ಬಾಲಿವುಡ್‌ನ ಬಾಷಾ ಮತ್ತು ಪ್ರಾಂತೀಯ ದುರಹಂಕಾರಕ್ಕೆ ದಶಕಗಳ ಇತಿಹಾಸವಿದೆ. ಇದೇ ಅವರಿಗೆ ಈಗ ಮುಳುವಾಗಿದೆ ಎಂದರೆ ಅತಿಶಯೋಕ್ತಿಯಾಗದು. ಅಲ್ಲಿನ ಸರಕು ಖಾಲಿಯಾಗಿ ತೆಲುಗು, ಕನ್ನಡ, ತಮಿಳು, ಮಲಯಾಳಂನಿಂದ ಕದ್ದ, ಎರವಲು ಪಡೆದ ಕಥೆಗಳನ್ನಿಟ್ಟುಕೊಂಡು, ಡಬ್ಬಿಂಗ್ ಸಿನಿಮಾಗಳ ಮೂಲಕ ಬದುಕುವಂತಹ ದೈನೇಸಿ ಸ್ಥಿತಿಗೆ ಬಾಲಿವುಡ್ ತಲುಪಿದೆ.
ಬಾಲಿವುಡ್ ಚಿತ್ರೋದ್ಯಮವು ದಕ್ಷಿಣದ ಮೇಲೆ ಮೊದಲಿನಿಂದಲೂ ಸವಾರಿ ಮಾಡುತ್ತಿರುವುದು ಎಲ್ಲರೂ ಬಲ್ಲ ಸಂಗತಿ. ಸ್ಥಳೀಯ ಬಾಷಾ ಚಿತ್ರಗಳನ್ನು ಕಡೆಗಣಿಸಿ ಜಾಗತಿಕ ಮಟ್ಟದಲ್ಲಿ ತಾನೇ ಇಂಡಿಯಾದ ಪ್ರತಿನಿಧಿಯೆಂಬಂತೆ ತೋರಿಸಿಕೊಳ್ಳುತ್ತಿರುವ ಬಾಲಿವುಡ್ ಹಿಂದಿ ಚಿತ್ರಗಳು ತನಗೆ ಪ್ರತಿಸ್ಫರ್ಧಿಯಾಗಿ ಸೆಡ್ಡು ಹೊಡೆಯುತ್ತಿರುವ ದಕ್ಷಿಣ ಬಾಷೆಗಳ ದ್ರಾವಿಡ ಮೂಲದ ಸ್ಥಳೀಯತೆ – ವೇಷಭೂಷಣ ಮತ್ತು ಸಂಸ್ಕೃತಿಯನ್ನು ಅಹಂಕಾರದಿಂದ ಹಂಗಿಸುತ್ತಲೇ ಬಂದಿವೆ.
ಇತರೆ ಯಾವ ದೇಶಗಳಲ್ಲೂ ಕಾಣದ ಈ ಬಗೆಯ ಹಗೆಯ ಪರಂಪರೆಯ ಮೂಲಗಳನ್ನು ಕೆದಕುತ್ತ ಹೋದಂತೆ ಇದಕ್ಕೆ ತಾರ್ಕಿಕ ಉತ್ತರವೂ ಸಿಗುತ್ತದೆ.
ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯ ಮೂಲಕ ಬಾಲಿವುಡ್‌ನ ಇಬ್ಬಗೆಯ ನೀತಿಯನ್ನು ಪರಾಮರ್ಶಿಸಬಹುದು. ಹಾಲಿವುಡ್ ನಿರ್ದೇಶಕ ಬ್ಲೇಕ್ ಎಡ್ವರ್ಸ್’ರ ‘ದಿ ಪಾರ್ಟಿ’ ಚಿತ್ರದಲ್ಲಿ ಭಾರತೀಯರನ್ನು ಕೀಳಾಗಿ ಪ್ರಸ್ತುತಪಡಿಸಿ, ಎರಡನೇ ದರ್ಜೆಯ ಮನುಷ್ಯರನ್ನಾಗಿ ಚಿತ್ರಿಸಿದ ಬಗ್ಗೆ ಬಾಲಿವುಡ್‌ನ ಮಹಾಮಹಿಮರು 60ರ ದಶಕದಲ್ಲಿಯೇ ಸೊಲ್ಲೆತ್ತಿದ್ದರು. ಇದನ್ನು ಪ್ರತಿಭಟಿಸಿದ ಅದೇ ಜನರು ತಮ್ಮದೇ ದೇಶದ ಅರ್ಧಭಾಗದಲ್ಲಿ ನೆಲೆಸಿರುವ ದಕ್ಷಿಣ ಭಾರತೀಯರನ್ನು ಮನುಷ್ಯರಿಗಿಂತ ಕಡೆಯಾಗಿ ಕಂಡು ತಮ್ಮದೇ ಹಿಂದಿ ಚಿತ್ರಗಳಲ್ಲಿ ಅವಹೇಳನ ಮಾಡುವುದನ್ನು ಆವತ್ತಿನಿಂದ ಈವತ್ತಿನವರೆಗೂ ನಡೆಸಿಕೊಂಡೇ ಬಂದಿದ್ದಾರೆ. ಇದಕ್ಕೆ 1960ರ ದಶಕದ ‘ಪಡೋಸನ್’ನ ಮೆಹಮೂದ್‌ರಿಂದ ಹಿಡಿದು ‘ಚೆನ್ನೆ EXPRESS’ವರೆಗೆ ದಕ್ಷಿಣದವರ ಚರ್ಮದ ಬಣ್ಣ, ದೇಹಾಕೃತಿ, ಭಾಷೆಯನ್ನು ಲೇವಡಿ ಮಾಡಿಹಾಕಿದ ಮಹಾಪುರುಷರನ್ನೇ ಹೊಣೆ ಮಾಡಬೇಕು. ಮೇಲ್ನೋಟಕ್ಕೆ ತೀರಾ ಸಾಧಾರಣವೆಂಬಂತೆ ಹಾಸ್ಯದ ಮುಖವಾಡ ಹೊದ್ದ ಈ ಪ್ರಾಂತೀಯತೆಯ ಲೇವಡಿಯು ಆಂತರ್ಯದಲ್ಲಿ ತನ್ನ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಇತರೆಯವನ್ನು ಕಡೆಗಣಿಸಿಬಿಡುವ ಪರಮಕ್ರೂರತೆಯನ್ನು ಹೊಂದಿದೆ.
ಬಾಲಿವುಡ್ ಚಿತ್ರಗಳಲ್ಲಿ ಕಂಡುಬರುವ ದಕ್ಷಿಣ ಮೂಲದ ಪಾತ್ರಗಳನ್ನು ಗಮನವಿಟ್ಟು ನೋಡಿದರೆ ಆ ಪಾತ್ರಗಳು ಬಫೂನುಗಳಂತೆಯೂ, ಕೋಡಂಗಿಗಳಂತೆಯೂ ಹಿಂದಿಯನ್ನು ಸ್ಪಷ್ಟವಾಗಿ ಉಚ್ಛರಿಸಲು ಬರದ ಮೂರ್ಖರಂತೆಯೂ ಚಿತ್ರಿತವಾಗಿರುವುದನ್ನು ಕಾಣಬಹುದು. ಒಟ್ಟು ದಕ್ಷಿಣವನ್ನೇ ಮದರಾಸಿಗಳೆಂದು ಹೀಗಳೆಯುವ ಬಾಲಿವುಡ್ ಚಿತ್ರಗಳಲ್ಲಿ ಬರುವ ದಕ್ಷಿಣದ ಪಾತ್ರಗಳು ಯಾವಾಗಲೂ ತಮಿಳು ಮೂಲದ ಬ್ರಾಹ್ಮಣ ಜಾತಿಯವೇ ಆಗಿರುತ್ತವೆ. ಲುಂಗಿಯುಟ್ಟು, ಹಣೆಗೆ ವಿಭೂತಿಯಿಟ್ಟು ಡೊಳ್ಳುಹೊಟ್ಟೆಯ ಜನಿವಾರಧಾರಿ ಪಾತ್ರಗಳು ಹಿಂದಿ ಮತ್ತು ಇಂಗ್ಲೀಷನ್ನು ತಮಿಳು ಉಚ್ಛಾರಣೆಯಲ್ಲಿ ಬಳಸುವುದನ್ನೇ ಹಾಸ್ಯ ಎಂದು ಬಾಲಿವುಡ್‌ಗೆ ಯಾವ ಪ್ರತಿಭಾಹೀನರು ಹೇಳಿದರೋ ಗೊತ್ತಿಲ್ಲ. ಈ ಪಾತ್ರಗಳು ಮಾತಿಗೊಮ್ಮೆ, ‘ಅಯ್ಯೊರಾಮ, ಅಯ್ಯೊ ಮುರುಗಾ’ ಅಂತಲೋ ಕಣ್ಣುಕುಕ್ಕುವ ಢಾಳುಬಣ್ಣದ ಕಾಸ್ಟೂಮನ್ನು ಹಾಕಿಕೊಂಡಿರುತ್ತವೆ.
ಪ್ರಮುಖವಾಗಿ ಈ ಪಾತ್ರಗಳು ಯಾವಾಗಲೂ ದೋಸೆ-ಇಡ್ಲಿ, ವಡೆ-ಸಾಂಬಾರ್ ತಿನ್ನುವ ಸಸ್ಯಾಹಾರಿಗಳೇ ಆಗಿರುತ್ತವೆಯೇ ಹೊರತು ಅಪ್ಪಿತಪ್ಪಿಯೂ ಮಾಂಸಾಹಾರಿಗಳಾಗಿರುವುದಿಲ್ಲ. ಹೆಸರುಗಳೂ ಅಷ್ಟೇ ಸುಬ್ರಮಣ್ಯಂ, ವೆಂಕಟೇಶ್ವರ, ಶ್ರೀನಿವಾಸನ್, ಕೃಷ್ಣಸ್ವಾಮಿ ಅಯ್ಯರ್ ಇವಷ್ಟೇ. ಈ ವಿವರಗಳು ಬಾಲಿವುಡ್ ಮಂದಿಯ ತಲೆ ಖಾಲಿಯಾದ ಮೂರ್ಖತನವನ್ನಷ್ಟೇ ತೋರಿಸುತ್ತದೆ. ದಕ್ಷಿಣದವರು ಸಾಮಾನ್ಯವಾಗಿ ತಿಂಡಿಗೆ ಬಳಸುವ ತಿಂಡಿಗಳನ್ನು ಹೆಸರಿಸಿ ಇವರು ವರ್ಷೊಪ್ಪತ್ತೂ ಇಡ್ಲಿಸಾಂಬಾರನ್ನೇ ತಿನ್ನುತ್ತಾರೆಂಬಂತೆ ಚಿತ್ರಿಸುವುದು ಉತ್ತರಭಾರತೀಯರು ಜೀವಮಾನವಿಡೀ ಬೆಳಗಿಂದ ಸಂಜೆಯವರೆಗೆ ಚಪಾತಿ-ಸಬ್ಜಿಯನ್ನಷ್ಟೇ ತಿನ್ನುತ್ತಾರೆಂದು ಹೇಳುವಷ್ಟೇ ನಗೆಪಾಟಲಿನ ಸಂಗತಿ.
ದಕ್ಷಿಣದ ಪಾತ್ರಗಳು ಮಾತನಾಡುವ ಹಿಂದಿ ಭಾಷೆಯ ಉಚ್ಚಾರಣೆಯನ್ನೂ ಹಾಸ್ಯದ ಹೆಸರಿನಲ್ಲಿ ಆಡಿಕೊಳ್ಳುವ ಬಾಲಿವುಡ್ ಚಿತ್ರಗಳು ಅದೇ ಸಮಯದಲ್ಲಿ ಪಂಜಾಬಿಯ ‘ಪಾಜಿ ಓಯ್ ಓಯ್, ಅರೇ ಪುತ್ತರೂ..’ ಶೈಲಿಯ ಅಪಭ್ರಂಶಗೊಂಡ ಪಂಜಾಬಿ ಹಿಂದಿಯನ್ನು ಹೆಮ್ಮೆಯ ಪ್ರತೀಕವಾಗಿ ಮುನ್ನೆಲೆಗೆ ತರುತ್ತವೆ. ಇಂತಹ ಇಬ್ಬಗೆಯ ಧೋರಣೆಯನ್ನು ಕಸುಬು ಗೊತ್ತಿಲ್ಲದ ದುರಹಂಕಾರಿಗಳು ಮಾಡಿದ್ದಾರೆಂದುಕೊಳ್ಳಲೂ ಒಂದು ತಡೆಯಿದೆ, ಏನೆಂದರೆ ಈ ಅಪಹಾಸ್ಯವನ್ನು ಬುದ್ಧಿವಂತ ನಿರ್ದೇಶಕರೆನ್ನಿಸಿಕೊಂಡ ರಾಜಕುಮಾರ್ ಹಿರಾನಿ ತಮ್ಮ ‘3 ಇಡಿಯಟ್ಸ್’ನಲ್ಲಿ ‘ಚತುರ್ ರಾಮಲಿಂಗ’ ಎಂಬ ಬಫೂನ್ ಪಾತ್ರದ ಮೂಲಕ ಮುಂದುವರೆಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ‘ಓಂ ಶಾಂತಿ ಓಂ’ನ ‘ಎನ್ನ ರ‍್ಯಾಸ್ಕಲಾ’ ಪ್ರಸಂಗವನ್ನೇ ತೆಗೆದುಕೊಂಡರೆ ದಕ್ಷಿಣದ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಈ ಪದವನ್ನು ಯಾರೂ ಎಲ್ಲಿಯೂ ಬಳಸುವುದೇ ಇಲ್ಲ.
‘ಕ್ವಿಕ್ ಗನ್ ಮುರುಗನ್’ನ ‘ಲೀವ್ ದ ಲೇಡೀಸ್ ಐಸೇ’ ಥರದ ಡೈಲಾಗುಗಳ ಮೂಲಕ ದಕ್ಷಿಣ ಭಾರತೀಯರಿಗೆ ಹಿಂದಿಯ ಜೊತೆಗೆ ಇಂಗ್ಲಿಷೂ ಬರುವುದಿಲ್ಲ ಎಂದು ಆಡಿಕೊಂಡು ನಕ್ಕ ಕುಖ್ಯಾತಿ ಬಾಲಿವುಡ್ಡಿಗಿದೆ. ಇಷ್ಟಕ್ಕೂ ದಕ್ಷಿಣದವರು ಹಿಂದಿಯನ್ನು, ಇಂಗ್ಲಿಷನ್ನು ನೆಟ್ಟಗೇ ಮಾತನಾಡಬೇಕೆಂದು ಭಾರತದ ಯಾವ ಕಾನೂನೂ ಹೇಳುವುದಿಲ್ಲವಲ್ಲ. ಬಾಲಿವುಡ್ ಚಿತ್ರಗಳೇಕೆ ಇದನ್ನು ನಮ್ಮಿಂದ ನಿರೀಕ್ಷಿಸುತ್ತದೆ, ಇದಕ್ಕೆ ಆ ಅಧಿಕಾರವನ್ನು ಕೊಟ್ಟವರಾದರೂ ಯಾರು? ಇದೇ ಮೂಗಿನ ನೇರದ ನ್ಯಾಯದಲ್ಲಿ ಹಿಂದಿ ಭಾಷಿಕರು ತೆಲುಗನ್ನೋ, ಕನ್ನಡವನ್ನೋ, ಮಲಯಾಳಂ ಅನ್ನೋ ಆ ಭಾಷೆಯ ಉಚ್ಚಾರಣೆಯ ವಿಧಾನದಲ್ಲಿಯೇ ತಮ್ಮ ಚಿತ್ರಗಳಲ್ಲಿ ಉಚ್ಚರಿಸಲು ಪ್ರಯತ್ನಪಡಲಿ ನೋಡೋಣ. ‘ಮದ್ರಾಸ್ ಕೆಫೆ’ ಚಿತ್ರದಲ್ಲಿ ಜಾನ್ ಅಬ್ರಹಾಂ ತಮಿಳು ಭಾಷೆ ಮಾತನಾಡಿದ್ದನ್ನು ಹೆಮ್ಮೆಯಂತೆ ಸ್ವೀಕರಿಸುವ ಮನಸ್ಥಿತಿ ದಕ್ಷಿಣದವರದ್ದು. ಭಾಷೆಯ ಉಚ್ಛಾರಣೆಯೇ ಎಂದಿಗೂ ಹಾಸ್ಯವಾಗುವುದಿಲ್ಲ. ಹಾಗಿದ್ದರೆ ಜಾನ್ ಅಬ್ರಹಾಂ ತಮಿಳು ಉಚ್ಛಾರ ನಮಗೆ ಹಾಸ್ಯಾಸ್ಪದವಾಗಬೇಕಿತ್ತು. ಮೂರುಕಾಸಿನ ಪ್ರತಿಭೆಯೂ ಇಲ್ಲದವರು ಮಾತ್ರ ಬಾಲಿವುಡ್‌ನವರಂತೆ ಅಪಹಾಸ್ಯದ ಭಾಷಿಕಪಾತ್ರಗಳನ್ನು ಸೃಷ್ಟಿಸಲು ಸಾಧ್ಯ.
ಇಲ್ಲೊಂದು ತಮಾಷೆಯನ್ನು ನಾವು ಗಮನಿಸಬೇಕು. ಇಂಡಿಯಾದಲ್ಲಿರುವ ಮುಸ್ಲಿಮರೆಲ್ಲರೂ ಟೆರ‍್ರರಿಸ್ಟ್‌ಗಳಲ್ಲ ಎಂಬುದನ್ನು ಎತ್ತಿ ಹಿಡಿಯಲು ಶಾರೂಖ್ ಖಾನ್ ‘ಮೈ ನೇಮ್ ಈಸ್ ಖಾನ್ ಆಮ್ ನಾಟ್ ಎ ಟರ‍್ರರಿಸ್ಟ್’, ‘ಚಕ್ ದೇ’ನಂತಹ ಚಿತ್ರಗಳ ಮೂಲಕ ಪ್ರಯತ್ನಿಸುತ್ತಾರೆ. ಇಲ್ಲಿ ಶಾರೂಖ್ ಖಾನ್, ಫರ‍್ಹಾನ್, ಮತ್ತು ಕರಣ್ ಜೋಹರ್‌ಗೆ ಯಾವೊಂದು ಸಮುದಾಯ, ಭಾಷೆಯ ಮೇಲೂ ಇದು ಇಷ್ಟೇ ಎಂದು ಹಣೆಪಟ್ಟಿ ಕಟ್ಟಬಾರದೆಂಬ ಸಾಮಾಜಿಕ ಕಾಳಜಿಯಿದೆ. ಅದೇ ಸಮಯದಲ್ಲಿ ‘ಓಂ ಶಾಂತಿ ಓಂ’, ‘ರಾ-ಒನ್’ ಮತ್ತು ‘ಚೆನ್ನೆ EXPRESS’ಗಳ ಮೂಲಕ ದಕ್ಷಿಣದವರು ಮೊಸರಿಗೆ ನೂಡಲ್ಸ್ ಕಲೆಸಿಕೊಂಡು ತಿನ್ನುವ ಕೊಳಕರು, ಕಣ್ಣುಕುಕ್ಕುವ ಹಳದಿ ಕೆಂಪು ಬಟ್ಟೆ ಧರಿಸುವ ಅಭಿರುಚಿಯಿಲ್ಲದವರು, ವಿಕಾರ ರೂಪದ ಡೊಳ್ಳುಹೊಟ್ಟೆಯ ಗಡ್ಡಮೀಸೆಯ ಕಪ್ಪುವರ್ಣೀಯರು ಎಂದು ತೆಗಳಿ ಹೀಗಳೆದು ಋಣಾತ್ಮಕ ಹಣೆಪಟ್ಟಿ ಕಟ್ಟಿ ತಮ್ಮ ‘ಸ್ವಸಮುದಾಯ ಕಾಳಜಿ’ಯನ್ನು ಬೆತ್ತಲುಗೊಳಿಸಿಕೊಳ್ಳುತ್ತಾರೆ.
ಈ ಡಬಲ್ ಸ್ಟಾಂಡರ್ಡ್ ಅನ್ನು ಬಾಲಿವುಡ್ ದಕ್ಷಿಣ ಭಾರತೀಯರಿಗೆ ಮಾತ್ರವಲ್ಲ, ಇತರೆ ರಾಜ್ಯಗಳ ಭಾಷೆ-ಬಾಷಿಕರಿಗೂ ಅನ್ವಯಿಸಿ ಹಿಂದಿನಿಂದಲೂ ಸ್ಟಿರಿಯೋಟೈಪ್ ಮಾಡಿಟ್ಟಿದೆ. ಹಿಂದಿಚಿತ್ರಗಳ ಮನೆಗೆಲಸದ ಹೆಂಗಸು ಯಾವಾಗಲೂ ಮರಾಠಿ ಭಾಷಿಕಳೇ ಆಗಿರುತ್ತಾಳೆ, ಉತ್ತರ ಪ್ರದೇಶದವರು ರಾಮು ಕಾಕಾಗಳಾಗಿ ಟೀ ಅಂಗಡಿಗಳನ್ನಿಟ್ಟುಕೊಂಡಿರುತ್ತಾರೆ, ಹೆಗಲ ಮೇಲೆ ಟವೆಲ್ ಹಾಕಿಕೊಂಡ ಬೆಂಗಾಲಿ ಯಾವಾಗಲೂ ಪಾನ್ ಅಂಗಡಿಯವನಾಗಿರುತ್ತಾನೆ. ಖಳನಾಯಕನ ಜೊತೆಯಿರುವ ಸೆಕ್ಸಿ ಹುಡುಗಿಯರು ಮತ್ತು ಕ್ಯಾಬರೆ ನರ್ತಕಿಯರು ಮೋನಾ ಡಾರ್ಲಿಂಗ್, ಮೇರಿ, ಲಿಲ್ಲಿ, ರೋಸಿಗಳೇ ಆಗಿರುತ್ತಾರೆ. ವಿಲನ್‌ನ ಆಜ್ಞಾಪಾಲಕ ಗೂಂಡಾಗಳು ರಾಬರ್ಟ್, ಪೀಟರ್, ಜಾನಿಗಳೇ ಆಗಿರುತ್ತಾರೆ. ಸಿಖ್ಖರು ಒಂದೋ ಸೈನಿಕರಾಗಿರುತ್ತಾರೆ ಇಲ್ಲವೇ ಟ್ರಕ್ ಡ್ರೈವರ್‌ಗಳಾಗಿರುತ್ತಾರೆ. ಬಿಹಾರಿಗಳು ವಿದೂಷಕರಾಗಿರುತ್ತಾರೆ, ನಾಯಕ ನಾಯಕಿಯರು ಮಾತ್ರ ಪಂಜಾಬ್ ಮತ್ತು ಉತ್ತರಪ್ರದೇಶದ ಸಂಪ್ರದಾಯಸ್ಥ ಭೂಮಾಲೀಕ ವರ್ಗದ ಕಾಯಸ್ಥ ಸಮುದಾಯದವರಾಗಿರುತ್ತಾರೆ. ಇದನ್ನೇ ಇಲ್ಲಿ ಹಿಂದಿಭಾಷೆಯ ಡಬಲ್ ಸ್ಟಾಂಡರ್ಡ್ ಅನ್ನುವುದು.
ಹಿಂದಿ ಭಾಷಿಕರಿಗೆ ಮತ್ತು ಉತ್ತರದ ಬಾಲಿವುಡ್‌ನವರಿಗೆ ತಮ್ಮ ಭಾಷೆಯನ್ನು ಸಮುದಾಯವನ್ನು ಹೊರತುಪಡಿಸಿ ಉಳಿದೆಲ್ಲವೂ ಕನಿಷ್ಠ ಎಂಬ ದುರಹಂಕಾರ ಹುಟ್ಟಲು ಕಾರಣವೂ ಇದೆ. 1960ರ ದಶಕದ ಆರಂಭದ ಕಾಲಘಟ್ಟದಲ್ಲಿ ಇಡೀ ದೇಶದಾದ್ಯಂತ ಹಿಂದಿಯನ್ನು ಅಧಿಕೃತ ರಾಷ್ಟ್ರಭಾಷೆಯೆಂದು ಹೇರಲು ನಡೆದ ಭಾಷಾಹುನ್ನಾರವನ್ನು ಅತ್ಯಂತ ಪ್ರಬಲವಾಗಿ ಪ್ರತಿರೋಧಿಸಿ ತಮ್ಮ ಬಾಷೆಯ ನಿಲುಮೆಯನ್ನು ಎತ್ತಿ ಹಿಡಿದವರು ದಕ್ಷಿಣ ಭಾರತವರು. ಅದರಲ್ಲೂ ತಮಿಳುಬಾಷೆ. ಇವತ್ತಿಗೂ ಹಿಂದಿಯನ್ನು ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯೊಳಗೂ ಬಿಟ್ಟುಕೊಂಡಿಲ್ಲ. ಅಷ್ಟು ಪ್ರಬಲವಾಗಿ ಹಿಂದಿಗೆ ಗೋಡೆ ಕಟ್ಟಿದ ದಕ್ಷಿಣ ಭಾರತೀಯರ ಅವಹೇಳನವು ಹಿಂದಿ ಚಿತ್ರಗಳ ಮೂಲಕ ಆಗಿಂದಲೇ ದೊಡ್ಡಮಟ್ಟದಲ್ಲಿ ಶುರುವಾಯಿತು.
ಇದೇ 60ರ ದಶಕದಲ್ಲೇ ಬಂದ ‘ಪಡೋಸನ್’ನ ಅಯ್ಯಂಗಾರಿ ಪಾತ್ರವು ಅಂದಿನ ಹಾಸ್ಯನಟ ಮೆಹಮೂದ್‌ಗಾಗಿ ಕಟ್ಟಲ್ಪಟ್ಟಿತು. ಅಲ್ಲಿಂದ ಶುರುವಾದ ದಕ್ಷಿಣದ ಮೇಲಿನ ಅಸಹನೆಯನ್ನು ಬಾಲಿವುಡ್ ಇವತ್ತಿಗೂ ಬಿಡದೆ ಹಾಗೆಯೇ ಉಳಿಸಿಕೊಂಡಿದೆ. ಅದಕ್ಕೇ ಬಾಲಿವುಡ್‌ನ ಚಿತ್ರಗಳಲ್ಲಿ ಕನ್ನಡ, ತೆಲುಗು, ಮಲಯಾಳಂ ಅನ್ನು ಬಿಟ್ಟು ನಿರ್ಧಿಷ್ಟವಾಗಿ ತನ್ನನ್ನು ಮುಖಕ್ಕೆ ಹೊಡೆದಂತೆ ತಿರಸ್ಕರಿಸಿದ ತಮಿಳನ್ನು ಮಾತ್ರ ಚಲನಚಿತ್ರಗಳ ಬಫೂನು ಪಾತ್ರಗಳ ಮೂಲಕ ಮದ್ರಾಸಿಗಳೆಂದು ಜರೆದು ತನ್ನ ವಿಕೃತಿಯನ್ನು ತೀರಿಸಿಕೊಳ್ಳುತ್ತಿದೆ. ಈ ಕಾರಣಕ್ಕೇ ಇಂಡಿಯಾದ ಮೊಟ್ಟಮೊದಲ 100 ಕ್ರೋರ್ ಕ್ಲಬ್ ಚಿತ್ರವಾಗಿ ಹೊರಹೊಮ್ಮಿದ ‘ರೋಬೋಟ್’ ಚಿತ್ರದ ರಜನೀಕಾಂತ್‌ರ ಫೈಟಿಂಗ್, ಸ್ಟೈಲ್‌ಗಳನ್ನು ಆಡಿಕೊಳ್ಳುವ ದೃಶ್ಯಗಳನ್ನು ತನ್ನ ಚಿತ್ರಗಳಲ್ಲಿ ಹೊಸೆಯುತ್ತದೆ, ಅಬ್ಬೇ ಖಾಮೋಷ್ ಖ್ಯಾತಿಯ ಶತ್ರುಘ್ನಸಿನ್ಹಾ, ಜಿತೇಂದ್ರ, ಇವರೆಲ್ಲ ಏರೋಪ್ಲೇನ್ – ಹೆಲಿಕಾಪ್ಟರನ್ನು ಹಗ್ಗದಲ್ಲಿ ಮರಕ್ಕೆ ಕಟ್ಟಿಹಾಕುವ ದೃಶ್ಯಗಳುಳ್ಳ ನಗೆಪಾಟಲು ಫೈಟುಗಳಿಗಿಂತ ರಜನೀಕಾಂತ್‌ರ ಸಿಗರೇಟ್ ಹಚ್ಚುವ ಸ್ಟೈಲ್ ಸಾವಿರ ಪಾಲು ಮೇಲು. ಆದರೂ ಸರ್ದಾರ್‌ಜೀ ಜೋಕ್‌ಗಳಂತೆ ರಜನೀಕಾಂತ್ ಜೋಕ್ಸ್’ಗಳನ್ನು ಬಾಲಿವುಡ್ ಚಾಲ್ತಿಗೆ ತರುತ್ತದೆ. ಈ ಮೂಲಕವೂ ತನ್ನ ಪುರಾತನ ಸೇಡನ್ನು ತೀರಿಸಿಕೊಳ್ಳುತ್ತದೆ.
ಇದು ಇಡೀ ಬಾಲಿವುಡ್‌ನ ಧೋರಣೆಯೆಂದು ಗ್ರಹಿಸುವುದೂ ತಪ್ಪಾಗುತ್ತದೆ. ಹತ್ತು ಪ್ರತಿಶತದಷ್ಟು ಈ ವಿಕೃತಿಯ ಧೋರಣೆಗೆ ವಿರುದ್ಧವಿರುವ ಜನರೂ ಇದ್ದಾರೆ. ‘ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್’ ಚಿತ್ರದಲ್ಲಿ ಹಿಂದಿ ಬಿಟ್ಟು ಕನ್ನಡವನ್ನಷ್ಟೇ ಮಾತನಾಡುವ ಖಳನನ್ನು ತಂದ ಅನುಭವ್ ಕಶ್ಯಪ್. ‘ಶಾಂಘಾಯ್’ ಚಿತ್ರದಲ್ಲಿ ಕೃಷ್ಣನ್ ಪಾತ್ರವನ್ನು ಸಮರ್ಥವಾಗಿ ಕಟ್ಟಿದ ದೀಪಂಕರ್ ಬೆನರ್ಜಿ, ‘ಚಕ್ ದೇ’ ಚಿತ್ರದಲ್ಲಿಯೇ ಈ ವಿಕೃತಿಧೋರಣೆಯನ್ನು ಖಂಡತುಂಡವಾಗಿ ಹೊಡೆದುರುಳಿಸಿದ ಶಿಮಿತ್ ಅಮೀನ್ ಇವರಲ್ಲಿ ಪ್ರಮುಖರು. ‘ಚಕ್ ದೇ’ ಚಿತ್ರದಲ್ಲಿ ಬರುವ ಸನ್ನಿವೇಶವೊಂದರಲ್ಲಿ ಆಂಧ್ರದಿಂದ national ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದ ನೇತ್ರಾ ರೆಡ್ಡಿ ಎಂಬ ಹಾಕಿಪಟುವನ್ನು ಆಯ್ಕೆ ಸಮಿತಿಯು ಸಂದರ್ಶಿಸುವಾಗ ನೀನು ಮದ್ರಾಸಿಯೇ ಎಂದು ಕೇಳಲಾಗುತ್ತದೆ. ಇಲ್ಲ ನಾನು ಆಂಧ್ರಪ್ರದೇಶದ ತೆಲುಗು ಭಾಷಿಕಳು ಎಂದು ನೇತ್ರಾರೆಡ್ಡಿ ಉತ್ತರಿಸುತ್ತಾಳೆ. ‘ಕ್ಯಾ ಫರಕ್ ಪಡ್ತಾ ಹೈ ಮದ್ರಾಸಿ ಔರ್ ತೆಲುಗು ಮೇ (ಮದ್ರಾಸಿಗಳಿಗೂ ತೆಲುಗರಿಗೂ ಅಂಥಹ ವ್ಯತ್ಯಾಸ ಏನಿರುತ್ತೆ?) ಎಂದು ಉಡಾಫೆಯ ಪ್ರಶ್ನೆಯೊಂದು ಆಯ್ಕೆ ಸಮಿತಿಯಿಂದ ತೂರಿಬರುತ್ತದೆ.. ನೇತ್ರಾರೆಡ್ಡಿಯು ಅಷ್ಟೇ ತಣ್ಣಗಿನ ದನಿಯಲ್ಲಿ ‘ಉತ್ನಾ ಹೀ ಫರ್ಕ್ ಪಡ್ತಾ ಹೈ ಜಿತ್ನಾ ಏಕ್ ಬಿಹಾರಿ ಔರ್ ಪಂಜಾಬಿ ಮೇ ಹೋತಾ ಹೈ..’ (ಬಿಹಾರಿಗಳಿಗೂ ಪಂಜಾಬಿಗಳಿಗೂ ಇರುವಷ್ಟೇ ವ್ಯತ್ಯಾಸ ತೆಲುಗಿಗೂ ಮದ್ರಾಸಿಗೂ ಇರುತ್ತೆ) ಎಂದು ಖಡಕ್ಕಾಗಿ ಮುಖಕ್ಕೆ ಹೊಡೆದಂತೆ ರಪ್ಪನೆ ಹೇಳುತ್ತಾಳೆ. ಈ ಡೈಲಾಗಿನ ಮೂಲಕವೇ ‘ಚಕ್ ದೇ’ ಚಿತ್ರದ ನಿರ್ದೇಶಕ ಶಿಮಿತ್ ಅಮೀನ್ ಬಾಲಿವುಡ್‌ಗೆ ಹೇಳಬೇಕಿರುವುದನ್ನು ನಿಯತ್ತಾಗಿ ಹೇಳಿ ಮುಗಿಸುತ್ತಾರೆ.
ಬಾಲಿವುಡ್‌ನ ಬಾಷಾ ಮತ್ತು ಪ್ರಾಂತೀಯ ದುರಹಂಕಾರಕ್ಕೆಂದೇ ಬರೆದಂತಿರುವ ಬುದ್ದನ ಕಥೆಯೊಂದರ ಸಾಲಿನಂತೆ ‘ಅಪಹಾಸ್ಯ ಮತ್ತು ತೆಗಳಿಕೆಯನ್ನು ಅಹಂಕಾರಿಯೊಬ್ಬನಿಂದ ನಾವು ತೆಗೆದುಕೊಳ್ಳದೇ ಹೋದರೆ ಅದು ಅವನ ಬಳಿಯೇ ಉಳಿದು ಅದು ಅವನದ್ದೇ ಅಪಹಾಸ್ಯ ಮತ್ತು ಅವನಿಗೇ ತೆಗಳಿಕೆಯಾಗಿ ಉಳಿಯುತ್ತದೆ’. ಅದಕ್ಕೇ ಏನೋ ಬಾಲಿವುಡ್ಡಿನ ಪಂಡಿತರ ಸರಕು ಖಾಲಿಯಾಗಿ ತೆಲುಗು ಕನ್ನಡ ತಮಿಳು ಮಲಯಾಳಂನಿಂದ ಕದ್ದ, ಎರವಲು ಪಡೆದ, ಕಥೆಗಳನ್ನಿಟ್ಟುಕೊಂಡು ಸದ್ಯಕ ತಾನು ಮೊದಲಿನಿಂದಲೂ ಹೀಗಳೆದ ಚಿತ್ರರಂಗ-ಭಾಷೆಗಳಿಂದಲೇ ಬದುಕುವಂತಹ ದೈನೇಸಿ ಸ್ಥಿತಿ ಬಾಲಿವುಡ್‌ಗೆ ಇಷ್ಟು ಬೇಗ ಬರುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ.