ಪತ್ತೇದಾರಿ ಕಥಾಪ್ರಿಯರಷ್ಟೇ ಅಲ್ಲದೆ ಪಾತ್ರ ಪೋಷಣೆಯ ಬಗೆ ಮತ್ತು ತಿರುವುಗಳ ನಡೆ ಎಲ್ಲೆಲ್ಲಿ ಹೇಗಿರಬೇಕು ಎಂದು ವೆಬ್ ಸೀರೀಸ್ ತಯಾರಕರೂ ನೋಡಿ ತಿಳಿಯಬೇಕಾದ ಸರಣಿಯಿದು. ‘ಆ್ಯಪಲ್ ಟಿವಿ+’ ನಲ್ಲಿ ಸರಣಿಯ ಫಸ್ಟ್‌ ಸೀಸನ್‌ ಸ್ಟ್ರೀಮ್‌ ಆಗುತ್ತಿದ್ದು, ಎರಡನೇ ಸೀಸನ್‌ ಮೇ ತಿಂಗಳಲ್ಲಿ ಬರಲಿದೆ.

ಪತ್ತೇದಾರಿ ಕತೆಗಳಿಗೆ ಎಲ್ಲಾ ಕಾಲದಲ್ಲೂ ಒಂದು ಪ್ರೇಕ್ಷಕ ವರ್ಗ ಇದ್ದೇ ಇದೆ. ಬಿ.ವಿ.ಅನಂತರಾಮರ ರೋಚಕ ಕಾದಂಬರಿಗಳಿಂದ ಹಿಡಿದು, ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ 13 ಎಪಿಸೋಡುಗಳ ಪತ್ತೇದಾರಿ ಧಾರಾವಾಹಿಗಳೂ ಒಳಗೊಂಡು, ಸೋನಿಯ ಸಿಐಡಿಯೂ ಸೇರಿದಂತೆ, ಈಗ ಪ್ರಸಾರವಾಗುವ ವೆಬ್ ಸರಣಿಗಳವರೆಗೆ ವಿವಿಧ ತಲೆಮಾರುಗಳನ್ನು ರಂಜಿಸುತ್ತಾ ಬಂದ ಪ್ರಕಾರವಿದು. ಅದರಲ್ಲೂ ಜನಸಾಮಾನ್ಯರ ಪಾಲಿಗೆ ಮರೀಚಿಕೆಯಂತೆ ನಿಗೂಢವಾಗಿರುವ ಗೂಢಚಾರ ಸಂಸ್ಥೆಗಳು ವೆಬ್ ಸರಣಿಗಳ ಪಾಲಿಗೆ ಅತ್ಯಾಪ್ತ ಕಥಾವಸ್ತು.

ಇಸ್ರೇಲಿ ಗೂಢಚಾರ ಸಂಸ್ಥೆ ಮೊಸ್ಸಾದ್ ನಿರಂತರವಾಗಿ ಒಂದಿಲ್ಲೊಂದು ಡಾಕ್ಯುಮೆಂಟರಿ ಅಥವಾ ಸೀರೀಸ್‌ ನಿರ್ಮಾಣಕ್ಕೆ ಪರೋಕ್ಷ ಬೆಂಬಲ ನೀಡುವ ಕಾರಣ ಅದರ ಬಗೆಗಿನ ಸಾಕಷ್ಟು ಅಂತೆ-ಕಂತೆಗಳು ಸದಾ ಜೀವಂತವಾಗಿವೆ. ಆ ನಿರಂತರತೆಗೆ ಮತ್ತೊಂದು ಸೇರ್ಪಡೆ ‘ತೆಹ್ರಾನ್’. ಪತ್ತೇದಾರಿ ಕಥಾಪ್ರಿಯರಷ್ಟೇ ಅಲ್ಲದೆ ಪಾತ್ರ ಪೋಷಣೆಯ ಬಗೆ ಮತ್ತು ತಿರುವುಗಳ ನಡೆ ಎಲ್ಲೆಲ್ಲಿ ಹೇಗಿರಬೇಕು ಎಂದು ವೆಬ್ ಸೀರೀಸ್ ತಯಾರಕರೂ ನೋಡಿ ತಿಳಿಯಬೇಕಾದ ಸರಣಿಯಿದು.

ಹೂ‌ ಹೆಣೆಯುವ ಮೂಲ ದಾರದಂತೆ ಮೂಲದಲ್ಲಿ ಒಂದು‌‌ ರೋಚಕ ಕತೆ ಸಾಗುತ್ತದೆ. ಪ್ರತಿ‌ ಎಪಿಸೋಡಿನ ಕೊನೆಗೆ ಒಂದು‌ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಲ್ಲುವ ಫಾರ್ಮುಲಾ ಅದು. ಅದರ ಜತೆಜತೆಗೆ ಅಲ್ಲಿನ ಸಂಸ್ಕಾರ-ಸಂಸ್ಕೃತಿ-ರಾಜಕೀಯ, ಸಂಸ್ಕೃತಿಕ ಹಾಗೂ ಸೈದ್ಧಾಂತಿಕ ಸಂಘರ್ಷಗಳು ಮೂಲ‌ ದಾರದೊಳಗೆ ಹೆಣೆದ ಹೂಮಾಲೆ. ಕತೆಯ ಜತೆಗೆ ಈ ಎಲ್ಲಾ ಅಂಶಗಳು ಬರುತ್ತಾ ಹೋದಂತೆ ಪಾತ್ರಗಳು ನಮ್ಮೊಳಗೆ ಇಳಿಯುತ್ತವೆ. ದೂರ‌ದೇಶವೇ ಆದರೂ ನಮ್ಮ ಸಮೀಪವೇ ಅಲ್ಲೆಲ್ಲೋ ಪಕ್ಕದ ಬೀದಿಯಲ್ಲೋ, ಆಚೆ ಊರಲ್ಲೋ ಇರುವಂತೆ ಭಾಸವಾಗುತ್ತವೆ ಪಾತ್ರಗಳು. ಹೀಬ್ರೂ ಹಾಗೂ ಪರ್ಶಿಯನ್‌ ಮಾತನಾಡುವ ಮಂದಿಯ ಒಳಗೂ ನಮಗೆ ನಮ್ಮ ಸುತ್ತಲಿನ ಜನ ಕಾಣುವುದು ಪಾತ್ರ ಪೋಷಣೆಯ ಹೆಚ್ಚುಗಾರಿಕೆ.

ಮೊಸ್ಸಾದ್ ಏಜೆಂಟ್ ತಮರ್ ರಬಿನ್ಯಾನ್ ಓರ್ವ ಹ್ಯಾಕರ್. ಒಂದು ಸ್ಪಷ್ಟ ಗುರಿಯಿಟ್ಟುಕೊಂಡು ಇರಾನಿನ ರಾಜಧಾರಿ ತೆಹ್ರಾನ್‌ಗೆ ಆಕೆ ಬಂದಿಳಿಯುತ್ತಾಳೆ. ತಾನೊಬ್ಬ ಇರಾನಿಯಂತೆ ಗುರುತು ಬದಲಿಸಿ ಆ ದೇಶಕ್ಕೆ ಕಾಲಿಡುವ ಅವಳಿಗಿರುವುದು ಸರಳ ಜವಾಬ್ದಾರಿ. ವಿದ್ಯುತ್ ‌ಸರಬರಾಜು ಕಂಪನಿಯ ಒಳಹೊಕ್ಕು ವೈಮಾನಿಕ ರೆಡಾರುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು. ಅಷ್ಟು ಮಾಡಿ ಇಸ್ರೇಲ್‌ಗೆ ಸಂದೇಶ ರವಾನೆ ಮಾಡಿದರಾಯಿತು. ತಕ್ಷಣ ಇಸ್ರೇಲ್ ವಾಯುಪಡೆ ಹಾರಿಬಂದು ಅಣುಸ್ಥಾವರ‌ವನ್ನು ಹೊಡೆದು‌ ಉರುಳಿಸುತ್ತದೆ. ತನಗೆ ವಹಿಸಿದ ಕೆಲಸದಲ್ಲಿ‌ ಇನ್ನೇನು ಅವಳು ಯಶ ಕಂಡೇಬಿಟ್ಟಳು ಅಂದಾಗ ಅನಪೇಕ್ಷಿತ ಘಟನೆ ನಡೆಯುತ್ತದೆ, ಅಲ್ಲಿಗೆ ಮಿಶನ್ ಫೇಲ್.

ಮಿಶನ್ ಫೇಲ್ ಆದರೆ ಅವಳು ಇಸ್ರೇಲ್‌ಗೆ ವಾಪಸ್ ತೆರಳಬೇಕು ಎಂಬುದು‌ ಮೊದಲು ಮಾಡಿಕೊಂಡಿದ್ದ ಒಪ್ಪಂದ. ಆದರೆ ಬೇಹುಗಾರಿಕೆಗಾಗಿ ನೀತಿ-ನಿಯತ್ತು ಮೀರಿ ಕೆಲಸ ಮಾಡುವ ಮೊಸ್ಸಾದ್‌ನ ವೃತ್ತಿಧರ್ಮದಿಂದ ಬೇಸತ್ತು ಆಕೆ ಇರಾನ್‌ನಲ್ಲೇ ಉಳಿಯುವ ತೀರ್ಮಾನ ಕೈಗೊಳ್ಳುತ್ತಾಳೆ. ತನ್ನದೇ ಸಂಪರ್ಕ ಬಳಸಿ ಮೂಲೋದ್ದೇಶ ಇಡೇರಿಸಿಯೇ‌ ಹೊರಬರುವುದು ಅವಳ ಶಪಥ. ಪ್ರತಿ ಎಪಿಸೋಡಲ್ಲೂ ಗುರಿ ಸಾಧನೆಯ ಸನಿಹಕ್ಕೆ ಬರುತ್ತಾಳೆ. ಆದರೆ ಅಷ್ಟರಲ್ಲಿ ಏನೋ ಒಂದು ಅನಿರೀಕ್ಷಿತ ಘಟನೆ ನಡೆದು ಅದು ವಿಫಲವಾಗುತ್ತದೆ. ಹೀಗೆ ಪ್ರತಿ ಅಧ್ಯಾಯವೂ ಒಂದು ತಿರುವಿನ‌ ತುದಿಗೆ ಬಂದು ನಿಲ್ಲುವ‌ ಕಾರಣ ‘ಇನ್ನೊಂದು ಎಪಿಸೋಡ್ ನೋಡಿ ಮುಗಿಸೋಣ’ ಎಂಬ ಭಾವ ಮೂಡಿಸಿ ಎಂಟೂ ಕಂತುಗಳನ್ನು ಒಮ್ಮೆಗೇ ನೋಡಿಸಿಬಿಡುವ ಗುಣವನ್ನು ‘ತೆಹ್ರಾನ್’ ಹೊಂದಿದೆ.

ಮೇಲ್ಪದರದ ಈ ಕತೆಗಿಂತ ಇಷ್ಟವಾಗುವುದು ಒಳಗೆ ತೆರೆದುಕೊಳ್ಳುವ ಉಪಕತೆಗಳು. ತಮರ್ ರೆಬಿನ್ಯಾನ್‌ನ ಚಿಕ್ಕಮ್ಮ ಇರಾನ್‌ನಲ್ಲೇ ನೆಲೆಸಿರುತ್ತಾಳೆ. ಆಕೆ ಮೂಲತಃ ಯಹೂದಿಯಾಗಿದ್ದರೂ ಪ್ರೀತಿಸಿದವನ ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಾಕೆ. ಈ ಹಿಂದೆ ಆಕೆ ಯಹೂದಿ‌‌ ಎಂಬ ವಿಚಾರ ಹೊರಬಿದ್ದರೆ ಅವಳ ಗಂಡನ ಸರಕಾರಿ ನೌಕರಿಗೂ ಕಂಟಕ. ಹಾಗಾಗಿ ಆ ಮಾಹಿತಿ ಅವರ ಮಗಳಿಗೂ ತಿಳಿಯದಂತೆ ಅವರು ಕಾಪಾಡಿಕೊಂಡು ಬಂದ ರಹಸ್ಯ. ಯಹೂದಿ ಹಾಗೂ ಇಸ್ಲಾಂ ನಡುವಿನದ್ದು ಅದೆಷ್ಟು ಸೂಕ್ಷ್ಮ ವಿಚಾರ ಎಂಬುದನ್ನು ‘ತೆಹ್ರಾನ್’ ಪರಿಣಾಮಕಾರಿಯಾಗಿ ಬಿಂಬಿಸಿದೆ.

ಇದರ ಜತೆಗೆ ಕುತೂಹಲ ಮೂಡಿಸುವುದು ಇರಾನ್‌ನ ಯುವ ಜನಾಂಗದ ನಡುವಿನ ಘರ್ಷಣೆ. ಒಂದೆಡೆ ಹಿಜಾಬ್ ತೆಗೆದು ಸ್ತ್ರೀ ಸ್ವಾತಂತ್ರ್ಯಕ್ಕೆ ಕ್ರಾಂತಿಯ ದಾರಿ ಹಿಡಿದವರಿದ್ದರೆ ಮತ್ತೊಂದೆಡೆ ಹಿಜಾಬ್‌ನೊಳಗೆ ಬಂಧಿಯಾಗುವುದೇ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕು ಎಂದು ಹೋರಾಟ ಮಾಡುವ ಯುವತಿಯರು. 1979ರ ಕ್ರಾಂತಿಯ ನಂತರ ಈ ಎರಡೂ ವಾದದ ಘರ್ಷಣೆ ಇರಾನ್‌ನಲ್ಲಿ ಬಲು ಜೋರಾಗಿಯೇ ಇದೆ. ಇಸ್ಲಾಮಿಕ್ ತತ್ವದ ಅಡಿಯಲ್ಲೇ ಆಡಳಿತ ಮಾಡುವ ಆಯ್ಕೆ ಮಾಡಿಕೊಂಡಿರುವ ರೆವೆಲ್ಯೂಶನರಿ ಕೌನ್ಸಿಲ್ ( ಸಂಸದೀಯ ವ್ಯವಸ್ಥೆಗೆ ಪರ್ಯಾಯ) ಇಸ್ಲಾಮಿಕ್ ಮೂಲಭೂತವಾದವನ್ನು ಜತನದಿಂದ ಪೋಷಿಸುತ್ತದೆ. ಹಾಗೆ ಪೋಷಿಸಲು ಆಯ್ಕೆ ಮಾಡಿಕೊಳ್ಳುವುದು‌ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು. ಏನೋ ಮಾಡಲು ಹೋಗಿ ಈ ಎರಡೂ ತಂಡಗಳ ನಡುವೆ ಸಿಲುಕುವವಳು ಮುಖ್ಯಪಾತ್ರಧಾರಿ ತಮರ್ ರಬಿನ್ಯಾನ್.

ಇವೆಲ್ಲದರ ನಡುವೆಯೂ ತಮರ್ ಮೂಲ ಉದ್ದೇಶ ಮರೆಯದೆ ಪ್ರತಿ ಹಂತದಲ್ಲೂ ಪ್ರಯತ್ನ ನಡೆಸುತ್ತಳೇ ಸಾಗುತ್ತಾಳೆ. ಇದರೊಂದಿಗೆ ಅವಳ ಬದುಕೂ ಹಲವು ತಿರುವುಗಳನ್ನು ಪಡೆದುಕೊಳ್ಳುವುದು ಬಹುಶಃ ಯಾವುದೇ ದೇಶದ ಬೇಹುಗಾರ ಎದುರಿಸಬೇಕಾದ ಸನ್ನಿವೇಶ. ಇಸ್ರೇಲ್ ಸ್ಥಾಪನೆಗೂ‌ ಮುನ್ನ ಪರ್ಶಿಯಾದಲ್ಲಿ ಹೇರಳವಾಗಿ ಯಹೂದಿಗಳು ಇದ್ದ ಕಾರಣ ಅವರಿಬ್ಬರ ಸಂಬಂಧ ನಮಗೆ ಪಾಶ್ಚಾತ್ಯರಿಗಿಂತ ಬೇಗ ಅರ್ಥವಾಗುತ್ತದೆ. ಭಾರತ-ಪಾಕಿಸ್ತಾನದ ನೆಲೆಯಲ್ಲಿ ಸಮೀಕರಿಸಿ ನೋಡುವುದಕ್ಕೆ ಸಾಧ್ಯವಾಗುತ್ತದೆ.

ಜತೆಗೆ ಪರ್ಶಿಯನ್ ಭಾಷೆಗೂ ಹಿಂದಿ/ಉರ್ದುವಿಗೂ ಭಾಷಾನೆಲೆಯಲ್ಲಿ ಸಾಕಷ್ಟು ಕೊಡು-ಕೊಳ್ಳುವಿಕೆಯ ಸಂಬಂಧವಿದೆ. ಹಾಗಾಗಿ ‘ತೆಹ್ರಾನ್’ನಲ್ಲಿ ಬಳಕೆಯಾದ ಭಾಷೆಯನ್ನು ಆಸ್ವಾದಿಸುವುದೂ ಒಂದು ಬಗೆಯ ಚಂದ. ‘ತೆಹ್ರಾನ್’ ಆ್ಯಪಲ್ ಒರಿಜಿನಲ್ಸ್ ಪಟ್ಟಿಗೆ ಸೇರುವ ಕಾರಣ ಆ್ಯಪಲ್ ಟಿವಿ+ ನಲ್ಲಿ ನೋಡಬಹುದು. ಎರಡನೇ ಸೀಸನ್ ಮೇ ತಿಂಗಳಲ್ಲಿ ಸ್ಟ್ರೀಂ ಆಗಲಿದೆ. ಅದಕ್ಕೂ ಮೊದಲು ಒಂದನೇ ಸೀಸನ್ ನೋಡಿಬಿಡಿ.

LEAVE A REPLY

Connect with

Please enter your comment!
Please enter your name here