ಸಿನಿಮಾ ಸ್ಪೀಡಿಗೆ ಮಿತಿಯಲ್ಲ ಎನ್ನುವುದನ್ನು ಒಪ್ಪಿಕೊಂಡರೂ, ಅಧೀರ ಮತ್ತು ರಾಖಿ ನಡುವೆ ನಡೆಯುವ ಪೈಟ್ ಸೀನ್ ಸ್ಪೀಡಿಗೆ ಒಂದು ಮಿತಿ ಇರಬೇಕಿತ್ತು ಅನಿಸುತ್ತದೆ. ಎಲ್ಲ ಪಾತ್ರಗಳೂ ಬರವಣಿಗೆಯ ಹಂತದಲ್ಲಿ ಅದ್ಬುತವಾಗಿವೆ. ಆದರೆ ನಾಯಕಿ ರೀನಾ ಮತ್ತು ಅಧೀರ ಪಾತ್ರಧಾರಿಗಳು ತುಸು ಡಲ್‌ ಎನಿಸಬಹುದು.

‘KGF’ Chapter 1 ನೋಡಿದ್ದರೂ, ನೋಡಿಲ್ಲವಾದರೂ ಅದನ್ನು ಹೊರಗಿಟ್ಟು ‘KGF’ Chapter 2 ಸಿನಿಮಾ ನೋಡುವುದಾದರೆ.. ಪ್ರೇಕ್ಷಕರು ಸೆಂಟಿಮೆಂಟ್, ಲವ್, ಮಾಸ್, ಗ್ಯಾಂಗ್‌ಸ್ಟರ್‌, ಪೊಲಿಟಿಕಲ್ ಥ್ರಿಲ್ಲರ್, ಇಂತಹ ಯಾವುದೇ ಜಾನರ್ ಸಿನಿಮಾ ಇಷ್ಟಪಡುವುದಿದ್ದರೂ ಈ ಚಿತ್ರ ಅವರನ್ನು ರಂಜಿಸಬಹುದು. ಏಕೆಂದರೆ, Chapter 2ನಲ್ಲಿ ಅವೆಲ್ಲವೂ ಇದೆ. Chapter 1ನಲ್ಲಿ ಬಾಲ್ಯದಲ್ಲಿ ಪಾಡುಪಟ್ಟು ಪಂಟನಾಗಿ ಮುಂಬೈನಲ್ಲಿ ಬೆಳೆದ ರಾಖಿ, ಗರುಡನನ್ನು ಮುಗಿಸಲು ಸುಪಾರಿ ತೆಗೆದುಕೊಂಡು ಬಂದು, ಚಕ್ರವ್ಯೂಹದಂತಹ ನರಾಚಿಯನ್ನು ಭೇದಿಸಿ ಗರುಡನನ್ನು ಮುಗಿಸಿದ್ದ.

ಈಗ Chapter 2ನಲ್ಲಿ ಆ ನರಾಚಿಗೆ ಅಧಿಪತಿಯಾಗಿ ತನ್ನ ವ್ಯಾಪಾರ, ವ್ಯವಹಾರಗಳನ್ನು ವಿಸ್ತರಿಸಿಕೊಂಡು, ತನ್ನದೇ ಹೊಸ ಸೈನ್ಯ ಕಟ್ಟಿ ಗತ್ತು ಗಾಂಭಿರ್ಯದಿಂದ ಯುದ್ಧಗಳನ್ನು ಎದುರಿಸಿ ತನ್ನ ಸಾಮ್ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾನೆ. ಆದರೆ ಆ ನರಾಚಿ ಮೇಲೆ ನಾಲ್ಕಾರು ಜನರ ಕಣ್ಣಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದಂಡೆತ್ತಿ ಬರುತ್ತಿರುತ್ತಾರೆ. ಆದರೆ ಶಕ್ತಿಶಾಲಿಯೂ, ಯುಕ್ತಿವಂತನೂ ಆದ ರಾಖಿಯ ಮುಖಾಮುಖಿ ಯುದ್ದ ಸಾರಿ ಬರುವ ಅಧೀರ ಯಾರು? ರಾಖಿ ಮತ್ತು ಅಧೀರ ನಡುವೆ ಯುದ್ದ ಹೇಗೆಲ್ಲ ನಡೆಯುತ್ತದೆ? ರಾಕಿ ಭಾಯ್‌ ಏನಾಗುತ್ತಾನೆ? ಅಲ್ಲಿಯ ಪ್ರಜೆಗಳೆಲ್ಲ ಏನಾಗುತ್ತಾರೆ? ಕೊನೆಗೆ ನರಾಚಿ ಏನಾಗುತ್ತದೆ? ಅನ್ನೋದೆ ಸಿನಿಮಾ ಕತೆ ಎನ್ನಬಹುದು. ಆದರೆ ಕತೆಯನ್ನಾಗಲಿ, ಚಿತ್ರಕಥೆಯನ್ನಾಗಲಿ ಇಲ್ಲಿ ಹೇಳಿದಷ್ಟು ಸರಳವಾಗಿ ಹೇಳಿ ಮುಗಿಸಿಲ್ಲ. ಬರೀ ಹೀರೋಗೆ ಬಿಲ್ಡಪ್‌ ಕೊಡುವುದನ್ನೇ ‘ಕಂಟೆಂಟ್‌ ಬಿಲ್ಡ್‌’ ಎಂದುಕೊಳ್ಳದೆ, ಪ್ರತಿ ದೃಶ್ಯದಲ್ಲೂ ಮನರಂಜಿಸುವಂತಹ ಮಾತಗಳು, ಮೈನವಿರೇಳಿಸುವಂಥ ಸಾಹಸ ದೃಶ್ಯಗಳನ್ನು ತಿದ್ದಿ, ಪ್ರೀತಿ, ಮಮತೆ, ಅನುಕಂಪ ಎಲ್ಲವನ್ನೂ ಮಿಶ್ರಣ ಮಾಡಿ Chapter 1ರ ಮುಂದುವರಿದ ಭಾಗದಂತೆ ಮುನ್ನಡೆಸಿ ರೋಚಕವಾಗಿ ತೆರೆಗೆ ತಂದಿದ್ದಾರೆ.

ನಿರ್ದೇಶಕ ಪ್ರಶಾಂತ್‌ ನೀಲ್‌ Chapter 1ರ ಕಾಲ್ಪನಿಕ ನರಾಚಿ ಮತ್ತು ರಾಜಕೀಯ ವ್ಯವಸ್ಥೆ, ಪತ್ರಿಕಾರಂಗ ಎಲ್ಲವನ್ನೂ ಒಳಗೊಂಡು ಅಲ್ಲಿದ್ದ ಪಾತ್ರಗಳನ್ನು ಇಲ್ಲೂ ಮುಂದುವರಿಸಿರುವುದಲ್ಲದೇ, ನಾಲ್ಕಾರು ಹೊಸಪಾತ್ರಗಳನ್ನು ಕತೆಗೆ ತಂದಿದ್ದಾರೆ. ಮದರ್ ಸೆಂಟಿಮೆಂಟ್‌ ಮತ್ತು ಪ್ರೀತಿ – ಪ್ರೇಮದ ಕುರಿತಾದ ದೃಶ್ಯಗಳನ್ನು ಗಾಢವಾಗಿ ಸರಣಿಯಲ್ಲೂ ಮುಂದುವರಿಸಿದ್ದಾರೆ. Chapter 1 ಕತೆ ಮತ್ತು ತಾಂತ್ರಿಕತೆ ನೋಡಿ ಮೆಚ್ಚಿದ್ದ ಪ್ರೇಕ್ಷಕರು ಮತ್ತು ಅಭಿಮಾನಿಗಳಲ್ಲಿ Chapter 2ನ ಮೇಲೆ ಮೂಡಿದ್ದ ನಿರೀಕ್ಷೆ ಹುಸಿಯಾಗದು. ಸಿನಿಮಾ ಸುಮಾರು ಎರಡೂ ಮುಕ್ಕಾಲು ಗಂಟೆಯಿದ್ದರೂ ಚಿತ್ರಕಥೆ ಮತ್ತು ದೃಶ್ಯಗಳ ವೇಗ ಉತ್ತಮವಾಗಿದೆ. ಕತೆಗೆ, ಪಾತ್ರಕ್ಕೆ ಪೂರಕವಾದ ಅದ್ದೂರಿತನ, ವೈಭವಿಕರಣವನ್ನು ಒಳಗೊಂಡಿದ್ದು ಕತೆಗಾರ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಎಲ್ಲಾ ಪಾತ್ರಗಳನ್ನೂ ಬರವಣಿಗೆಯ ಹಂತದಲ್ಲಿ ನ್ಯಾಯ ಒದಗಿಸಿರುವಂತೆಯೇ ಪಾತ್ರದಾರಿಗಳೂ ಅಷ್ಷೇ ತಲ್ಲೀನತೆಯಿಂದ ನ್ಯಾಯ ಒದಗಿಸಿದ್ದಾರೆ.

Chapter 1ರಲ್ಲಿಯೇ ಮೇಕಿಂಗ್‌ನಿಂದ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದರು ಪ್ರಶಾಂತ್‌ ನೀಲ್‌. ಸಹಜವಾಗಿಯೇ ಸರಣಿ ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗಿತ್ತು. ಅಂತೆಯೇ ಈಗ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಸಿನಿಮಾದ ನಂತರ ಸಿನಿಮಾ ಹೇಗಿದೆ ಅಂತ ಕೇಳಿದರೆ ಅದ್ಭುತವಾಗಿದೆ, ಚೆನ್ನಾಗಿದೆ ಅಂತಲೇ ಹೇಳೋದು. ಬಹುಶಃ ಅದೂ ಈ ಹಿಂದಿನ ದೊಡ್ಡ ದೊಡ್ಡ ಸಿನಿಮಾಗಳು ನೀರೀಕ್ಷೆಯನ್ನು ಹುಸಿ ಮಾಡಿದ ಕಾರಣವೋ ಅಥವಾ ‘KGF’ 1 ಗಳಿಸಿದ್ದ ಸಾಧನೆಯ ವಿಚಾರದ ಹಿನ್ನೆಲೆಯಿಂದ ಈ ರೀತಿಯ ಮನೋಭಾವ ಪ್ರೇಕ್ಷಕರಲ್ಲಿ ಮೂಡುವುದು ಸಹಜ. ಮತ್ತೊಂದು ವರ್ಗದ ಪ್ರೇಕ್ಷಕರು ನಮ್ಮಲ್ಲೇಕೆ ಹಾಲಿವುಡ್‌ ಮಾದರಿಯ ಸಿನಿಮಾಗಳು ಸಾಧ್ಯವಿಲ್ಲ ಎಂದು ಆಲೋಚಿಸಿದ್ದರು.

ಒಟ್ಟಾರೆ ಮೊದಲ ಚಾಪ್ಟರ್ ಹುಟ್ಟಾಕಿದ್ದ ಭರವಸೆ, ನಿರೀಕ್ಷೆ Chapter 2 ಉಳಿಸಿಕೊಂಡಿದೆಯೇ ಎನ್ನುವುದನ್ನು ನೋಡುವುದಾದರೆ ಎಲ್ಲಾ ತಂತ್ರಗಾರಿಕೆಯಿಂದ ತೂಗಿ ಅಳೆದರೂ ಖಂಡಿತಾ ಹೌದು. ಸಿನಿಮಾದ ವೇಗ ಮತ್ತು ನಿರೂಪಣೆಯ ಶೈಲಿ ಚೆನ್ನಾಗಿದೆ. ಸಣ್ಣ ಉದಾಹರಣೆ ಕೊಡುವುದಾದರೆ, ಮೊದಲ ಚಾಪ್ಟರ್ ಕತೆಯನ್ನು ಸಣ್ಣ ಮಕ್ಕಳ ಮರುಸೃಷ್ಟಿಯಲ್ಲಿ ಎರಡೇ ನಿಮಿಷದಲ್ಲಿ ತೋರುವ ನಿರೂಪಣೆ ಶಿಳ್ಳೆ ಮತ್ತು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಸಂಭಾಷಣೆ ಕೂಡ ಪಾತ್ರಕ್ಕೆ ಹೊಂದುವಂತೆ ಅಭಿಮಾನಿಗಳಿಗೂ ಇಷ್ಟವಾಗುವಂತೆ ಆಯಾ ದೃಶ್ಯಗಳಿಗನುಸಾರವಾಗಿ ಉತ್ತಮವಾಗಿದೆ‌. ನಿರ್ದೇಶಕರ ನಿರೂಪಣೆಯ ಚಾಣಾಕ್ಷತನ ನಿಜಕ್ಕೂ ಮೆಚ್ಚುವಂಥದ್ದು. ಕತೆಯಲ್ಲಿ ಕಥಾನಾಯಕನಿಗೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಮಾತಿನಲ್ಲಿ ಇಲ್ಲವೇ ಇಲ್ಲ. ಪ್ರೀತಿಯಾಗಲಿ, ಮಮತೆಯಾಗಲಿ, ಅನುಕಂಪವಾಗಲಿ ಅವನೆಲ್ಲೂ ಮಾತಿನಲ್ಲಿ ಎಕ್ಸ್‌ಪ್ರೆಸ್‌ ಮಾಡುವವನೇ ಅಲ್ಲ. ಉತ್ತರ ಅವನ ಕಾರ್ಯದಲ್ಲೇ ಇರುವಂತೆ ಕಟ್ಟಿದ್ದಾರೆ.

ಅನಂತನಾಗ್‌ ಅವರ ಅನುಪಸ್ಥಿತಿ ಕಾಡದಂತೆ ದೈತ್ಯ ಪ್ರತಿಭೆ ಪ್ರಕಾಶ್ ರಾಜ್‌ ಅವರನ್ನು ಕೂರಿಸಿ ನಾಜೂಕಾಗಿ ನಿರ್ವಹಿಸಿದ್ದಾರೆ. ಮಾಮೂಲಿ ಸಿನಿಮಾಗಳ ನಿರೂಪಣಾ ಶೈಲಿ, ಸಿದ್ಧಸೂತ್ರಗಳು ಇಲ್ಲಿಲ್ಲ. ಒಂದೇ ದೃಶ್ಯದಲ್ಲಿ ಒಂದು ಕಡೆ planning ನಡೆಯುತ್ತಿದ್ದರೆ, ಅದೇ ದೃಶ್ಯದ ಮಧ್ಯೆಯೇ execution ತೋರಿಸುವುದಲ್ಲದೇ ಮುಂದಿನ ದೃಶ್ಯಕ್ಕೆ ಲೀಡ್ ಮಾಡುವ ಕತೆಯೂ ಸಾಗುತ್ತಿರುತ್ತದೆ. ಅದೂ ಈ ಸಿನಿಮಾಗೆ ಖಂಡಿತಾ ಬೇಕು. ಕಾರಣ, ನಿರ್ದೇಶಕ ಹೇಳುವುದಕ್ಕೆ ಹೊರಟಿರುವುದು ಸಾಮಾನ್ಯ ಕತೆಯಲ್ಲ. ಅವರು ಕಟ್ಟಿರುವಂತ ದಂತಕಥೆ. ಹೌದು fiction ಅಥವಾ non fiction ಸಿನಿಮಾದಲ್ಲಿ ಇತಿಹಾಸದಲ್ಲಿ ನಡೆದದ್ದೆಂದು ಹೇಳುವವನು ಹಾಗೂ ಕೇಳುಗರಿಬ್ಬರಿಂದಲೂ ಗ್ರಹಿಸಲಾದ ಅಥವಾ ಗ್ರಹಿಸಬಲ್ಲ ಕ್ರಿಯೆಗಳು ಇರುವ ಕತೆಯನ್ನು ಮಾನವೀಯ ಮೌಲ್ಯಗಳೊಂದಿಗೆ ತೋರ್ಪಡಿಸುತ್ತ ತಾಜಾತನದೊಂದಿದೆ ಸಿನಿಮಾ ಚೌಕಟ್ಟಿನಲ್ಲಿ ತರುವುದು ಸಾಹಸವೇ ಸರಿ. ಆ ಸಾಹಸ ಮಾಡಿ ಚಿತ್ರತಂಡ ತಮ್ಮ ಸೃಜನಶೀಲತೆ ಮೆರೆದಿದೆ.

ಯಾವುದೋ ಒಂದು ಶುದ್ಧ ಸಂದೇಶ ಸಾರುವುದು ಈ ಚಿತ್ರದ ಉದ್ದೇಶವಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಅದೂ ತಪ್ಪಲ್ಲ. ಸಿನಿಮಾ ನೋಡಿ ಅದರಲ್ಲಿನ ಕಥೆಯನ್ನು ನಂಬಲೇಬೇಕು, ಒಪ್ಪಿಕೊಳ್ಳಲೇಬೇಕು, ಅವನು ಮಾಡಿದ್ದು ಸರಿ, ತಪ್ಪು ಎನ್ನುವ ಮಾತೇ ಇಲ್ಲ. ಯಾಕೆಂದರೆ ಇದೂ ಮನರಂಜನೆ ನೀಡುವ ಸಿನಿಮಾ. ನಮ್ಮನ್ನು ರಂಜಿಸಿದೆಯೋ, ಇಲ್ಲವೋ ಎನ್ನುವುದಷ್ಟೇ ಮುಖ್ಯ. ಒಟ್ಟಾರೆಯಾಗಿ ಸಿನಿಮಾ ಗೆದ್ದು ಒಂದು ಹೊಸ ಆಯಾಮ ಒದಗಿಸಿ ಇತಿಹಾಸ ಸೃಷ್ಟಿಸಿದೆ. ಇದಕ್ಕೆ ಕಾರಣರಾದ ಚಿತ್ರತಂಡದ ಎಲ್ಲರಿಗೂ ಧನ್ಯವಾದ ಹೇಳಬೇಕು.

ನಿರ್ದೇಶಕರೊಂದಿಗೆ ನಿಂತ ವಿಜಯ ಕಿರಗಂದೂರು, ಛಾಯಗ್ರಾಹಕ ಭುವನ್‌ಗೌಡ, ಸಂಕಲನಕಾರ ಉಜ್ವಲ್ ಕುಲಕರ್ಣಿ, ಕಲಾನಿರ್ದೇಶಕ ಶಿವಕುಮಾರ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಬೇಕು. ಅಭಿನಯದ ಕುರಿತು ಹೇಳುವುದಾದರೆ ‘ರಾಕಿ ಭಾಯ್‌’ ಯಶ್‌ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ರವೀನಾ ಟಂಡನ್‌ ಅಭಿನಯ ಅತ್ಯುತ್ತಮ. ಎಂದಿನಂತೆ ಪ್ರಕಾಶ್ ರಾಜ್ ಸ್ಕ್ರೀನ್‌ ಪ್ರಸೆನ್ಸ್‌ನಿಂದ ಗಮನ ಸೆಳೆಯುತ್ತಾರೆ. ಅರ್ಚನಾ ಅವರು ಅಮ್ಮನ ಪಾತ್ರದಲ್ಲಿ ಗಾಢವಾಗಿ ಕಾಡುವುದಲ್ಲದೆ ಪ್ರೇಕ್ಷಕರೆದೆಯಲ್ಲಿ ಪಾತ್ರದ ಹೆಸರಿನಂತೆ ಶಾಂತಿಯಿಂದ ತಣ್ಣಗೆ ಉಳಿಯುತ್ತಾರೆ. ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಗೋವಿಂದೇಗೌಡರ ಹಾಸ್ಯಪಾತ್ರ ಕೂಡ ಗಮನ ಸೆಳೆಯುತ್ತದೆ. ಆದರೆ ಬಹಳ ನಿರೀಕ್ಷೆ ಇದ್ದ ಸಂಜಯ್‌ ದತ್‌ ಅವರ ನಟನೆಯೇ ಒಮ್ಮೊಮ್ಮೆ ಸಪ್ಪೆ ಎನಿಸುತ್ತದೆ. ಕಾರಣ ಪ್ರೇಕ್ಷಕರ ಅತಿ ನಿರೀಕ್ಷೆಯೂ ಇರಬಹುದು. ಏನೇ ಇದ್ದರೂ ಸಿನಿಮಾ ಜಯಭೇರಿ ಬಾರಿಸಿದೆ.

ಆದರೂ ಇನ್ನೂ ಸಿನಿಮಾದ ತೂಕ ಮತ್ತಷ್ಟು ಹೆಚ್ಚಿಸಬಹುದಾಗಿದ್ದ ಸಾಧ್ಯತೆಗಳ ಕುರಿತೂ ಹೇಳಬೇಕಿದೆ. ಸಿನಿಮಾ ಸ್ಪೀಡಿಗೆ ಮಿತಿಯಲ್ಲ ಎನ್ನುವುದನ್ನು ಒಪ್ಪಿಕೊಂಡರೂ, ಅಧೀರ ಮತ್ತು ರಾಖಿ ನಡುವೆ ನಡೆಯುವ ಪೈಟ್ ಸೀನ್ ಸ್ಪೀಡಿಗೆ ಒಂದು ಮಿತಿ ಇರಬೇಕಿತ್ತು ಅನಿಸುತ್ತದೆ. ಎಲ್ಲ ಪಾತ್ರಗಳೂ ಬರವಣಿಗೆಯ ಹಂತದಲ್ಲಿ ಅದ್ಬುತವಾಗಿವೆ. ಆದರೆ ನಾಯಕಿ ರೀನಾ ಮತ್ತು ಅಧೀರ ಪಾತ್ರಧಾರಿಗಳು ತುಸು ಡಲ್‌ ಎನಿಸಬಹುದು. ನಡೆ, ನುಡಿ ಮತ್ತು ವೇಷಭೂಷಣ ಎಲ್ಲಾ ಅಚ್ಚುಕಟ್ಟಾಗಿದೆ. ಆದರೆ ಅದನ್ನು ವ್ಯಕ್ತಪಡಿಸುವಾಗ ಆ ಪಾತ್ರಕ್ಕೂ, ಅದು ಎಕ್ಸ್‌ಪ್ರೆಸ್‌ ಮಾಡುತ್ತಿರುವ ಭಾವನೆಗೂ ಹೊಂದಿಕೆಯಾಗುವುದಿಲ್ಲ. ಸಂಗೀತ ಮೊದಲ ಚಾಪ್ಟರ್‌ಗಿಂತಲೂ ಪರಿಣಾಮಕಾರಿಯಾಗಿ ಇರಬಹುದೆನ್ನುವ ನಿರೀಕ್ಷೆ ಇತ್ತು. ಹೊಸದೆನಿಸುವಂಥ ಪ್ರಯೋಗ ನೆಡೆದಿವೆ. ಅದರೂ ಇನ್ನೂ ಏನೋ ಬೇಕಿತ್ತು ಅನಿಸುತ್ತದೆ. ಪ್ರೇಮಗೀತೆಯೊಂದು ಅದ್ಬುತ ಸಾಹಿತ್ಯ ಹೊಂದಿದೆ. ಆದರೆ ಅದಕ್ಕೆ ತಕ್ಕ ಸಂಗೀತವಿಲ್ಲ. VFX ನಲ್ಲಿ ಇನ್ನೂ ಕೊಂಚ ರಿಯಲಿಸ್ಟಿಕ್ ಆಗಿಸಬಹುದಿತ್ತು ಎನಿಸುತ್ತದೆ. ಲಾಜಿಕಲ್‌ ಆಗಿ ಆಲೋಚಿಸುತ್ತಾ ಹೋದರೆ ಇನ್ನೂ ಕೆಲವು ತಪ್ಪುಗಳನ್ನು ಪಟ್ಟಿ ಮಾಡಬಹುದು. ಆದರೆ ಗಡಿ ದಾಟಿ ದೇಶದ ಸಿನಿಪ್ರಿಯರ ನಿರೀಕ್ಷೆಯನ್ನು ಸರಿಗಟ್ಟುವಲ್ಲಿ ‘KGF’ Chapter 2 ಯಶಸ್ವಿಯಾಗಿ ಚಿನ್ನದಂತೆಯೇ ಬೆಲೆ ಹೆಚ್ಚಿಸಿಕೊಂಡಿದೆ.

LEAVE A REPLY

Connect with

Please enter your comment!
Please enter your name here