ನಿರ್ದೇಶಕ ಸುನಿ ಮತ್ತು ನಟ ಗಣೇಶ್ ಜೋಡಿಯ ‘ಸಖತ್‌’ ಸಿನಿಮಾ ಇದೇ 26ಕ್ಕೆ ಬಿಡುಗಡೆಯಾಗಲಿದೆ. ಫಸ್ಟ್ ಲುಕ್‌, ಟೀಸರ್‌, ಹಾಡುಗಳ ಮೂಲಕ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಚಿತ್ರದ ತಾರೆಯರೊಂದಿಗೆ ಚಿತ್ರರಂಗದ ಗಣ್ಯರು ಪಾಲ್ಗೊಂಡರು.

ಇತ್ತೀಚಿನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಗಣೇಶ್ ಅಭಿನಯದ ‘ಸಖತ್’ ಪ್ರಮುಖವಾದುರು. ಈ ವಾರ ಸಿನಿಮಾ ತೆರೆಕಾಣುತ್ತಿದ್ದು, ಪೂರ್ವಭಾವಿಯಾಗಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಮುಖ್ಯ ಅತಿಥಿಗಳಾಗಿ ನಿರ್ದೇಶಕ ಪ್ರೇಮ್‌, ನಟಿ ಶ್ರೀಲೀಲಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖರನೇಕರು ಪಾಲ್ಗೊಂಡಿದ್ದರು. ಹೀರೋ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್ – ನಿಶಾ, ಹಿರಿಯ ಕಲಾವಿದ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವರು ‘ಸಖತ್’ ಪ್ರೀ-ರಿಲೀಸ್ ಇವೆಂಟ್‌ಗೆ ಸಾಕ್ಷಿಯಾದರು.

ಗಣೇಶ್ ಮತ್ತು ಪ್ರೇಮ್ ಒಟ್ಟಿಗೆ ವೇದಿಕೆ ಏರಿದರು. ಈ ವೇಳೆ ಗಣೇಶ್, ಪ್ರೇಮ್‌ರಿಗೆ ಒಂದು ಮನವಿ ಮಾಡಿಕೊಂಡರು. ‘ಎಕ್ಸ್’ಕ್ಯೂಸ್‌ ಮೀ’ ಸಿನಿಮಾದ ‘ಬ್ರಹ್ಮ ವಿಷ್ಣು’ ಹಾಡು ಹೇಳುವಂತೆ ಕೋರಿಕೊಂಡರು. ಅದಕ್ಕೆ ಅಕ್ಕರೆಯಿಂದ ಪ್ರತಿಕ್ರಿಯಿಸಿದ ಪ್ರೇಮ್ ಹಾಡು ಹೇಳಿದರು. ಈ ವೇಳೆ ಗಣೇಶ್ ಕೂಡ ಪ್ರೇಮ್‌ರಿಗೆ ದನಿಗೂಡಿಸಿದರು. ಇದಕ್ಕೂ ಮೊದಲು ಮಾತಾಡಿದ ಗಣೇಶ್ ಅಗಲಿದ ನಟ ಅಪ್ಪುಗೆ ನಮನ ಸಲ್ಲಿಸಿ, “ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್” ಎಂದು ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚೆಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿದ ಅವರು ‘ಸಖತ್’ ಸಿನಿಮಾಗೆ ಬೆಂಬಲ ಕೋರಿದರು. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಿನಿಮಾದ ಜರ್ನಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಟಿವಿ ರಿಯಾಲಿಟಿ ಶೋ ಸುತ್ತ ಹೆಣೆದಿರುವ ‘ಸಖತ್’ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಇದೇ 26ಕ್ಕೆ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here