ಶೂನ್ಯ ನಿರ್ದೇಶನದ ‘ರೋಜಿ’ ಸಿನಿಮಾ ತಂಡಕ್ಕೆ ನಟ ಶ್ರೀನಗರ ಕಿಟ್ಟಿ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಅವರು ಕ್ರಿಸ್ಟೋಫರ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಯೋಗಿ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾಗೆ ಗುರುಕಿರಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಲೂಸ್ ಮಾದ ಯೋಗಿ ಮುಖ್ಯಭೂಮಿಕೆಯಲ್ಲಿರುವ 50ನೇ ಚಿತ್ರ ‘ರೋಜಿ’ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಶ್ರೀನಗರ ಕಿಟ್ಟಿ ಮತ್ತು ‘ಲಿಯೋ’ ಸಿನಿಮಾ ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ. ಬೆಂಗಳೂರು ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಅನಾವರಣಗೊಳಿಸಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಗಿದೆ. ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಈ ಕುರಿತು ಮಾತನಾಡಿದ್ದಾರೆ.

‘ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. ಕ್ರಿಸ್ಟೋಫರ್ ನನ್ನ ಪಾತ್ರದ ಹೆಸರು’ ಎಂದಿದ್ದಾರೆ ಶ್ರೀನಗರ ಕಿಟ್ಟಿ. ”ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ನಾವಿಬ್ಬರು ಈ ಹಿಂದೆ ‘ಹುಡುಗರು’ ಚಿತ್ರದ ನಂತರ ಈ ಚಿತ್ರದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದೇವೆ’ ಎನ್ನುತ್ತಾರೆ ಹೀರೋ ಯೋಗಿ. ಡಿ ವೈ ರಾಜೇಶ್ ನಿರ್ಮಾಣದ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಸದ್ಯ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ಕಿಟ್ಟಿ ಅವರಿಗೆ ರಚಿತಾ ರಾಮ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here