ತಮನ್ನಾ ಭಾಟಿಯಾ ನಟನೆಯ ‘ಆಖ್ರಿ ಸಚ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ರಾಬಿ ಗ್ರೆವಾಲ್‌ ನಿರ್ದೇಶನದ ತನಿಖಾ ಸರಣಿ Hotstarನಲ್ಲಿ ಆಗಸ್ಟ್‌ 25ರಿಂದ ಸ್ಟ್ರೀಮ್‌ ಆಗಲಿದೆ.

ರಾಬಿ ಗ್ರೆವಾಲ್‌ ನಿರ್ದೇಶನದಲ್ಲಿ ತಮನ್ನಾ ಭಾಟಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಆಖ್ರಿ ಸಚ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಸರಣಿಯಲ್ಲಿ ತಮನ್ನಾ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸೌರವ್ ಡೇ ಬರೆದಿರುವ ಈ ತನಿಖಾ ಸರಣಿಯನ್ನು ರಾಬಿ ಗ್ರೆವಾಲ್ ನಿರ್ದೇಶಿಸಿದ್ದಾರೆ. 2018ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಕುಟುಂಬದ ಸರಣಿ ಆತ್ಮಹತ್ಯೆಗಳನ್ನು ಆಧರಿಸಿದ ಸರಣಿಯಿದು. ಇದೊಂದು ಭಯಾನಕ ಘಟನೆಯಾಗಿದ್ದು, ದೆಹಲಿಯ ಬುರಾರಿಯಲ್ಲಿ ಕುಟುಂಬದ 11 ಸದಸ್ಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಸಾಮೂಹಿಕ ಆತ್ಮಹತ್ಯೆ ಪ್ರಕರಣ ಎಂತಲೂ ಕರೆಯುತ್ತಾರೆ.

ಟ್ರೈಲರ್‌ ಅವಿಭಕ್ತ ಕುಟುಂಬವೊಂದು ತೆಗೆದುಕೊಂಡ ಕೆಟ್ಟ ನಿರ್ಧಾರದಿಂದ ಅವರ ಇಡೀ ಪರಿವಾರವೇ ಸರ್ವನಾಶವಾಗುವ ಘಟನೆಗಳನ್ನು ಒಳಗೊಂಡಿದೆ. ಆ ಒಂದು ರಾತ್ರಿ ಕುಟುಂಬದವರು ಮಾಡಿಕೊಂಡ ಆತ್ಮಹತ್ಯೆ, ದುರಂತ ಸಾವು ಹಾಗೂ ಅಲ್ಲಿನ ಅನೇಕ ರಹಸ್ಯಗಳನ್ನು ತೆರೆದಿಟ್ಟಿದೆ ಮತ್ತು ಪೊಲೀಸ್‌ ತನಿಖೆಯನ್ನು ಆಧರಿಸಿದೆ. ಅಭಿಷೇಕ್ ಬ್ಯಾನರ್ಜಿ, ಶಿವಿನ್ ನಾರಂಗ್, ಡ್ಯಾನಿಶ್ ಇಕ್ಬಾಲ್, ನಿಶು ದೀಕ್ಷಿತ್, ಕೃತಿ ವಿಜ್, ಸಂಜೀವ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು, ‘ಈ ಸರಣಿಯು ಪೊಲೀಸರ ದೃಷ್ಟಿಕೋನದಿಂದ ಪ್ರಕರಣವು ಹೇಗೆ ತನಿಖೆಯಾಗುತ್ತದೆ ಎಂಬುದನ್ನು ತೋರಿಸಲಿದೆ’ ಎಂದಿದ್ದಾರೆ.

ನಟಿ ತಮನ್ನಾ ಭಾಟಿಯಾ, ‘ಮೊದಲು ಕಥೆ ಕೇಳಿದಾಗ ಶಾಕ್‌ ಆದೆ. ಆದರೆ ಈ ಪಾತ್ರವು ನನಗೆ ತುಂಬಾ ವಿಶೇಷವಾಗಿದೆ. ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಸರಣಿಯ ಘಟನೆಗಳಿಂದ ಮಾನವನ ಭಾವಾನಾತ್ಮಕ ದೌರ್ಬಲ್ಯತೆಗಳಿಗಿಂತ ಮತ್ತೊಂದಿಲ್ಲ ಎಂಬುದು ತಿಳಿಯುತ್ತದೆ’ ಎಂದಿದ್ದಾರೆ. ನಟ ಅಭಿಷೇಕ್ ಬ್ಯಾನರ್ಜಿ, ‘ಆಖ್ರಿ ಸಚ್ ಮಾನವನ ಮನಸ್ಸಿನ ಕರಾಳ ಮುಖಗಳನ್ನು ತೆರೆದಿಡುತ್ತದೆ. ಈ ಪಾತ್ರಕ್ಕೆ ಜೀವ ತುಂಬುವ ರೀತಿ ನಾನು ನಟಿಸಲು ಉತ್ಸುಕನಾಗಿದ್ದೇನೆ. ಮನುಷ್ಯನ ಕರಾಳ ಭಾವನೆಗಳಿಂದ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here