ಈ ವೆಬ್ ಸರಣಿಯ ಪ್ಲಸ್ ಪಾಯಿಂಟ್ ಎಂದರೆ ಪಾತ್ರಗಳ ನಿರೂಪಣೆ ಮತ್ತು ಲಿಪ್ ಸಿಂಕಿಂಗ್. ಇಲ್ಲಿನ ಪಾತ್ರಗಳ ದನಿಯೂ ಒಳ್ಳೆಯ ಫೀಲ್ ಕೊಡುತ್ತದೆ. ಹೊಸ ಸಂಚಿಕೆಗಳ ಸ್ಪಷ್ಟ ಸುಳಿವಿನೊಂದಿಗೆ ಅಥವಾ ಹೊಸ ಋತುವಿನ ತಯಾರಿಕೆಯಲ್ಲಿ ಸೀಸನ್ ಮುಕ್ತಾಯಗೊಳ್ಳುತ್ತದೆ. ಗ್ರಾಫಿಕ್ ಇಂಡಿಯಾ ನಿರ್ಮಿಸಿದ ‘ದಿ ಲೆಜೆಂಡ್ ಆಫ್ ಹನುಮಾನ್’, ಪೌರಾಣಿಕ ಕಥೆಗಳು ಮತ್ತು ಅನಿಮೇಷನ್ ಇಷ್ಟಪಡುವವರು ನೋಡಲೇಬೇಕಾದ ಸರಣಿ.

‘ದಿ ಲೆಜೆಂಡ್ ಆಫ್ ಹನುಮಾನ್‌’ ಮೂರನೇ ಸೀಸನ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಭಗವಾನ್ ಹನುಮಂತನ ದಂತಕಥೆಗಳು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡುವಂಥದ್ದೆ. ಲಂಕಾವನ್ನು ಸುಟ್ಟ ವಾನರ ಹನುಮಾನ್. ಆತನ ಕಾರ್ಯಗಳು ಸಾಹಸಮಯವಾಗಿರುತ್ತವೆ. ಪ್ರಸ್ತುತ ವೆಬ್ ಸರಣಿ ಲಂಕಾ ದ್ವೀಪದ ರಾಜ ರಾವಣನ ವಿರುದ್ಧದ ಯುದ್ಧಕ್ಕೆ ಸಜ್ಜುಗೊಳ್ಳುವುದಾಗಿದೆ. ಎರಡನೇ ಸೀಸನ್‌ನಲ್ಲಿ ರಾವಣನೊಂದಿಗಿನ ಹನುಮಂತನ ಮೊದಲ ಮುಖಾಮುಖಿ ನೋಡಿದ್ದೇವೆ. ಅದ್ಭುತವಾದ 3D ಅನುಭವದ ಮೂಲಕ ಆಕರ್ಷಣೀಯ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಕಳೆದ ಸೀಸನ್‌ನಲ್ಲಿ ವಾನರ ಸೈನ್ಯ , ರಾವಣನ ಪಡೆಯೊಂದಿಗಿನ ಯುದ್ಧದಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ಹೀಗಿರುವಾಗ ಹನುಮಾನ್ ತನ್ನ ವಾನರ ಪಡೆಯನ್ನು ಯುದ್ಧಕ್ಕಾಗಿ ಸಿದ್ಧಗೊಳಿಸುವಲ್ಲಿಂದ ಮೂರನೇ ಸೀಸನ್ ಆರಂಭವಾಗುತ್ತದೆ. ಮನೋಜ್ ಮುಂತಾಶಿರ್ ಶುಕ್ಲಾ ರಚಿಸಿದ ಕಾಲ ಭೈರವ್ ಸಂಯೋಜಿಸಿದ ಶೀರ್ಷಿಕೆ ಗೀತೆ ಖುಷಿ ಕೊಡುತ್ತದೆ.

ರಾವಣ ಸೀತೆಯನ್ನು ಅಪಹರಿಸಿದ್ದಾನೆ. ಲಂಕಾದಿಂದ ಸೀತೆಯನ್ನು ಬಿಡಿಸಿಕೊಂಡು ಬರಬೇಕಾಗಿದೆ. ಅದಕ್ಕಾಗಿ ಯುದ್ಧ ಮಾಡಲೇಬೇಕಾದ ಪರಿಸ್ಥಿತಿ. ಶ್ರೀರಾಮನಿಗೆ ಅತ್ಯಂತ ನಿಷ್ಠಾವಂತನಾದ ಹನುಮಾನ್ ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಠಿಣ ತರಬೇತಿ ನೀಡುತ್ತಿದ್ದಾನೆ. ಏತನ್ಮಧ್ಯೆ, ಶ್ರೀರಾಮ ಮತ್ತು ರಾವಣ ಇಬ್ಬರೂ ಪರಸ್ಪರ ಹೋರಾಡಲು ಸಿದ್ಧರಾಗಿದ್ದಾರೆ. ರಾವಣನಿಂದ ಸೆರೆಹಿಡಿಯಲ್ಪಟ್ಟ ಸೀತೆ, ರಾವಣನನ್ನು ಮಾತಿನಲ್ಲೇ ಎದುರಿಸುತ್ತಾಳೆ. ರಾಮ ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಆಕೆಯಲ್ಲಿದೆ. ಸೀಸನ್ 3ರಲ್ಲಿ ಹನುಮಂತ ನಾಯಕನಾಗಿ ಬೆಳೆಯತ್ತಾನೆ. ರಾವಣನ ವಿರುದ್ಧ ಹೋರಾಡಲು ಆತ ಕಪಿ ಸೈನ್ಯವನ್ನು ಸಜ್ಜು ಮಾಡುತ್ತಾನೆ, ಅವರನ್ನು ಹುರಿದುಂಬಿಸುತ್ತಾನೆ.

ಈ ವೆಬ್ ಸರಣಿಯ ಪ್ಲಸ್ ಪಾಯಿಂಟ್ ಎಂದರೆ ಪಾತ್ರಗಳ ನಿರೂಪಣೆ ಮತ್ತು ಲಿಪ್ ಸಿಂಕಿಂಗ್. ಇಲ್ಲಿನ ಪಾತ್ರಗಳ ದನಿಯೂ ಒಳ್ಳೆಯ ಫೀಲ್ ಕೊಡುತ್ತದೆ. ಶ್ರೀರಾಮನಿಗೆ ಸಂಕೇತ್ ಮ್ಹಾತ್ರೆ ಅವರ ದನಿ, ಹನುಮಾನ್‌ಗೆ ದಮನ್ ದೀಪ್ ಸಿಂಗ್ ಬಗ್ಗಾನ್, ಸೀತೆಗೆ ಸುರಭೀ ಪಾಂಡೆ ಮತ್ತು ರಾವಣನಿಗೆ ಶರದ್ ಕೇಳ್ಕರ್ ದನಿ ನೀಡಿದ್ದಾರೆ. ಫ್ಲ್ಯಾಷ್‌ಬ್ಯಾಕ್‌ಗಳನ್ನು ಸೂಚಿಸಲು ವಿಸ್ತಾರವಾದ ಡ್ರಾ ಪ್ಯಾನೆಲ್‌ಗಳ ಬಳಕೆಯಾಗಿರುವುದರಿಂದ ಸರಣಿ ನೋಡುವಾಗ ಬೋರ್ ಅನಿಸುವುದಿಲ್ಲ. ಫೈಟಿಂಗ್ ಸೀನ್‌ಗಳನ್ನು ತುಸು ಗಂಭೀರವಾಗಿಯೇ ತೋರಿಸಲಾಗಿದೆ.

ಈ ಸರಣಿಯ ಕೋ ಕ್ರಿಯೇಟರ್ಸ್ ಶರದ್ ದೇವರಾಜನ್ ಮತ್ತು ಜೀವನ್ ಜೆ ಕಾಂಗ್, ಬರಹಗಾರರಾದ ಸರ್ವತ್ ಚಡ್ಡಾ ಮತ್ತು ಶಿವಾಂಗಿ ಸಿಂಗ್ ಬರೆದ ಮೂರನೇ ಸೀಸನ್ ಲಂಕಾಗೆ ಹೆಚ್ಚು ಒತ್ತುಕೊಟ್ಟಿದೆ. ರಾವಣ ಮತ್ತು ಹನುಮಂತನ ನಡುವೆಯೇ ಅನೇಕ ರೋಚಕ ಯುದ್ಧದ ಸರಣಿಗಳಿವೆ. ನಿರ್ದೇಶಕರಾದ ಕಾಂಗ್ ಮತ್ತು ನವೀನ್ ಜಾನ್ ಕೂಡ ಈ ಋತುವಿನಲ್ಲಿ ರಾವಣ ಮತ್ತು ಅವನ ಕುತಂತ್ರದ ತಂತ್ರಗಳತ್ತ ಗಮನ ಹರಿಸುತ್ತಾರೆ. ಎಲ್ಲದಕ್ಕಿಂತಲೂ ರಾವಣನ ದನಿ ಇಲ್ಲಿ ಮೇಲುಗೈ ಸಾಧಿಸುತ್ತದೆ. ಅದಕ್ಕಾಗಿ ಶರದ್ ಕೇಳ್ಕರ್‌ಗೆ ಚಪ್ಪಾಳೆ ಸಲ್ಲಬೇಕು.

‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ ಮೂರರ ಕಥಾವಸ್ತುವು ರಾಮ ಮತ್ತು ರಾವಣನ ನಡುವಿನ ಪ್ರಮುಖ ಯುದ್ಧದ ಮೊದಲು ಏನಾಗುತ್ತದೆ ಎಂಬುದ ಮೇಲೆ ಕೇಂದ್ರೀಕರಿಸಿದೆ. ವಾಲ್ಮೀಕಿಯ ರಾಮಾಯಣದ ಈ ಪುನರಾವರ್ತನೆಯಲ್ಲಿ, ಇಂದ್ರಜಿತ್ ತನ್ನ ಮಾಯೆಯನ್ನು ಬಳಸಿಕೊಂಡು ರಾಮ-ಲಕ್ಷ್ಮಣ ಜೋಡಿಯ ಮೇಲೆ ಆಕ್ರಮಣ ಮಾಡುವುದು (ದಾಳಿಯ ಸಮಯದಲ್ಲಿ ಅದೃಶ್ಯವಾಗುವ ಶಕ್ತಿ), ಶೂರ್ಪನಖಾ ಲಂಕೆಗೆ ಹಿಂತಿರುಗುವುದು ಮತ್ತು ಅಂತಿಮವಾಗಿ ರಾವಣನ ಸಹೋದರ ಕುಂಭಕರ್ಣನನ್ನು ಎಚ್ಚರಗೊಳಿಸುವುದು ಮುಂತಾದ ಅದ್ಭುತ ದೃಶ್ಯಗಳು ಇಲ್ಲಿವೆ.

ರಾಮಾಯಣದ ಕಥೆಯೊಂದಿಗೆ ಪರಿಚಿತವಾಗಿರುವ ಭಾರತೀಯ ಪ್ರೇಕ್ಷಕರು, ಜೀವ ಉಳಿಸುವ ಸಂಜೀವಿನಿ ತರಲು ಹನುಮಂತನು ದ್ರೋಣಗಿರಿ ಪರ್ವತದ ಒಂದು ಭಾಗವನ್ನು ಹೊತ್ತೊಯ್ಯುವ ಸಾಹಸ ಕಾರ್ಯವನ್ನು ಖಂಡಿತವಾಗಿ ಎದುರು ನೋಡುತ್ತಿದ್ದರು. ಇಂದ್ರಜಿತ್‌ನ ದಾಳಿಯ ನಂತರ ಲಕ್ಷ್ಮಣನನ್ನು ರಕ್ಷಿಸುವಲ್ಲಿ ನಿರ್ಣಾಯಕವಾದ ಈ ಘಟನೆ ಇಲ್ಲಿ ಅನಿರೀಕ್ಷಿತ ತಿರುವು ಪಡೆಯುತ್ತದೆ. ಇಲ್ಲಿ ರಾಮ ಲಕ್ಷ್ಮಣರಿಗೆ ಪ್ರಜ್ಞೆ ಮರಳಿ ಬರುವುದು ವೈನತೇಯನಿಂದಾಗಿ!

ಅಂದಹಾಗೆ ಆರು ಕಂತುಗಳ ಸರಣಿಯು ಅಪೂರ್ಣ ವಿಷಯಗಳೊಂದಿಗೆ ಕೊನೆಗೊಳ್ಳುತ್ತದೆ. ಶ್ರೀರಾಮ, ಲಕ್ಷ್ಮಣ, ಹನುಮಾನ್ ಮತ್ತು ಸೀತೆಯ ಕಥೆಯು ಅಪೂರ್ಣವಾಗಿ ಉಳಿದಿದೆ. ಇಲ್ಲಿ ಕೆಲವು ಹೊಸ ಪಾತ್ರಗಳನ್ನು ಪರಿಚಯಿಸಿದೆ. ಆದರೆ ಶಕ್ತಿ- ಭಕ್ತಿ ನಡುವಿನ ಪ್ರಮುಖ ಯುದ್ಧವು ಇನ್ನೂ ಪೂರ್ಣಗೊಂಡಿಲ್ಲ. ಹೊಸ ಸಂಚಿಕೆಗಳ ಸ್ಪಷ್ಟ ಸುಳಿವಿನೊಂದಿಗೆ ಅಥವಾ ಹೊಸ ಋತುವಿನ ತಯಾರಿಕೆಯಲ್ಲಿ ಸೀಸನ್ ಮುಕ್ತಾಯಗೊಳ್ಳುತ್ತದೆ. ಒಳಿತು ಕೆಡುಕಿನ ನಡುವಿನ ಅಂತಿಮ ಯುದ್ಧಕ್ಕೆ ಇದು ಅಭಿಮಾನಿಗಳನ್ನು ಸಿದ್ಧಪಡಿಸುತ್ತದೆ. ಅಲ್ಲಿ ಹನುಮಂತನು ಭಗವಾನ್ ರಾಮನಿಗೆ ಸಹಾಯ ಮಾಡುವಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತಾನೆ. ಗ್ರಾಫಿಕ್ ಇಂಡಿಯಾ ನಿರ್ಮಿಸಿದ ‘ದಿ ಲೆಜೆಂಡ್ ಆಫ್ ಹನುಮಾನ್’, ಪೌರಾಣಿಕ ಕಥೆಗಳು ಮತ್ತು ಅನಿಮೇಷನ್ ಇಷ್ಟಪಡುವವರು ನೋಡಲೇಬೇಕಾದ ಸರಣಿ.

LEAVE A REPLY

Connect with

Please enter your comment!
Please enter your name here