ್ರೋ’ (BRO) ಆಕ್ಷನ್ ಥ್ರಿಲ್ಲರ್ ಚಿತ್ರ. ಯಾವಾಗಲೂ ಸಮಯದ ಹಿಂದೆ ಓಡುವ ಒಬ್ಬ ಕಾರ್ಯನಿರತ ವ್ಯಕ್ತಿಯಾಗಿ ಕುಟುಂಬ, ಸ್ನೇಹಿತರು, ಪ್ರೇಯಸಿ ಯಾರೇ ಕೇಳಿದರೂ ‘ಟೈಮ್ ಇಲ್ಲಾ’ ಎಂದೇ ಉತ್ತರಿಸುತ್ತ ಯಾವುದಕ್ಕೂ ಸಮಯವನ್ನು ನೀಡದ ಬ್ಯುಸಿ ಕೆಲಸಗಾರನಾಗಿ ಸಾಯಿ ಧರಮ್ ಕಾಣಿಸಿಕೊಂಡಿದ್ದಾರೆ. ಕಾಲದ (Time) ರೂಪದಲ್ಲಿ ಪವನ್ ಕಲ್ಯಾಣ್ ಸಮಯಕ್ಕೆ ಸರಿಯಾಗಿ ಭೇಟಿಯಾದಾಗ ಅವನ ಜೀವನವು ತಿರುವು ಪಡೆಯುತ್ತದೆ. ಈ ಬ್ಯುಸಿ ಜೀವನದಲ್ಲಿ ತನ್ನವರಿಗಾಗಿ ಹೇಗೆ ಸಮಯ ಮಾಡಿಕೊಳ್ಳಬೇಕೆಂಬುದನ್ನು ಪವನ್ ಕಲ್ಯಾಣ್ ಚಿತ್ರದಲ್ಲಿ ವಿವರಿಸುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ನಟ – ನಿರ್ದೇಶಕ ಸಮುದ್ರಕನಿ ರಚಿಸಿ, ನಿರ್ದೇಶಿಸಿರುವ ಈ ಸಿನಿಮಾವು ಸಮುದ್ರಕನಿ ಅವರ ತಮಿಳು ಚಲನಚಿತ್ರ ‘ವಿನೋದಯ ಸಿತಂ’ನ ಅಧಿಕೃತ ರಿಮೇಕ್. ಸಿನಿಮಾಗೆ ತ್ರಿವಿಕ್ರಮ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಚಿತ್ರ ನಿರ್ಮಿಸಿವೆ. ತಮನ್ ಎಸ್ ಸಂಗೀತ, ಸುಜಿತ್ ವಾಸುದೇವ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ. ಬ್ರಹ್ಮಾನಂದಂ, ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ಸುಬ್ಬರಾಜು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕುಂಜಮ್ಮಿನಿಸ್ ಹಾಸ್ಪಿಟಲ್ | ಮಲಯಾಳಂ | ಸಿನಿಮಾದಲ್ಲಿ ಕುಂಜಮ್ಮಿನಿಸ್ ಆಸ್ಪತ್ರೆಯ ಒಳಗೆ ನಡೆಯುವ ಘಟನೆಗಳನ್ನು ಹಾಸ್ಯದ ಮೂಲಕ ಹೆಣೆಯಲಾಗಿದೆ. ಚಿತ್ರಕಥೆಯು ವ್ಯಕ್ತಿಯ ಮರಣಾನಂತರದ ಜೀವನ ಹೇಗಿರುತ್ತದೆ ಎಂದು ಬಿಂಬಿಸುವ ವಿಷಯದ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಪ್ರಕಾಶ್ ರಾಜ್, ನೈಲಾ ಉಷಾ, ಇಂದ್ರಜಿತ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸನಲ್ ದೇವನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಾಬುರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ವಾವ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ತ್ರಿವಿಕ್ರಮನ್ ಚಿತ್ರ ನಿರ್ಮಿಸಿದ್ದಾರೆ. ಅಜಯ್ ಡೇವಿಡ್ ಕಾಚಪ್ಪಿಳ್ಳಿ ಛಾಯಾಗ್ರಹಣ, ಮನ್ಸೂರ್ ಮುತ್ತುಟ್ಟಿ ಸಂಕಲನ ಚಿತ್ರಕ್ಕಿದೆ.