ಭಗತ್ ರಾಜ್ ನಿರ್ದೇಶನದ ‘ದ ಸೂಟ್’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ‘ಸೂಟ್ ನಮ್ಮ ಚಿತ್ರದ ಕಥಾನಾಯಕ. ಚಿತ್ರದಲ್ಲಿ ಸೂಟ್ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಈ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ನಿರ್ದೇಶಕ ಭಗತ್ ರಾಜ್.
ಮದುವೆ ಮುಂತಾದ ಸಮಾರಂಭಗಳಲ್ಲಿ ಸೂಟ್ ಧರಿಸಿದರೆ ಒಂದು ಕಳೆ. ಅಂತಹ ಸೂಟ್ ಬಗ್ಗೆ ಸಿನಿಮಾವೊಂದು ತಯಾರಾಗಿ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿವೆ. ನಿರ್ದೇಶಕ ಭಗತ್ ರಾಜ್ ತಮ್ಮ ಸಿನಿಮಾ ಕುರಿತು ಮಾತನಾಡಿ, ‘ಸೂಟ್‌ಗೆ ಅದರದೇ ಆದ ವಿಶೇಷತೆ ಇದೆ. ಎಂದಿಗೂ ಸೂಟ್ ಹಾಕದವರು, ಮದುವೆ ಆರತಕ್ಷತೆಯಲ್ಲಾದರೂ ಧರಿಸುವುದು ವಾಡಿಕೆ. ಅಂತಹ ಸೂಟ್ ನಮ್ಮ ಚಿತ್ರದ ಕಥಾನಾಯಕ. ಚಿತ್ರದಲ್ಲಿ ಸೂಟ್ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಈ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಸೂಟ್ ಬಗ್ಗೆ ಅನೇಕ ಗಣ್ಯರು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ’ ಎನ್ನುತ್ತಾರೆ.
ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸೂಟ್ ಬಗ್ಗೆ ತಾವು ಬರೆದಿರುವ ಕಾವ್ಯವನ್ನು ವಾಚಿಸಿದರು. ಸಿನಿಮಾದಲ್ಲಿ ಐವತ್ತಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪ್ರಣಯ ಮೂರ್ತಿ, ದೀಪ್ತಿ ಕಾಪ್ಸೆ, ಭೀಷ್ಮ ರಾಮಯ್ಯ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಮಸ್ವಾಮಿ ನಿರ್ಮಾಣದ ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಾಹಣ, ಕಿರಣ್ ಶಂಕರ್ ಸಂಗೀತ ಸಂಯೋಜನೆಯಿದೆ. ‘ಅತಿಥಿ ದೇವೋಭವ’ – ಇದು ಚಿತ್ರದ ಅಡಿಬರಹ.