ಫಂಗಸ್ ಒಂದು ಇರುವೆಯ ಮೆದುಳಿನ ಒಳಗೆ ಸೇರಿಕೊಂಡು ಅದನ್ನ ರಿಮೋಟ್ ಕಂಟ್ರೋಲ್ ಥರ ತನಗೆ ಬೇಕಾದಂತೆ ಆಡಿಸೋದನ್ನ ಹೆಚ್ಚೂಕಮ್ಮಿ ಎಲ್ಲರೂ ಕೇಳಿರುತ್ತೀರಿ. ಅದೇ ಫಂಗಸ್ ಮನುಷ್ಯನ ತಲೆ ಒಳಗೆ ಸೇರಿಕೊಂಡರೆ? ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ‘The Last Of Us’ ಸರಣಿ.
ಮೂರು ವರ್ಷದ ಕೆಳಗೆ ಅಪ್ಪಳಿಸಿದ ಕರೋನ ಹೊಡೆತಕ್ಕೆ ಸಿಕ್ಕಿಕೊಳ್ಳದವರು ಯಾರೂ ಇಲ್ಲ. ಹಾಗಾಗಿ ಸಾಂಕ್ರಾಮಿಕ ಸೋಂಕು ಇಡೀ ಮನುಷ್ಯ ಸಮಾಜಕ್ಕೆ ಯಾವ ರೀತಿ ಬ್ರೇಕ್ ಹಾಕಬಹುದು ಅನ್ನೋದನ್ನ ಯಾರಿಗೂ ವಿವರಿಸೋದು ಬೇಕಾಗಿಲ್ಲ. ಆದರೆ ಹಿಂದೆಲ್ಲಾ ಬಂದು ಹೋದ ಪ್ಲೇಗ್, ಕಾಲರಾ, ಸಿಡುಬುಗಳಿಗೆ ಹೋಲಿಸಿಕೊಂಡರೆ ಕರೋನಾ ಏನೇನೂ ಅಲ್ಲ ಎಂದೇ ಹೇಳಬಹುದು. ಹಾಗಿರುವಾಗ ಮನುಷ್ಯನ ಮೆದುಳಿಗೇ ಕೈಹಾಕುವಂತಹ ಫಂಗಸ್ ಸೋಂಕು ಉಂಟಾದರೆ ಪರಿಸ್ಥಿತಿ ಹೇಗಿರಬಹುದು? ಇದೇ ‘ಲಾಸ್ಟ್ ಆಫ್ ಅಸ್’ ಸೀರೀಸ್‌ನ ಕತೆ. ಹಾಲಿವುಡ್‌ನಲ್ಲಿ ‘ಝೋಂಬಿ ಚಿತ್ರಗಳು’ ಎನ್ನುವುದೇ ಒಂದು ವಿಶಿಷ್ಟ ಜಾನರ್ ಇದೆ. ಅತ್ಲಾಗೆ ಸತ್ತೂ ಇರದ ಇತ್ಲಾಗಿ ಬದುಕಿಯೂ ಇರದ ಮನುಷ್ಯನ ದೇಹಗಳು ದೆವ್ವಗಳ ತರ ಇತರೆ ಆರೋಗ್ಯಂತರ ಮೇಲೆ ಅಟ್ಯಾಕ್ ಮಾಡುತ್ತಾ ಇರುತ್ತವೆ. ಅವು ಕಚ್ಚಿದ್ರೆ ಕಚ್ಚಿಸಿಕೊಂಡವರೂ ಝೋಂಬಿಗಳಾಗ್ತಾರೆ. ಈ ಝೋಂಬಿ ಚಿತ್ರಗಳನ್ನು ಜನಪ್ರಿಯಗೊಳಿಸಿದವನು ಜಾರ್ಜ್ ರೊಮೇರೋ ಅನ್ನೋ ನಿರ್ದೇಶಕ.
ಈ ಝೋಂಬಿ ಜಾನರ್ ಅನ್ನು ನಿಜವಾದ ಪ್ರಪಂಚಕ್ಕೆ ಅಪ್ಲೇ ಮಾಡಿದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು ಅನ್ನುವುದೇ ‘ಲಾಸ್ಟ್ ಆಫ್ ಅಸ್’ ಸರಣಿಯನ್ನು ಇತರೆ ಝೋಂಬಿ ಕತೆಗಳಿಗಿಂತ ಬೇರೆಯಾಗಿ ನಿಲ್ಲಿಸುವುದು. ಕಂಡಕಂಡಲ್ಲಿ ಝೋಂಬೀಗಳು. ಹೇಗೋ ಬಚಾವಾದ ಅಲ್ಪಸ್ವಲ್ಪ ಜನ ಈಗ ಬದುಕುಳಿಯೋದಕ್ಕೆ ಹೋರಾಡುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಇಡೀ ಭೂಮಿ ಪಾಳು ಬಿದ್ದೋಗಿದೆ. ಸಿವಿಲೈಸೇಷನ್ ಕುಸಿದು ಬಿದ್ದಿದೆ. ಪ್ರಳಯ ಅಂತಾರಲ್ಲ ಸೇಮ್ ಅದೇ ಆಗ್ತಿದೆ. ಜನರು ಕಂಡಕಂಡಲ್ಲಿ ಅಲೆದಾಡಿ ಮತ್ತಷ್ಟು ರೋಗ ಹರಡದಿರುವಂತೆ ನೋಡಿಕೊಳ್ಳಲು FEDRA ಅನ್ನೋ ಸಂಸ್ಥೆ ಮಾತ್ರ ಈಗ ಉಳಿದಿರೋ ಗವರ್ನ್‌ಮೆಂಟ್. ಅದಕ್ಕೆ ವಿರೋಧಿಸೋ ರೆಸಿಸ್ಟೆನ್ಸ್ ಗುಂಪೂ ಇದೆ. ಹೀಗೆ ಇಂತಹ ಪರಿಸ್ಥಿತಿ ನಿಜವಾಗ್ಲೂ ಉಂಟಾದರೆ ಬರಬಹುದಾದ ಸಂಧರ್ಭಗಳು – ಪಾತ್ರಗಳನ್ನೆಲ್ಲಾ ಇಲ್ಲಿ ನೋಡಬಹುದು.
ಝೋಂಬಿಗಳಿಗಿಂತ ಇಲ್ಲಿ ನಮ್ಮನ್ನ ಹೆಚ್ಚು ಬೆಚ್ಚಿಬೀಳಿಸುವುದು ಮನುಷ್ಯರು. ಯಾರು ಸೋಂಕಿತರು -ಯಾರನ್ನ ನಂಬುವುದು ಅನ್ನೋದನ್ನು ಹೇಗೆ ಹೇಳುವುದು? ಹಾಗಾಗಿ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಬಾಯಿ ಮುಕ್ಕಳಸಿ ಉಗಿದಷ್ಟು ಸಲೀಸಾಗಿ ಸಾಯಿಸುವುದು ಇಲ್ಲಿ ಮಾಮೂಲಿ. ನಾನು ಬದುಕುಳಿಯೋದು ಮೊದಲು ಮಿಕ್ಕಿದ್ದೆಲ್ಲಾ ಆಮೇಲೆ ತಾನೆ? ಇಂತಹ ಸಂಧರ್ಭದಲ್ಲಿ ನಾವು ನೀವು ಇದ್ದಿದ್ರೂ ಅದನ್ನೇ ಮಾಡ್ತಿದ್ವಿ ಅನ್ನೋದೇ ಭಯ ಬೀಳಿಸುತ್ತೆ. ಜೊತೆಗೆ ಸರಿ ತಪ್ಪುಗಳ ಲೆಕ್ಕಾಚಾರವೇ ಇಲ್ಲದ ಪ್ರತಿಯೊಬ್ಬರೂ ಬದುಕಲು ಹೋರಾಡುತ್ತಿರುವ ಇಡೀ ಪರಿಸ್ಥಿತಿಯ ಸಂದಿಗ್ಧತೆ ನಮ್ಮ ಹೊಟ್ಟೆಯನ್ನು ಹಿಂಡಿ ಬಿಸಾಕುತ್ತದೆ.
‘ಲಾಸ್ಟ್ ಆಫ್ ಅಸ್’ 2013ರಲ್ಲಿ ಬಂದ ವಿಡಿಯೋ ಗೇಮ್‌ನ ಚಿತ್ರರೂಪಕ್ಕೆ ಅಳವಡಿಸಿರುವ ಅಡಾಪ್ಟೇಷನ್. ವಿಡಿಯೋ ಗೇಮ್‌ಗಳು ಕೇವಲ ಟೈಂ ಪಾಸ್‌ಗೆ ಆಡೋ ಆಟಗಳಾಗಿರದೆ ಕತೆ ಹೇಳುವ ಮತ್ತೊಂದು ಪ್ರಕಾರಗಳಾಗಿ ಆಗಲೇ ಸಾಕಷ್ಟು ಕಾಲವಾಗಿದೆ. ಈ ಕಲಾಪ್ರಕಾರ ಎಷ್ಟು ಪರಿಣಾಮಕಾರಿಯಾಗಿರಬಲ್ಲದು ಎನ್ನುವುದನ್ನ ತೋರಿಸಿಕೊಟ್ಟ ವಿಡಿಯೋ ಗೇಮ್‌ಗಳಲ್ಲಿ ‘ಲಾಸ್ಟ್ ಆಫ್ ಅಸ್’ ಪ್ರಮುಖವಾದದ್ದು.
ಇನ್ನು ಕತೆಯ ವಿಚಾರಕ್ಕೆ ಬರುವುದಾದರೆ ಒಬ್ಬ ಮಧ್ಯ ವಯಸ್ಕ ವ್ಯಕ್ತಿ. ಈ ಸಾಂಕ್ರಾಮಿಕಕ್ಕೆ ಸಿಕ್ಕಿ ಇದ್ದೊಬ್ಬ ಮಗಳನ್ನು ಕಳೆದುಕೊಂಡು ಈಗ ಬದುಕುಳಿಯಲು ಹೋರಾಡುತ್ತಿದ್ದಾನೆ. ಮತ್ತೊಬ್ಬಳು ಚಿಕ್ಕ ಹುಡುಗಿ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಹುಟ್ಟಿದವಳು. ಇವಳ ರಕ್ತದಲ್ಲಿ ಈ ಫಂಗಸ್‌ಗೆ ಪ್ರತಿರೋಧಕ ಶಕ್ತಿ ಇದೆ. ಅವಳನ್ನ ಬಳಸಿಕೊಂಡು ಈ ರೋಗಕ್ಕೆ ಔಷಧಿ ತಯಾರಿಸಬಹುದು. ಅವಳೊಬ್ಬಳೇ ಮಾನವರಿಗೆ ಉಳಿದಿರೋ ಭವಿಷ್ಯ ಈಗ. ಆದರೆ ಅದನ್ನ ಹೇಳಿದಷ್ಟು ಸಲೀಸಾಗಿ ಮಾಡುವದಕ್ಕೆ ಗವರ್ನಮೆಂಟ್ ಎಲ್ಲಿದೆ? ಕಂಡಕಂಡಲ್ಲಿ ತಿರುಗಿದರೆ ಪೋಲೀಸರು ಹಿಡಿಯುತ್ತಾರೆ. ಜಾಸ್ತಿ ಮಾತಾಡಿದ್ರೆ ಮರಣದಂಡನೆ. ಹೀಗಿರುವಾಗ ಆ ಹುಡುಗಿಯನ್ನು ಉಪಾಯವಾಗಿ ಔಷಧಿ ತಯಾರಿಸಬಲ್ಲ ತಂಡದ ಹತ್ತಿರ ಕೊಂಡೊಯ್ಯಬೇಕು. ಹಲವಾರು ಕೋ ಇನ್ಸಿಡೆನ್ಸ್‌ಗಳಿಂದ ಆ ಜವಾಬ್ದಾರಿ ಈ ಮಧ್ಯ ವಯಸ್ಕ ವ್ಯಕ್ತಿಯ ಮೇಲೆ ಬರುತ್ತೆ. ಅವರಿಬ್ಬರೂ ಈ ಝೋಂಬಿ ಪ್ರಪಂಚದಲ್ಲಿ, ಮನುಷ್ಯ ಮನುಷ್ಯನನ್ನ ನಂಬದಿರುವ ಪ್ರಪಂಚದಲ್ಲಿ ಹೇಗೆ ಬಚಾವಾಗುತ್ತಾರೆ, ಸೇಫಾಗಿ ರೀಚ್ ಆಗ್ತಾರಾ, ಔಷದಿ ತಯಾರಿಸಿ ಪ್ರಪಂಚವನ್ನು ಉಳಿಸುತ್ತಾರ ಅನ್ನುವುದು ಕತೆ.
ಈ ಹುಡುಗಿ ಸಾಂಕ್ರಾಮಿಕದ ನಂತರ ಹುಟ್ಟಿದವಳಾದ್ದರಿಂದ ಮುಂಚೆ ಬದುಕು ಹೇಗಿತ್ತು ಅನ್ನುವ ಅರಿವು ಆಕೆಗಿಲ್ಲ. ಕ್ಯಾಸೆಟ್ಟಿನಿಂದ ಮ್ಯೂಸಿಕ್ ಕೇಳುವುದು, ಮ್ಯಾಗಜೀನ್‌ನಲ್ಲಿ ಜೋಕ್ ಓದುವಂತ ಕ್ಷುಲ್ಲಕ ಸಂಗತಿಗಳೆಲ್ಲ ಆಕೆಗೆ ಮಹಾನ್ ಆಗಿ ಕಾಣುತ್ತವೆ. ಇಂಥವನ್ನು ಆ ಮಧ್ಯ ವಯಸ್ಕ, ‘ಅದೇನದು ಬಿಸಾಕು’ ಅಂದರೆ ಆಕೆ ಅದನ್ನು ‘ಗೋಲ್ಡ್ ಗುರು ಇದು’ ಅನ್ನುವಂತೆ ಎಂಜಾಯ್ ಮಾಡುತ್ತಿರುತ್ತಾಳೆ. ಈ ಹುಡುಗಿಯ ಪಾತ್ರ ಮಾಡಿರುವುದು ಬೆಲ್ಲಾ ರಾಮ್ಸಿ. ಮೂರ್ನಾಲ್ಕು ವರ್ಷದ ಕೆಳಗೆ ‘ಗೇಮ್ ಆಫ್ ಥ್ರೋನ್ಸ್’ನ ಎರಡು ಮೂರು ಎಪಿಸೋಡುಗಳಲ್ಲಿ ಕಾಣಿಸಿಕೊಂಡು ಆ ಶೋನ ಇತರೆ ಸ್ಟಾರ್‌ಗಳನ್ನ ಹಿಂದಿಕ್ಕಿ ಜನಪ್ರಿಯವಾಗಿದ್ದ ಹುಡುಗಿ ಈಕೆ. ಅದೇ ಸ್ಟಾರ್ ಪರ್ಫಾಮೆನ್ಸ್‌ನ ಇಲ್ಲೂ ಕೊಟ್ಟಿದ್ದಾಳೆ. ಆಕೆಗೆ ಜೊತೆಯಾಗಿರುವುದು ಪೆಡ್ರೋ ಪಾಸ್ಕಲ್ ಎಂಬ ನಟ. ಇವರಿಬ್ಬರ ಕೆಮಿಸ್ಟ್ರಿ ಈ ಸೀರೀಸನ್ನ ಮತ್ತೊಂದು ಲೆವೆಲ್‌ಗೆ ತಗೊಂಡು ಹೋಗಿದೆ. ಹತ್ತು ಎಪಿಸೋಡಿನ ಈ ಶೋನಲ್ಲಿ ಐದು ಎಪಿಸೋಡ್ ಆಗಲೇ ಬಂದಿದ್ದು ವಾರಕ್ಕೊಂದರಂತೆ ಇನ್ನೂ ಐದು ಎಪಿಸೋಡ್ ಬರುವುದಿದೆ.