ಚಿತ್ರನಿರ್ದೇಶಕ ನಂದಕಿಶೋರ್ ಅವರು ಧರ್ಮ ಕೀರ್ತಿರಾಜ್ ಅಭಿನಯದ ‘ಸುಮನ್’ ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಹಾರೈಸಿದರು. ಕೊರೊನಾ ಹಾವಳಿ ಶುರುವಿಗೆ ಮುನ್ನ ಶುರುವಾಗಿದ್ದ ಚಿತ್ರೀಕರಣ ಲಾಕ್‌ಡೌನ್ ಅವಧಿಯಲ್ಲಿ ಪೂರ್ಣಗೊಂಡು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರವಿ ಸಾಗರ್ ನಿರ್ದೇಶನದ ಈ ಸಿನಿಮಾಗೆ ಮೂವರು ನಾಯಕಿಯರು.
ಚಿತ್ರವೊಂದು ಸುದೀರ್ಘ ಅವಧಿಯವರೆಗೆ ಚಿತ್ರೀಕರಣಗೊಂಡರೆ ನಿರ್ಮಾಪಕರಿಗೆ ಅದು ದುಬಾರಿಯಾಗುತ್ತದೆ. ಕಳೆದೆರೆಡು ವರ್ಷಗಳಲ್ಲಿ ಹಲವಾರು ಸಿನಿಮಾಗಳು ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಿನಿಮಾಗಳ ಯಾದಿಯಲ್ಲಿ ʼಸುಮನ್ʼ ಒಂದು. ಧರ್ಮ ಕೀರ್ತಿರಾಜ್ ಹೀರೋ ಆಗಿ ನಟಿಸಿರುವ ಸಿನಿಮಾ ಹೆಚ್ಚು ಸುದ್ದಿಯಾಗಿಲ್ಲ. “ಕೋವಿಡ್ ಶುರುವಾಗುವ ಮುನ್ನವೇ ನಮ್ಮ ಚಿತ್ರದ ಶೂಟಿಂಗ್ ಶುರುವಾಗಿತ್ತು. ನಂತರ ಸಾಕಷ್ಟು ಅಡ್ಡಿ ಆತಂಕಗಳ ಮಧ್ಯೆ ಸಿನಿಮಾದ ಚಿತ್ರೀಕರಣ ನಡೆದು ಈಗ ಸಿನಿಮಾ ಪೂರ್ಣಗೊಂಡಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಾಳ್ಮೆಯಿಂದ ಸಿನಿಮಾ ಕುರಿತು ಕಾಳಜಿ ವಹಿಸಿದ ನಿರ್ಮಾಪಕರಿಗೆ ಧನ್ಯವಾದ” ಎಂದು ನಟ ಧರ್ಮ ಕೀರ್ತಿರಾಜ್ ಚಿತ್ರದ ಅಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕೃತಜ್ಞತೆ ಅರ್ಪಿಸಿದರು.
‘ಮುತ್ತುಕುಮಾರ’ ಸಿನಿಮಾ ನಿರ್ದೇಶಿಸಿದ್ದ ರವಿ ಸಾಗರ್ ಅವರಿಗೆ ಇದು ಎರಡನೆಯ ಸಿನಿಮಾ. ಎ.ಶಾಂತ್ ಕುಕ್ಕೂರ್ ಗೀತಸಾಹಿತ್ಯ, ಜುಬಿನ್ ಪಾಲ್ ಸಂಗೀತ ಸಂಯೋಜನೆಯ ಹಾಡುಗಳನ್ನು ಚಿತ್ರನಿರ್ದೇಸಕ ನಂದಕುಮಾರ್ ಬಿಡುಗಡೆ ಮಾಡಿದರು. “ಹೀರೋ ಧರ್ಮ ಅವರ ತಂದೆ ಕೀರ್ತಿರಾಜ್ ಮತ್ತು ನನ್ನ ತಂದೆ ಸುಧೀರ್ ಇಬ್ಬರೂ ಕನ್ನಡ ಚಿತ್ರರಂಗ ಕಂಡ ಪ್ರಮುಖ ನಟರು. ಅವರಿಬ್ಬರ ಆತ್ಮೀಯ ಒಡನಾಟವೀಗ ನನ್ನ ಮತ್ತು ಧರ್ಮ ಅವರಲ್ಲೂ ಮುಂದುವರೆದಿದೆ. ಕಠಿಣ ಪರಿಶ್ರಮಿ ಧರ್ಮ ಅವರಿಗೆ ಒಳಿತಾಗಲಿ” ಎಂದು ನಂದಕುಮಾರ್ ಸಿನಿಮಾಗೆ ಹಾರೈಸಿದರು. ನಿಮಿಕಾ, ರಜನಿ ಭಾರದ್ವಾಜ್, ಜೈಲಿನ್ ಗಣಪತಿ ಚಿತ್ರದ ಮೂವರು ನಾಯಕಿಯರು. ಕೊರೋನಾ ಸೋಂಕು ಕಡಿಮೆಯಾಗುತ್ತಿದಂತೆ ತೆರೆಗೆ ಬರಲಿದ್ದೇವೆ ಎನ್ನುತ್ತಾರೆ ಧರ್ಮ ಕೀರ್ತಿರಾಜ್.