ಹಿರಿಯ ನಟ ಶ್ರೀನಾಥ್‌ ತಮ್ಮ ಮಹತ್ವಾಕಾಂಕ್ಷೆಯ ‘ಆರ್ಟ್‌ ಎನ್‌ ಯು’ ಸಂಸ್ಥೆ ಆರಂಭಿಸಿದ್ದಾರೆ. ನಟನೆ, ನಿರ್ದೇಶನ, ಚಿತ್ರಕಥೆ ರಚನೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಬೇತಿ , ಪ್ರಸಾದನ ಹೀಗೆ ಸಿನಿಮಾಗೆ ಸಂಬಂಧಿಸಿದ ಶಿಕ್ಷಣವನ್ನು ನುರಿತ ತಂತ್ರಜ್ಞರಿಂದ ನೀಡುವ ಯೋಜನೆ ಈ ಸಂಸ್ಥೆಯದ್ದು.

ನಟ ಶ್ರೀನಾಥ್‌ ಅವರು ಬೆಳ್ಳಿತೆರೆ ಪ್ರವೇಶಿಸಿ ಐದು ದಶಕಗಳು ಸಂದಿವೆ. ನಾಯಕನಟನಾಗಿ ಜನಮನ ಗೆದ್ದ ಅವರು ಮುಂದೆ ಪೋಷಕ ನಟನಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ತಮ್ಮ ಅನುಭವವನ್ನು ಸಿನಿಮಾಸಕ್ತರಿಗೆ ದಾಟಿಸಬೇಕೆನ್ನುವ ಅವರ ಕನಸು ART’N’U ಮೂಲಕ ಕೈಗೂಡಿದೆ. ಅವರ ಮಹತ್ವಾಕಾಂಕ್ಷೆಯ ಸಂಸ್ಥೆಗೆ ಚಾಲನೆ ಸಿಕ್ಕಿದ್ದು, ಅವರ ಪ್ರಯತ್ನಕ್ಕೆ ಪತ್ನಿ ಗೀತಾ, ಪುತ್ರ ರೋಹಿತ್‌, ಸೊಸೆ ಮಂಗಳ ಜೊತೆಯಾಗಿದ್ದಾರೆ. ನಟನೆ, ನಿರ್ದೇಶನ, ಚಿತ್ರಕಥೆ ರಚನೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಭೇತಿ , ಪ್ರಸಾದನ ಹೀಗೆ ಸಿನಿಮಾಗೆ ಸಂಬಂಧಿಸಿದ ಶಿಕ್ಷಣವನ್ನು ನುರಿತ ತಂತ್ರಜ್ಞರಿಂದ ನೀಡುವ ಯೋಜನೆ ಈ ಸಂಸ್ಥೆಯದ್ದು. ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅವರ ಸಂಸ್ಥೆಯಲ್ಲೇ ರಂಗಮೂಲ ತರಬೇತಿ ನೀಡುವ ಯೋಜನೆಯೂ ಇದೆ.

“ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಯಿತು. ನಲವತ್ತಕ್ಕೂ ಹೆಚ್ಚು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ನಾನು ಬಂದಾಗಿನ ಚಿತ್ರರಂಗವೇ ಬೇರೆ. ಈಗಿನ ಸಂದರ್ಭವೇ ಬೇರೆ. ಆದರೆ ಕಲಿಕೆ ಮಾತ್ರ ನಿರಂತರ.‌ ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರಿಂದ ಕಲಿತದ್ದು ಸಾಕಷ್ಟು. ಆಗಿನ ಕಾಲ, ಈಗಿನ ಕಾಲ ಅನ್ನುವುದಕ್ಕಿಂತ ವರ್ತಮಾನಕ್ಕೆ ನಾವು ಹೊಂದಿಕೊಳ್ಳಬೇಕು. ನಾನು ಈಗಲೂ ಕಲಿಯುತ್ತಿದ್ದೇನೆ. ಈವರೆಗೂ ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸುತ್ತಿದ್ದೇನೆ. ನಾನು ಕೂಡ ಇಲ್ಲಿ ನಟನಾಸಕ್ತರಿಗೆ ನಟನೆ ಬಗ್ಗೆ ಹೇಳಿ ಕೊಡಲಿದ್ದೇನೆ. ಇದ್ದಲ್ಲದೆ ಸಿನಿಮಾ ನಿರ್ಮಾಣಕ್ಕೆ ಬೇಕಾದ ಬೇರೆ ಬೇರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು” ಎನ್ನುತ್ತಾರೆ ನಟ ಶ್ರೀನಾಥ್.

ನಟನೆ,‌ ನಿರ್ದೇಶನ, ಸ್ಕ್ರೀನ್ ಪ್ಲೇ, ಫ್ಯಾಷನ್, ನಿರೂಪಣೆ ಸೇರಿದಂತೆ ಒಟ್ಟು ಏಳು ತರಗತಿಗಳು ಫೆಬ್ರವರಿಯಲ್ಲಿ ಆರಂಭವಾಗಲಿವೆಯಂತೆ. ಆಯಾ ವಿಭಾಗದಲ್ಲಿ ಪರಿಣತಿ ಹೊಂದಿರುವವರನ್ನು ತರಬೇತಿ ನೀಡಲು ನೇಮಿಸಲಾಗುತ್ತದೆ. ಈ ಸಂಸ್ಥೆ ಜೊತೆ ಇನ್ನೂ ಎರಡು ಸಂಸ್ಥೆಗಳು ಇರಲಿವೆ. ಈ ಬಗ್ಗೆ ಮಾಹಿತಿ ನೀಡುವ ಶ್ರೀನಾಥ್‌ರ ಪುತ್ರ, ಬಾಲನಟನಾಗಿ ಕನ್ನಡಿಗರಿಗೆ ಪರಿಚಿತರಾಗಿದ್ದ ರೋಹಿತ್‌ ಹೇಳುವುದು ಹೀಗೆ – “ಆರ್ಟ್ ಎನ್ ಯು’ ಸಂಸ್ಥೆಯನ್ನು ಅಪ್ಪ‌ ಮತ್ತು ನಾನು ನೋಡಿಕೊಳ್ಳುತ್ತೇವೆ. ನಾನು ‘ಕಾಲ್ ಬ್ಯಾಕ್’ ಎಂಬ ಸಂಸ್ಥೆ ಆರಂಭಿಸುತ್ತಿದ್ದೇನೆ. ‘ಆರ್ಟ್ ಎನ್ ಯು’ನಲ್ಲಿ ತರಬೇತಿ ಪಡೆದವರು ಇದರಲ್ಲಿ ತಮ್ಮ‌ ಬಗ್ಗೆ ಹಾಕಿಕೊಳ್ಳಬಹುದು. ಈ ಮೂಲಕ ಹೊಸ ಸಿನಿಮಾ ಆರಂಭಿಸುವವರಿಗೆ ಒಂದೇ ಕಡೆ ಅವರಿಗೆ ಬೇಕಾದ ಕಲಾವಿದರು, ತಂತ್ರಜ್ಞರು ಸಿಗುತ್ತಾರೆ. ಆಸಕ್ತರನ್ನು ಸಂದರ್ಶಿಸಿ, ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ನಿರ್ಧರಿಸಿ ಶುಲ್ಕ ನಿಗದಿ‌ಪಡಿಸಲಾಗುವುದು”.

LEAVE A REPLY

Connect with

Please enter your comment!
Please enter your name here