ಸಿರೀಶ್ ಥೋರಟ್ ಅವರ ಟಿಕೆಟ್ ಟು ಸಿರಿಯಾ ಪುಸ್ತಕವನ್ನು ಆಧರಿಸಿದ ಸರಣಿ ಇದು. ಕಥಾನಿರೂಪಣೆ ಬಿಗಿಯಾಗಿದ್ದರೂ ಅಲ್ಲಲ್ಲಿ ಸ್ವಲ್ಪ ಹಿನ್ನಡೆ ಭಾಸವಾಗುತ್ತದೆ. ಕೆಲವು ಘಟನೆಗಳನ್ನು ಕಡಿತಗೊಳಿಸಿದ್ದರೆ ಒಟ್ಟಾರೆ ಸರಣಿ ಇನ್ನೂ ಮೊನಚಾಗಿರುತ್ತಿತ್ತು. ಆದಾಗ್ಯೂ ಅನುಭವಿ ನಟರ ಅಭಿನಯ ಮತ್ತು ತಾಂತ್ರಿಕ ಕುಶಲತೆ ಎಲ್ಲವೂ ಮಿಳಿತವಾಗಿ ಒಂದು ಅತ್ಯುತ್ತಮ ಸರಣಿಯನ್ನು ತಂಡ ನೀಡಿದೆ ಎಂದು ಹೇಳಬಹುದು. ‘ದಿ ಫ್ರೀಲ್ಯಾನ್ಸರ್’ ಹಾಟ್ ಸ್ಟಾರ್ ಅಲ್ಲಿ ಲಭ್ಯವಿದೆ.

ಬಹುನಿರೀಕ್ಷಿತ ಮೋಹಿತ್ ರೈನಾರ ‘ದಿ ಫ್ರೀಲ್ಯಾನ್ಸರ್ : ಕನ್‌ಕ್ಲ್ಯೂಶನ್‌’ ಸರಣಿ ಬಿಡುಗಡೆಯಾಗಿದೆ. ಬಹಳ ದಿನಗಳಿಂದ ಈ ಸರಣಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ನಿರೀಕ್ಷೆಗಳಿದ್ದವು. ಸಿರೀಶ್ ಥೋರಟ್ ಅವರ ಟಿಕೆಟ್ ಟು ಸಿರಿಯಾ ಪುಸ್ತಕವನ್ನು ಆಧರಿಸಿದ ಸರಣಿ ಇದು. ಭವ್ ಧೂಲಿಯ ನಿರ್ದೇಶಿಸಿರುವ ಸರಣಿಯಲ್ಲಿ ಅನುಪಮ್ ಖೇರ್ ಮತ್ತು ಕಾಶ್ಮೀರ ಪ್ರಮುಖ ತಾರಾಗಣದಲ್ಲಿದ್ದಾರೆ. ಬಹಳ ಬಿಗಿಯಾದ ನಿರೂಪಣೆ ಇರುವ ಈ ಪುಸ್ತಕವನ್ನು ತೆರೆಗೆ ಅಳವಡಿಸುತ್ತಾರೆ ಎಂದಾಗಲೇ ನಿರೀಕ್ಷೆಗಳು ಹೆಚ್ಚಾಗಿದ್ದವು. ತಾರಾಗಣ ಕೂಡ ಜನರಲ್ಲಿ ನಿರೀಕ್ಷೆಗಳನ್ನು ಹೆಚ್ಚು ಮಾಡಿತ್ತು. ಪುಸ್ತಕದಲ್ಲಿರುವ ಆ ಬಿಗಿತನ, ಗಟ್ಟಿತನ ತೆರೆಯ ಮೇಲೆ ಹೇಗೆ ಕಾಣಬಹುದು? ಪ್ರಸ್ತುತವಾಗಬಹುದು? ಎನ್ನುವ ಕುತೂಹಲಗಳಿಗೆಲ್ಲ ಉತ್ತರ ಸಿಗುವ ಸಮಯ ಬಂದಿದೆ.

ಇದೊಂದು ತೆರೆಯ ಮೇಲೆ ನಿರೂಪಿಸಲು ಕ್ಲಿಷ್ಟಕರವಾದ ಕಥಾನಕ. ಅವಿನಾಶ್ ಕಾಮತರ ಪಾತ್ರದ ನಡಿಗೆಯಲ್ಲಿ ಸಾಕಷ್ಟು ರೋಚಕತೆ, ಆಕ್ಷನ್ ಮತ್ತು ನಾಟಕೀಯತೆಯನ್ನು ನಿರೂಪಿಸಬೇಕು. ಅನುಪಮ್ ಖೇರ್ ಅವರ ಜೊತೆ ಸುಶಾಂತ ಸಿಂಗ್, ಜಾನ್ ಕೊಕ್ಕೇನ್‌, ಗೌರಿ ಬಾಲಾಜಿ, ನವನೀತ್ ಮಲಿಕ್ ಮೊದಲಾದ ಪ್ರತಿಭಾವಂತ ನಟರ ತಾರಾಗಣವಿದೆ. ಅಲಿಯಾಳನ್ನು ರಕ್ಷಿಸುವ ತನ್ನ ಪ್ರಯತ್ನದ ಕೊನೆಯ ಹಂತದಲ್ಲಿರುವ ಅವಿನಾಶ್ ಪಾತ್ರದ ಆಳಕ್ಕೆ ಈ ಸರಣಿ ಇಳಿಯುತ್ತದೆ. ಸಾಕಷ್ಟು ಅನಿರೀಕ್ಷಿತ ತಿರುವುಗಳು ಮತ್ತು ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡ ಅವಿನಾಶ್ ಪಾತ್ರವನ್ನು ನಿರ್ವಹಿಸುವುದು ಒಂದು ಸವಾಲು ಕೂಡ. ಹಾಗೆಂದು ಇಲ್ಲಿ ಸೃಜನಶೀಲತೆಗೇನೂ ಧಕ್ಕೆಯಾಗಿಲ್ಲ.

ಅವಿನಾಶ್ ಮತ್ತು ಇನಾಯತ್‌ ಖಾನ್ ಇವರಿಬ್ಬರ ನಡುವಿನ ಪೋಲೀಸು ದಿನಗಳಲ್ಲಿನ ಘಟನಾವಳಿಗಳು ಬಹಳ ಆಸಕ್ತಿಕರವಾಗಿ ಮೂಡಿಬಂದಿದೆ. ಸಂಧಿಗ್ಧಗಳು ಎದುರಾಗುವುದಕ್ಕೆ ಮುನ್ನ ಅವರಿಬ್ಬರ ನಡುವಿನ ಸಂಬಂಧಗಳು ಹೇಗಿದ್ದವು ಮತ್ತು ಏನಿದ್ದವು ಎಂಬ ಕುತೂಹಲಗಳನ್ನು ಕೆರಳಿಸುತ್ತದೆ. ಕಥೆಯ ನಿರೂಪಣೆ ಮತ್ತು ಪ್ರಸ್ತುತಿ ಪುಸ್ತಕಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿವೆ. ಪುಸ್ತಕದಲ್ಲಿನ ಅವಿನಾಶ್ ಪಾತ್ರ ತೆರೆಯ ಮೇಲೂ ಅಷ್ಟೇ ಸಶಕ್ತವಾಗಿ ಮೂಡಿಬರಲು ಏನೇನು ಸಿನಿಮೀಯ ಅಂಶಗಳು ಬೇಕು ಮತ್ತು ಎಷ್ಟೆಷ್ಟು ಬೇಕು ಎನ್ನುವುದನ್ನು ನಿರ್ದೇಶಕರು ಪರಿಪೂರ್ಣವಾಗಿ ಅರಿತು ಅಳವಡಿಸಿದ್ದಾರೆ.

ಈ ಸರಣಿಯ ಮೊದಲನೇ ಭಾಗ ಸೆಪ್ಟೆಂಬರ್‌ನಲ್ಲಿ ನಾಲ್ಕು ಸಂಚಿಕೆಗಳಲ್ಲಿ ಬಿಡುಗಡೆಯಾಗಿತ್ತು. ಮೊದಲನೇ ಭಾಗ ಕೆಲವು ಪ್ರಶ್ನೆಗಳನ್ನು ಉಳಿಸಿ ಮುಗಿದಿತ್ತು. ಎರಡನೇ ಭಾಗದಲ್ಲಿ ಅವಕ್ಕೆಲ್ಲ ಉತ್ತರವನ್ನು ನಿರೀಕ್ಷಿಸಬಹುದಾಗಿದೆ. ಮೋಸದ ಮದುವೆಯೊಂದರಲ್ಲಿ ಸಿಲುಕಿ ಜಿಹಾದ್ ಅಪಾಯಕ್ಕೆ ಸಿಲುಕುವ ಆಲಿಯಾಳ ರಕ್ಷಣೆಗೆಂದು ಅವಿನಾಶ್ ಎಂಬ ಅಧಿಕಾರಿ ಮಾಡುವ ಸಾಹಸ ಮತ್ತು ಪ್ರಯತ್ನಗಳು ಈ ಸರಣಿಯ ಜೀವಾಳ. ಈ ಪುಸ್ತಕ ಬರೆದ ಸಿರೀಶ್ ಕೂಡ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಆದ್ದರಿಂದ ರಕ್ಷಣಾ ಪ್ರಕ್ರಿಯೆಗೆ ಸಂಬಂಧಪಟ್ಟ ಸಣ್ಣ ಸಣ್ಣ ಸೂಕ್ಷ್ಮಗಳನ್ನೆಲ್ಲ ಬಹಳ ಚೆನ್ನಾಗಿ ವಿವರಿಸಲಾಗಿದೆ. ಅವಿನಾಶ್ ತನ್ನ ರಕ್ಷಣಾ ಕಾರ್ಯದ ಪ್ರಕ್ರಿಯೆಯಲ್ಲಿ ತನ್ನದೇ ಅನೇಕ ವೃತ್ತಿಪರ ಸವಾಲುಗಳನ್ನು ಕೂಡ ಎದುರಿಸುತ್ತಾ ಸಾಗಬೇಕಾದ ಪರಿಸ್ಥಿತಿಗಳು ಎದುರಾಗುತ್ತವೆ. ಕೆಲವು ಎಜೇಂಟ್‌ಗಳೂ ಆಲಿಯಾ ಜೀವವನ್ನು ಪಣಕ್ಕೆ ಇಟ್ಟಾದರೂ ದುಷ್ಕರ್ಮಿಗಳನ್ನು ಸೆದೆಬಡಿಯಬೇಕೆಂದು ಹೊರಡುತ್ತಾರೆ. ಆದರೆ ಅವಿನಾಶ್ ಪಾಲಿಗೆ ಆಲಿಯಾಳ ರಕ್ಷಣೆ ಎಲ್ಲಕ್ಕಿಂತ ಮುಖ್ಯ.ಇದರ ಜೊತೆ ಜೊತೆಗೆ ಅವಿನಾಶ್ ತನ್ನದೇ ವೈವಾಹಿಕ ಜೀವನದ ಕೆಲವು ಸಂಘರ್ಷಗಳನ್ನೂ ಎದುರಿಸುತ್ತಿರುತ್ತಾನೆ.

ಅವೆಲ್ಲವನ್ನೂ ಮೀರಿ ತನ್ನ ಗುರು ಆರಿಫ್ ಖಾನ್ ಅವರು ತೋರಿದ ದಾರಿಯಲ್ಲಿ ನಡೆದು ಹೇಗೆ ತನಗೆ ಎದುರಾಗುವ ಸವಾಲುಗಳನ್ನು ಎದುರಿಸಿ ಜಯಶಾಲಿಯಾಗುತ್ತಾನೆ ಎಂದು ನೋಡಬಹುದು. ಕಥಾನಿರೂಪಣೆ ಬಿಗಿಯಾಗಿದ್ದರೂ ಅಲ್ಲಲ್ಲಿ ಸ್ವಲ್ಪ ಹಿನ್ನಡೆ ಭಾಸವಾಗುತ್ತದೆ ಮತ್ತು ಸ್ವಲ್ಪ ನಿಧಾನಗತಿ ಎನಿಸುತ್ತದೆ. ಕೆಲವು ಘಟನೆಗಳನ್ನು ಕಡಿತಗೊಳಿಸಿದ್ದರೆ ಒಟ್ಟಾರೆ ಸರಣಿ ಇನ್ನೂ ಮೊನಚಾಗಿರುತ್ತಿತ್ತು. ಸರಣಿಯ ಅಂತ್ಯ ಸುಲಭವಾಗಿ ಊಹಿಸಿಬಿಡಬಹುದು. ಅಂತ್ಯವನ್ನು ಇನ್ನೊಂದು ಸ್ವಲ್ಪ ಕುತೂಹಲಕರವಾಗಿ ರೂಪಿಸಬಹುದಿತ್ತು. ಅಬ್ಬಾಸ್ ಅವರ ಸಾಹಸ ದೃಶ್ಯಗಳ ಸಂಯೋಜನೆ ಸರಣಿಯ ಮೌಲ್ಯವನ್ನು ಹೆಚ್ಚಿಸಿದೆ. ಸಂಜಯ್ ಚೌಧರಿ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಎಲ್ಲ ಅನುಭವಿ ನಟರ ಅಭಿನಯ ಮತ್ತು ತಾಂತ್ರಿಕ ಕುಶಲತೆ ಎಲ್ಲವೂ ಮಿಳಿತವಾಗಿ ಒಂದು ಅತ್ಯುತ್ತಮ ಸರಣಿಯನ್ನು ತಂಡ ನೀಡಿದೆ ಎಂದು ಹೇಳಬಹುದು. ‘ದಿ ಫ್ರೀಲ್ಯಾನ್ಸರ್’ ಹಾಟ್ ಸ್ಟಾರ್ ಅಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here