ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಹಿಂದಿ ಚಿತ್ರದ ಬಗ್ಗೆ ಲೇಖಕಿ ಸುಧಾಮೂರ್ತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅನುಪಮ್ ಖೇರ್, ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಸೆಪ್ಟೆಂಬರ್ 28ರಂದು ತೆರೆಕಾಣಲಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಬಗ್ಗೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಲೇಖಕಿ ಸುಧಾ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋ-ವಾಕ್ಸಿನ್ ಅಭಿವೃದ್ಧಿಯ ಕುರಿತ ನೈಜ ಕಥೆಯನ್ನು ಸಿನಿಮಾ ಹೇಳಲಿದೆ. ಸಿನಿಮಾ ಕುರಿತು ಮಾತನಾಡಿರುವ ಸುಧಾಮೂರ್ತಿ, ‘ಭಾರತ ಮಾತ್ರ ಈ ಕೆಲಸ ಮಾಡಲು ಸಾಧ್ಯ’ ಎಂದಿದ್ದಾರೆ. ಚಿತ್ರದ ಕತೆ, ಅದರಲ್ಲಿ ಬರುವ ಮಹಿಳಾ ಪಾತ್ರಗಳನ್ನು ಪ್ರಸ್ತಾಪಿಸಿರುವ ಅವರು, ‘ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಅರ್ಥಮಾಡಿಕೊಳ್ಳುವ ಪುರುಷ ಇರುತ್ತಾನೆ’ ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಸಿನಿಮಾಗೆ ಅತ್ಯುತ್ತಮ ಭಾವೈಕ್ಯತೆ ಸಿನಿಮಾ (69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಪ್ರಶಸ್ತಿ ಲಭಿಸಿತ್ತು. ‘ದಿ ತಾಷ್ಕೆಂಟ್ ಫೈಲ್ಸ್’, ‘ಹೇಟ್ ಸ್ಟೋರಿ’, ‘ಜಿದ್’, ‘ಜುನೂನಿಯಾತ್’, ‘ಚಾಕೊಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್’ ವಿವೇಕ್ ಅವರ ಇತರೆ ಸಿನಿಮಾಗಳು. ‘ದಿ ವ್ಯಾಕ್ಸಿನ್ ವಾರ್’ ವೈದ್ಯಕೀಯ ಥ್ರಿಲ್ಲರ್ ಜಾನರ್ ಸಿನಿಮಾ. ಅಭಿಷೇಕ್ ಅಗರ್‌ವಾಲ್ ಮತ್ತು ಪಲ್ಲವಿ ಜೋಶಿ ನಿರ್ಮಾಣದ ಚಿತ್ರಕ್ಕೆ ನೈಜ ಘಟನೆಗಳೇ ಸ್ಫೂರ್ತಿ. ಅನುಪಮ್ ಖೇರ್, ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ (‘ಕಾಂತಾರ’ ಖ್ಯಾತಿ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 28, 2023ರಂದು ಮೂಲ ಹಿಂದಿ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.