ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ಈ ಹಿಂದೆ ಕೆಲ ಬಾರಿ ಕಪ್ಪು ಕೋಟ್‌ ಧರಿಸಿ ವಕೀಲರಾಗಿ ತೆರೆ ಮೇಲೆ ರಂಜಿಸಿದ್ದಾರೆ. ಈಗ ಮತ್ತೊಮ್ಮೆ ಲೀಗಲ್ ಥ್ರಿಲ್ಲರ್ ಸಿನಿಮಾದಲ್ಲಿ ರವಿಚಂದ್ರನ್‌ ಲಾಯರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

ನೊಂದವರಿಗೆ ನ್ಯಾಯ ಕೊಡಿಸುವ ಪಾತ್ರದಲ್ಲಿ ನಟ ರವಿಚಂದ್ರನ್‌ ಪ್ರೇಕ್ಷಕನ ಮನಗೆದ್ದಿದ್ದಾರೆ. ಈಗಲೂ ಸಹ ಕಪ್ಪು ಕೋಟ್‌ ಧರಿಸಿ ‘ಯುವರ್‌ ಹಾನರ್‌’ ಎನ್ನುತ್ತಲೇ ಮತ್ತೊಮ್ಮೆ ರವಿಚಂದ್ರನ್‌ ‘ದ ಜಡ್ಜ್‌ಮೆಂಟ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜಿ9 ಕಮ್ಯೂನಿಕೇಷನ್‌ ಮೀಡಿಯಾ ಆಂಡ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿ ನಿರ್ಮಾಣವಾಗಿರುವ ಈ ಸಿನಿಮಾದ ಚಿತ್ರೀಕರಣ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಮುಕ್ತಾಯವಾಗಿದೆ.

ಸಿನಿಮಾದ ನಿರ್ದೇಶಕ ಗುರುರಾಜ ಕುಲಕರ್ಣಿ ಮಾತನಾಡಿ, ‘ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದ ವರ್ಷ ಡಾ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. ಚಿತ್ರ ಇಷ್ಟು ಸರಾಗವಾಗಿ ಮುಕ್ತಾಯವಾಗಲು ರವಿಚಂದ್ರನ್ ಅವರು ಸೇರಿದಂತೆ ಎಲ್ಲ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರವೇ ಕಾರಣ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರವನ್ನು ನಾನು ಸೇರಿದಂತೆ ಐವರು ನಿರ್ಮಾಪಕರು ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ದ ಜಡ್ಜ್ ಮೆಂಟ್’ ಚಿತ್ರವನ್ನು ಮೇನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಶರದ್ ನಾಡಗೌಡ ಹಾಗೂ ರಾಮು ರಾಯಚೂರು ಮಾತನಾಡಿ, ‘ನಮ್ಮ ಚಿತ್ರ ಕಳೆದ ವರ್ಷ ಯಾವ ದಿನ‌ ಆರಂಭವಾಗಿತ್ತೋ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ಧೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ’ ತಿಳಿಸಿದರು.

‘ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ‌. ಚಿತ್ರದ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ’ ಎಂದು ಧನ್ಯಾ ರಾಮಕುಮಾರ್ ಹೇಳಿದ್ದಾರೆ. ನಂತರ ಮಾತನಾಡಿದ ನಟಿ ಮೇಘನಾ ಗಾಂವ್ಕರ್, ‘ಈ ತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ. ರವಿಚಂದ್ರನ್ ಅವರ ಜೊತೆ ನಟಿಸಿದ್ದು ನನಗೆ ಸಂತೋಷವಾಗಿದೆ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ’ ಎಂದು ಸಂತಸ ಪಟ್ಟಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯಾ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here