ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ತಾಜ್ ಮಹಲ್ 2’ ಚಿತ್ರದ ಹಾಡುಗಳನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದರು. ಮನ್ವರ್ಷಿ ನವಲಗುಂದ ರಚನೆಯ ಹಾಡುಗಳಿಗೆ ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ.

“ಹಾಡು ನೋಡಿದೆ ಚೆನ್ನಾಗಿದೆ. ನಾಯಕ, ನಾಯಕಿಯ ಅಭಿನಯವೂ ಅಷ್ಟೇ ಚೆನ್ನಾಗಿದೆ. ನಾನು ಮತ್ತು ಅಪ್ಪು ಮಾಮ ಸಿಕ್ಕಾಗ ನಮ್ಮ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ವಿಭಿನ್ನ ಕಥೆಯ ಚಿತ್ರಗಳು ಬಿಡುಗಡೆಯಾಗಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೆವು. ಈ ಸಮಾರಂಭದಲ್ಲಿ ನನಗೆ ಆ ಮಾತು ನೆನಪಿಗೆ ಬಂತು. ಎಲ್ಲೋ ಅವರ ಆಸೆ ಈಡೇರುತ್ತಿದೆ ಅನಿಸಿತು” ಎಂದರು ಶ್ರೀಮುರಳಿ. ದೇವರಾಜ್‌ ಕುಮಾರ್‌ ಹೀರೋ ಆಗಿ ನಟಿಸಿ ನಿರ್ದೇಶಿಸಿರುವ ‘ತಾಜ್‌ ಮಹಲ್‌ 2’ ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಅವರು ಮಾತನಾಡಿದರು. “ನಾನು ಒಂದು ಮಾತು ಹೇಳುತ್ತೀನಿ. ಭಯ, ಭಕ್ತಿ, ಶ್ರಮವಿಟ್ಟುಕೊಂಡು ಕೆಲಸ ಮಾಡಬೇಕು ನಿಜ. ಆದರೆ ಯಾವುದೇ ಫಲಾಪೇಕ್ಷೆಯಿಲ್ಲದ ಕೆಲಸ ನಮ್ಮದಾಗಬೇಕು. ನಮ್ಮ ಕೆಲಸ ಚೆನ್ನಾಗಿದ್ದರೆ, ದೇವರು ಅಭಿಮಾನಿಗಳ ರೂಪದಲ್ಲಿ ಬಂದು ನಮ್ಮ ಚಿತ್ರವನ್ನು ಗೆಲಿಸುತ್ತಾನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶ್ರೀಮುರಳಿ ಹಾರೈಸಿದರು.

ಚಿತ್ರದ ಹೀರೋ, ನಿರ್ದೇಶಕ ದೇವರಾಜ್‌ ಕುಮಾರ್‌ ಅವರು ಮಾತನಾಡಿ, “ನೀನು ಎಷ್ಟು ಕಷ್ಟಪಟ್ಟೆ ಎಂಬುದು ಮುಖ್ಯವಲ್ಲ. ತೆರೆಮೇಲೆ ನೀನು ಪ್ರೇಕ್ಷಕರಿಗೆ ಏನು ತೋರಿಸಿ, ಅವರ ಮನ ಗೆಲುತ್ತೀಯಾ ಎನ್ನುವುದು ಮುಖ್ಯ ಎಂದು ನಟ ಶ್ರೀಮುರಳಿ ಅವರು ಹಿಂದೊಮ್ಮೆ ಹೇಳಿದ್ದರು. ಆ ಮಾತೇ ನನಗೆ ಸ್ಪೂರ್ತಿ” ಎಂದರು. ಸಮೃದ್ಧಿ ಶುಕ್ಲ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮನ್ವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ ಹಾಗೂ ತಮ್ಮದೇ ಹೊಸ ಸಂಸ್ಥೆಯ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ವಿಕ್ರಮ್ ಸೆಲ್ವ ಸಂಗೀತ ನೀಡಿದ್ದಾರೆ. ಜೂನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಹಿರಿಯ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ, ಭಾ.ಮ.ಹರೀಶ್ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ವಿಜಯ್ ಸಿಂಹ, ವಿಕ್ಟರಿ ವಾಸು, ಭಾ.ಮ.ಗಿರೀಶ್ ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here