ಶಿವ ನಿರ್ದೇಶನದಲ್ಲಿ ಸೂರ್ಯ ನಟಿಸುತ್ತಿರುವ ‘ಕಂಗುವಾ’ ವಿಶ್ವದಾದ್ಯಂತ 38 ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರ ನಿರ್ಮಿಸುತ್ತಿರುವ Studio Green ತಿಳಿಸಿದೆ. ವೆಟ್ರಿ ಪಳನಿಸಾಮಿ ಛಾಯಾಗ್ರಹಣ ಮತ್ತು ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಸೂರ್ಯ ಅಭಿನಯದ ‘ಕಂಗುವಾ’ ತಮಿಳು ಸಿನಿಮಾ ವಿಶ್ವದಾದ್ಯಂತ 38 ಭಾಷೆಗಳಲ್ಲಿ 3D ಮತ್ತು IMAX ಸ್ವರೂಪಗಳಲ್ಲಿ ಬಿಡುಗಡೆಯಾಗಲಿದೆ. ಈ ಐತಿಹಾಸಿಕ-ಕಾಲ್ಪನಿಕ ಚಲನಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ. ಸೂರ್ಯ ಅವರ ಮೊದಲ Pan India ಸಿನಿಮಾ ಇದಾಗಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್ಗಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿವೆ. ಚಿತ್ರವು ಹಳ್ಳಿಗಾಡಿನ ದೃಶ್ಯಗಳನ್ನು ಹೆಚ್ಚಾಗಿ ಹೊಂದಿದ್ದು, ನಿರ್ಮಾಪಕರು VFX ಮತ್ತು CGI ಮೇಲೆ ಸಾಕಷ್ಟು ಹೂಡಿಕೆ ಮಾಡಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ನಿರ್ಮಾಪಕರಾದ ಕೆ ಇ ಜ್ಞಾನವೇಲ್ ರಾಜಾ, ‘ಚಿತ್ರವು ತಮಿಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ’ ಎಂದು ತಿಳಿಸಿದ್ದಾರೆ.
Studio Green ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಈ ನಿರ್ಮಾಣ ಸಂಸ್ಥೆಯು ಉನ್ನತ ವಿತರಣಾ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಚಿತ್ರವನ್ನು 2024ರ ಆರಂಭದಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿನಿಮಾದಲ್ಲಿ ದಿಶಾ ಪಟಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ, ನಿಶಾದ್ ಯೂಸೂಫ್ ಸಂಕಲನ, ಮದನ್ ಕರ್ಕಿ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದ ಇನ್ನುಳಿದ ಪಾತ್ರವರ್ಗವನ್ನು ಸದ್ಯದಲ್ಲೇ ಬಹಿರಂಗ ಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.