ಲಿಡಾ obsessive ಮಹಿಳೆ. ಸಾಹಿತ್ಯ, ಲೈಂಗಿಕತೆ, ಕಾಮ ಮತ್ತು ಮಕ್ಕಳು ಹೀಗೆ. ಆದರೆ ಅವೆಲ್ಲವೂ ಒಂದು ಬಗೆಯ ಒತ್ತಾಯದಲ್ಲಿ ಪೂರೈಸಿಕೊಂಡಂತಿದೆ. ಇದು ಲಿಡಾಳ ಅಂತರಿಕ ತಾಕಲಾಟ. – ಗಿಲೆನಾಲ್ ನಿರ್ದೇಶನದ ‘ದ ಲಾಸ್ಟ್ ಡಾಟರ್’ ಇಂಗ್ಲಿಷ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇತ್ತೀಚೆಗೆ ಪಶ್ಚಿಮ ದೇಶಗಳಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಸೂಕ್ಷ್ಮ ಸಂವೇದನೆಯಿಂದ ಮೂಡುಬರುತ್ತಿವೆ ಮತ್ತು ತಾಕಲಾಟಗಳ ಹಾಲಾಹಲವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಿದ್ದಾರೆ. 1967ರಲ್ಲಿ ಕೆನ್ ಲೋಚ್ ನಿರ್ದೇಶನ ಮಾಡಿದ ‘ಪೂರ್ ಕೌ’ ಮಹಿಳಾ ದೃಶ್ಟಿಕೋನದ ಕಲ್ಟ್ ಸಿನಿಮವಾಗಿತ್ತು. ಐರ್ಲೆಂಡ್‌ನ ಜಾಯ್ ಎನ್ನುವ ಹದಿಹರೆಯದ ಮಹಿಳೆಯ ಬದುಕಿನ ತಲ್ಲಣ ಮತ್ತು ಬರವಸೆಗಳನ್ನು ಲೋಚ್ ಕಟ್ಟಿದ ರೀತಿ ಹೊಸ ಗಾಳಿ ಬೀಸಿದಂತಿತ್ತು. ಆ ನಂತರ ಸಾಕಶ್ಟು ನೀರು ಹರಿದಿದೆ.
ಕಳೆದ ಕೆಲ ವರ್ಷಗಳಿಂದ ಮತ್ತೆ ಲೋಚ್ ಘರಾಣದ ಕಥನ ಹೊಸ ಬಗೆಯಲ್ಲಿ ಮರಳಿದೆ. 21ನೇ ಶತಮಾನದ ವಿಕಾರಗಳೊಂದಿಗೆ ಸಂಘರ್ಷಿಸುತ್ತಲೇ ಬದುಕುತ್ತಿರುವ ಆದುನಿಕ ಮಹಿಳೆಯ ಖಾಸಗಿ ಬದುಕನ್ನು ಪ್ರಾಮಾಣಿಕವಾಗಿ ನಿರೂಪಿಸುತ್ತಿದ್ದಾರೆ ಮತ್ತು ಇವರು ಮಹಿಳಾ ನಿರ್ದೇಶಕರಾಗಿರುವುದು ವಿಶೇಷ.
ಜಸ್ಮಿಲಾ ಬಾನಿಕ್ ನಿರ್ದೇಶನದ ‘ಕ್ವಾ ವಾಡೀಸ್ ಐಡಾ’ ಎಂಬ ಬೋಸ್ನಿಯಾ ಸಿನಿಮಾ, ಚ್ಲೋಯ್ ಝಾವೋ ನಿರ್ದೇಶನದ ‘ನೋಮಾಡ್ ಲ್ಯಾಂಡ್’ ಇತ್ತೀಚಿನ ಉದಾಹರಣೆಗಳು. ಇಲ್ಲಿನ ಮಹಿಳಾ ಪ್ರೊಟಗಾನಿಸ್ಟ್ ರ ಬದುಕಿನಲ್ಲಿ ಗೊಂದಲಗಳಿವೆ, ತಲ್ಲಣಗಳಿವೆ. ಆದರೆ ಪುರುಷಾಧಿಪತ್ಯವನ್ನು ಮುರಿದುಕೊಂಡ ದಿಟ್ಟತನವಿದೆ. ತನ್ನ ಬದುಕಿಗೆ ತಾನೇ ಹೊಣೆಗಾರಳು ಎನ್ನುವ ಸ್ಪಷ್ಟತೆಯಿದೆ. ಆದುನಿಕ ಜಗತ್ತಿನ ಎಲ್ಲಾ ವೈರುಧ್ಯಗಳನ್ನು ಏಕಾಂಗಿಯಾಗಿ ಎದುರಿಸುವ ಛಲವಿದೆ. ನಾ ನಿಲ್ಲುವಳಲ್ಲ ಎಂಬ ದೃಡತೆಯಿದೆ. ಇದು ಕುಷಿಯ ವಿಚಾರ.
ಇದೇ ಮಾದರಿಯ ಮುಂದುವರಿಕೆಯಾಗಿ 2021ರ ಕಡೆಯ ಬಾಗದಲ್ಲಿ ಬಿಡುಗಡೆಯಾದ ಮ್ಯಾಗಿ ಗಿಲೆನ್ ಹಾಲ್‌ಳ ಮೊದಲ ನಿರ್ದೇಶನದ ‘ದ ಲಾಸ್ಟ್ ಡಾಟರ್’ ಸಿನಿಮಾ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಸಿನಿಮಾದ ಪ್ರೊಟಗಾನಿಸ್ಟ್ ಲಿಡಾ ಇಂಗ್ಲೀಷ್ ಸಾಹಿತ್ಯದ ಪ್ರೊಫೆಸರ್. ಆಕೆ ತನ್ನ ಸಾಹಿತ್ಯ ಸಂಶೋದನೆಗೋಸ್ಕರ ಸೆಬಾಟಿಕ್ ರಜೆಯ ಮೇಲೆ ಗ್ರೀಕ್ ದ್ವೀಪದಲ್ಲಿ ಕೆಲ ದಿನಗಳ ಕಳೆಯಲು ಬಂದಿದ್ದಾಳೆ. ಅಂತರ್ಮುಖಿ ವ್ಯಕ್ತಿತ್ವ.
ಲಿಡಾಗೆ 48 ವರ್ಷ, ಹದಿಹರೆಯದ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಅನೇಕ ಬಾರಿ ಪ್ರಸ್ತಾಪಗೊಳ್ಳುತ್ತಿರುತ್ತದೆ. ಇದು ಕತೆಗೆ ಸಂಬಂದಿಸಿದೆಯೇ? ಹೌದು. ಹೇಗೆ? ಗೊತ್ತಿಲ್ಲ. ಇಡೀ ಸಿನಿಮಾದ ಚಿತ್ರಕತೆ ಈ ರೀತಿಯ ಹೌದು ಆದರೆ ಗೊತ್ತಿಲ್ಲ ಎನ್ನುವ ವೈರುದ್ಯಗಳಲ್ಲಿ ನಿರೂಪಿತವಾಗಿದೆ. ಪ್ರಸ್ತುತ ಮತ್ತು ಫ್ಲಾಶ್ ಬ್ಯಾಕ್ ತಂತ್ರಗಳನ್ನು ಸಿನಿಮಾದ ಉದ್ದಕ್ಕೂ ಜಾಣತನದಿಂದ ಪೋಣಿಸುವ ಮ್ಯಾಗಿ ಕಡೆಗೂ ಎಲ್ಲವನ್ನೂ ಹೇಳಿ ಏನೂ ಹೇಳದೆ ಮುಗಿಸುತ್ತಾಳೆ. ಈ ತಂತ್ರವೇ ‘ದ ಲಾಸ್ಟ್ ಡಾಟರ್’ ಸಿನಿಮಾವನ್ನು ಗೆಲ್ಲಿಸಿದೆ.
ಫ್ರೊಫೆಸರ್ ಲಿಡಾಳ ಬದುಕಿನ ನಿಗೂಡತೆಯನ್ನು ಹೇಳುತ್ತಲೇ ಅದು ಅಥೆಂಟಿಕ್ ಎನ್ನುವ ಲೇಬಲ್ ಕೊಡುವ ಆಕರ್ಷಣೆಯಿಂದ ಪಾರಾಗುವ ನಿರ್ದೇಶಕಿ ಗಿಲೆನ್ ಹಾಲ್ ಪ್ರೊಟಗಾನಿಸ್ಟ್ ಲಿಡಾಳ ನಿಜ – ಭ್ರಮೆಗಳ ಜಗತ್ತನ್ನು ಸಮರ್ಥವಾಗಿ ಬಿಚ್ಚಿಡುತ್ತಾಳೆ. ಯಾವುದು ನಿಜ? ಯಾವುದು ಭ್ರಮೆ ಎನ್ನುವ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡರೂ ಸಹ ನೋಡುಗರಿಗೆ ನಿರಾಶೆಯಾಗದೆ ಅವರೂ ಲಿಡಾಳ ದ್ವಂದ್ವ, ವಿಕ್ಷಿಪ್ತತೆಯಲ್ಲಿ ಬಾಗಿಯಾಗುತ್ತಾರೆ. ಕಡೆಗೂ ಉಳಿದಿದ್ದು ಆಕಾಶ ಮತ್ತು ಭೂಮಿಯಷ್ಟೆ.
ಲಿಡಾ ಮತ್ತು ಆಕೆಯ ಬದುಕು ‘ನಮಗೆ ಅರ್ಥವಾಗಲಿಲ್ಲ ಎಂಬುದಲ್ಲ, ನಮಗೆ ಅರ್ಥವಾಗುವುದೇ ಇಲ್ಲ’ ಎಂಬುದು ಇಲ್ಲಿನ ದನಿ. ಇದು ನಿಜಕ್ಕೂ ಆದುನಿಕ ಮಹಿಳಾ ದನಿ. ‘ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ’ ಎಂಬ ಆಧುನಿಕ ಮಹಿಳಾ ದನಿ. ‘ಅಕ್ಕ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ಯಾಕೆ ಅರ್ಥವಾಗಬೇಕು ಎಂಬುದು’.
ಲಿಡಾ obsessive ಮಹಿಳೆ. ಸಾಹಿತ್ಯ, ಲೈಂಗಿಕತೆ, ಕಾಮ ಮತ್ತು ಮಕ್ಕಳು ಹೀಗೆ. ಆದರೆ ಅವೆಲ್ಲವೂ ಒಂದು ಬಗೆಯ ಒತ್ತಾಯದಲ್ಲಿ ಪೂರೈಸಿಕೊಂಡಂತಿದೆ. ಇದು ಲಿಡಾಳ ಅಂತರಿಕ ತಾಕಲಾಟ. ನಿಭಾಯಿಸಿದಳೆ? ಇಲ್ಲವೇ? ಅದು ಆಕೆಗೂ ಗೊತ್ತಿಲ್ಲ, ನಮಗೂ ಗೊತ್ತಾಗುವುದಿಲ್ಲ. ‘ಹೇಳದೆ ಉಳಿದ ಮಾತುಗಳು ಹೆಚ್ಚಿನದನ್ನು ಹೇಳುತ್ತವೆ’ ಎನ್ನುವುದನ್ನು ಗಿಲೆನ್ ಹಾಲ್ ಸಮರ್ಥವಾಗಿ ನಿರೂಪಿಸಿದ್ದಾಳೆ.
‘ಲಾಸ್ಟ್ ಡಾಟರ್’ ಸಿನಿಮಾ ಬದುಕಿನ ಕುರೂಪಗಳನ್ನು ಅದು ಇದ್ದ ಹಾಗೆಯೇ ಸ್ವೀಕರಿಸುತ್ತದೆ. ಲಿಡಾ ಒಂದು ನೆಪ ಮಾತ್ರ. ಇಲ್ಲಿ ಅನೇಕ ಭಾವುಕ ಸನ್ನಿವೇಶಗಳಿವೆ. ಆದರೆ ಅದು ಉದ್ರೇಕವಲ್ಲ. 48 ವರ್ಷದ ಲಿಡಾಳ ಪಾತ್ರದಲ್ಲಿ ಒಲಿವಿಯಾ ಕೋಲ್ ಮನ್ ಮತ್ತು 30 ವರ್ಷ ಲಿಡಾಳ ಪಾತ್ರದಲ್ಲಿ ಜೆಸ್ಸಿ ಬಕ್ಲೀ ಇಬ್ಬರೂ ಅದ್ಬುತ. ಒಂದೇ ಪಾತ್ರವನ್ನು ವಿಬಿನ್ನ ಕಾಲದಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ನಿರ್ದೇಶಕಿ ಗಿಲೆನಾಲ್ ಮುಂಬರುವ ನಿರ್ದೇಶಕರಿಗೆ ದೊಡ್ಡ ಸವಾಲನ್ನು ಮುಂದಿಟ್ಟಿದ್ದಾರೆ.