ಮಹಾತ್ಮ ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ  ‘ಗುರು ಶಿಷ್ಯರು’ ಸಿನಿಮಾ ತಂಡವು ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದೆ. ಇಲ್ಲಿ ‘ಗಾಂಧಿನಗರ’ದಲ್ಲಿ ಅಂತ ಹೇಳಿರೋದಕ್ಕೆ ವಿಶೇಷ ಅರ್ಥವಿದೆ.

‘ಗುರು ಶಿಷ್ಯರು’ ಸಿನಿಮಾದಲ್ಲಿ ಹಿರಿಯ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ನೂತನ ರೀತಿಯ ಪಾತ್ರ ನಿರ್ವಹಿಸಿದ್ದಾರೆ. ಅದು ಗಾಂಧಿ ತತ್ವ ಪರಿಪಾಲಿಸುವ ಪಾತ್ರ ಎನ್ನುವುದು ವಿಶೇಷ. ಹಾಗಾಗಿ ಗಾಂಧಿ ಜಯಂತಿ ಸಂದರ್ಭದಲ್ಲಿ ಆ ಪಾತ್ರದ ಕುರಿತು ಮಾಹಿತಿ ನೀಡಲು ಖುಷಿಯಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. “ಮಹಾತ್ಮ ಗಾಂಧಿಯ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತಗೆದುಕೊಂಡು ಬದುಕುವ ಪಾತ್ರ ಕೂಡ ಅದಾಗಿದೆ. ಗಾಂಧಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ಸಮೀಕರಿಸಬಹುದಾಗಿದೆ” ಎನ್ನುತ್ತಾರೆ ಈ ಗುರುಶಿಷ್ಯರು.

ಈ ಪಾತ್ರದ ಕುರಿತು ‘ಗುರು ಶಿಷ್ಯರು’ ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯೂಸರ್ ತರುಣ್ ಕಿಶೋರ್ ಹೇಳುವುದು ಹೀಗೆ “ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ. ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂಥದ್ದು. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ”

‘ಜಂಟಲ್ಮ್ಯಾನ್‌’ ಖ್ಯಾತಿಯ ನಿರ್ದೇಶಕ ಜಡೇಶ್ ಕೆ. ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವ್ಸ್‌ ಬ್ಯಾನರ್‌ನಲ್ಲಿ ‘ಗುರು ಶಿಷ್ಯರು’ ಚಿತ್ರ ತಯಾರಾಗುತ್ತಿದೆ. ಈಗಾಗಲೇ ಶೇಕಡಾ ಎಂಬತ್ತರಷ್ಟು ಸಿನಿಮಾದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ನಡೆದಿದೆ. ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದು, ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here