ಅಂಬರೀಶ್ ಹೆಸರನ್ನು ಪ್ರಮುಖ ರಸ್ತೆಗಿಡಬೇಕು, ಪ್ರಶಸ್ತಿ ಘೋಷಿಸಬೇಕೆನ್ನುವ ಅಭಿಮಾನಿಗಳ ಒತ್ತಡಕ್ಕೆ ನಟಿ, ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಇದು ಅಂಬರೀಶ್ ಅವರ ಘನತೆಗೆ ತಕ್ಕುದಲ್ಲ ಎಂದಿರುವ ಅವರು ಈ ಸಂಬಂಧ ಹಮ್ಮಿಕೊಳ್ಳಲು ಯೋಜಿಸಿರುವ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ನಟ ಪುನೀತ್ ರಾಜಕುಮಾರ್ ಅಗಲಿಕೆಯ ನಂತರದ ಬೆಳವಣಿಗೆಗಳಿವು. ಬೆಂಗಳೂರು ಸೇರಿದಂತೆ ನಾಡಿನ ಕೆಲವೆಡೆ ರಸ್ತೆ, ಪಾರ್ಕ್‌ಗಳಿಗೆ ಪುನೀತ್‌ ಅವರ ಹೆಸರಿನಲ್ಲಿ ನಾಮಕರಣ ಮಾಡಲಾಯ್ತು. ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತು. ಈ ಹಿನ್ನೆಲೆಯಲ್ಲಿ ಹಿರಿಯ ಕಲಾವಿದರಾದ ಅಂಬರೀಶ್, ವಿಷ್ಣುವರ್ಧನ್‌, ಶಂಕರ್‌ನಾಗ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿವಿದ ರೀತಿಯಲ್ಲಿ ಬರೆಯತೊಡಗಿದರು. ತಮ್ಮ ನೆಚ್ಚಿನ ಹೀರೋಗಳಿಗೂ ಪ್ರಶಸ್ತಿ ಘೋಷಿಸುವಂತೆ, ಪ್ರಮುಖ ರಸ್ತೆಗಳಿಗೆ ಹೆಸರುಗಳನ್ನು ನಾಮಕರಣ ಮಾಡುವಂತೆ, ಸ್ಮಾರಕ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸತೊಡಗಿದರು. ಅಂಬರೀಶ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಅಂಬರೀಶ್ ಅವರ ತಾರಾಪತ್ನಿ, ಸಂಸದೆ ಸುಮಲತಾ ಬೇಸರ ವ್ಯಕ್ತಪಡಿಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಒಕ್ಕಣಿ ಇಲ್ಲಿದೆ –

“ನಮ್ಮ ಪ್ರೀತಿಯ ಡಾ|| ಅಂಬರೀಶ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿಗೊಳಿಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ.
ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.
ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು, ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದುದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ. ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು.
ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ.
ಆದುದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತ, ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ”

LEAVE A REPLY

Connect with

Please enter your comment!
Please enter your name here